ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು
ನೋಡಲಾರೆ,
ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ
ಎಣಿಸಲಾರೆ!
ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ
ದೇಹಸರ್ವ
ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು
ಪೇಳ್ವುದಲ್ಲ!!
ಮಂಜುಗಟ್ಟಿ ನೇತೃದ್ವಯವು ಬೆಂದಮನವ
ಸೂಚಿಸುವುದು,
ಶ್ರಮದ ಸಾರ ಸಾಮ್ಯಗಳನು ಮೂಲೆಗಟ್ಟಿ
ತಿಳಿಯದಿಹರು!
ಕಾಣೆ ನಿಂತ ಎಣೀಸಿದಾಶೆ, ಕಾಣೆ ನಾವೆ
ವಿದಿತಕಾಂಕ್ಷೆ
ನಾವೆ ನಮಗೆ ಮೇಲೆಂದೆನಿಸಿ ಬೇಳುತಿಹೆವು
ದಾಸ್ಯ ಬಲೆಗೆ!
ಅಹೋ ನೊಂದ ಲೋಕಯೆಲ್ಲ ಎಂತೊ ಎಲ್ಲೊ
ಸಾಗುತಿಹುದು
ಆಹಾ ನಾನು ಹನಿಯ ತೆರದಿ ವಿಧಿಯ ತೆರೆಯ-
ಲುಕ್ಕುತಿಹೆನು.
ಬೆಳೆದು ಬಂದೆ ಜನವನರಿತೆ ಕೆಂಪು ಕಪ್ಪಿ
ನಷ್ಟು ಭೇದ
ಒಂದರಂತೆ ಒಂದು ಇಲ್ಲ, ವೃಕದ ಬಳಿಯ
ಕುರಿಯ ತೆರವೆ!
ಬದುಕಿನೆಣಿಕೆಯಿಂದ ಕ್ರಿಮಿಯು ಸಾಗುತಿಹುದು
ದೇಹಪೊತ್ತು
ಜ್ಞಾನಜ್ಯೋತಿ ಹೊತ್ತುತ್ತಿರುವ ನರನ ರೀತಿ
ಭೀತಿ ಎಂತು?
ಕಂಡುದೆಲ್ಲ ಕಲ್ಲಿನಷ್ಟು ಗಟ್ಟಿಯೆಂದು
ತೋರ್ಪುದಹುದು,
ಎನ್ನ ಇರದ ತೆರವು ಮಾತ್ರ ಹಿಮದ ತೆರದಿ
ಗೋಚರಿಪುದು;
ಭಾವನೆಗಳಾ ಕೂಪದಲ್ಲಿ ಹೊರಳಿ ಹೊರಳೀ
ಎದ್ದುನೋಡೆ,
ನೊಂದ ಮನ, ನಿರಾಶೆ ಜಾಲಮಯವ ನೊಂದೆ
ತೋರುತಿಹುದು.
ಹಣದ ಬರವು ತಣಿಸದೆಮ್ಮ; ಸುಖದ ಸೋಗು
ನಶಿಸದೆಮ್ಮ;
ಆದರೂ ಆನಂದಕ್ಕೊಂದು ದಿವ್ಯ ರತ್ನ
ತೃಪ್ತಿಬೇಕು!
*****