ಲವ್ ಯಾನೆ ಪ್ರೇಮದ ಹಿಂದೆ ಬಿದ್ದೋರಿಗೆ ಒಂದು ಕಿವಿ ಮಾತು – ಪ್ರೇಮ ‘ಬೆಂಕಿ’ ಇದ್ಹಾಗೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳೊ ಜಾಣತನ ದಿಟ್ಟ ಪ್ರವೃತ್ತಿ, ಸಮಯ ಪ್ರಜ್ಞೆ, ಸಂಯಮವಿರಬೇಕು. ಬೆಂಕಿ ಸುಡುತ್ತೆ ಅಂತ ಗೊತ್ತಿದ್ದರೂ ಅದು ನಮ್ಮ ಜೀವನಕ್ಕೆ ಅವಶ್ಯ. ಬೆಂಕಿಯಲ್ಲಿ ಸುಟ್ಕೊಂಡು ನೋವು ತಿನ್ನೋರು ದಡ್ಡರು. ಜಾಣರಾದೋರು ಮೈಕಾಯಿಸಿಕೊಂಡು ಬೆಚ್ಚಗಿದ್ದು ಬಿಡುತ್ತಾರೆ. ರುಚಿಯಾದ ಅಡಿಗೆ ತಯಾರಿಸುತ್ತಾರೆ. ಇಷ್ಟಾದರೂ ಬೆಂಕಿಯೊಂದಿಗೆ ಸರಸ ಬೇಡ ಅಂದಿದ್ದಾರೆ ದೊಡ್ಡವರು. ಪ್ರೇಮ ಕೂಡ ಹಾಗೆ ಕಣ್ರಿ ಜೀವನಕ್ಕೆ ಬೆಂಕಿ ಬೇಕಾದಾಗೇನೇ ಜೀವಕ್ಕೆ ಪ್ರೇಮಬೇಕು. ಬೆಂಕಿಯಿಂದ ಮನೆ ಸುಟ್ಕೊಳ್ಳೋ ದಡ್ಡ ಶಿಖಾಮಣಿಗಳು ಇರೋ ಹಾಗೆ ಮನೆ ಬೆಳಗಿಸಿಕೊಳ್ಳೊ ಬುದ್ಧಿವಂತರೂ ನಾವೇ ಅಲ್ಲವೆ. ಅಂತೆಯೇ ಪ್ರೇಮ ದುರಂತಕ್ಕೆ ಸುಖಾಂತಕ್ಕೆ ನಾವೇ ಕಾರಣ. ನಾವು ಆರಿಸಿಕೊಳ್ಳೋ ಹುಡುಗ / ಹುಡುಗಿ, ಅನುಸರಿಸುವ ಮಾರ್ಗ ಪ್ರೇಮದಲ್ಲಿನ ಪಕ್ವತೆ ಪಾವಿತ್ರ ಎಲ್ಲವೂ ‘ಕೌಂಟ್’ ಆಗುತ್ತವೆ. ಪ್ರೇಮಿಗಳು ಸಹ ತಮ್ಮಲ್ಲಿ ಅಂತರವಿಟ್ಟುಕೊಳ್ಳಬೇಕು. ತಾಯಿ ಮಗನಲ್ಲಿ ಅಣ್ಣ ತಂಗಿಯರಲ್ಲಿ ಅತ್ತಿಗೆ ಮೈದುನ ಹೆಣ್ಣು ಹೆಣ್ಣಿನ ನಡುವೆ ಕೂಡ ಅಂತರವನ್ನು ಕಾಪಾಡಿಕೊಂಡು ಬಂದಿರುವ ಸಂಸ್ಕೃತಿ ನಮ್ಮದು. ಸಿನಿಮಾದಲ್ಲಿನಂತೆ ನಾವೆಂದೂ ತಾಯಿಯನ್ನು ತಬ್ಬುವುದಿಲ್ಲ. ಅಕ್ಕ ತಂಗಿಯರನ್ನು ಘಾಡವಾಗಿ ತಬ್ಬಿ ಗಿರಿಗಟ್ಟಲೆ ಆಡಿಸುವುದಿಲ್ಲ, ಅಂತರ ಕಾಪಾಡಿಕೊಂಡೇ ಪ್ರೀತಿಸುತ್ತೇವಲ್ಲವೆ. ಹಾಗೇ ಪ್ರೇಮಿಗಳ ನಡುವೆಯೂ ಒಂದು ಅಂತರವಿಟ್ಟುಕೊಂಡವರು ಎಂದೂ ಲೈಫಲ್ಲಿ ನೋವುಣ್ಣುವುದಿಲ್ಲ.
ಕನಿಷ್ಟ ಅಪ್ಪಿಕೊಳ್ಳದ, ಮುತ್ತಿಡದ ಮೇಲೆ ಅದಾವ ಸೀಮೆ ಲವ್ವುರೀ ಅಂತೀರಾ? ಅದರ ಹೊರತೂ ಪ್ರೇಮಿಸಬಹುದು. ಕಣ್ಣೋಟದಲ್ಲೇ ದಿನ ಕಳೆವಂತ ಶಕ್ತಿ ಪ್ರೇಮಕ್ಕಿದೆ. ಕೈಹಿಡಿದು ನೇವರಿಸುತ್ತಲೇ ಸುಖದ ತಾರಕವನ್ನು ಮುಟ್ಟಿಸುವ ತಾಕತ್ತು ಪ್ರೇಮಕ್ಕಿದೆ. ಮುಟ್ಟದೆ ಪ್ರೇಮಿಸುವುದೇ ‘ಪ್ಲೆಟಾನಿಕ್ ಲವ್’ ದೇಹಗಳು ಒಂದಾದ ಮೇಲೆ ಅವರು ಪ್ರೇಮಿಗಳೆಂತಾದಾರು? ಪ್ರೇಮ ತನ್ನ ಧೀಶಕ್ತಿಯನ್ನೇ ಕಳೆದುಕೊಂಡು ಬಿಡಲಿಕ್ಕೂ ಉಂಟು. ಇಬ್ಬರಲ್ಲೂ ಆಕರ್ಷಣೆಯ ವಿದ್ಯುತ್ ತಾನೇ ತಾನಾಗಿ ಡೌನ್ ಆದರೂ ಅಚ್ಚರಿಯೇನಿಲ್ಲ. ಮನುಷ್ಯ ತುಂಬಾ ವಿಚಿತ್ರ ಪ್ರಾಣಿ. ತನಗೆ ಸಿಗದೇ ಇರುವುದರ ಬಗ್ಗೆ ಕೊನೆಯವರೆಗೂ ಆಸಕ್ತಿ ಇರಿಸಿಕೊಂಡಿರುತ್ತಾನೆ. ಬಯಸಿದ್ದು ಸಿಕ್ಕಿತೋ ಅದರ ಬಗೆಗಿನ ಬಯಕೆ ಅಷ್ಟಿರುವುದಿಲ್ಲ. ‘ಇರುವುದನ್ನು ಬಿಟ್ಟು ಇರದಿರುವುದರೆಡೆಗೆ ಸಾಗುವುದೇ ಜೀವನ’ ಎಂಬ ಕವಿವಾಣಿ ಪ್ರೇಮಿಗಳ ವಿಷಯದಲ್ಲಂತೂ ಸೆಂಟ್ ಪರ್ಸೆಂಟ್ ಕರೆಕ್ಟ್, ಅದಕ್ಕೇ ಪ್ರೇಮಿಗಳೇ ಹುಷಾರು.
ಹಿಂದೆಲ್ಲಾ ಪ್ರೇಮಕ್ಕಾಗಿ ಪ್ರಾಣಕೊಟ್ಟವರು ತ್ಯಾಗ ಮಾಡಿದವರಿದ್ದಾರೆ. ಅವಳು ಪ್ರೇಮಿಸದೆ ತಿರಸ್ಕರಿಸಿದರೂ ಅವಳನ್ನೇ ಕೊನೆಯ ಉಸಿರು ಇರುವವರೆಗೂ ಪ್ರೇಮಿಸುತ್ತಾ ಅಸುನೀಗಿದವರು, ತನ್ನನ್ನು ಪ್ರೇಮಿಸದೆ ತಿರಸ್ಕರಿಸಿ ಬೇರೊಬ್ಬನ ತೆಕ್ಕೆಯಲ್ಲಿದ್ದಂತವಳ ಕ್ಷೇಮವನ್ನೂ ಬಯಸಿದ ಅಮರ ಪ್ರೇಮಗಳ ಕಥೆಗಳಿವೆ. ಇಂಥವರು ಕಥೆಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಇದ್ದರು – ಇದ್ದಾರೆ ಎನ್ನುವ ಖಾತರಿಯಿಲ್ಲ. ಯಾಕೆಂದರೆ ಜಮಾನ ಕೆಟ್ಟಿದೆ. ಹಿಂದೆಲ್ಲಾ ಪ್ರೇಮದ ಬಗ್ಗೆ ಅಂತಹ ಕಾಳಜಿ ಗೌರವ ನಮ್ಮಲ್ಲಿತ್ತು. ಅರ್ಜುನ ಸುಭದ್ರೆಯರ ಮಧ್ಯೆ ಭಗವಂತ ಕೃಷ್ಣನೇ ‘ಪಿಂಪ್’ ಆದ. ಆಗಲೂ ಸ್ನೇಹಿತರು ಪ್ರೇಮಿಗಳ ಮಧ್ಯೆ ಅದೇ ಕೆಲಸ ಮಾಡಿದರೂ ‘ಪಿಂಪ್’ ಅಂತ ಯಾರೂ ಕೀಳಾಗಿ ಕಾಣುವುದಿಲ್ಲ . ಪ್ರೇಮಿಗಳ ಪ್ರೇಮಕ್ಕೆ ನೀರೆರೆವ ನಿಸ್ವಾರ್ಥ ಸ್ನೇಹಕ್ಕೆ ಮಾತ್ರ ಸಾಧ್ಯ, ಬೆಂಗಾವಲಿಗೆ ನಿಲ್ಲುವ ಅದ್ಭುತ ಎದೆಗಾರಿಕೆ ಇರೋದು ಸ್ನೇಹಕ್ಕೆ ಮಾತ್ರ.
ಅದೆಲ್ಲಾ ಸರಿ ಕಣ್ರಿ, ಈಗ ಪ್ರೇಮದ ಸ್ಥಿತಿಗತಿ ಎಲ್ಲಿಗೆ ಬಂದು ಮುಟ್ಟಿದೆ? ಹಿಂದಿನ ಪಾವಿತ್ರ್ಯ ನಿಸ್ವಾರ್ಥ, ಗಾಢತೆ, ತ್ಯಾಗಭಾವ, ಕರುಣೆ, ದಯೆ ಇಂದಿನ ಪ್ರೇಮ ಮತ್ತು ಪ್ರೇಮಿಗಳಲ್ಲಿ ಎಷ್ಟು ಪರ್ಸೆಂಟ್? ಅಸಲು ಇದೆಯ ಎಂಬ ಗುಮಾನಿ ಕಾಡಹತ್ತಿದೆ. ಸಿರಿವಂತ ಜೀನ್ಸ್‌ಧಾರಿಯೊಬ್ಬ ಬೈಕ್‌ನಲ್ಲಿ ಹೊರಟನೆಂದರೆ ಮುಗಿಬೀಳುವ ಹುಡುಗಿಯರುಂಟು. ಪೆಪ್ಸಿ ಕೋಕೋಕೋಲಾ ಗೆಳತಿಯರುಂಟು. ಸಿನಿಮಾಕ್ಕೆ ಕಂಪನಿ ಬೇಕಾ? ಮೋಜಿನ ಜೀವನಕ್ಕೆ ಬಲಿಯಾದ ಇಂದಿನ ಯುವಕ – ಯುವತಿಯರು ಅಧೋಗತಿಯತ್ತ ಸಾಗಿದ್ದಾರೆ. ಇವರನ್ನು ರಕ್ಷಿಸೋರು ಯಾರು ? ತಿಳಿ ಹೇಳೆಲೋರು ಸರಿದಾರಿಗೆ ತರೋರು ಯಾರು ? ಎಂಬ ಕಳವಳ ಉಂಟಾಗದಿರದು. ಸಿರಿವಂತ ಹುಡುಗ ಹುಡುಗಿಯರ ಸಲ್ಲಾಪದ ಮಾದರಿ ಒಂದು ರೀತಿಯಾದರೆ ಮಧ್ಯಮ ವರ್ಗದವರೂ ತಾತ್ಕಾಲಿಕ ಸುಖದ ಕ್ಷಣಗಳಿಗಾಗಿ ತಮ್ಮದೇ ಆದ ಸಲ್ಲಾಪದ ಬಗೆಯನ್ನು ಕಂಡುಕೊಂಡಿದ್ದಾರೆ. ಇಂದಿನ ಹುಡುಗಿಯರು ಅದೆಷ್ಟು ಅಮಾಯಕರೆಂದರೆ ಇವನಿಂದ ತನ್ನನ್ನು ಬಾಳಿಸಲು ಅಸಾಧ್ಯವೆಂದರಿತೂ ಆಟೋದವನನ್ನೂ ಪ್ರೀತಿಸಿ ಬಿಡುತ್ತಾರೆ. ಆಟೋದವನನ್ನು ಪ್ರೀತಿಸಬಾರದೆಂಬುದು ಈ ಮಾತಿನ ಅರ್ಥವಲ್ಲ. ನಂಬಿದವಳನ್ನು ಬಾಳಿಸುವ ಒಳ್ಳೆಯತನ, ಧೈರ್ಯ ಇದ್ದವನು ಕೂಲಿಯಾದರೂ ಅಂವ ಯೋಗ್ಯ. ಈ ಬಗ್ಗೆ ಯೋಚಿಸಲು ಚೂಡಿದಾರ್ ಬೆಡಗಿಯರಿಗೆ ಸಮಯವಾದರೂ ಎಲ್ಲಿ? ಸಿನಿಮಾದಲ್ಲಿ ಟಿಕೆಟ್ ಕೊಡುವವನನ್ನು ಕೇವಲ ಟಿಕೆಟ್ ಆಶೆಗಾಗಿ ತಮ್ಮ ನಗೆ, ಒನಪು, ಒಯ್ಯಾರಗಳಿಂದ ಮೋಡಿ ಮಾಡಿ ಬಿಡುತ್ತಾರೆ. ಕಾರ್ ಇದ್ದವನ ಹಿಂದೆ ಬೀಳುವ ಹುಡುಗಿಯರೂ ಹೆಚ್ಚುತ್ತಿದ್ದಾರೆ. ಇಂದಿನ ಸಿನಿಮಾಗಳ ದಟ್ಟ ದರಿದ್ರ ಪ್ರಭಾವ ಇವರ ಮೇಲಾಗುತ್ತಿದೆ. ಯಾವ ಹುಡುಗ/ಹುಡುಗಿಯೂ ಈವತ್ತು ಪ್ರಾಮಾಣಿಕವಾಗಿ ಪ್ರೇಮಿಸೋದಿಲ್ಲ . ಯೌವನಕ್ಕೊಬ್ಬ / ಒಬ್ಬಳು ಸಂಗಾತಿಬೇಕು. ಇತರೆ ಸಾಥಿಗಳ ಎದುರು ಅದೊಂದು ಹೆಗ್ಗಳಿಕೆಯಾಗಬೇಕು. ಬಿಸಿ ಅಪ್ಪಗೆ, ಮುತ್ತು ಸಿಕ್ಕರೆ ಸಾಕು. ಉಳಿದದ್ದು ಗಂಡನಿಗಾಗಿ ಮುಡಿಪು.
ಆದರೆ ನಗರಗಳಲ್ಲಿರುವ ಹುಡುಗಿಯರು ತಮ್ಮ ಖರ್ಚಿಗಾಗಿ ಎಂತ ಆಟಕ್ಕೂ ಇಳಿಯುತ್ತಾರೆ. ನೌಕರಿಯಲ್ಲಿರುವ ಹುಡುಗಿ ತನ್ನ ಬಾಸ್‌ನನ್ನು ಬುಟ್ಟಿಗೆ ಹಾಕಿಕೊಂಡು ಬಿಡುತ್ತಾಳೆ. ಕೆಲವು ಗಂಡಸರೂ ಇಂತವರನ್ನು ಅಷ್ಟಕ್ಕಷ್ಟೆ ಬಳಸಿಕೊಂಡು ಕೈ ಬಿಡುತ್ತಾರೆ. ಇಂತಹ ಪ್ರಸಂಗಗಳು ಪ್ರಾಯಶಃ ಅಪಾಯದ ಅಂಚನ್ನು ತಲುಪುವುದಿಲ್ಲ. ಆಕಸ್ಮಾತ್ ಶೋಕಿಗಿಳಿದಿರುವ ಹುಡುಗಿಯನ್ನು ಗಾಢವಾಗಿ ಪ್ರೇಮಿಸಿಬಿಡುವ ಮುಗ್ಧನಿರುತ್ತಾನೆ. ಅವನಿಗೆ ಅವಳ ಅಗಲಿಕೆ ತಾಳಲಾಗದು. ಮದುವೆಯಾಗಲು ಪೀಡಿಸುತ್ತಾನೆ. ಇಲ್ಲಿಂದ ಓಡಿ ಹೋಗೋಣ ಅನ್ನುತ್ತಾನೆ. ಹುಡುಗಿ ಹುಷಾರಾಗುತ್ತಾಳೆ. ಭೇಟಿಯನ್ನೇ ನಿಲ್ಲಿಸುತ್ತಾಳೆ. ಸಿಕ್ಕರೂ ತಾತ್ಸಾರ ಮಾಡುತ್ತಾಳೆ. ಅವನು ನೀನಿಲ್ಲದೆ ಹೋದರೆ ಸಾಯುತ್ತೇನೆ ಅಂತ ಗೋಗರೆಯುತ್ತಾನೆ. ತನ್ನ ತಂದೆ ತಾಯಿ ಜಾತಿ ಮತಗಳಿಂದ ದೂರವಾಗುವ ಎದೆಗಾರಿಕೆ ಅವಳಲ್ಲಿರುವುದಿಲ್ಲ . ಅವಳಿಗಾಗಿ ‘ವರ’ ನನ್ನಾಗಲೇ ಗುರುತುಪಡಿಸಿರುತ್ತಾರೆ. ಅವಳಿಗೆ ರಿಸ್ಕ್ ಬೇಕಿಲ್ಲ. ಅವಳ ಎಸ್ಕೇಪಿಸಂನಿಂದ ಕಂಗಾಲಾದ ಮೃದು ಹೃದಯಿ ಗೆಳೆಯರೆದುರು ಅತ್ತು ಕರೆದು ತನ್ನ ಪ್ರೇಮಕ್ಕೆ ಎಳ್ಳು ನೀರು ಬಿಡುತ್ತಾನೆ. ಮರೆಯಲೆತ್ನಿಸುತ್ತಾನೆ. ಅದರೆ ಕೆಲವರಿರುತ್ತಾರೆ ನೋಡಿ ತನ್ನ ಪ್ರೇಮಕ್ಕೆ ದ್ರೋಹ ಬಗೆದವಳನ್ನು ಕೊಲೆ ಮಾಡಲು ಸಿದ್ಧವಾಗುತ್ತಾರೆ. ಪ್ರೇಮದ ವಂಚನೆಗೆ ಬಲಿಯಾದವರು ಮತ್ತೊಬ್ಬರನ್ನು ಬಲಿ ತೆಗೆದುಕೊಳ್ಳೋದು ಅಮಾನವೀಯತೆ ಎಂದು ಎಷ್ಟೇ ತಿಳಿ ಹೇಳಿದರೂ ಅವರಿಗೆ ಅದರಲ್ಲೇ ತೃಪ್ತಿ. ಹೀಗಾಗಿ ಜೀವಾವಧಿ ಜೈಲು ಸೇರಿದವರಿದ್ದಾರೆ. ಅಂಥವನಿಗೆ ಅವಳೂ ಇಲ್ಲ ಜೀವನವೂ ಇಲ್ಲ. ಇದೆಂತಹ ಪರಿ ನೋಡಿ!
ಈಗೀಗ ವಿಚಿತ್ರವಾದರೂ ಸತ್ಯ ಎಂಬಂತಹ ಘಟನೆಗಳನ್ನೂ ಕಾಣುತ್ತಿದ್ದೇವೆ. ಏಕಮುಖ ಪ್ರೀತಿ ಅರ್ಥಾತ್ ಒನ್‌ವೇ ಟ್ರಾಫಿಕ್ ಲವ್ ಅಂತಾರೆ ಪ್ರೇಮಿಗಳು. ಹುಡುಗಿ ತನ್ನನ್ನು ಪ್ರೇಮಿಸಿದರೆಷ್ಟು ಬಿಟ್ಟರೆಷ್ಟು ತಾನವಳಿಗೆ ಇಷ್ಟವಾಗಲೇ ಬೇಕೆಂದೇನಿಲ್ಲ. ನಾನು ಪ್ರೇಮಿಸತ್ತೇನೆ ಕಣೆ, ನೀನು ಪ್ರೇಮಿಸಬೇಕು – ಅಷ್ಟೆ .
ಈ ‘ಅಷ್ಟೆ’ ಎಂಬ ಪುಟ್ಟ ಪದದಲ್ಲಿ ಭಯಂಕರ ಅಪಾಯ ಅಡಗಿರುವುದು ಮೊದ ಮೊದಲು ಅರಿವಿಗೇ ಬರುವುದಿಲ್ಲ. ಅವಳಿಗೆ ಹಿಂಸೆಯಾದರೂ ಸೈ ತನಗವಳ ಪ್ರೇಮಬೇಕು. ಅವಳು ಒಪ್ಪದಿದ್ದರೆ ‘ರೇಪ್’ಗೂ ಸರಿ. ಇಂಥವನು ಪ್ರೇಮಿಯ? ದಿಟ್ಟಹುಡುಗಿಯಾದವಳು ಕಿರುಕುಳ ಬೆದರಿಕೆಗೆ ಸೊಪ್ಪ ಹಾಕದಿದ್ದರೆ ಅಂಥವಳ ಮುಖಕ್ಕೆ ‘ಆಸಿಡ್’ ಎರಚುವಷ್ಟು ನಿರ್ದಯಿಯಾಗುತ್ತಾನೆ ಪಡ್ಡೆ ಹುಡುಗ. ಹಿಂಸೆ, ಸ್ವಾರ್ಥವನ್ನು ಪ್ರೇಮ ಎನ್ನಲಾದೀತೆ. ಸುಂದರವಾದ ಹುಡುಗಿಯ ಮುಖಕ್ಕೆ ‘ಆಸಿಡ್’ ಎರಚಿ ಕುರೂಪಗೊಳಿಸಿ ಬಾಳನ್ನೇ ಹಾಳು ಮಾಡುವ ಪ್ರಾಣಾಂತಿಕ ನೋವಿಗೆ ದೂಡುವವನಿಗೆ ಎಂಥ ಶಿಕ್ಷೆ ವಿಧಿಸಿದರೂ ಕಡಿಮೆಯೆ. ಇತ್ತೀಚೆಗೆ ಬಂದ ನಟ ಶಾರೂಕ್ ಖಾನ್‌ನ ಬಾಜಿಗರ್, ಢರ್’ನಂತಹ ಹುಚ್ಚು ಸಿನಿಮಾಗಳು ಉಪೇಂದ್ರನ ಉಪೇಂದ್ರ, ಪ್ರೀತ್ಸೆ ತರಹದ ತಿಕ್ಕಲು ಸಿನಿಮಾಗಳು ‘ಹುಚ್ಚ’ ಸಿನಿಮಾದಲ್ಲಿನ ಹೀರೋನ ಸ್ಟೈಲು, ಹೈಲುಗಳನ್ನು ನೋಡುವ ಆರಾಧಿಸುವ ಅನುಸರಿಸುವ ಪಡೆಗಳು ಹಿಂಸಾಪಶುಗಳಾಗದೆ ಅಮರ ಪ್ರೇಮಿಗಳಾಗಲು ಶಕ್ಯವೆ. ಇಂತವರ ಭವಿಷ್ಯ ಸೆಂಟ್ರಲ್ ಜೈಲಲ್ಲಿ ದಿ ಎಂಡ್. ಈ ಪಡ್ಡೆಗಳ ಭವಿಷ್ಯವೇನಾದರೂ ಹಾಳು ಬಿದ್ದು ಹೋಗಲಿ ಬಿಡಿ. ಏನೂ ಅರಿಯದ ಯಾವ ತಪ್ಪು ಹೆಜ್ಜೆ ಇಡದ ಪಾಪದ ಹುಡುಗಿಯರ ಗತಿ ಏನು? ನಮಗೆ ತಿಳಿಯದ ಅದೆಷ್ಟು ಹಸೀನಾರುಗಳು ನಿತ್ಯವೂ ನರಳುತ್ತಿದ್ದಾರೋ, ನಿಡುಸುಯ್ಯುತ್ತಿದ್ದಾರೋ ಕಾಣದ ಜಗದ್ ರಕ್ಷಕನೇ ಬಲ್ಲ.
ಹುಡುಗಿಯರೆ, ಕ್ಷಣಿಕ ಸುಖ ಮೋಜು ಮೇಜುವಾನಿಗಳಿಗಾಗಿ ಹುಡುಗರ ಹಿಂದೆ ಬಿದ್ದಿರೋ ಜೋಕೆ. ನೀವೇನಂತವರಲ್ಲ ಬಿಡಿ. ಆದರೂ ನಿಮ್ಮ ಕಾಲೇಜಲ್ಲಿ ಮುಗ್ಧರಂತೆ ಹಿಂದೆ ಸುತ್ತುವ, ಅಕ್ಕಪಕ್ಕದ ಮನೆಯಲ್ಲಿದ್ದು ಸದಾ ನಿಮ್ಮ ನೆರವಿಗೆ ನಿಲ್ಲುವ ‘ವಿಂಡೋ ಹೀರೋ’ಗಳ ಬಗ್ಗೆಯೂ ಹುಡುಗಿಯರೆ, ಹುಷಾರು, ಹುಷಾರು, ಹುಷಾರೂ…
*****