ಬಸವಣ್ಣ ಬಸವಯ್ಯ ಬಸವೇಶ ಶರಣು
ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ ||
ಶರಣರು ಕವಿಗಳು ಹೊಗಳಿದರು ನಿನ್ನ
ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. ||
ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು
ದೀಪ ಹೊತ್ತಿಸಿ ನೀನು ಬೆಳಕಾಗಲು
ನೂರಾರು ಹಣತೆಗಳು ಹೊತ್ತಿಕೊಂಡವು ಶರಣ
ಕಾಂತಿ ಪುಂಜದ ಹೊನಲು ಇರುಳು ಹಗಳು || ೧ ||
ಭಾವದ ಬುಗ್ಗೆಗೆ ಭಾಷಯು ಚಿಮ್ಮಲು
ನುಡಿಯೆಲ್ಲ ವಚನದ ಕಾವ್ಯಸುಗ್ಗಿ
ಸುವಿಚಾರ ಮೊಗ್ಗು ಆಚಾರದ ಹೂವರಳಿ
ಕನ್ನಡ ವನದನುಭಾವ ಹಿಗ್ಗಿ || ೨ ||
ಶಿವನ ಪ್ರೀತಿಯ ಕಂದ ಶಿವಕೀರ್ತಿಯಾನಂದ
ಶಿವ ಭಕ್ತಿ ಭಂಡಾರಿ ಶಿವಲಿಂಗ ಬಸವ
ಪ್ರಮಥರ ಜೀವನೆ ಪೂರ್ವಾಚಾರ್ಯನೆ
ವೀರಶೈವದ ಆದಿ ಗುರುವೆ ಬಸವ || ೩ ||
ನಂಬಿದವರಿಗೆಲ್ಲ ತಂದೆ ತಾಯಿಯು ನೀನೆ
ಬಂಧುಬಳಗ ಸರ್ವ ಶರಣ ಬಸವ
ಗತಿ ನೀನೆ ಮತಿ ನೀನೆ ಸರ್ವಾವಲಂಬನೆ
ಬಾಳಿನ ಬೆಳಕು ಜಗಜ್ಯೋತಿ ಬಸವ || ೪ ||
ದೋಷರಹಿತನೆ ಬಸವ ಪಾಪ ವಿದೂರನೆ
ತನುಮನ ಬಯಲಾದ ಪೂರ್ಣ ಬಸವ
ಭವ ಪಾಶ ಹರಿಯುತ ಭಕ್ತಿಯ ಹರಡಿದೆ
ಯುಗಕೊಬ್ಬ ಜಗಕೆ ಮಹಾಂತ ಬಸವ || ೫ ||
ಹರಬಸವ ಶಿವಬಸವ ಗುರುಬಸವ ದೇವನೆ
ನಿನ್ನ ನೆನೆದರೆ ಭವವು ನಾಸ್ತಿಯಹುದು
ಜ್ಞಾನ ಮೂಲನೆ ಧ್ಯಾನ ಲೋಲನೆ ಬಸವೇಶ
ನಿನ್ನಿಂದ ನರಜನ್ಮ ಹರಜನ್ಮವಹುದು || ೬ ||
ಶರಣರಿಗೆ ಶರಣು ಶರಣರ ಬಂಧುವೆ
ಶರಣ ಧರ್ಮವ ಮೆರೆದೆ ಲೋಕದಲ್ಲಿ
ವೀರರಿಗೆ ಧೀರನು ಛಲದಂಕ ಮಲ್ಲನು
ಬಹಿರಂತರಂಗದ ಪಾಕದಲ್ಲಿ || ೭ ||
ಕುಲಭೇದ ಮೀರಿದ ಭೂತದಯಾಪರನೆ
ಲಿಂಗದ ಮುಂದಿಲ್ಲ ಲಿಂಗಭೇದ
ಅಂಗದಿ ಲಿಂಗವ ಸಾಕ್ಷಾತ್ಕರಿಸಿದ
ಕೂಡಲ ಸಂಗಮ ದೇವ ಪಾದ || ೮ ||
ಇಹಪರ ನಡೆನುಡಿ ಶಿವಜೀವ ದ್ವಂದ್ವಗಳ
ಒಂದಾಗಿ ಬೆಸೆದೆಯೊ ತುಂಬು ಬಸವ
ಭಕ್ತಿ ಜ್ಞಾನ ಕರ್ಮ ವೈರಾಗ್ಯ ಅನುಭಾವ
ಎಲ್ಲ ಹದಗೂಡಿ ಸಮಗ್ರ ಬಸವ || ೯ ||
ಗುರುಲಿಂಗ ಜಂಗಮ ಪ್ರಾಣ ಬಸವಣ್ಣ
ಅರಿವಿನಿ ಜ್ಯೋತಿಯ ಕ್ರಾಂತಿ ಸೂರ್ಯ
ಪ್ರಸಾದ ಕಾಯನೆ ಕಾಯಕ ಜೀವನೆ
ಸಿದ್ಧ ಯೋಗಿಯೆ ನೀನು ಶಾಂತಿವರ್‍ಯ || ೧೦ ||
ಸತ್ಯದ ತವನಿಧಿ ಮುಕ್ತಿಯ ಸನ್ನಿಧಿ
ಸುವಿಚಾರ ಚಿಂತನ ಮಹೋದಯ
ಮರ್ತ್ಯವ ಅಮೃತದ ಮಹಮನೆ ಮಾಡಿದೆ
ಇಹಬಾಳು ಭಾಗ್ಯದ ಶುಭೋದಯ || ೧೧ ||
ಆದಿಯ ಗುರು ನರ ಜಾತಿಯ ಗುರು ನೀನೆ
ದೇವತೆಗಳಿಗೆಲ್ಲ ಬಸವ ಗುರುವೆ
ಹಿರಿಯ ಶರಣರು ಕೂಡ ಗುರುವೆಂದು ನುತಿಸಿದರು
ಪರ ಗುರು ವರಗುರು ನೀನೆ ಗುರುವೆ || ೧೨ ||
ಭಕ್ತಿಗೆ ಬೀಜನೆ ಮುಕ್ತಿಗೆ ಓಜನೆ
ಶಕ್ತಿಗೆ ಯುಕ್ತಿಗೆ ನೀನೆ ಬಸವ
ದೀಕ್ಷೆಗೆ ಬಸವಣ್ಣ ಮೋಕ್ಷಕೆ ಬಸವಣ್ಣ
ಕ್ರಮ ಶಿಕ್ಷೆ ಬೋಧೆಗು ತಂದೆ ಬಸವ || ೧೩ ||
*****