“ಕನಸು” ನಮ್ಮ ನಿದ್ರೆಯ ಅವಿಭಾಜ್ಯ ಅಂಗ. ಮಿದುಳಿನ ಹೈಪೋಥಲಮಸ್ ನಿದ್ರೆಯನ್ನು ನಿಯಂತ್ರಿಸುವ ಭಾಗ. ಹೀಗಾಗಿ ಕನಸು ಮೆದುಳಿನ ಚಟುವಟಿಕೆಯಾಗಿದೆ. ನಾವು ಒಂದು ಗಂಟೆ ನಿದ್ರೆ ಮಾಡಿದರೆ ಹತ್ತು ನಿಮಿಷ ಕನಸು ಕಾಣುತ್ತೇವೆ! ಅಂದರೆ ಪ್ರತಿರಾತ್ರಿ ನಾವು ಹತ್ತತ್ತು ನಿಮಿಷಗಳ ಕಾಲ ಐದಾರು ಸಲ ಕನಸು ಕಾಣುತ್ತೇವೆ. ಕನಸುಗಳನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದವರಲ್ಲಿ ಸಿಗ್ಮಂಡ್ ಫ್ರಾಯ್ಡ್ ಪ್ರಮುಖರು. ಇವರ ಪ್ರಕಾರ ನಮ್ಮ ಮನಸ್ಸಿನಲ್ಲಿ ಆಲೋಚನೆಗಳನ್ನು ಮಾಡುವ ಎರಡು ಪ್ರತಿನಿಧಿಗಳಿವೆ. ಒಂದು ಸುಪ್ತ ಮನಸ್ಸಿನಲ್ಲಿ ಇದ್ದರೆ ಇನ್ನೊಂದು ಜಾಗೃತ ಮನಸ್ಸಿನಲ್ಲಿರುತ್ತದೆ. ಒಂದನೆಯದು ಜಾಗೃತ ಮನಸ್ಸಿಗೆ ಬರಬೇಕಾದರೆ ಇನ್ನೊಂದರ ಮೂಲಕವೇ ಹಾದು ಬರಬೇಕು. ಹೀಗೆ ಬರುವಾಗ “ದಂಡ ದಾರಿ”ಯನ್ನೂ ಹಾಯಬೇಕು. ನಮ್ಮ ಜಾಗೃತ ಮನಸ್ಸಿಗೆ ಪಥ್ಯವಾಗದ ಆಲೋಚನೆಗಳನ್ನು ಈ ದಂಡ ದಾರಿ ತಡೆಹಿಡಿದು ಹಿಂದಕ್ಕೆ ಕಳುಹಿಸುತ್ತದೆ. ಈ ರೀತಿ ಹಿಂದಕ್ಕೆ ಹೋದ ಆಲೋಚನೆಗಳು ದಮನ ಸ್ಥಿತಿಯಲ್ಲಿರುತ್ತವೆ. ನಿದ್ರೆಯಲ್ಲಿ ದಂಡ ದಾರಿ ಸ್ವಲ್ಪ ಸಡಿಲವಾಗುತ್ತದೆ. ಆಗ ಈ ಆಲೋಚನೆಗಳು ಮೇಲೇರಿ ಬರುತ್ತವೆ. ಸಡಿಲವಾದರೂ ನಿಯಂತ್ರಣ ಇದ್ದೇ ಇರುವುದರಿಂದ ಆಲೋಚನೆಗಳು ರಾಜಿಮಾಡಿಕೊಂಡು ಬದಲಾದ ರೂಪದೊಂದಿಗೆ ಕನಸಾಗಿ ಕಾಣಿಸಿಕೊಳ್ಳುತ್ತವೆ.
ಕನಸು ಕೇವಲ ದೃಶ್ಯಗಳ ಸರಪಳಿಯಾಗಿರದೆ ಜೀವಂತ ಅನುಭವವಾಗಿದೆ. ಏಕೆಂದರೆ ತಕ್ಕ ಭಾವನೆಗಳ ಸಹಿತ ನಾವು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ ದುಃಖದ ಕನಸು ಬಿದ್ದಾಗ ಬಿಕ್ಕಿಬಿಕ್ಕಿ ಅಳುತ್ತೇವೆ. ಆದರೆ ಶರೀರ ನಿಷ್ಕ್ರಿಯವಾಗಿರುತ್ತದೆ. ಕೈಕಾಲುಗಳು ಚಲಿಸಲಾಗುವ ದಿಲ್ಲ. ಹೃದಯದ ಬಡಿತ, ರಕ್ತದೊತ್ತಡ, ಉಸಿರಾಟಗಳು ಏರುಪೇರಾಗುತ್ತವೆ.
ಕನಸುಗಳು ನಮ್ಮ ಮನಸ್ಥಿತಿಯ ಕನ್ನಡಿ. ಮನಸ್ಸು ಸಮಾಧಾನ, ಸಂತೃಪ್ತಿಯಲ್ಲಿದ್ದಾಗ ಬೀಳುವ ಕನಸೇ ಬೇರೆ. ಗಾಬರಿ, ಭಯ, ದುಃಖದಿಂದ ಕೂಡಿರುವಾಗ ಬೀಳುವ ಕನಸೇ ಬೇರೆ.
ನಮಗೆ ಬೀಳುವ ಹೆಚ್ಚಿನ ಕನಸುಗಳು ವರ್ಣಮಯ. ಕೆಲವು ಸಲ ಕಪ್ಪು-ಬಿಳುಪು ಅಥವಾ ಬೂದುಬಣ್ಣದ ಕನಸುಗಳು ಬೀಳಬಹುದು.
*****