ಪ್ರಿಯ ಸಖಿ,
ಬದುಕಿನಲ್ಲಿ ನಂಬಿಕೆಗೆ ಅತಿಮುಖ್ಯವಾದ ಸ್ಥಾನವಿದೆ. ನಂಬಿಕೆಯಿಲ್ಲದವನ ಬಾಳು ನರಕ. ಬದುಕನ್ನು ನಡೆಸುತ್ತಿರುವ ಶಕ್ತಿಯ ಮೇಲೆ ಬದುಕಿನಲ್ಲಿ ಜತೆಯಾಗಿರುವ ಸಹಜೀವಿಗಳ ಮೇಲೆ, ಕೊನೆಗೆ ತನ್ನ ಮೇಲೆ ನಂಬಿಕೆ ಇರಲೇಬೇಕು. ಕವಿ ಚೆನ್ನವೀರ ಕಣವಿಯವರ ‘ನಂಬಿಕೆ’ ಎಂಬ ಕವನದ ಈ ಸಾಲುಗಳನ್ನು ನೋಡು,
ನನ್ನ ನಂಬಿಕೆಯೊಂದು ಆಕಾಶ
ನಿಜ ಅದಕೆ ತಳಬುಡವಿಲ್ಲ
ನಾನೆಷ್ಟು ಬೆಳೆದರೂ ನನಗೆ ನಿಲುಕುವುದಿಲ್ಲ
ದೂರದಿಂದಲ್ಲದೆ ನಾನದನು
ಮುಟ್ಟಿ ಅನುಭವಿಸಿಲ್ಲ
ಮೇಲೆ ನೋಡದೆ ಸಟೆದುಕೊಂಡೇ
ನಡೆದರೂ ಅದು ಸದಾ ನನ್ನ ತಲೆಯ ಮೇಲೆ
ಇಲ್ಲಿ ಕವಿ ವ್ಯಕ್ತಿನಿಷ್ಟಕವಾದ ಹಾಗೂ ಬದುಕನ್ನು ಆವರಿಸಿಕೊಂಡಿರುವ ನಂಬಿಕೆಯ ಕುರಿತು ಚಿಂತಿಸುತ್ತಾರೆ. ನಂಬಿಕೆಯೆಂಬುದು ಆಕಾಶದಂತೆ ವಿಶಾಲವಾದುದು ಅಗಮ್ಯವಾದುದು. ಕವಿಯು ಪ್ರಶ್ನಿಸಿದರೂ ಅವರ ಮಿತಿಯನ್ನು ಮೀರಿರುವಂತಹುದು ನಂಬಿಕೆ. ಅದು ಮುಟ್ಟಿ ನೋಡಲು ಬರುವಂತದ್ದಲ್ಲ. ಅನುಭವಕ್ಕೆ ಮಾತ್ರ ಬರುವಂತದ್ದು, ಆ ನಂಬಿಕೆಯನ್ನು ಬುದ್ಧಿಪೂರ್ವಕವಾಗಿ ತಿರಸ್ಕರಿಸಲು ಹೋದರೂ ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾದ್ದರಿಂದ ಕೊನೆಗೂ ನಂಬಿಕೆಯೇ ಗೆಲ್ಲುತ್ತದೆ ಎನ್ನುತ್ತಾರೆ ಕವಿ.
ಸಖಿ, ಆದರೆ ವ್ಯಕ್ತಿ ವ್ಯಕ್ತಿಗಳಲ್ಲಿ, ವಿಚಾರಗಳಲ್ಲಿ, ಧರ್ಮದಲ್ಲಿ, ಒಳಿತಿನಲ್ಲಿ, ಮೌಲ್ಯಗಳಲ್ಲಿ, ನೀತಿಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಇಂದಿನ ಮನುಷ್ಯ ಎಂತಹಾ ಅಧೋಗತಿಗಿಳಿಯುತ್ತಿದ್ದಾನಲ್ಲವೇ? ಅದಕ್ಕೆ ಕಾರಣವನ್ನು ಹುಡುಕುತ್ತಾ ಆಸ್ಕರ್ ವೈಲ್ಡ್ “`We did not dare breath a prayer or give our anguish scope! Something was dead in each of us and what was dead was hope’ ಒಂದು ಪ್ರಾರ್ಥನೆಯನ್ನು ಉಚ್ಚರಿಸುವ, ನಮ್ಮ ವೇದನೆಗೂ ಒಂದು ಅವಕಾಶ ಕೊಡುವ ಧೈರ್ಯ ನಮ್ಮಲ್ಲಿಲ್ಲ. ನಮ್ಮೆಲ್ಲರಲ್ಲೂ ಏನೋ ಒಂದು ಸತ್ತುಹೋಗಿದೆ! ಅದು ನಂಬಿಕೆ! ಎನ್ನುತ್ತಾರೆ.
ಹಾಗೆಂದು ಎಲ್ಲವನ್ನು ಅಂಧವಾಗಿ ನಂಬಬೇಕೆಂದೂ ಅರ್ಥವಲ್ಲ. ಮೊದಲು ನಂಬಿಕೆ, ನಂತರ ಪರೀಕ್ಷೆ, ಪರೀಕ್ಷೆ ಫಲ ಕೊಟ್ಟಾಗ ಅಚಲ ಶ್ರದ್ಧೆ ಮೂಡುತ್ತದೆ. ಆಂಗ್ಲಭಾಷೆಯ ಒಂದು ನಾಣ್ಣುಡಿ ಹೀಗೆ ಹೇಳುತ್ತದೆ. ‘Hope for the best and prepare for the worst’ ಒಳಿತಿಗಾಗಿ ನಂಬಿಕೆ ಇರಲಿ, ಕೆಟ್ಟದ್ದನ್ನೆದುರಿಸಲು ತಯಾರಾಗಿರೋಣ ಎಂದು ಈಗ ನಾವು ಮಾಡಬೇಕಾದದ್ದೂ ಇದೇ ಅಲ್ಲವೇ ಸಖೀ?
*****