ಕುಂಟೆಯೊಲು ಕುಂಟಾಗಿ ಭಂಟತನಕಂಟಾಗಿ
ಅಂಟಿಟ್ಟು ಹೊಲಸಿಟ್ಟು ಹೊಳೆಯಾಗದಿಹೆನು!
ಸಿರಿನೀಲ ಬಾನದಲಿ ಅರಿಯದೆಲೆ ತನು ಮನದ
ಕಿರುಕುಳದ ಭಾರವನು ತಿರುಗುತಿವೆ ಮೋಡಾ.
ಹಿಕ್ಕಿ ಹಿರಿಯುವ ಕಾರ್ಯ ಮಿಕ್ಕಿಲ್ಲವೆಂದೆಂದು
ಸೊಕ್ಕಿರುವ ಹಲಧರರು ಸಿಕ್ಕಿಲ್ಲ ಜತೆಗೆ.
ಬಿಳಿ ಮೋಡಗಳನುಟ್ಟು ಕಳೆದಿಟ್ಟು ಮತ್ತುಟ್ಟು
ತಿಳಿಯದೆಲೆ ನಿಜಮನವ ಸಿಲೆಯಾಗಿ ನಿಲುತ
ನೀರಗನ್ನಡಿಯಲ್ಲಿ ನೀಳದೇಹವ ನೋಡಿ
ಭಾಳನಾಚುವಳಾಕೆ ಶೈಲಸುತೆಯಾಕೆ.
ಚಿಗುರಿಲ್ಲ ಸೊಬಗಿಲ್ಲ ಮಘಮಗಿಪ ಪೂನಿಲ್ಲ
ಬಿಗಿ ಮೊಗದ ಬಂಜೆಯಿದು ನಗಲಿಲ್ಲ ಹೃದಯ!
ಅರಳುವಾತಾವರೆಯ ಹರಿಯುವಾ ನೀರುಗಳ
ಹರಿಸೋಡಿ ಚಿಗಿಯುವರ ಪರುಕಿಸಲೆ ಇಲ್ಲ!
ಕೆಲಸದೀ ಸುಳಿಯಲ್ಲಿ ಸಿಲುಕಿ ಬನ್ನಣಬಟ್ಟೆ.
ಸಲೆಜೀವದುಸಿರಿಲ್ಲ ಕೊಲುತಿಹುದು ಕೆಲಸ!
ಬಿಟ್ಟಿಹಿಡಿದೆನ್ನತಾ ಮಟ್ಟಿ ಹಿಂಡುತಲಿಹುದು
ಕೆಟ್ಟಹಟದೀಜನದ ಭ್ರಷ್ಟತರ ಕೆಲಸ,
ಹೊಟ್ಟೆಗೀ ಜಾಳಿಗೆಯು ಬಟ್ಟೆಗೀ ಯೂಳಿಗವು
ಕೆಟ್ಟೆ ಕೆಟ್ಟೆನು ನಾನು ಸೃಷ್ಟಿ ದೃಷ್ಟಿಯಲ್ಲಿ.
ಕವಿದಿಹುದು ಬಲು ತಮವು ರವವಿಲ್ಲ ಹೊಳಹಿಲ್ಲ!
ಶಿವನೊಡನೆ ನಿಲಲಿಲ್ಲ ಕವಿಯಾಗಲಿಲ್ಲ!
*****