ಏಕಾಂಗಿತನ;
ಅಳಿದುಳಿದ ನೆನಪುಗಳ ಅಧೋಲೋಕಕ್ಕೆ ಇಳಿದಿದ್ದಾಗಿದೆ.
ವಿಷಪೂರಿತ ಮುಳ್ಳುಗಳು ಚಾಚಿಕೊಂಡಿರುವ
ಸುಂದರ ಕವಿತೆಯೊಂದರ ಮೇಲೆ ಅವಳನ್ನು ಜೀವಿಸಲು
ಬಿಟ್ಟು ಬಂದಿದ್ದೇನೆ.
ನಿತ್ಯ ಬದುಕಿಗೆ ಒಗ್ಗಿ ಹೋಗಿದ್ದೇನೆ ಎನ್ನುತ್ತಾಳೆ,
ತುಂಬು ಮನಸ್ಸಿನಲಿ ನಗುವುದನ್ನು ಎಂದೋ ಕೈ ಬಿಟ್ಟಿದ್ದು,
ಅಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾಳೆ.
ಮಳೆಗಾಲದಲ್ಲಿ ಅವಳು ಜೀವಿಸುವ ಪರಿ?
ಇಲ್ಲ, ನೋಡಿದ ನೆನಪಿಲ್ಲ.
ಮರದ ಟೊಂಗೆಗಳನ್ನು ಮುರಿಯುತಾ ಚಳಿಗಾಲದಲ್ಲಿ
ಮತ್ತು ಬೇಸಿಗೆಯಲ್ಲಿ ನಗ್ನಳಾಗಿ ಬಟ್ಟೆ ಒಣಹಾಕುತ್ತಿದ್ದುದ್ದನ್ನು
ಎಷ್ಟೋ ಸಲ ನೋಡಿದ್ದೇನೆ, ಅಲ್ಲಿ ವರಾಂಡದ ಕೆಂಬೆಳಕಿನಲಿ…….
ನುಸಿಸೊಳ್ಳೆಗಳು ಅರಚಿಕೊಳ್ಳುವ ಶಬ್ದವನ್ನೂ ಕೇಳಿಸಿಕೊಳ್ಳುತ್ತಿದ್ದೆ.
ನನ್ನದೇ ಪ್ರವೃತ್ತಿಯಲ್ಲಿ ಹಾಸುಹೊಕ್ಕಾಗಿರುವ ಮಾತು,
ಪ್ರೇಮಿಸುವ ನಿತ್ಯವಿನೂತನ ಭರಾಟೆ; ಆತುರತೆ
ಕನಸು ಕಾಣುವ ರೀತಿ, ಸಾವನ್ನು ಧಿಕ್ಕರಿಸುವ ಚಂಚಲತೆ,
ಲೋಕದ ಭಂಡತನವನ್ನು ಖಂಡಿಸುವುದು ಮತ್ತು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು-
ಈ ಎಲ್ಲದರಲ್ಲೂ ಸೋಲುವುದು.
ಹೃದಯದೇವಿಯಾದವಳು ಗಳಿಸಿಕೊಂಡ ಈ ನಡಾವಳಿಗಳೆಲ್ಲವೂ
ಅವಳನ್ನು ಸ್ವರ್ಗದೇವಿಯನ್ನಾಗಿ ಪರಿವರ್ತಿಸಲಿ.
*****