ಅಯ್ಯ, ಏನೇನು ಇಲ್ಲದ ಬಯಲ ದೇಹಕ್ಕೆ,
ತಾಮಸವ ಮುಂದು ಮಾಡಿ,
ಹೀಗೆ ಕಟ್ಟಿತ್ತಲ್ಲ ಜಗವೆಲ್ಲ.
ಅದೇನು ಕಾರಣವೆಂದರೆ,
ಸುಮುಖನ ಕಡೆಗಿತ್ತು ಜಗದ ರಚನೆಯ ನೋಡಿತ್ತು.
ಇಚ್ಛೆಯ ಮಚ್ಚಿತ್ತು.
ಅಂಗಸುಖವ ಬಯಸಿತ್ತು.
ಕಂಗಳ ಕಾಮವನೆ ಮುಂದು ಮಾಡಿತ್ತು.
ಇದರಿಂದ ಲಿಂಗವ ಮರೆಯಿತ್ತು.
ಜಂಗಮವ ತೊರೆಯಿತ್ತು.
ಇದು ಕಾರಣದಿಂದ ಜಗದ
ಮನುಜರು ಭವಬಂಧನಕ್ಕೊಳಗಾದರು.
ಇವೆಲ್ಲವನು ಹಿಂಗಿಸಿ ನಮ್ಮ
ಶಿವಶರಣರು ಲಿಂಗದಲ್ಲಿಯೆ ಬೆರೆದರು.
ಜಂಗಮಪ್ರಾಣವೆಂದು, ಪಾದೋದಕ ಪ್ರಸಾದವ ಕೊಂಡು,
ಆ ಜಂಗಮದ ಪಾದದಲ್ಲಿ ನಿಜಮುಕ್ತರಾದರಯ್ಯ
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ