ಬೆಳಿಗ್ಗೆ ಪ್ರಗತಿಶೀಲರ ಸಭೆಯಲ್ಲಿ ಎಚ್ಚರಿಸಿದರು ಕವಿ :
“ಬಾನು ಭೂಮಿ ಒಂದೆ ಸಮ, ಹಳ್ಳ ಕಡಲು ಒಂದೆ ಸಮ
ಒಂದೆ ಸಮ ಒಂದೆ ಸಮ, ಕೊರಡು ಮರ ಒಂದೆ ಸಮ”
ಗುಡುಗಿದರು ಕವಿ ಮಧ್ಯಾಹ್ನ ಮೈಸೂರಿನ ಕುಕ್ಕೂಟ ಸಭೆಯಲ್ಲಿ :
“ವೈದಿಕ ಸಂಸ್ಕೃತಿ ಹುಸಿ,
ತಟ್ಟಿ ಅದರ ಬಿಸಿ
ಕಮರಿ ಹೋಗುತ್ತಿವೆ ನಾಡಿನ ಎಲ್ಲ ಮಾವು ನೇರಿಳೆ ಸಸಿ
ದೇಶದ ಉಜ್ವಲ ಮುಖದಲ್ಲಿ ಇದು ಮಹಾಮಸಿ”
ತೇಲಿತು ಕವಿವಾಣಿ ರಾತ್ರಿ ಕಮರ್ಷಿಯಲ್ ಬ್ರಾಡ್‌ಕಾಸ್ಟಿಂಗ್‌ನಲ್ಲಿ:
“ಪರಮಹಂಸರು ತಮ್ಮ ಬಿಲ್ಲಿನಲಿ ತೊಟ್ಟಂಥ ಬಾಣ ನೀನು
ಹೇ ವಿವೇಕಾನಂದ ನೀ ನಮ್ಮ ಸಂಸ್ಕೃತಿಯ ಕಾಮಧೇನು”
ಕವಿಯ ದಿಟ್ಟತನಕ್ಕೆ ಬೆಚ್ಚಿತು ಅಮಾವಾಸ್ಯೆಯ ಕಾರಿರುಳು
ಮಚ್ಚಿಗೆ ಸೂಸಿ ಎದ್ದಿತು ಕಾಂಪೌಂಡಿನಿಂದ ನಾಯಿ ಬೊಗಳು
*****