ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

‘ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿಯನ್ನು ಯಾರೂ ಅಲ್ಲಗಳೆಯಲಾರರು. ಈ ಭಾಗವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ. ಉಚಿತಾನುಚಿತಗಳನ್ನು ಅರಿತು ಸಕಾಲದಲ್ಲಿ ಸೇವಿಸುವ ಶುಚಿ-ರುಚಿಯ ಆಹಾರವು ನಮ್ಮ ಆರೋಗ್ಯಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಾಮಾನ್ಯ ಅಭಿಪ್ರಾಯ ಮಾತ್ರವಲ್ಲದೇ ವೈದ್ಯಕೀಯ ಅಭಿಪ್ರಾಯವೂ ಹೌದು.

ಒಳ್ಳೆಯ ಆಹಾರವೇ ಒಳ್ಳೆಯ ಜೀವನ. ಒಳ್ಳೆಯ ಜೀವನವೇ ದೀರ್ಘಾಯುರಾರೋಗ್ಯವನ್ನು ಪ್ರಶ್ನೆ ಮಾಡಿ ಕೊಡುತ್ತದೆ. ನಮ್ಮ ದಿನನಿತ್ಯದ ಆಹಾರವು ವಿಟಮಿನ್ ಯುಕ್ತವಾಗಿರಬೇಕು. ಇವು ನಮ್ಮ ಆರೋಗ್ಯದಲ್ಲಿ ಬಹುಮುಖ್ಯವಾದ ಪಾತ್ರವಹಿಸುತ್ತವೆ. ಕೆಲವು ಪ್ರಮುಖ ವಿಟಮಿನ್‌ಗಳ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ.

ವಿಟಮಿನ್-ಎ

ಇದು ಬಣ್ಣವಿಲ್ಲದ ಎಣ್ಣೆಯಂತಹ ವಸ್ತು. ಇದನ್ನು ದೇಹವು ಯಕೃತ್ (ಲಿವರ್)ನಲ್ಲಿ ಸಂಗ್ರಹಿಸಿಟ್ಟುಕೊಂಡು ಅಗತ್ಯ ಬಿದ್ದಾಗ ಉಪಯೋಗಿಸಿಕೊಳ್ಳುತ್ತದೆ.

ವಿಟಮಿನ್-ಎ, ಶರೀರದ ಕೆಲವು ಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೋಂಕು ನಿರೋಧಕ ವಿಟಮಿನ್ ಎಂದೇ ಹೆಸರು ಪಡೆದಿರುವ ಇದು, ಕಣ್ಣುಗಳಿಗೆ ಹೊಳಪನ್ನು ಚರ್ಮಕ್ಕೆ ಮೃದುತ್ವವನ್ನು, ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಮತ್ತು ಮುಖಕ್ಕೆ ಸೌಂದರ್ಯವನ್ನೂ ಕೊಡುತ್ತದೆ.

ದಿನಂಪ್ರತಿ ಆರೋಗ್ಯವಂತ ಯುವಕರಿಗೆ ೨,೫೦೦ ರಿಂದ ೩,೦೦೦ ಯೂನಿಟ್. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ೩,೦೦೦ ರಿಂದ ೫,೦೦೦ ಯೂನಿಟ್ ವಿಟಮಿನ್-ಎ ಆವಶ್ಯಕ.

ವಿಟಮಿನ್-ಎ ಕೊರತೆಯಾದರೆ ತಲೆದೋರುವ ಪ್ರಮುಖ ತೊಂದರೆಯೆಂದರೆ-ರಾತ್ರಿ ಕುರುಡುತನ. ಸಕಾಲದಲ್ಲಿ ಇದನ್ನು ವಾಸಿಮಾಡದಿದ್ದರೆ ಕುರುಡಾಗಬಹುದು.

ದೇಹದಲ್ಲಿ ವಿಟಮಿನ್-ಎ ಕೊರತೆಯಾದರೆ ಚರ್ಮದಲ್ಲಿ ಬೆವರು ಗ್ರಂಥಿಗಳು ಕ್ಷಯಿಸುವುದರಿಂದ, ಬೆವರುವುದು ಕಡಿಮೆಯಾಗುವುದು. ಹುರುಪೆ ಮತ್ತು ಗುಳ್ಳೆಗಳು ಏಳುತ್ತವೆ. ಕರುಳಿನ ಗ್ರಂಥಿಗಳು ಕ್ಷಯಿಸುವುದರಿಂದ ಜೀರ್ಣಕ್ರಿಯೆ ತಗ್ಗುತ್ತದೆ. ಕೆಲವು ವೇಳೆ ಮೂತ್ರಕೋಶ ಮತ್ತು ಮೂತ್ರಪಿಂಡಗಳಲ್ಲಿ ಕಲ್ಲುಗಳು ಕೂಡಾ ಉಂಟಾಗಬಹುದು.

ಮೇಲಿನ ತೊಂದರೆಗಳು ಬರದಂತೆ ನೋಡಿಕೊಳ್ಳಬೇಕಾದರೆ ವಿಟಮಿನ್-ಎ ಅಂಶವಿರುವ ಆಹಾರವನ್ನು ಸೇವಿಸಬೇಕು. ವಿಟಮಿನ್-ಎಯು ಒಂದು ಪಿಂಟ್ ಹಾಲಿನಲ್ಲಿ ೨,೦೦೦ ಯೂನಿಟ್ ಗಳು, ಒಂದು ಮೊಟ್ಟೆಯಲ್ಲಿ ೩೦೦ ಯೂನಿಟ್‌ಗಳು, ಒಂದು ಗ್ರಾಂ ಹಾಲಿಬಟ್ ಎಣ್ಣೆಯಲ್ಲಿ ೨೦,೦೦೦ ಯೂನಿಟ್‌ಗಳು ಮತ್ತು ಒಂದು
ಗ್ರಾಂ ಕಾಡ್ ಲಿವರ್ ಎಣ್ಣೆಯಲ್ಲಿ ೪೦೦ ರಿಂದ ೪,೦೦೦ ಯೂನಿಟ್ ಗಳಷ್ಟಿರುತ್ತದೆ.

ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ನುಗ್ಗೆ ಸೊಪ್ಪು, ಮೂಲಂಗಿ ಸೊಪ್ಪು, ಬಸಳೆ ಸೊಪ್ಪು, ದಂಟಿನ ಸೊಪ್ಪು, ಮೆಂತ್ಯದ ಸೊಪ್ಪು, ಪುದೀನಾ ಸೊಪ್ಪು, ಎಲೆಕೋಸು, ಹಣ್ಣು, ಹಾಲು, ಮೊಟ್ಟೆ ಮುಂತಾದವುಗಳಲ್ಲಿ ವಿಟಮಿನ್-ಎ ಅಂಶವಿದೆ.

ವಿಟಮಿನ್-ಬಿ

ವಿಟಮಿನ್-ಬಿ ಒಂದು ವಸ್ತುವಾಗಿರದೇ ಹಲವು ಉವಜೀವ ವಸ್ತುಗಳ ಮಿಶ್ರಣವಾಗಿದೆ. ಇದರಲ್ಲಿ ಬಿ೧ ಬಿ೨, ಬಿ೩… ಎಂದು ಮುಂತಾಗಿ ೧೨ ಉಪಜೀವ ವಸ್ತುಗಳಿವೆ.

ನಮ್ಮ ನಿತ್ಯಜೀವನದಲ್ಲಿ ಇದರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಾಯಿಬಸಳೆ, ಪಲ್ಲಾಗ್ರ ರೋಗ, ನುರೇಸ್ಥೇನಿಯಾ, ಬೆರಿಬೆರಿ, ನರದೌರ್ಬಲ್ಯ, ತಲೆನೋವು, ಕೋಪ, ಏಕಾಗ್ರತೆ ಸಾಧಿಸದಿರುವುದು ಮುಂತಾದ ಉಪದ್ರವಗಳಿಗೆ ವಿಟಮಿನ್-ಬಿ ಕೊರತೆಯೇ ಮೂಲ ಕಾರಣವಾಗಿದೆ.

ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಬೇಕಾದರೆ ವಿಟಮಿನ್-ಬಿ ಅಂಶವಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಅದು ಮಂತ್ಯ ಸೊಪ್ಪು, ಬಸಳೆ ಸೊಪ್ಪು, ದಂಟಿನ ಸೊಪ್ಪು, ಅಕ್ರೋಟ್, ಹಣ್ಣು, ಹಾಲು, ಮೀನುತತ್ತಿಗಳಲ್ಲಿ ಯಥೇಚ್ಚವಾಗಿದೆ. ಅಕ್ಕಿ, ತೌಡು, ಮೊಳಕೆ ಬಂದ ಬೇಳೆಕಾಳುಗಳಲ್ಲಿಯೂ ಅದರ ಅಂಶವಿದೆ.

ನಮ್ಮ ನಿತ್ಯಜೀವನದಲ್ಲಿ ನಾವು ಮಾಡುತ್ತಿರುವ ಒಂದು ದೊಡ್ಡ ತಪ್ಪಂದರೆ-ಧಾನ್ಯಗಳನ್ನು ಹಿಟ್ಟಿನ ಗಿರಣಿಗಳಿಗೆ ಕೊಂಡೊಯ್ದು ಹಿಟ್ಟು ಮಾಡಿಸಿಕೊಳ್ಳುವುದು. ಹಿಟ್ಟಿನ ಗಿರಣಿಗಳಲ್ಲಿ ಹಿಟ್ಟು ಮಾಡಿಸುವುದರಿಂದ ಹೆಚ್ಚಿನ ಪ್ರಮಾಣದ ವಿಟಮಿನ್ ನಾಶವಾಗುತ್ತದೆ. ಆದ್ದರಿಂದ ಧಾನ್ಯಗಳನ್ನು ಬೀಸುವ ಕಲ್ಲಿನಲ್ಲೇ ಬೀಸಿಕೊಳ್ಳುವುದು ಒಳ್ಳೆಯದು.

ಆಹಾರ ಪಚನವಾಗಲು ಸಹಕರಿಸುವ ವಿಟಮಿನ್-ಬಿ, ಚರ್ಮ ಮತ್ತು ಸ್ನಾಯುಗಳನ್ನು ಆರೋಗ್ಯಪೂರ್ಣ ವಾಗಿರಿಸುತ್ತದೆ.

ಅತಿಯಾದರೆ ಅಮೃತವೂ ವಿಷ!

‘ಆತಿಯಾದರೆ ಅಮೃತವೂ ಕೂಡಾ ವಿಷ’ವಾಗಬಲ್ಲ ದೆಂಬ ಗಾದೆ ಮಾತು, ವಿಟಮಿನ್‌ಗಳಿಗೂ ಅನ್ವಯಿಸುತ್ತದೆ. ಲೇಖನದಲ್ಲಿ ಸೂಚಿಸಿದಂತೆ ಎಷ್ಟು ಬೇಕೋ ಆಷ್ಟೇ ಸಾಕು, ಅತಿಯಾದರೆ ಅದೇ ಅಪಾಯಕ್ಕೆ ಎಡೆ ಮಾಡಿಕೊಡುವುದು!

ವಿಟಮಿನ್ ‘ಬಿ’ ಹೆಚ್ಚಾಗಿ ಸೇವಿಸಿದರೆ ಕಾಲು ಮತ್ತು ಕೈಗಳ ನರಗಳು ಸತ್ವಹೀನವಾಗುತ್ತವೆ. ‘ಬಿ’, ‘ಸಿ’ ಮತ್ತು ‘ಡಿ’ ವಿಟಮಿನ್ನುಗಳನ್ನು ದೀರ್ಘಕಾಲ ಅತಿಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರ ಪಿಂಡಗಳಿಗೆ ಹಾನಿಯಾಗುತ್ತದೆ. ಹಾಗೂ ಮೂತ್ರಕೋಶದಲ್ಲಿ ಕಲ್ಲುಗಳೂ ರೂಪುಗೊಳ್ಳಬಹುದು!

ಸೂರ್ಯಕಿರಣಗಳಲ್ಲಿ ವಿಟಮಿನ್-ಡಿ ಸತ್ವವಿರುವುದರಿಂದ ಸೂರ್ಯಸ್ನಾನ ಇಂದು ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ವರದಿಗಳು ಸೂರ್ಯಸ್ನಾನ ಕ್ಯಾನ್ಸರ್‌ಗೆ ಪೂರಕ ಎಂದು ತಿಳಿಸಿವೆ.

ಹೆಚ್ಚು ವಿಟಮಿನುಗಳನ್ನು ಸೇವಿಸಿದರೆ ತಮ್ಮ ಮಕ್ಕಳು ಹೆಚ್ಚು ಚುರುಕಾಗುತ್ತಾರೆ. ಹಾಗೂ ಅವರ ಬುದ್ಧಿಮತ್ತೆಯೂ ಹೆಚ್ಚಿ ಅವರ ಉಗ್ರವರ್ತನೆಯು ನಿಲ್ಲುವುದೆಂದು ಜನ ತಮ್ಮ ಮಕ್ಕಳಿಗೆ ವಿಟಮಿನ್ ಮಾತ್ರೆಗಳನ್ನು ಕೊಡುತ್ತಾರೆ. ಆದರೆ ಇವುಗಳ ಸೇವನೆಯಿಂದ ಒಳಿತಿಗಿಂತ ಕೆಡುಕೇ ಹೆಚ್ಚಾಗುತ್ತದೆ.

ಆದ್ದರಿಂದ ವಿಟಮಿನ್‌ಗಳ ಹಿತ-ಮಿತ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಅದೇ ಅತಿಯಾಗಿ ಸೇವಿಸಿದರೆ ವಿಷವಾಗಿ ಪರಿಣಮಿಸಬಲ್ಲುದು ಎಂಬುದನ್ನು ತಿಳಿದಿರುವುದವಶ್ಯ.

ವಿಟಮಿನ್-ಸಿ

ವಿಟಮಿನ್-ಸಿಯು ಇಡೀ ದೇಹವನ್ನು ಮೃದುವಾಗಿಸಿ, ತಾರುಣ್ಯಾವಸ್ಥೆಯಲ್ಲಿ ಇಡುತ್ತದೆ.

ದಿನವೊಂದಕ್ಕೆ ಮಕ್ಕಳಿಗೆ ೩೦ ಮಿಲಿಗ್ರಾರಿ, ದೊಡ್ಡವರಿಗೆ ೭೫ ಮಿ.ಗ್ರಾಂ. ಗರ್ಭಿಣಿಯರಿಗೆ ೧೦೦ ಮಿ.ಗ್ರಾಂ ಮತ್ತು ಬಾಣಂತಿಯರಿಗೆ ೧೫೦ ಮಿ.ಗ್ರಾಂ ನಷ್ಟು ಬೇಕಾಗುವ ವಿಟಮಿನ್-ಸಿ ಕೊರತೆಯಾದರೆ ಸ್ಕರ್‍ವಿ ರೋಗವಲ್ಲದೇ ಅಕಾಲ ವೃದಾಪ್ಯ ಮತ್ತು ಸಂಧಿವಾತ ರೋಗ ಕೂಡಾ ಬರುವ ಸಾಧ್ಯತೆಯಿದೆ.

ಮೇಲಿನ ತೊಂದರೆಗಳನ್ನು ಹೋಗಲಾಡಿಸಬೇಕಾದರೆ ವಿಟಮಿನ್-ಸಿ ಅಂಶವಿರುವ ಆಹಾರವನ್ನು ಸೇವಿಸಬೇಕು.

ವಿಟಮಿನ್-ಸಿಯು, ಒಂದು ಮಿ.ಲೀ. ನಿಂಬೆರಸದಲ್ಲಿ ೦.೫ ಮಿ.ಗ್ರಾಂನಷ್ಟಿರುತ್ತದೆ. ಹಸಿರು ತರಕಾರಿಗಳಲ್ಲಿ ಮತ್ತು ಸೊಪ್ಪ, ಹಾಲು, ಮಾಂಸ, ಮೀನು ಮುಂತಾದವುಗಳಲ್ಲಿ ವಿಟಮಿನ್-ಸಿಯ ಆಂಶವಿದೆ. ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿದಾಗ ವಿಟಮಿನ್-ಸಿ ಯ ಪ್ರಮಾಣ ಹೆಚ್ಚುತ್ತದೆ.

ಇದು ರಕ್ತನಾಳಗಳನ್ನು, ಹಲ್ಲು ಮತ್ತು ಎಲುಬುಗಳನ್ನು ಹಟ್ಟಿಯಾಗಿಸಿ ಆರೋಗ್ಯಪೂರ್ಣವಾಗಿರಿಸುತ್ತದೆ.

ವಿಟಮಿನ್-ಸಿಯಿಂದ ನೆಗಡಿ ಮಾತ್ರವಲ್ಲ, ಹ್ರ್‍ಅದಯಾಘಾತ, ಕ್ಯಾನ್ಸರ್ ಮತ್ತು ಸ್ಕರ್‍ವಿ ರೋಗಗಳೂ ಹಿಡಿತಕ್ಕೆ ಬರಬಹುದು. ನೈಟ್ರೋ ಆಸೈಮನುಗಳ ರಾಸಾಯನಿಕ ಸಂಘಟನೆಯನ್ನು ಪ್ರತಿಬಂಧಿಸುವ ವಿಟಮಿನ್-ಸಿ, ಡಯಾಬಿಟೀಸ್ ರೋಗವನ್ನು ಕೂಡಾ ಉಪಶಮನಗೊಳಿಸುವಲ್ಲಿಯೂ
ನೆರವಾಗಬಲ್ಲುದು.

ದೇಹದ ಚಟುವಟಿಕೆ ವಿಪರೀತವಾದಾಗ ಇಲ್ಲವೇ ಜ್ವರ ಬಂದಾಗ, ದೇಹವು ವಿಟಮಿನ್-ಸಿಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಆದ್ದರಿಂದ ನೆಗಡಿ ಅಥವಾ ಜ್ವರ ಬಂದಾಗ ವಿಟಮಿನ್-ಸಿ ಅಂಶವಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ವಿಟಮಿನ್-ಡಿ

ಬಾಯಿಯಿಂದ ಸೇವಿಸದೆಯೇ ದೇಹಕ್ಕೆ ಪೂರೈಸ ಬಹುದಾದ ವಿಟಮಿನ್‌ಗಳಲ್ಲಿ ವಿಟಮಿನ್-ಡಿಯೂ ಒಂದು. ಮೈಯನ್ನು ಬಿಸಿಲಿಗೆ ಬಿಡುವುದರಿಂದ ಸೂರ್ಯ ಕಿರಣದಿಂದ ನಾವು ವಿಟಮಿನ್-ಡಿಯನ್ನು ಪಡೆಯಬಹುದು.

ಶರೀರದ ಮೂಳೆಗಳು ಶಕ್ತಿಯುತವಾಗಿ ಬೆಳೆಯಲು ಈ ವಿಟಮಿನ್ ಅತ್ಯವಶ್ಯ. ದಿನವೊಂದಕ್ಕೆ ಸಣ್ಣಮಕ್ಕಳಿಗೆ ೪೦೦-೮೦೦ ಯುನಿಟ್, ವಯಸ್ಕರಿಗೆ ೪೦೦ ಯೂನಿಟ್ ಬೇಕಾಗುವ ವಿಟಮಿನ್-ಡಿಯ ಕೊರತೆಯಾದರೆ ಮಕ್ಕಳಲ್ಲಿ ರಿಕೆಟ್ಸ್ (Rickets) ಮತ್ತು ದೊಡ್ಡವರಲ್ಲಿ ಮೂಳೆಮೆತು ರೋಗ (ಆಸ್ಟಿಯೋಮಲೇಷಿಯಾ) ಕಾಣಿಸುತ್ತದೆ.

ಬಿಸಿಲಿಗೆ ಮೈಯೊಡದೇ ಮನೆಯಲ್ಲಿ ಉಳಿಯುವ, ಹೊರಬಂದರೂ ಬಟ್ಟೆಯೊಳಗೇ ಅಡಗುವ ಮಹಿಳೆಯರು, ವಿಟಮಿನ್‌-ಡಿಯ ಕೊರತೆಯಿಂದ ಬಹುವಾಗಿ ಬಳಲುತ್ತಾರೆ. ಇದರ ಕೊರತೆಯಿಂದ ಹಲ್ಲುಗಳು ಕೆಡುವುದಲ್ಲದೇ ದೇಹದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುವದು.

ಮೇಲಿನ ತೊಂದರೆಗಳನ್ನು ಹೋಗಲಾಡಿಸಲು ವಿಟಮಿನ್-ಡಿ ಅಂಶವಿರುವ ಆಹಾರವನ್ನು ಸೇವಿಸಬೇಕು. ಇದು ಹಾಲು, ಬೆಣ್ಣೆ, ತುಪ್ಪಗಳಲ್ಲಲ್ಲದೆ ಕಾಡುಮೀನಿನ ಈಲಿಯ ಎಣ್ಣೆಯಲ್ಲಿ ೧೦೦ ಯೂನಿಟ್ ಮತ್ತು ೧ ಗ್ರಾಂ ಹಾಲಿಬಟ್ ಮೀನಿನ ಎಣ್ಣೆಯಲ್ಲಿ ೧,೦೦೦ ಯೂನಿಟ್ ನಷ್ಟಿರುತ್ತದೆ.

ಮಕ್ಕಳಿಗೆ ವಿಟಮಿನ್-ಡಿ ಅಭಾವ ಆಗದಂತೆ ನೋಡಿಕೊಳ್ಳಲು ಅವರಿಗೆ ಜೀವಸತ್ವವಿರುವ ಟಾನಿಕ್ ಮತ್ತು ಮೀನಿನ ಎಣ್ಣೆಯನ್ನು ಕೊಡಬೇಕು. ಮಕ್ಕಳನ್ನು ಇಷ್ಟಬಂದಂತೆ ಆಟವಾಡಲು ಬಿಸಿಲಿಗೆ ಬಿಡಬೇಕು.

ವಿಟಮಿನ್-ಡಿಯು ಕರುಳು, ಎಲುಬು ಮತ್ತು ಹಲ್ಲುಗಳಲ್ಲಿ ಸುಣ್ಣ ಮತ್ತು ರಂಜಕಗಳು ರಕ್ತಗತವಾಗಲು ಸಹಕರಿಸುತ್ತದೆ.

ವಿಟಮಿನ್ ಇ

ಲೈಂಗಿಕ ಜೀವನಕ್ಕೆ ಯೋಗ್ಯವಾದ ವಯೋಮಾನದ ಸ್ತ್ರೀಯರಲ್ಲಿ ವಿಟಮಿನ್-ಇ ಸಾಕಷ್ಟಿರದಿದ್ದರೆ ಅವಳು ಗರ್ಭವತಿಯಾಗುವ ಸಂಭವವೂ ಕಡಿಮೆ. ಇದು ಲೈಂಗಿಕ ಭಾಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರ ಕೊರತೆಯಿಂದ ಸಂತಾನೋತ್ಪತ್ತಿಯಾಗದಿರಬಹುದು. ಆದರಿಂದ ಇದು ದೇಹಕ್ಕೆ ಅತ್ಯಗತ್ಯ.

ಇಡ್ಲಿ, ಗೋಧಿ, ತತ್ತಿ ಮುಂತಾದುವುಗಳಲ್ಲಿ ವಿಟಮಿನ್-ಇ ಯ ಅಂಶವಿದೆ.

ವಿಟಮಿನ್-ಕೆ

ಓಟ್, ಮೀನು, ಗೋಧಿಗಳಲ್ಲಿ ಇರುವ ಈ ವಿಟಮಿನ್-ಕೆ, ರಕ್ತ ಹೆಪ್ಪುಗಟ್ಟುವಲ್ಲಿ ಅತಿ ಉಪಯುಕ್ತ.

ವಿಟಮಿನ್-ಪಿ

ಇದು ವಿಟಮಿನ್-ಸಿ ಯೊಂದಿಗೆ ಕೆಲಸ ಮಾಡುತ್ತದೆ. ವಿಟಮಿನ್-ಸಿ ಕಾರ್ಯಗತವಾಗಲು ಸಹಾಯಮಾಡುವ ಈ ವಿಟಮಿನ್, ರಕ್ತನಾಳಗಳನ್ನು ಆರೋಗ್ಯವಾಗಿರಿಸಲು ಬಹುಮುಖ್ಯ.

ಈ ಕಡೆಯೂ ಸ್ವಲ್ಪ ಗಮನ ಕೊಡಿ

* ತರಕಾರಿಗಳನ್ನು ಹೆಚ್ಚುವುದಕ್ಕೆ ಮೊದಲು ಅವನ್ನು ಶುಚಿಯಾಗಿ ತೊಳೆಯಬೇಕು. ಹೆಚ್ಚಿದ ಮೇಲೆ ತೊಳೆದರೆ ವಿಟಮಿನ್‌ಗಳು ತೊಳೆದ ನೀರಿನಲ್ಲಿ ಹೋಗುತ್ತವೆ.

* ಹಸಿರು ಕಾಯಿಪಲ್ಯಗಳನ್ನು ತೊಳೆಯುವಾಗ ಬೋರಾಕ್ಸ್ನಿಂದ ತೊಳೆದರೆ ಕ್ರಿಮಿಗಳು ನಾಶವಾಗುವುದಲ್ಲದೇ ಕಾಯಿಪಲ್ಯಗಳಿಗೆ ರುಚಿ ಹೆಚ್ಚಾಗುತ್ತದೆ.

* ತರಕಾರಿಗಳನ್ನು ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಡಿ, ಈ ರೀತಿ ಮಾಡಿದರೆ ಅವುಗಳಲ್ಲಿನ ಲವಣಗಳು, ವಿಟಮಿನ್‌ಗಳು ಮತ್ತು ಇತರ ಆಹಾರಾಂಶಗಳು ನಾಶವಾಗುತ್ತವೆ.

* ಬೆಂದ ಆಹಾರದ ಆಹಾರಾಂಶದ ಮೌಲ್ಯ, ಹಸಿ ಆಹಾರಾಂಶದ ಮೌಲ್ಯಕ್ಕಿಂತಲೂ ಕಡಿಮೆ. ಆದ್ದರಿಂದ ಯಾವ ಆಹಾರವನ್ನೂ ಹೆಚ್ಚಿಗೆ ಬೇಯಿಸುವ ಗೋಜಿಗೆ ಹೋಗಬೇಡಿ. ಹೀಗೆ ಮಾಡಿದರೆ ಅದರಲ್ಲಿನ ಸತ್ವ ನಾಶವಾಗುತ್ತದೆ.

* ತರಕಾರಿಗಳನ್ನು ಬೇಯಿಸಲು ಎಷ್ಟು ಬೇಕೊ ಅಷ್ಟು ಪ್ರಮಾಣದ ನೀರನ್ನು ಮಾತ್ರ ಉಪಯೋಗಿಸಿ, ಒಂದು ವೇಳೆ ನೀರು ಜಾಸ್ತಿಯಾದರೆ ಹೊರಚೆಲ್ಲಬೇಡಿ. ಸಾರಿಗೆ ಬಳಸಿ.

* ತರಕಾರಿಗಳನ್ನು ಬೇಯಿಸುವಾಗ ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಬೇಕು ಅಥವಾ ಮುಚ್ಚಳ ಮುಚ್ಚಿ ಬೇಯಿಸಬೇಕು. ಸೊಪ್ಪನ್ನು ಬೇಯಿಸುವಾಗ ಮಾತ್ರ ಮುಚ್ಚಳ ತೆರೆದಿರಲಿ. ನಮಗೆ ಬೇಡವಾದ ಕೆಲವು ಅಂಶಗಳು ಹೋಗಿ ಹಸಿರು ಬಣ್ಣ ಕೆಡದಿರಲು ಇದೊಂದು ಉತ್ತಮ ಉಪಾಯ.

* ತಾಮ್ರದ ಪಾತ್ರೆಗಳಲ್ಲಿ ಕುದಿಸುವುದಾಗಲಿ ಅಥವಾ ಶೇಖರಿಸಿಡುವುದಾಗಲಿ ಎಂದೂ ಮಾಡಬೇಡಿ.

* ಹಸಿರು ತರಕಾರಿಗಳನ್ನು ಬೇಯಿಸುವಾಗ ಎರಡು ತೊಟ್ಟು ನಿಂಬೆರಸ ಹಾಕಿದರೆ ತರಕಾರಿಗಳು ಕಂದು ಬಣ್ಣಕ್ಕೆ ತಿರುಗುವುದಿಲ್ಲ.

* ಸೊಪ್ಪು ಬೇಯುತ್ತಿರುವಾಗ ಕೊನೆಯಲ್ಲಿ ನಿಂಬೇ ಹಣ್ಣಿನ ರಸ ಅಥವಾ ಹುಣಸೇ ಹಣ್ಣಿನ ರಸವನ್ನು ಹಿಂಡುವುದರಿಂದ ಸೊಪ್ಪಿನ ಹಸಿರು ಬಣ್ಣ ಹೋದರೂ ಜೀವಸತ್ವಗಳು ಉಳಿಯುತ್ತವೆ.

* ಸೊಪ್ಪು, ಕಾಯಿಪಲ್ಯಗಳನ್ನು ಬೇಯಿಸುವಾಗ ಹೆಚ್ಚಾಗಿ ಸೌಟಿನಿಂದ ತಿರುವಬೇಡಿ. ಗಾಳಿಯಲ್ಲಿನ ಆಮ್ಲಜನಕ ಸೊಪ್ಪು, ಕಾಯಿಪಲ್ಯಗಳ ಒಳನುಗ್ಗಿ ಅವುಗಳಲ್ಲಿರುವ ವಿಟಮಿನ್ನುಗಳನ್ನು ನಾಶಪಡಿಸುತ್ತದೆ.

* ಹಸಿ ತರಕಾರಿಗಳನ್ನು ಬೇಯಿಸಿದ ನೀರಿನಲ್ಲಿ ವಿಟಮಿನ್ ಜಾಸ್ತಿ ಇರುವುದರಿಂದ ಅದಕ್ಕೆ ಸ್ವಲ್ಪ ಮಜ್ಜಿಗೆಯನ್ನು ಬೆರೆಸಿ ಮಕ್ಕಳಿಗೆ ಆಹಾರವಾಗಿ ಕೊಡಿ.

* ಅಡಿಗೆಗೆ ಎಷ್ಟು ಬೇಕೋ ಮಾತ್ರ ವನಸ್ಪತಿಯನ್ನು ಸ್ವಲ್ಪವಾಗಿ ಉಪಯೋಗಿಸಿ. ಒಲೆಯಿಂದ ಕೆಳೆಗೆ ಇಳಿಸಿದ ಮ್ಲೆ ಉಳಿದ ವನಸ್ಪತಿಯನ್ನು ಹಾಕಿ ಚೆನ್ನಾಗಿ ಸೌಟಿನಿಂದ ಕಲಸಿ. ಹೀಗೆ ಮಾಡುವುದರಿಂದ ಅದರಲ್ಲಿರುವ ‘ಎ’ ಅನ್ನಾಂಗ ಕೆಡದೇ ಉಳಿಯುತ್ತದೆ.

* ಅಕ್ಕಿಯನ್ನು ಕುದಿಸುವುದಕ್ಕಿಂತ ಮುಂಚೆ ಕೇವಲ ಒಂದೇ ಒಂದು ಸಲ ತೊಳೆದು ಅನ್ನಮಾಡಬೇಕೇ ವಿನಾ ಮೂರ್‍ನಾಲ್ಕು ಸಲ ತೊಳೆದು ಬಹಲ ಕಾಲ ನೀರಿನಲ್ಲಿ ನೆನೆಸಿಡಬೇಡಿ.

* ಬೆಂದ ತರಕಾರಿಗಳನ್ನು ಆದಷ್ಟೂ ಬೇಗ ಸೇವಿಸಿ, ಹಳತಾದಷ್ಟೂ ಅವುಗಳ ಪೋಷಕಾಂಶಗಳು ಕುಗ್ಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎನ್ನ ಭಾಷಾ ದೌರ್ಬಲ್ಯಕ್ಕೇನು ಮಾಡಲಿ ?
Next post ಏನೇ ಬಂದರೂ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…