ನಟ್ಟ ನಡು ಇರುಳಲ್ಲಿ ಅರಳಿದ ಹೂವು
ನೆಟ್ಟ ಬಾವುಟದಲ್ಲಿ ಹೆಪ್ಪೊಡೆದ ನೋವು
ನಡುವೆ ಉರಳುವ ಚಕ್ರ ಚಲನೆ
ಸಾವಯವ ಮೈಮಾಟದಲ್ಲಿ
ಭಾವ ಬುದ್ಧಿಗಳ ಕೂಟದಲ್ಲಿ
ಕತ್ತಲ ರಾಣಿಯ ಮಿಂಚಿನ ಪ್ರತಿಮೆ!
ಕುಶಲವೆ ನನ್ನ ಕತ್ತಲ ರಾಣಿ?
ವಸಾಹತುವಿನ ಹುತ್ತದಲ್ಲಿ
ವಿಷವಿಲ್ಲದ ಚಿತ್ತದಲ್ಲಿ
ಚಿತ್ತಾರ ಬಿಡಿಸಿದ್ದು ಹೇಗೆ ನೀನು!
ಅವರು ಕೊಟ್ಟ ಅಂಗಿ ಎಸೆದು
ಹೊಸ ಹುಟ್ಟಿನ ಪುಂಗಿ ಮಿಡಿದು
ಕಾಯುತ್ತಿದ್ದೆ ನಿನಗಾಗಿ ನಾನು.
ಕತ್ತಲ ಕೋಣೆಯಲ್ಲಿ ಕತ್ತಲದವಳೆ
ಪರಂಗಿಯ ರಂಗಿನಾಟದಿಂದ ಹೊರಬಂದವಳೆ
ಮಿಂಚಲ್ಲಿ ಮಿಂದು ನಗೆಯಲ್ಲಿ ನಿಂದವಳೆ
ನೀ ನಕ್ಕ ಚುಕ್ಕಿ ಚಂದ್ರಮ ನಿನ್ನದೆ?
ನಡು ಬಳಸುವ ಸ್ವಾತಂತ್ರ ನನ್ನದೆ?
ಹೇಳು ಕತ್ತಲ ರಾಣಿ ಹೇಳು
ಸ್ವಾತಂತ್ರ್ಯವೆನ್ನುವುದು ಹುಸಿನಗೆಯ ವಯಾರವೆ?
ನಡುರಾತ್ರಿಯ ಕೃತಕ ಸಂಚಾರವೆ?
ಕಟ್ಟು ಕಳಚಿದ ಕತ್ತಲ ರಾಣಿಗೆ
ಈ ನಾಡ ಒಡೆಯರು ಕಟ್ಟಿದ ಅರಮನೆ
ಕಂಗೊಳಿಸುವ ಕೆಳಮನೆ-ಮೇಲ್ಮನೆ!
ಬೇಡವೆ ನಿನಗೆ ಬೆಳಕಿನ ಬಡ-
ವರ ಮನೆ; ಸಂಕಟದ ಸುಳಿಯಲ್ಲಿ
ಉಕ್ಕುವ ಹಕ್ಕಿನ ಮನ.
ವಸಾಹತು ಹುತ್ತಕ್ಕಿದು ಹೊಸರೂಪವೇ ಗೆಳತಿ?
ನಡುರಾತ್ರಿಯ ಹುಟ್ಟಿಗೆ ಯಾರು ಪತಿ, ಯಾರು ಸತಿ!
ಬೆವರು ಬುಸುಗುಡುತ್ತಿದೆ ಕತ್ತಲಲ್ಲಿ
ನಿನ್ನಂತೆಯೇ ವಿಷವಿಲ್ಲದ ಚಿತ್ತದಲ್ಲಿ.
ಇಂದು ನೆನ್ನೆಗಳ ನಡುವಿನ ಈ ಮುಗಿಲು
ಹಗಲಲ್ಲಿ ಬೆಳಕು ಹುಡುಕುವ ಬದಲು
ನಿನ್ನೊಡಲ ಕಡೆದಾಗ ಕಳೆದೀತು ಬೇಗೆ
ಕತ್ತಲು ಬೆತ್ತಲಾಗದೆ ಬೆಳಕು ಬಂದೀತು ಹೇಗೆ?
*****