೧
ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ
ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ
ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ
ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ
ನಡುವೆ ನಿಂತವನ
ಮನಸು ಚಿಂತೆವನ
ಉರಿಯುತ್ತಿದೆ ಕಾಡು
ಮುರಿಯುತ್ತಿದೆ ಮಾಡು
ಮನಸಿನ ಮಾತು
ಕಣ್ಣಲೆ ಹೂತು
ಅರಿವಾಗದು ಅಲ್ಲಿ
ಅದು ನೀರಿಲ್ಲದ ನಲ್ಲಿ.
ನಗವಿದ್ದರೆ, ನಗುವಿದ್ದರೆ
ಮುಗಿಬೀಳುವರಲ್ಲಿ.
ನಿಜ ಮುಚ್ಚುತ, ಹುಸಿ ಬಿಚ್ಚುತ
ಹಸಿವಾದರೂ ಹಸಿರಾಗುತ
ಅವರಿವರಿಗೆ ಉಸಿರಾದರೆ
ಹೆಸರಾಗುವುದಲ್ಲಿ
ಮನದಾಳವ ತೋಡಿದರೆ
ಕೆಸರಾಗುವುದಲ್ಲಿ
ಮೊರೆ ಹೊಕ್ಕೆನು ಇಲ್ಲಿ
೨
ಗೋಡೆಗಳಾದರು ಕಂಬಗಳಾದರು
ಮಾತು ಮರೆಯುವ ಮೃಗಗಳಾದರು
ಸತು ಮುರಿಯುವ ತೋಳಗಳಾದರು
ಮನಸಿಗೆ ಮುಷ್ಟಿಯ ತೋಳುಗಳಾದರು.
ಬೆಳಕಿಗೆ ಬರಿದೆ ಕತ್ತಲ ಕೊರೆದೆ
ಮೀಟುವ ತಂತಿ ಮಿನುಗುವ ತಾರೆ-
ಕಾಣದೆ, ಕಡೆಗೆ ನಾನೇ ಕತ್ತಲು
ಕಣ್ಕಟ್ಟಿದ ವಿಷ-ಬಾಳಿನ ಕುಯಿಲು.
೩
ಮನಸಿಲ್ಲವೆ ನಿಮಗಾದರು?
ದನಿಯಿಲ್ಲವೆ ನಿಜ-ಕಾದರು?
ನನ್ನೆದೆ ಬೆಳಕಿನ ಗೋರಿಗಳೆ
ಬಾಳಿನ ಬಯಲಿನ ಭೇರಿಗಳೆ.
ಅಳಲಿನ ಅನುಭವ ಆಳಕೆ ತಟ್ಟಿ
ಮನುಜತೆ ಮಾತು ಮೂಲಕ ಮುಟ್ಟಿ
ಕಲಕುವ ಅಲೆಗಳು, ಎದೆ ಮುಟ್ಟುವ ಮಜಲು
ಗೋರಿಗಳಾ ಒಡಲು-ಈಗಾಯಿತು ಕಡಲು.
ಗೋರಿಗೊರಳುಗಳು ಉಬ್ಬಿ ಬಂದವು
ಬೆಂದ ಮನಸನು ತಬ್ಬಿ ನಿಂದವು
ತೇವಗೊಳ್ಳುತ ತೇವಗೊಳಿಸುತ
ತೆರಳು ಎಂದವು ಬಾಳಿನ ಹರಿತಕೆ
ಮರಳು ಎಂದವು ಗೋಳಿನ ಇರಿತಕೆ.
*****