ಇಲ್ಲಿ ಹರಿಯೋ ನೀರು
ನೀರಲ್ಲ ಸ್ವಾಮಿ, ತೀರ್ಥವೆನ್ನುವರು
ಇಲ್ಲಿ ನೆಟ್ಟ ಕಲ್ಲು
ಕಲ್ಲಲ್ಲ ಸ್ವಾಮಿ, ದೇವರೆನ್ನುವರು
ಇಲ್ಲಿ ಬಡಿಯೋ ಸಾವು
ಸಾವಲ್ಲ ಸ್ವಾಮಿ, ಮೋಕ್ಷವೆನ್ನುವರು.
ಇಲ್ಲಿರುವ ಬಡತನಕೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪಾಪವಂತೆ
ಸೊಕ್ಕಿ ಏರುವ ಸಿರಿಗೆ
ಇಲ್ಲಿ ಕಾರಣವಿಲ್ಲ
ಕಳೆದ ಜನ್ಮದ ಪುಣ್ಯವಂತೆ.
ಇಲ್ಲಿ ಬೆಳೆಯುವ ಮರಗಳಲ್ಲಿ
ಕೊಂಬೆ ಕೊಂದಿವೆ ಎಲೆಗಳ.
ಇಲ್ಲಿ ಮೂಡುವ ಗಿಡಗಳಲ್ಲಿ
ಎಲೆಯ ನುಂಗಿದ ಹೂಗಳ.
ಇಲ್ಲಿ ಬೀಸೊ ಗಾಳಿಯಲ್ಲಿ
ಸಂಪ್ರದಾಯದ ಲಯವಿದೆ
ಗಟ್ಟಿ ಬೆಟ್ಟವು ಗಾಳಿಗೂಳಿಗೆ
ಗಾಯಗೊಳ್ಳುವ ಭಯವಿದೆ
ವರ್ತಮಾನಕೆ ಭೂತ ಹಿಡಿದು
ಕುರುಡು ಕವಚವ ತೊಟ್ಟಿದೆ.
ಶತಶತಮಾನದ ಚರಿತ್ರೆಯಲ್ಲಿ
ಕವಚಕೆ ಖಡ್ಗದ ಸೆಣಸು ಇದೆ
ಇತಿಹಾಸದ ಸೃಷ್ಟಿಗೆ ಕಾಲವಿದೇ
ಬಂಡಾಯದ ಬೆಳಕಿಗೆ ಭೂಮಿಯಿದೇ.
*****