ಈ ಮೊದಲು ತಿಳಿದುಕೊಂಡಿದ್ದೆ
ಇಲ್ಲಿಯ “ಈ ಗಾಳಿ ಈ ಬೆಳಕು ಈ ಎಲ್ಲಜೀವಿಗಳೂ”
ಎಲ್ಲಾ ಕಡೆಗೂ ಎಲ್ಲಾ ದೇಶದೊಳಗೂ ಒಂದ ಅಂತ.
ಹಾಗಂತನ ಏನೋ ಕೆಲವೊಂದು ಅಥವಾ ಕೆಲವೊಂದೇ
ಪರಿಧಿಯೊಳಗ ಸುತ್ತಿಕೊಂಡು ಬಹಳ ಆರಾಮವಾಗಿ
ಇದೇ ಒಳ್ಳೆಯದು ಅಂತ ಇದ್ದು ಬಿಟ್ಟಿದ್ದೆ.
ಆದರs ನಾ ಎಂದ ಅರೇಬಿಯ ಹೊಕ್ಕು
ಲಂಡನ್‌ದ ಹಿತ್ರೂ Airport ದೊಳಗ ಕಾಲಿಟ್ಟ
ಅಮಸ್ಟರಡ್ಯಾಮ್‌ನಿಂದ ಹೊರಗ ಹಾರಿಬರೋವರೆಗೂ
ನೋಡಿದ್ನಲ್ಲ…..
ಈ ಗಾಳಿ ಮತ್ತು ಜನರೊಳಗ
ಬಹಳ ಹೊಂದಾಣಿಕೆ ಕೊಡುವಂಥ
‘ಬಿಸಿಲಿನ ಬೆಳಕಿದೆ’ ಅನಿಸಿತು
ಆವಾಗ ನನಗ ಗೊತ್ತಾದದ್ದು
ನೆತ್ತಿ ಸುಡುವದಕ್ಕಿಂತಲೂ ಹೆಚ್ಚಿನ ಬಿಸಿಲು
ನಮ್ಮಲ್ಲಿ ಇನ್ನೊಂದಿದೆ
ಅದೇ ಲಂಚ – ಅನ್ಯಾಯ ಅಂತ
ಜನರಿಂದ ಜನರಲ್ಲೇ ವಿಶ್ವಾಸ ಕಳಕೊಳ್ಳುವ
ರೊಚ್ಚು ಕಿಚ್ಚಿನ ಜ್ವಾಲೆಗಳಿವೆ
ಅದೆ ಗಾಳಿ ಅಂತ…..
ಪುತ ಪುತನೆ ಹುಟ್ಟಿ ಬೆಲೆ ಇಲ್ಲದೆ
ಬಿದ್ದು ಹೋಗುವ ಜಂತುಗಳಿವೆ
ಅವೇ ಜೀವಿಗಳೂ ಎಂದು…..
(ಯುರೋಪ ಪ್ರವಾಸದ ನಂತರ ತಕ್ಷಣ ಆದ ಒಂದು ಅನಿಸಿಕೆ)
*****