ದೀಪಗಳ ದಾರಿಯಲಿ ನಡುನಡುವೆ ನೆರಳು,
ನೆರಳಿನಲಿ ಸರಿವಾಗ ಯಾವುದೋ ಬೆರಳು
ಬೆನ್ನಿನಲ್ಲಿ ಹರಿದಂತೆ ಭಯಚಕಿತ ಜೀವ
ತಣ್ಣನೆಯ ಒಡಲಲ್ಲಿ ಬೆದರಿರುವ ಭಾವ.
ಆಸೆ ಕನಸುಗಳೆಲ್ಲ ತೀರಿದುವು ಕುಸಿದು,
ಭಾಷೆಗೂ ಸಿಗದಂಥ ಭಯದ ಮೆಳೆ ಬೆಳೆದು,
ಕಪ್ಪು ಮೋರೆಯ ಬೇಡ ಕರಿದಾರ ಹಿಡಿದು
ಪಕ್ಕದಲಿ ಹೋದನೇ ಪ್ರಾಣಕ್ಕೆ ಮುನಿದು?
ನಾಲಿಗೆಗೆ ಇರುಳ ಹನಿ ತಾಕಿತೋ ಹೇಗೆ?
ಕೊರಳ ಬಳಿ ಬಳ್ಳಿ ಸರಿದಾಡಿತೋ ಹೇಗೆ?
ನಟ್ಟಿರುಳಿನಲಿ ಯಾರೊ ಹಿಂದೆಯೇ ಬಂದು
ಥಟ್ಟನೇ ಹೆಗಲನ್ನು ಜಗ್ಗಿದರೊ ಹೇಗೆ?
ಅಯ್ಯೋ ದೇವರೆ ಎಂದು ಚೀರುವಂತಾಗಿ
ನಡುಕಗಳು ನಾಲಿಗೆಗೆ ಮೂಡದತಾಗಿ
ಬೆಚ್ಚುತಿರೆ ದೂರದಲಿ ಮತ್ತೆ ದೀಪಗಳು,
ಬೆಚ್ಚನೆಯ ಬೆಳಕಿನಲ್ಲಿ ಮತ್ತೆ ಕನಸುಗಳು.
*****