ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ
ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು
ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು:
‘ಏಳಯ್ಯ ಬೆಳಗಾಯಿತು’.
ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ
ಕಣ್ಣು ತೆರೆದಾಗ ತೆರೆ ತೆರೆಯಾಗಿ ಪೊರೆ ಹರಿದು
ಎದುರು
ಹೊತ್ತು ಹೊರಬಂದ ಕ್ಷಣವೇ ಬೋಣಿ ಗಿರಾಕಿ ಸಿಕ್ಕಿದ
ಸಂತೋಷಸ್ಮಿತ; ಪರಿಚಿತ ಪುಷ್ಪವದನ.
ಮತ್ತೆ ಮಲಗಿಯಾನೆಂದು ಮತ್ತದೇ ಮಾತು:
‘ಏಳಯ್ಯ ಬೆಳಗಾಯಿತು’.
ಎದ್ದೆ; ಗೆದ್ದೆ ಎಂದುಕೊಂಡು ನನ್ನ ಕೈಹಿಡಿದು
ಬಚ್ಚಲಮನೆಯಲ್ಲಿ ಅವನೇ ಸೋಪಾಗಿ ಸ್ನಾನವಾಗಿ ಉಡುವ ಉಡುಪಾಗಿ;
ನಾನು ನೀಟಾಗಿ ನಿಂತಾಗ
ತನ್ನ ನಿಗದಿ ನಗುವಿನಲ್ಲಿ ನಾಷ್ಟ ಮಾಡಿಸುತ್ತಾನೆ.
ಅವರಿವರ ಹತ್ತಿರವೆಲ್ಲ ಓಡಾಡಿಸಿ ಪರಿಚಯಿಸಿ ಲೇವಾದೇವಿ ಮಾಡಿಸಿ
ಬಿಸಿಲು ಬೆವರು ಎಂದಾಗ
ಕಾಣದ ಬಾವಿಗೂ ಧೈರ್ಯತುಂಬಿ ಧುಮುಕಿಸುತ್ತಾನೆ.
ಬೆಳಗಿನಿಂದ ಬೈಗಿನವರೆಗೆ ಬೈಗಿನಿಂದ ಬೆಳಗಿನವರೆಗೆ
ಭುಜಕ್ಕೆ ಭುಜಕೊಟ್ಟು ನನ್ನಲ್ಲಿ ಲಯವಾಗುತ್ತಾನೆ.
ಊಟಮಾಡುವಾಗ ತಟ್ಟೆಯ ಅನ್ನವಾಗಿ ಬಂದು
ನಾಳದಾಳಕ್ಕೆ ಇಷ್ಟಿಷ್ಟೇ ಇಳಿಯುತ್ತ
ದಾಳ ಹಾಕುತ್ತ ಮಾಡುತ್ತಾನೆ ಚೌಕಾಶಿ
ಇವನು ನನ್ನ ಕನ್ಯಾಕುಮಾರಿ ಕಾಶಿ.
*****