ಆಧುನಿಕ ಜೀವನ ಶೈಲಿಯಲ್ಲಿ ಉಡುಗೆ ತೊಡಿಗೆ ಆಹಾರ ವಿಹಾರ ಮನರಂಜನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಅನೇಕರು ಮಿತಿಮೀರಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳ ಸೇವನೆ ಪ್ರತಿಷ್ಠೆಯ ಕುರುಹುಗಳಾಗಿದೆ. ಸಭೆ, ಸಮಾರಂಭ, ಔತಣಕೂಟಗಳಲ್ಲಿ ತಂಪು ಪಾನೀಯಗಳೇ ಮಹತ್ವದ ಪಾತ್ರವಹಿಸುತ್ತವೆ. ಮನೆಗೆ ಬರುವ ಅತಿಥಿಗಳಿಗೂ ಸಹ ಕಾಫಿ, ಟೀ ಕೊಡುವುದು ಮರೆತು ಹೋಗಿ ಫ್ರಿಜ್‌ನಿಂದ ತಂಪು ಪಾನೀಯ ಬಾಟಲ್‌ಗಳನ್ನು ಸ್ಟೈಲಾಗಿ ತೆಗೆದು ಕುಡಿಸುವ ಕಾಲಬರುತ್ತದೆ. ಈ ಕಾರಣವಾಗಿ ನಮ್ಮ ದೇಶಿ ಹಣ್ಣಿನ ರಸ, ಕಬ್ಬಿನ ಹಾಲು, ಎಳೆನೀರನ್ನು ಕೇಳುವವರೆ ಇಲ್ಲದಂತಾಗಿದೆ. ಈ ತಂಪು ಪಾನೀಯಗಳು ತತ್ಕಾಲದಲ್ಲಿ ಖುಷಿ ನೀಡಿ ಪ್ರತಿಷ್ಠೆ ಹೆಚ್ಚಿಸಿದರೂ ಈ ಪಾನೀಯಗಳ ಅಂತರ್ಗತದಲ್ಲಿರುವ ಅಪಾಯಗಳನ್ನು ಯಾರೂ ಅರಿಯುತ್ತಿಲ್ಲ?
ಪೆಪ್ಸಿ, ಮೌಂಟನ್‌ಡ್ಯೂ, ಡಯಟ್ ಪೆಪ್ಸಿ, ಮಿರಂಡಾ ಆರೆಂಜ್, ಮಿರಂಡ ಲೇಮನ್, ಬ್ಲೂಪೆಪ್ಸಿ, 7ಅಪ್, ಕೋಕೊ ಕೋಲಾ, ಫಾಂಟಾ, ಲಿಮ್ಕಾ, ಸ್ಕ್ರೇಟ್ ಥಮ್ಸ್‌ಅಪ್, ಹೀಗೆ ಮುಂತಾದ ಪಾನಿಯಗಳಲ್ಲಿಯ ಗುಣಮಟ್ಟಗಳನ್ನು ಇತ್ತೀಚೆಗೆ ವೈಜ್ಞಾನಿಕ ಪರಿಶೋಧನೆಗೆ ಒಳಪಡಿಸಿದಾಗ ತಣ್ಣನೆಯ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗುತ್ತದೆ. ರಾಷ್ಟ್ರೀಯ ವಿಜ್ಞಾನ ಹಾಗೂ ಪರಿಸರ ಸಂಸ್ಥೆ ವಿಜ್ಞಾನ ಹಾಗೂ ಪರಿಸರ ಕೇಂದ್ರ, ವಿಶ್ವ ಆರೋಗ್ಯ ಸಂಸ್ಥೆ, ಅಮೇರಿಕಾದ ಪರಿಸರ ಸಂರಕ್ಷಣಾ ಹಾಗೂ ಆಹಾರ ಮತ್ತು ಔಷಧ ನಿಯಂತ್ರಣ ಕಾನೂನುಗಳು ಇಂಥ ಪಾನೀಯಗಳಲ್ಲಿ ಇರಬಹುದಾದ ವಿಷ ಅಥವಾ ಅಪಾಯಕಾರಿ ಅಂಶಗಳನ್ನು ಬಯಲಿಗೆಳೆಯಿತು. ಇವುಗಳ ಪ್ರಕಾರ ಕಾರ್ಬೋನೆಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಆಗಬಹುದಾದ ದುಷ್ಟರಿಣಾಮಗಳ ಬಗೆಗೆ ಸಾಕ್ಷಿ ಸಮೇತ ಸಾಬೀತು ಪಡಿಸಿದವು. ಅದರಲ್ಲೂ ಆರೋಗ್ಯ ಸಂಬಂಧಿ ಕಾಯಿಲೆಗಳಿಗೆ ಕುಡಿವವರು ಗುರಿಯಾಗುತ್ತಿರುವುದು ವೈದ್ಯಕೀಯ ವರದಿಗಳಿಂದ ತಿಳಿಯುತ್ತದೆ.
ಬೊಜ್ಚು, ಸಕ್ಕರೆ ಕಾಯಿಲೆ, ದಂತಕ್ಷಯ, ಓಸ್ಟ್ರೋ ಯೋಪೆರಾಸಿಸ್ ಎನ್ನುವ ಒಂದು ಬಗೆಯ ಮೂಳೆಯ ಕಾಯಿಲೆ, ಪೋಷಕಾಂಶಗಳ ಕೊರತೆ, ಹೃದಯ ರೋಗಗಳು ಹತ್ತು ಹಲವು ನರಸಂಬಂಧಿ ರೋಗಗಳು ತಂಪುಪಾನೀಯಗಳನ್ನು ಕುಡಿದ ತಪ್ಪಿಗಾಗಿ ಕುಡಿದವರನ್ನು ಜೀವನವಿಡೀ ಬೇಟೆಯಾಡಬಹುದು.
ಇದಲ್ಲದೇ ಮೇಲಿಂದ ಮೇಲೆ ತಂಪುಪಾನೀಯಗಳನ್ನು ಕುಡಿಯುವುದರಿಂದ ದೇಹದಲ್ಲಿ ಆಮ್ಲದ ಮಟ್ಟ ಅವಶ್ಯಕತೆಗಳಿಗಿಂತ ಹೆಚ್ಚಾಗಿ, ಗ್ಯಾಸ್ಟ್ರಿಕ್ ತೊಂದರೆಗಳೂ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದೆಂದು ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಈ ಎಲ್ಲ ರೀತಿಯ ಲೇಬಲ್‌ಗಳ ಪಾನೀಯಗಳಲ್ಲಿ ಕಂಡು ಬರುವ ಹೆಚ್ಚಿನ ಮಟ್ಟದ ಸಕ್ಕರೆ, ಕಾರ್ಬನ್ ಡೈ ಆಕ್ಸೈಡ್ ಹಾಗೂ ಪಾಸ್ಪರಿಕ್ ಆಸಿಡ್ಗಳು ಎಲುಬುಗಳಲ್ಲಿರುವ ಪೋಷಕಾಂಶಗಳನ್ನು ತೆಗೆದು ಹಾಕಿ ಅವುಗಳನ್ನು ದುರ್ಬಲಗೊಳಿಸುತ್ತದೆ. ಇದು ಪಾನೀಯಗಳಲ್ಲಿರುವ ಪಾಸ್ಪರಿಕ್ ಆಸಿಡ್ ದೇಹದ ಕ್ಯಾಲ್ಸಿಯಮ್ ಪಾಸ್ಪರಸ್ ಅನುಪಾತವನ್ನು ಏರುಪೇರು ಮಾಡುವುದರಿಂದ ಉಂಟಾಗುತ್ತದೆ. ಈ ಕಾಯಿಲೆಗಳು ಗುಪ್ತಗಾಮಿನಿಗಳಾಗಿ ಮನುಷ್ಯನನ್ನು ಕಾಡುತ್ತವೆ. ಮೇಲ್ಮಟ್ಟದ ಸಂಸ್ಕೃತಿಯ ಹೆಸರಿನಲ್ಲಿ ಹಿರಿಮೆಗೆ, ಪ್ರತಿಷ್ಠೆಗಾಗಿ ನೀರಿನ ಪರ್ಯಾಯವೆಂಬಂತೆ ಹಲವು ಜನ ಕುಡಿಯುತ್ತಾರೆ. ಅಮೇರಿಕದಲ್ಲಿ ತಂಪುಪಾನೀಯ ತಯಾರಿಕೆ ಕಡಿಮೆ ಇದ್ದಾಗಲೇ ಅಲ್ಲಿನ ವೈದ್ಯರ ಸಂಘಪು ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರ ಎಂದು ಹೇಳಿತ್ತು ೧೯೯೭ ರಲ್ಲಿ ಅಮೇರಿಕನ್ನರು ಕುಡಿದ ತಂಪು ಪಾನೀಯ ೧೪೦೦ ಕೋಟಿ ಗ್ಯಾಲನಷ್ಟು. ಜನರು ತಂಪು ಪಾನೀಯ ಕುಡಿಯುವುದು ಹೆಚ್ಚಾದಂತೆ ಸ್ಥೂಲಕಾಯದವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅಂದರೆ ಈ ತಂಪು ಪಾನೀಯಗಳು ದೇಹವನ್ನು ಸ್ಥೂಲವಾಗಿರಿಸುತ್ತವೆ, ಮಧ್ಯಪಾನ, ಧೂಮ್ರಪಾನಗಳಷ್ಟೇ ಈ ಪಾನೀಯಗಳ ಸೇವನೆ ಅಪಾಯಕಾರಿಯಾಗಿದೆ. ಬೆಳೆಯುವ ಮಕ್ಕಳ ಹಲ್ಲು ಮತ್ತು ಎಲುಬುಗಳು ಗಟ್ಟಿಯಾಗಲು ಕ್ಯಾಲ್ಸಿಯಂ ಅಗತ್ಯ. ಈ ಕ್ಯಾಲ್ಸಿಯಂ ಹಾಲಿನ ಉತ್ಪನ್ನಗಳಲ್ಲಿ ದೊರೆಯುತ್ತದೆ. ಆದರೆ ಇಂದು ಹಾಲು ಕುಡಿಯುವ ಸಂಸ್ಕೃತಿಯೇ ಕಡಿಮೆಯಾಗುತ್ತಿದೆ. ಕಾರ್ಬನ್ ಡೈ ಆಕ್ಸೈಡ್ ಯುಕ್ತ ತಂಪು ಪಾನೀಯಗಳಲ್ಲಿ ದೇಹಕ್ಕೆ ಬೇಕಾಗುವ ಶಕ್ತಿ ಅಧಿಕವಾಗಿರುತ್ತದೆ. ಆದರೆ ಪೋಷಕಾಂಶಗಳಿರುವುದಿಲ್ಲ, ಅಲ್ಲದೇ ಶಕ್ತಿ ಕೂಡ ತಾತ್ಕಾಲಿಕವಾಗಿರುತ್ತದೆ. ಈ ಸತ್ಯವನ್ನರಿತ ಪ್ರತಿಷ್ಠೆಯ ಜನ ನಮ್ಮ ಮಣ್ಣಿನಿಂದಲೇ ಜನ್ಯವಾದ ಆರೋಗ್ಯವರ್ದಕವಾದ ಎಳೆನೀರು, ಹಣ್ಣಿನರಸ, ಕಬ್ಬಿನ ಹಾಲು ಮುಂತಾದವುಗಳನ್ನು ಇವುಗಳ ಬದಲು ಬಳಸಬಾರದೇಕೆ?
*****