ಎಲಾ ಇವನ,
ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ!
ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು
ನಮ್ಮ ಭರತರು.
ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು
ಧಗಧಗ ಕಣಯ್ಯ ಕೆಲವರಿಗೆ ಹೊಟ್ಟೆಕಿಚ್ಚು.
ಅಲ್ಲ, ಯಾರಾದರೂ ಮಾಡಿದ್ದಾರೆಯೆ
ನೀನು ಮಾಡಿದ ಭಾಷಣಗಳ ಕೊಟ್ಟ ಕರೆಗಳ ಸಂಖ್ಯೆಯಷ್ಟು ಸೇವೆ?
ಆ ಹೊಟ್ಟೆಕಿಚ್ಚಿನವರು ಮಂಥರೆಯ ಒಕ್ಕಲೆಂದು ಮುಲಾಜಿಲ್ಲದೆ ಚುಚ್ಚು ;
ಮತ್ತೆ ಹೆಚ್ಚಾದರೆ ಚಚ್ಚು.
ನನಗೆ ಗೊತ್ತು: ಆ ರಾಮ ಸತ್ತು
ಯುಗಗಳಾದ ಮೇಲೆ ನಿನ್ನದೇ ಅವನಂಥ ಪ್ರಪ್ರಥಮ ಅವತಾರ! ಕನ್ನಡಿಗರುದ್ಧಾರ!
ಅಗಸ ಅಂದುಕೊಂಡನೆಂದು ಆತಂಕಪಟ್ಟ ಆ ರಾಮ
ಅಲ್ಪರಂದುಕೊಂಡರೇನಂತೆ ಎಂಬ ನೀನೇ ಸರಿ ಬಹು ಆರಾಮ.
ಕೊಟ್ಟ ಮಾತಿಗೆ ಕಟ್ಟು ಬೀಳುವ ಆ ರಾಮನಿಗೆಲ್ಲೊ
ತಾಕತ್ತಿಲ್ಲ ತೆಗೆ
ನಿನ್ನದೇ ಸರಿ: ರಾವಣಕಾರ್ಯವನ್ನಾದರೂ ಮಾಡಿ
ರಾಮನೆನ್ನಿಸಿಕೊಳ್ಳುವ ಬಗೆ.
ನಿನ್ನ ಹಿಂದೆಯೂ ಇದೆ ಸುಗ್ರೀವ ಸೇನೆ
ಪಾಠ ಕಲಿಸಿ ನಂಬಿಗಸ್ತರನ್ನು ಆರಿಸಿ ಹಾರಿಸಿ
ಪೀಠಗಿಟ್ಟಿಸುವ ನಿನ್ನ ಕಲಿತನಕ್ಕೆ ಕೊಡಬೇಕು
ಮತ್ತೊಂದು ಪೀಠ; ಅವಾರ್ಡು,
ನೀನಾದೆ ಬಿಡು ಬೀದಿಬೀದಿಯ ಬೋರ್ಡು.
ಅಂದಹಾಗೆ ಎಂದು ನಮ್ಮೂರಿಗೆ ನಿನ್ನ ಸವಾರಿ?
ಭಕ್ತರಿಗೆ ಬರೆದಿದ್ದೆಯಂತಲ್ಲ ಸಿದ್ಧಗೊಳಿಸಲು ನಗಾರಿ?
*****