ಸ್ಥಿತಿ:
ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ
ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ
ಚಟ್ಟ ಸಾಲು ಸಾಲು.
ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ
ಪಾಲು ಮೂರು ಮುಕ್ಕಾಲು
ಕಾರಣ:
ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ
ಸಂವಿಧಾನಶಿವ ಕೊಟ್ಟುಬಿಟ್ಟ ವರ
ಅಸುರನಿಗೆ ಅವಸರ.
ಪರಿಣಾಮ:
ಉಬ್ಬಿನಲಿ ಉಬ್ಬಾಗಿ ಪೆನ್ನಿನಿಂಕೆಲ್ಲ ಮುಗಿಸಿ ತಬ್ಬಿಬ್ಬಾಗಿ
ಕೈಬಾತುಕೊಂಡು ಕಣ್ ಕಣ್ ಬಿಡುವ ಕಲ್ಲಿನಾಥ!
ವರ ಪಡೆದ ಭಸ್ಮಾಸುರನ ಭಂಡ ನಾಟ್ಯದ ತುಳಿತಕ್ಕೆ
ಹಸಿರ ಬಸಿರೊಡೆದ ಕೆಂಪುಕಾವ್ಯ!
ಮುಂದೆ:
ಬರೀ ಗೋಣು ಹಾಕುತ್ತ ಅಪ್ಪನ ಆಲಕ್ಕೆ ನೇಣು ಹಾಕಿಕೊಳ್ಳುತ್ತ
ಕಂಠಪಾಠದ ಭಂಟರಾಗುವ ಅಂಟುರೋಗ
ಇನ್ನಾದರೂ ಸಾಕಪ್ಪ ಸಾಕು.
ವಿಚಾರಮೋಹಿನಿಯ ಮೋಹಕನಾಟ್ಯ ಮಣ್ಣಮಿಡಿತಕ್ಕೆ
ತಕ್ಕಂತೆ ನಡೆಯಬೇಕು.
ಲಾಯಕ್ಕಾದ ಇಂಕು ಒಗ್ಗುವೌಷಧಿಹಾಕಿ ವಾಸ್ತವ್ಯದ
ಹೊಸ ಜೀವ ತುಂಬಬೇಕು.
*****