ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೂಸೆಯು ತನ್ನ ಗಂಡನನ್ನು ಮಮತೆಯಿಂದ ನೋಡಿಕೊಳವಳೋ ಇಲ್ಲನೋ ಎಂಬುದನ್ನು ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು.
ಒಂದು ದಿನ ತಂದೆ ಮಗನನ್ನು ಕರೆದು ಹೇಳಿದನು – “ಈ ಹೊತ್ತು ಸಂಜೆಯ ಊಟವನ್ನು ಉಣ್ಣದೆ ಮಲಗಿಕೋ, ಬೆಳಗಾಗುತ್ತಲೆ ಉಣಬಡಿಸೆಂದು ನಿನ್ನ ಹೆಂಡತಿಗೆ ಹೇಳು.”
ಮಗನು ತಂದೆಯ ಸೂಚನೆಯಂತೆ ಸಂಜೆಯ ಊಟ ಬಿಟ್ಟುಕೊಟ್ಟನು. ರಾತ್ರಿ ಕಳೆದು ಬೆಳಗಾಗುತ್ತಲೆ “ಊಟಕ್ಕೆ ಕೊಡು..” ಎಂದು ತನ್ನ ಹೆಂಡತಿಗೆ ಕೇಳಲು-“ಇಷ್ಟು ತೀವ್ರ ಊಟಕ್ಕೆ ಕೇಳಿದರೆ ನಾನೇನು ಕೊಡಲಿ ? ಹೊತ್ತೇರುವವರೆಗೆ ತಡೆಯಿರಿ” – ಎಂದಳಾಕೆ.
ತನ್ನ ಮಗನನ್ನು ನೋಡಿಕೊಳ್ಳುವ ಸೊಸೆ ಅಲ್ಲ ಈಕೆ – ಎಂದು ಬಗೆದು ಆಕೆಯನ್ನು ತವರುಮನೆಗೆ ಕಳಿಸುವ ವ್ಯವಸ್ಥೆ ಮಾಡಿದನು. ಮನೆಯಲ್ಲಿ ತಂದೆ ಮಗ ಇಬ್ಬರೇ ಉಳಿದರು.
“ಈ ಎಳ್ಳು ಚೀಲವನ್ನು ನೆರೆಹಳ್ಳಿಯ ಸಂತೆಗೊಯ್ದು ಮಾರಿಕೊಂಡು ಬರಬೇಕು” ಎಂದು ತಂದೆ ಮಗನಿಗೆ ಹೇಳಿದನು- “ಯಾವ ಧಾರಣೆಯಿಂದ ಮಾರಬೇಕು” ಎಂದು ಮಗನು ಕೇಳಲು, “ಯಾವ ಮಾಪಿನಿಂದ ಎಳ್ಳು ಅಳೆದು ಕೊಳ್ಳುವರೋ ಅದೇ ಮಾಪಿನಿಂದ ಪ್ರತಿಯಾಗಿ ತರಬೇಕು” ಎಂದು ತಂದೆ ಹೇಳಿದನು.
ಬಂಡಿಯಿಂದ ಚೀಲಗಳನ್ನಿಳಿಸಿ ಮಗನು ಸಂತೆಯಲ್ಲಿ ಮಾರಲು ಕುಳಿತನು. ಆದರೆ ಆತನ ಧಾರಣಿ ಮಾತ್ರ ಯಾರಿಗೂ ಸರಿಬರಲಿಲ್ಲ. ಎಳ್ಳುಮಾತ್ರ ನೋಡಿದರೆ ಬಿಡಬಾರದು ಎನ್ನುವಂತಿದ್ದವು. ಸಂತೆಯೂರಿನ ತ್ರೀಮಂತಸೊಬ್ಬನು ಆ ಎಳ್ಳು ಬಿಡಬಾರದೆಂದು ಬಗೆದನಾದರೂ ಅದರ ಧಾರಣಿ ತುಂಬಾ ಹಾನಿಕರವೆಂದು
ಯೋಚಿಸಿ, ಮನೆಗೆ ಹೋಗಿ ತನ್ನ ಮಗಳಿಗೆ ಎಳ್ಳಿನ ವ್ಯವಹಾರದ ವಿಷಯವನ್ನು ಹೇಳಿದನು. ಮಗಳು ತಂದೆಗೆ ಹೇಳಿದಳು – ಉತ್ತಮವಾಗಿದ್ದರೆ ಮನೆಗೆ ತಂದು ಬಿಡಿರಿ. ಧಾರಣಿಯ ವ್ಯವಹಾರವನ್ನು ನಾನು ನಿಸ್ತರಿಸುತ್ತೇನೆ.”
ಸಾಹುಕಾರನ ಮಗಳು ಎಳ್ಳನ್ನೆಲ್ಲ ದೋಸೆಯ ಹಂಚಿನಲ್ಲಿ ಅಳೆದುಕೊಂಡು, ಅದೇ ಹಂಚಿನಿಂದ ಎಳ್ಳಣ್ಣೆಯನ್ನು ಅಳೆದುಕೊಟ್ಟಳು- ಒಂದು ಗಾಡಿ ಎಳ್ಳಿಗೆ ಒಂದು ಕೊಡದಷ್ಟು ಎಳ್ಳಣ್ಣೆ ಸಿಕ್ಕಿತು. ಅದನ್ನು ತೆಗೆದುಕೊಂಡು ಹೋಗಿ ತಂದೆಗೆ ಒಪ್ಪಿಸಲು, ಆತನು ವ್ಯವಹಾರದ ವಿಷಯವನ್ನೆಲ್ಲ ಕೇಳಿದನು. ಸಾಹುಕಾರನ ಮಗಳ ಜಾಣತನಕ್ಕೆ ಸೈದೂಗಿ ಆಕೆಯನ್ನೇ ತನ್ನ ಸೊಸೆಯಾಗಿ ತಂದುಕೊಳ್ಳಬೇಕೆಂದು ಯೋಚಿಸಿ ಆ ದಿಶೆಯಲ್ಲಿ ಪ್ರಯತ್ನಿಸಿದಾಗ ಅದು ಆಗಿಬಿಟ್ಟಿತು.
ಹೊಸ ಸೂಸೆ ಬಂದ ಬಳಿಕ ತಂದೆಯು ಮಗನಿಗೆ ಸನಗಿನ ವ್ಯಾಪಾರಕ್ಕೆ ತೊಡಗಿಸಿದನು. ಸನಗಿನ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು, ದೂರ ದೂರದ ಪಟ್ಟಣಗಳಿಗೆ ಹೋಗಿ ಅಲ್ಲಿ ವ್ಯಾಪಾರ ಮಾಡುವುದಕ್ಕೆ ಮಗನು ನಡುಗಟ್ಟಿ ನಿಂತನು.
ಒಂದಾನೊಂದು ಪಟ್ಟಣ. ಅಲ್ಲಿ ಒಬ್ಬ ಪಾತ್ರದವಳು ಜೂಜುಗಾರಿಕೆಯಲ್ಲಿ ಹೆಸರಾದವಳು. ಜೂಜಿನಾಟವು ರಾತ್ರಿಯಲ್ಲಿ ನಡೆಯುವುದು. ಪಾತ್ರದವಳ ಮಗ್ಗುಲಲ್ಲಿ ಕುಳಿತ ಒಂದು ಬೆಕ್ಕಿನ ನೆತ್ತಿಯ ಮೇಲೆ, ಹಣತಿ ದೀವಿಗೆಯನ್ನಿರಿಸಿ ಅದರ ಪ್ರಕಾಶದಲ್ಲಿ ಕವಡಿ ಹಾಕಿ ಜೂಜನಾಡುವುದು. ಆಟ ಆಡುತ್ತಿರುವಾಗ ಆ ಬೆಕ್ಕು ಹಣತಿ ಒಗೆದು ಓಡಿಹೋದರೆ ಆಕೆ ಸೋತಂತೆ. ಅದು ಓಡಿ ಹೋಗದೆ ಕುಳಿತೇ ಬಿಟ್ಟರೆ ಆಕೆ ಗೆದ್ದಂತೆ. ಸೋತವರು ತಮ್ಮ ವಸ್ತುವನ್ನೂ ಧನವನ್ನೂ ಆಕೆಗೊಪ್ಪಿಸಿ ಆಕೆ ಹೇಳಿದಂತೆ ಕೇಳಬೇಕು.
ಸನಗಿನ ವ್ಯಾಪಾರಿಯು ಪಾತ್ರದವಳ ಮನೆಗೆ ಹೋಗಿ ಒಂದು ರಾತ್ರಿ ಜೂಜನಾಡಿ ಸೋತೇಬಿಟ್ಟಿದ್ದರಿಂದ ಸನಗಿನ ಗಂಟುಗಳು, ಬಳಿಯಲ್ಲಿದ್ದ ಹಣ ಎಲ್ಲವನ್ನೂ ಆಕೆಗೆ ಒಪ್ಪಿಸಬೇಕಾಯಿತು. ಅಂಥ ಜೀತುದಾಳುಗಳದೊಂದು ದವಣಿಯನ್ನೇ ಮಾಡಿದ್ದಳಾಕೆ.
ವ್ಯಾಪಾರಕ್ಕೆಂದು ಹೋದಮಗನ ಸುದ್ದಿ ತಿಳಿಯದೆ ತಂದೆ ಹಾಗೂ ಹೆಂಡತಿ ಚಿಂತಿಸತೊಡಗಿದರು. ಅಲ್ಲಲ್ಲಿ ಆಳುಗಳನ್ನು ಕಳಿಸಿ ಹುಡುಕಾಡುವ ಕ್ರಮವನ್ನು
ಕೈಕೊಂಡರು. ಸೊಸೆಯು ಒಮ್ಮೆ ಹಳ್ಳಕ್ಕೆ ಬಟ್ಟೆಗಳನ್ನು ಒಗೆಯಲು ಹೋದಾಗ ಆಕೆಗೆ ತೇಲಿ ಬರುವ ಹೂರಣಿಗೆ ಸಿಕ್ಕಿತು. ಅದನ್ನು ಮನೆಗೆ ತಂದು, ಅದರ ದಾರವನ್ನು ಮೆಲ್ಲಗೆ ತೆರೆದು ನೋಡುವಷ್ಟರಲ್ಲಿ ಒಳಗೆ ಕಾಗದ ಕಾಣಿಸಿತು. ಅದನ್ನು ಹೊರದೆಗೆದು ಕಣ್ಣಾಡಿಸಿದರೆ ಅದು ತನ್ನ ಗಂಡನದೇ ಪತ್ರವೆಂದು ತಿಳಿಯಿತು. ಬಿಚ್ಚಿ ಓದುತ್ತಾಳೆ – ಗಂಡನ ಇಡಿಯ ಕಥೆಯೇ ಅದರಲ್ಲಿದೆ.
ಮಾವನ ಮುಂದೆ ಗಂಡನ ಸಮಾಚಾರವನ್ನೇನೂ ಹೇಳದೆ, “ನಾಲ್ಕುದಿವಸ ತವರು ಮನೆಗೆ ಹೋಗಿ ಬರುತ್ತೇನೆ. ಅವರು ವ್ಯಾಪಾರಕ್ಕೆಂದೇ ಹೋಗಿದ್ದರಿಂದ ನಾಲ್ಕೆಂಟು ಹರದಾರಿ ಮುಂದಿನೂರಿಗೆ ಹೋಗಿದ್ದಾರು. ನಾಲ್ಕು ದಿನ ತಡೆದು ಬ೦ದಾರು. ಚಿಂತಿಸಬೇಡಿರಿ.. ಎಂದು ಹೇಳಿ ತನ್ನ ತವರೂರಿಗೆ ತೆರಳಿದಳು.
ಸೂಸೆ ವ್ಯಾಪಾರಿಯ ವೇಷತೊಟ್ಟು ಕುಪ್ಪಸದ ಗಂಟುಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು ಆ ಪಾತ್ರದವಳಿರುವ ಪಟ್ಟಣಕ್ಕೆ ಹೋದಳು. ಸಮಯದೊರಕಿಸಿಕೊಂಡು ಪಾತ್ರದವಳ ಮನೆಗೆ ಹೋಗಿ ಜೂಜಿನಾಟದ ಕ್ರಮ-ನಿಯಮಗಳನ್ನೆಲ್ಲ ಅರಿತುಕೊಂಡು ಆಟಕ್ಕೆ ಬರುವೆನೆಂದು ಹೇಳಿ ಬಂದನು ವೇಷಧಾರಿ. ಆ ಬಳಿಕ ಆಟಕ್ಕೆ ಬೇಕಾಗುವ ಪೂರ್ವ ಸಿದ್ಧತೆಯನ್ನೆಲ್ಲ ಯುಕ್ತಿಯರಿತು ಮಾಡಿಕೊಂಡು, ಮೂರು ನಾಲ್ಕು ತಾಸು ರಾತ್ರಿಯಾಗುತ್ತಲೇ ವೇಷಧಾರಿ ಆಕೆಯ ಮನೆಗೆ ತೆರಳಿದನು.
ಆಟವು ಒಳ್ಳೆಯ ಭರಕ್ಕೆ ಬಂದಾಗ ವೇಷಧಾರಿಯು ತನ್ನ ಒಳ ಅಂಗಿಯ ಕಿಸೆಯಲ್ಲಿ ಅದುಮಿಟ್ಟುಕೊಂಡ ಎರಡು ಇಲಿಗಳನ್ನು ಪಾತ್ರದವಳಿಗೆ ಗೊತ್ತಾಗದಂತೆ ಹೊರತೆಗೆದು ಬಿಟ್ಟನು. ಅದನ್ನು ಕಂಡು ಹಣತಿಯನ್ನು ಹೊತ್ತು ಕುಳಿತ ಬೆಕ್ಕು ದೀಪವನ್ನು ಚೆಲ್ಲಿಕೊಟ್ಟು ಇಲಿಗಳ ಬೆನ್ನು ಹತ್ತಿ ಓಡಿತು- ಆ ಕಾರಣದಿಂದ ಪಾತ್ರದವಳು ಅಂದಿನ ಜೂಜಿನಾಟದಲ್ಲಿ ಸೋತು ತನ್ನಾಸ್ತಿಯನ್ನೆಲ್ಲ ಆ ಹೊಸ ವ್ಯಾಪಾರಿಗೆ ಒಪ್ಪಿಸಿದಳು.
ವೇಷಧಾರಿಯು, ಆಕೆಗೆ ಸೋತು ಸೆರೆಯಾಳಾಗಿ ಬಿದ್ದವರನ್ನೆಲ್ಲ ಕರೆಯಿಸಿ, ಆ ಗುಂಪಿನಲ್ಲಿ ತನ್ನ ಪತಿಯನ್ನು ಗುರುತಿಸಿ, ಆತನನ್ನುಳಿದು ಉಳಿದವರನ್ನೆಲ್ಲ ಬಿಡುಗಡೆ ಮಾಡಿ ಕಳಿಸಿದಳು. ಉಳಿದುಕೊಂಡ ಸೆರೆಯಾಳು ತನ್ನ ದುರ್ದ್ಯೆವವಿನ್ನೂ ಹಿಂಗಿಲ್ಲವೆಂದು ತಿಳಿದನು. ಮರುದಿನ ಆ ಪಾತ್ರದವಳ ಆಸ್ತಿಯನ್ನೆಲ್ಲ ಗಾಡಿಗಳಲ್ಲಿ ಹೇರಿಸಿಕೊಂಡು ಉಳಿದ ಸೆರೆಯಾಳಿನ ಜೊತೆಗೂಡಿ ತನ್ನೂರ ಹಾದಿಹಿಡಿದನು.
ಅರ್ಧದಾರಿ ನಡೆದು ಬಂದ ಬಳಿಕ ಆ ಸೆರೆಯಾಳಿನ ಕ್ಷೌರಮಾಡಿಸಿ ಉಡುತೊಡಲು ಹೊಸ ಅರಿವೆ ಕೊಟ್ಟನು. ತನ್ನ ವೇಷಬದಲಿಸಿ ಸೀರೆಯುಟ್ಟು ಕುಪ್ಪಸ ತೊಟ್ಟಿದ್ದರಿಂದ ಆತನು ಆಕೆಯನ್ನು ಗುರುತಿಸಿ ಹಿಗ್ಗಿದನೆಂದು ಹೇಳಬೇಕೆ?
ಮುಂದೆರಡುದಿನ ದಾರಿಸಾಗಿದಾಗ ಅವರೂರು ಬಂತು. ಅವರ ಮನೆಯೂ ಬಂತು. ಮಾವನು ಮನೆಗೆ ಬಂದಾಗ ಸೊಸೆ ಮಗ ಇಬ್ಬರೂ ಕಾಣಿಸಿದರು. ಅದರಿಂದ ಮಾವನಿಗೂ ಹಿಡಿಸಲಾರದಷ್ಟು ಹಿಗ್ಗು. ಸೊಸೆಯು ತಾನು ಗಳಿಸಿಕೊಂಡು ತಂದ ಆಸ್ತಿಯನ್ನೆಲ್ಲ ಮಾವನಿಗೆ ಒಪ್ಪಿಸಿದಳು.
“ಮಗನಗಳಿಕೆಯೆಲ್ಲಿ ಎಂದು ಮಾವ ಕೇಳಿದಾಗ-” ಇದೋ, ಈ ಅರಿವೆ ಗಂಟಿನಲ್ಲಿದೆ ಎಂದು ಒಪ್ಪಿಸಿದಳು- ಅದನ್ನು ಸಡಗರದಿಂದ ಬಿಚ್ಚಿ ನೋಡಿದಾಗ – ಬೋಳಿಸಿ ತೆಗೆದ ತಲೆಯ ಹಾಗೂ ಗಡ್ಡದ ಕೂದಲು ! ಅದರ ಕಥೆಯನ್ನೆಲ್ಲ ಸೊಸೆಯ ಬಾಯಿಂದ ಕೇಳಿ, ಮಗನ ಬಾಳು ಸೊಸೆಯ ಜಾಣತನದಿಂದ ಸುಖಕರವಾಗುವುದರಲ್ಲಿ ಸಂದೇಹವಿಲ್ಲವೆಂದು ಬಗೆದು, ಇನ್ನು ತಾನು ನಿಶ್ಚಿಂತೆಯಿಂದ ಸಾಯುವೆನೆಂದು ಸೋಸೆಗೂ ಮಗನಿಗೂ ಹೇಳಿದನು ಆ ಮುದುಕ.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು