ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ
ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ
ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ
ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ
ಸಂಜೆಯ ರೊಟ್ಟಿ ಕುರಿತಾಗಿಯೇ ದುಡಿಯುತ್ತಾರೆ;
ರಾತ್ರಿಯ ಸಂಭೋಗಕ್ಕಾಗಿಯೇ ತುಕ್ಕಿಡಿಯದ ಉಕ್ಕಿನಂತೆ ಗಡಸಾಗುತ್ತಾರೆ.
ಡೀಸೆಲ್‌ನಿಂದ ತೊಯ್ದು ತೊಪ್ಪೆಯಾದ ಕಾರ್ಮಿಕನೊಬ್ಬನ
ಬಟ್ಟೆಗಳ ಮೇಲೆ ತೇಲಾಡುವ ಬಣ್ಣದ ಚಿಟ್ಟೆಗಳನ್ನು ಹೆಣ್ಣೊಬ್ಬಳು
ಯಾಕೋ ದಿನವೂ ಹಿಡಿದು ಕೊಲ್ಲುತ್ತಿರುತ್ತಾಳೆ.
ಸಂಜೆಯ ಸೈರನ್ ಪಕ್ಕದ ಗ್ರಾಮದ ಎಲ್ಲ ವರಸೆಗಳನ್ನು ಎಂದಿನಂತೆ
ಆರಂಭಿಸಿ ಬೆಚ್ಚಗೆ ಉಳಿದುಬಿಡುತ್ತದೆ.
ಅಷ್ಟೊತ್ತಿಗಾಗಲೇ ಅಲ್ಲಿ ನೂಕು ನುಗ್ಗಲು-ಬದುಕ ಬಯಸಿದವರಲ್ಲಿ.
ಕನಸುಗಳು ಒಲೆಯೊಳಗಿನ ಕೆಂಡಗಳಂತೆ ರಂಜಿಸತೊಡಗುತ್ತವೆ!
ನೀರು ಬಿದ್ದೊಡನೆ ಆರಿಹೋಗಿ, ಇದ್ದಿಲುಗಳಾಗಿ ಮಾರಾಟಕ್ಕಿಳಿಯುತ್ತವೆ.
*****