ಹುಟ್ಟಿದ್ ಮಳೇ ಹಾಳಾಗ್‌ಹೋಯ್ತು,
ಸುಮ್ನೇ ಗುಡುಗಿನ್ ಕೋಡಿ.-
ಅಕ್ಕಿ ಬೆಲೇ ಏರ್ತಾ ಹೋಯ್ತು
ದುಡ್ಡಿನ್ ಮೊಕಾ ನೋಡಿ.
ಅಕ್ಕೀಗಿಂತ ಅಲ್ಲಿದ್ ಕಲ್ಲೆ
ಮುತ್ನಂಗಿತ್ತು, ತಣ್ಗೆ!
ಕಟ್ಕೊಂಡೋಳ್ಗಿತಿಟ್ಕೊಂಡೋಳೇ
ಸುಂದ್ರೀ ಅಲ್ವೆ, ಕಣ್ಗೆ!
ಒಲೇ ಕುರ್ಚೀಲನ್ನದ್ ತಪ್ಲೆ
ತಲೇ ತೂಗ್ತಾ ಇತ್ತು:
ಅಕ್ಕೀ ಮೊಕಾ ನೋಡಿದ್ ಕೂಡ್ಲೆ
ಕುಣ್ಯೋದ್ ನಿಂತೇ ಹೋಯ್ತು!
ಅಕ್ಕೀ ಮೊಕಾ ಚಿಕ್ದಾಗ್‌ಹೋಯ್ತು
ತಂದೋರ್ ತೊಂದ್ರೇ ನೋಡಿ;
ನಕ್ಕೋರ್ ಮೊಕಾ ಮೂರ್ಕಾಸಾಯ್ತು
ಇದ್ದೋರ್ ಸಂಕ್ಟಾ ನೋಡಿ.
ಒಲೇ ಊದಿ- ತಲೇಗ್ ಬೂದಿ-
ಅಂತೂ ‘ಅನ್ನಾ’ ಅಂದ್ರು ;
ಕಸಾ ಗುಡ್ಸೀ ತಟ್ಟೇ ಹಾಕೀ
ಊಟಕ್ಕೆಲ್ಲಾ ಬಂದ್ರು.
ತೊಂಬತ್ತೊಂಬತ್ ಅಕ್ಕೀ ಬೆಂದ್ರೂ
ಬೆಂದಿರ್ಲಿಲ್ಲ ಕಲ್ಲು!
ಉಣ್ತಾ ಇದ್ದೋರ್ ಹೊಡಿಯಾಕ್ ಬಂದ್ರೂ…
ಕಲ್-ಕಡಿದಿತ್ತು ಹಲ್ಲು!
*****