ಗುರುವೆ ನಮೋ ಶ್ರೀ ಗುರುವೆ ನಮೋ
ಸದ್ಗುರುವೆ ನಮೋ ವರಗುರುವೆ ನಮೋ || ಪ ||
ಗುರುವೇ ಹರ ನಮೋ ಗುರುವೇ ಹರಿ ನಮೋ
ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.||
ತಾಯಿಯ ಒಲುಮೆ ತಂದೆಯ ಬಲುಮೆ
ಬಂಧು ಬಳಗ ಬಲ ನೀನೆ ಗುರು
ಲೋಕಕ್ಕೆಲ್ಲಾ ಹಿರಿಯನು ನೀನು
ದೇವತೆಗಳಿಗೂ ನೀನೆ ಗುರು || ೧ ||
ಆದಿ ಕಾಲದಲಿ ವೇದಗಳುಸುರಿದೆ
ಪ್ರಕೃತಿಯಲ್ಲಿ ಪರಮಾತ್ಮನ ಕಂಡೆ
ಉಪನಿಷತ್ತುಗಳ ಮರ್ಮವ ತಿಳಿಸಿದೆ
ಆತ್ಮ ವಿದ್ಯೆಯ ಸುಧೆಯೆರೆದೆ || ೨ ||
ಅಕ್ಷರ ಅಕ್ಷರ ಕಲಿಸುತ ಆಕ್ಷರ
ಬ್ರಹ್ಮದ ಶಿಖರಕೆ ಕರೆದೊಯ್ದೆ
ನಶ್ಚರ ಜಗದಲಿ ಶಾಶ್ವತದಿರವನು
ಈಶ್ವರತ್ವವನು ತೋರಿಸಿದೆ || ೩ ||
ಜೀವನ ಬೆಲೆಯನು ತಿಳಿಸಿದ ಗುರುವೇ
ಜೀವನ ಕಲೆಯನು ಕಲಿಸಿದೆ ನೀ
ಪಶುವಿನಿಂದ ಪಶುಪತಿಯ ಹಿರಿಮೆಯನು
ನರಕದಿ ನಾಕವ ತೋರಿದೆ ನೀ || ೪ ||
ನಡೆಯನು ತಿದ್ದಿದೆ ನುಡಿಯನು ತೀಡಿದೆ
ನಡೆನುಡಿ ಬೆರೆಯಲು ಕೈಲಾಸ
ಇಹದಲಿ ಜಯವನು ಪರದ ವಿಜಯವನು
ತೋರಿದೆ ಜೀವನದುಲ್ಲಾಸ || ೫ ||
ಶಾಸ್ತ್ರಪುರಾಣಗಳಾಗಮ ವಿಧಿಗಳು
ಯುದ್ಧ ವೈದ್ಯತಂತ್ರಾದಿಗಳು
ಅರವತ್ ನಾಲಕು ವಿದ್ಯೆಗಳೆಲ್ಲಾ
ನೀನಿತ್ತಿರುವ ದಾನಗಳು || ೬ ||
ಸುಂದರ ಗಿಡಗಳ ಹೂ ತೋಟದೊಲು
ವಿದ್ಯಾರ್ಥಿಗಳನು ಬೆಳೆಯಿಸುವೆ
ಕಲ್ಲಲಿ ಶಿಲ್ಪವ ರೂಪುಗೊಳಿಸುವೊಲು
ಮಹಾಮಾನವರ ಮೂರ್ತಿಸುವೆ || ೭ ||
ನಾಡು ನುಡಿಗಳಭಿಮಾನವ ತುಂಬುತ
ದೇಶಭಕ್ತರನು ನಿರ್ಮಿಸುವೆ
ಶ್ರದ್ದೆ ಶಕ್ತಿಗಳ ನ್ಯಾಯ ನೀತಿಗಳ
ಜನನಾಯಕರನು ರೂಪಿಸುವೆ || ೮ ||
ಜಾತಿ ಭೇದಗಳು ನಿನಗಿಲ್ಲಾ ಮತ
ಪಂಥಮೇರೆಗಳು ನಿನಗಿಲ್ಲ
ಸರ್ವರಲಿ ಸಮ ದೃಷ್ಟಿ ನಿನ್ನದು
ಮೇಲು ಕೀಳುಗಳು ನಿನಗಿಲ್ಲ || ೯ ||
ನ್ಯಾಯ ನಿಷ್ಟುರನು ಸತ್ಯ ಸಾಧಕನು
ಖಂಡಿತವಾದಿಯು ನೀನು ಗುರು
ಧೀರರಲ್ಲಿ ಅತಿಧೀರ ಮಹಾತ್ಮನೆ
ಮರಣವ ಮೀರಿದ ಮಹಾಗುರು || ೧೦ ||
ನೀನಿಲ್ಲದೆ ಜಗ ಪಶುರಕ್ಕಸರಿಂ
ಅಂಧಕಾರದಲಿ ಮುಳುಗುವುದೋ
ನಿನ್ನಿಂದಲೇ ಈ ಲೋಕದ ಸಂಸ್ಕೃತಿ
ಕಲೆ ಸಾಹಿತ್ಯವು ಬೆಳಗುವುದೋ || ೧೧ ||
ಕತ್ತಲೆಯಿಂದ ಬೆಳಕಿನ ಕಡೆಗೆ
ಅಸತ್ಯದಿಂದ ಸತ್ಯದ ಎಡೆಗೆ
ಮರ್ತ್ಯದಿಂದ ಅಮೃತತ್ವದ ಗುರಿಗೆ
ನಮ್ಮನು ಒಯ್ಯುವ ಗುರುವೆ ನಮೋ || ೧೨ ||
*****
(ಶಿಕ್ಷಕರ ದಿನಾಚರಣೆಯಲ್ಲಿ ಸಾದರಪಡಿಸಿದ ಕವನ)