ಚಿನ್ನುಗೆ ರಾತ್ರಿ ಬೇಗ ನಿದ್ದೆ ಮಾಡಿ ಅಭ್ಯಾಸವಾಗಿ ಹೋಗಿದೆ. ಈ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ ಬದಲು ರಂಗ ಬಂದ. ಅವನೊಬ್ಬ ವಿಚಿತ್ರ ಹುಡುಗ ಅನ್ನಿಸಿತವಳಿಗೆ. ತನ್ನನ್ನು ಸಂಗ್ರಾಮದಿಂದ ಪಾರು ಮಾಡಿದಾಗಲೂ ಅದೇ ನೆಪಮಾಡಿಕೊಂಡು ತನ್ನ ಹಿಂದೆ ಬೀಳಲಿಲ್ಲ. ತಾನಾಗಿಯೇ ಮಾತನಾಡಿಸಿದರೂ ಅವನಲ್ಲಿ ಅಂತಹ ವ್ಯತ್ಯಾಸವೇನು ಕಾಣುವುದಿಲ್ಲ. ಯಾರನ್ನೂ ಮಾತನಾಡಿಸದ ತನ್ನ ಕುಡಿನೋಟಕ್ಕಾಗಿ ಹುಡುಗರಿರಲಿ ಕಾಲೇಜು ಮೇಷ್ಟ್ರುಗಳೂ ಸಾಯುವರೆಂಬುದು ತನಗೇನು ಕಾಲೇಜಿಗೆ ಗೊತ್ತಿರುವ ಸಂಗತಿ. ಸಂಗ್ರಾಮನಂತೂ ತಿಂದುಬಿಡುವಂತೆ ನೋಡುತ್ತಾನೆ. ರಂಗನೋ ಮಂಗ. ಅವನಿಗೆ ತನ್ನ ಸೌಂದರ್ಯದ ಸೆಲೆ, ತನ್ನ ಮನೆತನದ ಬೆಲೆಯ ಅರಿವಿಲ್ಲವೋ! ಹೆದರಿಕೆಯೋ? ತಾನಾಗಿಯೇ ಒಂದೆರಡು ಸಲ ಮಾತನಾಡಿಸಿದಾಗ ಅವನು ತೋರುವ ಅಸಡ್ಡೆಯಿಂದ ಅವಳಿಗೂ ಬೇಸರವಾಗಿದೆ. ಅದೂ ಗೆಳತಿಯರ ಎದುರು ಎಂತಹ ಹಿನ್ನೆಡೆ ನೊಂದಿದ್ದಾಳೆ. ಮೊನ್ನೆ ಕುಸ್ತಿಯಲ್ಲಿ ಗೆದ್ದು ರಾಮೋಜಿಯಿಂದ ತನ್ನನ್ನು ಪಾರು ಮಾಡಿದ ಅವನ ಬಗ್ಗೆ ಅಭಿಮಾನವಿದೆ. ತಾತಾನೇ ಖುದ್ ಏನು ಬೇಕಾದರೂ ಕೇಳಯ್ಯಾ ಕೊಡುತ್ತೇನೆ ಎಂದಾಗ ನಿಮ್ಮ ಆಶೀರ್‍ವಾದ ಸಾಕು ಎಂದು ನಕ್ಕು ವೇದಿಕೆ ಇಳಿದು ಹೋದ ಅವನ ಬಗ್ಗೆ ಗೌರವ ಉಂಟಾಗದಿರಲು ಸಾಧ್ಯವೆ? ಮನೆಯಲ್ಲಿ ಆಳಿನಂತೆ ನೋಡಿಕೊಳ್ಳುತ್ತಾರೆ. ಮನೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂಬ ಸುದ್ದಿಯನ್ನು ತಿಳಿದುಕೊಂಡಿದ್ದಾಳಾಕೆ, ಅವನ ಸ್ನೇಹಿತರಿಂದಲೇ. ಹಾಗಾದರೆ ಇದೇನು ಸ್ವಾಭಿಮಾನವೋ, ಅಹಂಕಾರವೋ ಎಂಬ ಜಿಜ್ಞಾಸೆಯ ಬಲೆಯಲ್ಲಿ ಬಿದ್ದ ಆಕೆ ರಾತ್ರಿಯೆಲ್ಲಾ ನಿದ್ದೆ ಬಾರದೆ ಹಾಸಿಗೆಯಲ್ಲಿ ಉರುಳಾಡಿದ್ದೇ ಆಯಿತು.
ರಂಗ ಎಂದಿನಂತೆ ಬೇಗನೆ ಗರಡಿ ಮನೆಯಿಂದ ಬಂದವನೆ ಅಣ್ಣ-ಅತ್ತಿಗೆಯರ ಬಟ್ಟೆಗಳಿಗೆ ಇಸ್ತ್ರಿ ಉಜ್ಜಿ ಹರಿದ ಚಪ್ಪಲಿ ಹೊಲಿದು ಪಾಲಿಶ್ ಬಳಿದು, ಮಕ್ಕಳನ್ನು ಕಾನ್ವೆಂಟಿಗೆ ಸಿದ್ಧಪಡಿಸಿ ಮತ್ತೆ ಕೆಟ್ಟು ಕೂತಿದ್ದ ಅಣ್ಣನ ಬೈಕ್ ರಿಪೇರಿ ಮಾಡಿ ಬ್ಲೋ ಹೊಡೆದು, ಪರಮೇಶಿಯ ಕಾರಿನ ಬ್ರೇಕ್ ಚೆಕ್ ಮಾಡಿದ.
‘ಗಣೇಶಣ್ಣಾ, ನಿನ್ನ ಸ್ಕೂಟರ್ ರಿಪೇರಿ ಮಾಡೋಕೆ ಬರದಷ್ಟು ಕೆಟ್ಟಿದೆ, ಸುಮ್ನೆ ಗುಜುರಿಗೆ ಹಾಕಿ ಹೊಸ ಬೈಕ್ ತಗೊ, ಸ್ಕೂಟರ್ ಈಗ ಔಟ್‌ಡೇಟೆಡ್’ ಅಂದ. ‘ಲಾಯರ ಸಾಹೇಬ್ರೆ, ನಿನ್ನ ಕಾರೂ ಲಡಾಸೆದ್ದಿದೆ. ಗಂಡ ಹೆಂಡ್ತಿ ಇಬ್ಬರೂ ದುಡಿತೀರಪ್ಪಾ ಹೊಸ ಕಾರು ತಗೋಬಾರ್ದೆ? ಬ್ಯಾಡ ಸೆಕೆಂಡ್ ಹ್ಯಾಂಡು… ಅದೂ ಬ್ಯಾಡವಾದ್ರೆ ಸಸ್ತಾಕಾರು ‘ನ್ಯಾನೋ’ ತಗೊಂಬಿಡಿ ಸಲಹೆ ನೀಡಿದ. ಯಾರೂ ಅವನ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ಅವರವರ ಕಾಯಕಕ್ಕೆ ಅವರವರ ವಾಹನಗಳನ್ನೇರಿ ಹೊರಟೇ ಹೋದರು.
‘ಬಾರೋ ತಿಂಡಿ ತಿನ್ನು… ಲೇಟಾಗಲಿಲ್ವೇನೋ ಕಾಲೇಜಿಗೆ’ ತಾಯಿಯ ಕರೆ ಕೇಳಿತು.
ಕಾಲೇಜಲ್ಲಿ ಪಾಠ ನಡೆವಾಗ ರಂಗನ ಗಮನವೆಲ್ಲಾ ಪಾಠದತ್ತ. ಚಿನ್ನು ಗಮನ ಅವನತ್ತ, ಸಂಗ್ರಾಮನ ಗಮನ ಅವಳತ್ತ! ಚಿನ್ನು ಇತ್ತೀಚೆಗೆ ರಂಗನನ್ನು ಅತಿಯಾಗಿ ನೋಡುವುದು ತಾನಾಗಿಯೇ ಅವನ ಬಳಿ ಸಾರಿ ಮಾತನಾಡಿಸುವುದು ಟಿಫಿನ್ಗೆ ಕರೆಯುವುದು ಎಲ್ಲವನ್ನೂ ಸಂಗ್ರಾಮ ಗಮನಿಸುತ್ತಿದ್ದಾನೆ ಕುದಿಯುತ್ತಿದ್ದಾನೆ. ಆದರೂ ರಂಗನ ಮೇಲೆ ಅವನು ಹರಿಹಾಯುವಂತಿಲ್ಲ. ತನ್ನ ಗ್ಯಾಂಗ್‌ನವರಿಗೂ ‘ಛೂ’ ಬಿಡುವಂತಿಲ್ಲ. ಕಾರಣ ಮುಂದುವರೆಯುತ್ತಿರುವುದು ಅವನಲ್ಲ ಚಿನ್ನು. ಸಂಗ್ರಾಮ ಅವಳನ್ನು ಮರುಳು ಮಾಡಲು ಬಣ್ಣಬಣ್ಣದ ವೇಷ ತೊಟ್ಟು ಬರುತ್ತಾನೆ. ಹಲವೊಮ್ಮೆ ಕಾರಲ್ಲಿ ಬಂದು ಸಿರಿವಂತಿಕೆ ಪ್ರದರ್ಶಿಸುತ್ತಾನೆ. ಹುಟ್ಟುಹಬ್ಬದ ನೆಪ ಹೇಳಿ ಇಡೀ ಕಾಲೇಜಿಗೆ ಪಾರ್ಟಿ ಏರ್ಪಡಿಸುತ್ತಾನೆ. ಚಿನ್ನು ಬಾರದೆ ಬಿಗುಮಾನವನ್ನೇನು ತೋರುವುದಿಲ್ಲ ಬರುತ್ತಾಳೆ. ರಂಗನೂ ಹಾಜರ್. ಎಲ್ಲರಂತೆ ಅವರೂ ಪಾಲ್ಗೊಳ್ಳುವಾಗ ಸಂಗ್ರಾಮನಿಗೆಲ್ಲಿಯ ಸಂತೋಷ, ಕಾಲು ಕೆರೆದು ಜಗಳಕ್ಕೆ ನಿಂತರೂ ಅದಕ್ಕೆ ಉತ್ತೇಜನ ನೀಡದ ರಂಗ, ಪ್ರೀತಿಗಾಗಿ ಕಾಲು ಹಿಡಿಯಲೂ ರೆಡಿಯೆಂಬ ಸಂಗ್ರಾಮ, ನಾನಾ ನಮೂನೆ ವರಸೆ ತೋರಿದರೂ ಅರ್ಥವೇ ಆಗದಂತೆ ವರ್ತಿಸುವ ಅವರಿಬ್ಬರು ಅವನ ಪಾಲಿಗೆ ನಿತ್ಯದ ಪ್ರಶ್ನೆಯಾಗುಳಿದುಬಿಟ್ಟಿದ್ದಾರೆ. ಹಾಗೆ ಚಿನ್ನು ಪಾಲಿಗೂ ರಂಗ ಒಂದು ದೊಡ್ಡ ಪ್ರಶ್ನೆ. ತನ್ನಂತಹ ತಾಜಾ ಹಣ್ಣು ಯಾರಿಗೆ ಬೇಡ…? ತನಗಾದರೂ ಅವನನ್ನು ಮಾತನಾಡಿಸುವ ಗೀಳೇಕೆ? ಸಾಮೀಪ್ಯ ಬಯಸುವ ಹಂಬಲವೇಕೆ? ಒಂದು ದಿನ ನೋಡದಿದ್ದರೆ ತಳಮಳ, ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾಗುವುದಾದರೂ ಏಕೆ? ಕ್ಲಾಸ್‌ನಲ್ಲಿ ಅವನತ್ತಲೇ ನೋಡುತ್ತಾ ಕುಳಿತು ಬಿಡುವ ಅವಳು ಪಾಠ ಕೇಳಿದ್ದು ಕಲಿತಿದ್ದು ಅಷ್ಟರಲ್ಲೇ ಇದೆ. ಉತ್ಸಾಹದಿಂದ ಓದಿ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಗಳಲ್ಲಿ ಮೆರಿಟ್ ಪಡೆದ ಚಿನ್ನೂಗೆ ಒಮ್ಮೆಲೆ ಓದಿನ ಮೇಲೆ ಜಿಗುಪ್ಸೆ ಉಂಟಾಗಿದೆಯಾದರೂ ಕಾಲೇಜಿಗೆ ಬರುವ ಉತ್ಸಾಹ ಕುಗ್ಗಿಲ್ಲ. ಭಾನುವಾರವಾಗಿಯೂ ರಜ ಏಕೆ ಕೊಡುತ್ತಾರಪ್ಪಾ ಎಂದು ನಿಡುಸುಯ್ಯುತ್ತಾಳೆ ಚಿನ್ನು.
ಕಾಲೇಜು ಮುಗಿಸಿ ಸೈಕಲ್ ಮೇಲೆ ಬರುವ ರಂಗನಿಗೆ ಹಳ್ಳಿಯ ಹಾದಿಯಲಿ ಸ್ಕೂಟಿ ನಿಲ್ಲಿಸಿಕೊಂಡು ನಿಂತಿರುವ ಬಳಲಿದ ಮೋರೆಯ ಚಿನ್ನು ಕಂಡಳು. ಇವನೇನು ಸೈಕಲ್ಲು ನಿಲ್ಲಿಸಿ ಕುಶಲೋಪರಿ ವಿಚಾರಿಸಲಿಲ್ಲ. ಇವಳೇ ‘ಓಲ್ಡಾನ್’ ಅಂತ ಕೈ ಹಿಡಿದು ಆಡಿಸಿ ನಿಲ್ಲಿಸಿದಳು. ಏನೆಂಬಂತೆ ಮುಖ ನೋಡಿದ.
‘ರಂಗ, ನನ್ನ ಸ್ಕೂಟಿ ಕೆಟ್ಟಿದೆ ಕಣೋ, ನಿನ್ನ ಸೈಕಲ್ ಮೇಲೆ ಹಳ್ಳಿ ತನಕ ನನ್ನನ್ನು ಕರ್‍ಕೊಂಡು ಹೋಗ್ತಿಯಾ?’ ಮುದ್ದುಮುಖ ಬೇಡುವಾಗ ಯಾರು ತಾನೆ ಆಗೋಲ್ಲ ಎಂದಾರು? ಸೈಕಲ್ ಇಳಿದ ರಂಗ ಅವಳೊಡನೆ ಮಾತನಾಡದೆ ಸ್ಕೂಟಿಯನ್ನು ಚೆಕ್ ಮಾಡಿ ಯಾವುದೋ ವೈರನ್ನು ಎಲ್ಲೋ ಸಿಕ್ಕಿಸಿ ‘ಕಿಕ್’ ಹೊಡೆದು ಸ್ಟಾರ್ಟ್ ಮಾಡಿಕೊಟ್ಟವನೇ ತನ್ನ ಸೈಕಲ್ಲೇರಿ ಹೊರಟೇಬಿಟ್ಟ.
‘ಈ ಕಳ್ಳನನ್ಮಗನಿಗೆ ರಿಪೇರಿ ಬೇರೆ ಬರುತ್ತಾ’ ಎಂದು ನೊಂದುಕೊಂಡ ಚಿನ್ನು; ಇವನಿಗೆ ತಾನೆಂದರೆ ಇಷ್ಟವಿಲ್ಲವೋ? ತನ್ನ ಮನೆಯವರ ಹೆದರಿಕೆಯೋ? ತಾನು ಮಹಾಬಲಶಾಲಿ ಎಂಬ ಹಮ್ಮು ಬಿಮ್ಮೇ? ಬಡವನೆಂಬ ಕೀಳರಿಮೆಯೋ? ಪೈಲ್ವಾನರಿಗೂ ಪ್ರೀತಿಗೂ ಅಷ್ಟಕಷ್ಟೆ ಬ್ರಹ್ಮಚರ್ಯೆಗೆ ಭಂಗವಾದೀತೆಂಬ ಭಯವೋ? ಅವನು ವಿಶ್ವಾಮಿತ್ರನೇ ಇದ್ದಾನು. ಆದರೆ ತಾನಂತೂ ಮೇನಕೆಯಷ್ಟು ಚೀಪ್ ಹೆಣ್ಣಲ್ಲ ಎಂದು ಒಳಗೇ ಮುನಿದು ಇಂಥವನನ್ನು ನಾನಾದರೂ ಏಕೆ ಕಣ್ಣೆತ್ತಿ ನೋಡಬೇಕು ಎಂದವಳು ಒಂದೆರಡು ದಿನ ಬಿಕ್ಕಂಡು ಇರುತ್ತಾಳಾದರೂ ಮತ್ತೆ ಕಣ್ಣುಗಳು ಮನಸ್ಸು ಇಡಿ ದೇಹವೇ ಸೋತು ಅವನತ್ತಲೇ ಜೋಲಿ ಹೊಡೆಯುವಾಗ ಅವಳೂ ಅಸಹಾಯಕಳೆ. ಕಾಲೇಜಿನ ದಿನಗಳೇಕೋ ಕಲರ್ ಕಳೆದುಕೊಳ್ಳುತ್ತಿವೆ ಎಂದು ತಹತಹಿಸುತ್ತಾಳೆ.
ಕಾವೇರಿಯನ್ನು ನೋಡಲು ಗಂಡು ಮತ್ತು ಗಂಡಿನ ಕಡೆಯವರು ಬರುತ್ತಾರೆಂಬ ವಾರ್ತೆ ರಂಗನಲ್ಲೂ, ಕಮಲಮ್ಮನಲ್ಲೂ ಹೊಸ ಸಂಚಲವನ್ನುಂಟು ಮಾಡುತ್ತದೆ. ಪ್ರತಿಸಲ ಗಂಡು ಬಂದಾಗಲೂ ಒಪ್ಪಿಬಿಡುತ್ತಾನೆ ಮದುವೆಯಾಗಿಯೇ ಬಿಡುತ್ತದೆಂಬ ಭರವಸೆ ತಾಯಿ ಮಗನಲ್ಲಿನ್ನೂ ಬತ್ತಿಲ್ಲ. ಕೆಲವರು ತಿಂಡಿ ತಿಂದು ಹೋದವರು ಮೌನ ವಹಿಸಿದಾಗ ಕಾವೇರಿಯದ್ದು ಮೌನರೋಧನ. ಹಲವರು ಕೇಳುವ ವರದಕ್ಷಿಣೆ ಹಣ ಹೊಂದಿಸಲಾಗದೆ ಸಂಬಂಧಗಳು ಕೈ ತಪ್ಪಿದೆ. ಕೈ ತಪ್ಪಿದಾಗ ನೊಂದುಕೊಳ್ಳುವವರು ರಂಗ ಅವನ ತಾಯಿ-ತಂಗಿ ಮಾತ್ರ. ಉಳಿದವರಿಗೆ ಅಂತಹ ಕಾಳಜಿಯಲ್ಲ. ‘ಎಲ್ಲರೂ ನೀವ ದುಡಿತಿರಾ ಒಂದಿಷ್ಟು ಹಾಕಿ ವರದಕ್ಷಿಣೆ ಕೊಟ್ಟು ತಂಗೀನಾ ಧಾರೆ ಎರೆದು ಕೊಡಬಾರೇನೋ’ ಎಂದು ಕಮಲಮ್ಮ ಪ್ರತಿಸಾರಿ ಕಣ್ಣೀರಿಟ್ಟು ಬೇಡಿದರೂ ಅವರ ಮನ ಕರಗಿದ್ದಿಲ್ಲ.
‘ನೋಡಮ್ಮ ವರದಕ್ಷಿಣೆ ಕೊಡೋದು ಅಪರಾಧ, ತಗೊಳ್ಳೋದೂ ಅಪರಾಧ… ಆ ಮಾತು ಬಿಡು’ ಲಾಯರ್ ವೆಂಕಟ ಕಾನೂನು ಪಾಠ ಹೇಳುತ್ತಾನೆ.
‘ಮತ್ತೆ ನೀನ್ಯಾಕಣ್ಣ ವರದಕ್ಷಿಣೆ ತಗೊಂಡೆ?’ ರಂಗ ಗಟ್ಟಿಸಿ ಕೇಳುತ್ತಾನೆ.
‘ಅದಕ್ಕೂ ಯೋಗ್ಯತೆ ಬೇಕಯ್ಯಾ, ಅವರಾಗಿ ಕೊಟ್ರು ತಗೊಂಡೆ’ ಲಾಯರ್‌ನ ಸಮರ್ಥನೆ. ‘ಅಷ್ಟಕ್ಕೂ ಕಾವೇರಿ ಏನು ಕುರುಡಿಯೊ ಕುಂಟಿಯೊ? ಬೆಳ್ಳಗಿಲ್ವೆ? ವರದಕ್ಷಿಣೆ ಯಾಕೆ ಕೊಡಬೇಕು? ಒಬ್ಬನಲ್ಲ ಒಬ್ಬ ಒಪ್ಕೊಂಡು ಆಗ್ತಾನೆ… ಕಂಕಣಬಲ ಬರೋವರ್‍ಗೂ ಕಾಯಬೇಕಪ್ಪಾ’ ಪಾರ್ವತಿಯ ಹಿತವಚನ.
‘ಹೌದಕ್ಕ, ಗಂಡಿಗೆ ಒಂದು ಹೆಣ್ಣು ಹೆಣ್ಣಿಗೊಂದು ಗಂಡು ಅಂತ ದೇವರು ಸೃಷ್ಟಿ ಮಾಡಿಯೇ ಇರ್ತಾನೆ. ಬಂದೋನೆಲ್ಲಾ ಒಪ್ಪಬೇಕಲ್ಲ’ ಕೊಂಕು ನುಡಿಯುತ್ತಾಳೆ ರಾಗಿಣಿ.
‘ಅವಳಿಗೇನ್ ಮಹಾ ವಯಸ್ಸಾಗಿದೆ ಬಿಡಿ… ಮದುವೆ ಯೋಗ ಅಂತ ಓಂದಿದ್ದರೆ ಯಾರೂ ತಪ್ಪಿಸೋಕೆ ಸಾಧ್ಯವಿಲ್ಲ’ ಮಾಧುರಿಗೆ ವಿಷಯವನ್ನು ಮುಂದುವರೆಸುವುದೇ ಬೇಕಿಲ್ಲ. ಎಲ್ಲರಿಗೂ ತಮ್ಮ ದುಡ್ಡಿಗೆಲ್ಲಿ ಸಂಚಕಾರ ಬರುತ್ತದೋ ಎಂಬ ಭಯ. ಕತ್ತೆಯಂತೆ ದುಡಿಯುವ ಕಾವೇರಿ ಲಗ್ನವಾಗಿ ಹೋದರೆ ತಾವೆಲ್ಲಿ ಚಾಕರಿ ಮಾಡಬೇಕಾಗುತ್ತದೋ ಎಂಬ ಭೀತಿ. ಇದೆಲ್ಲಾ ರಂಗನಿಗೆ ಗೊತ್ತಿದೆ. ಗೊತ್ತಿದ್ದು ಏನು ಮಾಡಬಲ್ಲ? ಅವನಿನ್ನೂ ವಿದ್ಯಾರ್ಥಿ. ಒಂದೆರಡು ಗಂಡುಗಳು ಕಾವೇರಿಯನ್ನು ಒಪ್ಪಿಕೊಂಡಾಗ ಅಂವಾ ವರದಕ್ಷಿಣೆ ಕೊಟ್ಟಾದರೂ ಸರಿ ಮದುವೆ ಮಾಡಿಕೊಡಿ, ಗಂಡು ಕಾಲೇಜು ಮೇಷ್ಟ್ರು ಒಳ್ಳೆ ಸಂಬಂಧವೆಂದು ಹೊಯ್ದಾಡಿದ್ದಾನೆ. ಮನೆ ಮಾರಿಯೋ, ಒತ್ತೆಯಿಟ್ಟೋ ಮದುವೆ ಮಾಡಬಾರದೇಕೆ ಎಂಬ ಸಲಹೆ ನೀಡಿ ಸರ್ವರಿಂದ ಉಗಿಸಿಕೊಂಡಿದ್ದಾನೆ. ಅಪ್ಪ ಪ್ರೀತಿಯಿಂದ ಕಟ್ಟಿಸಿದ ಮನೆ ಮಾರಿದರೆ ಆತನ ಆತ್ಮ ನೊಂದುಕೊಂಡೀತು ಎಂದವರು ತೋರುವ ಕಳವಳ ಕೂಡ ನಿಜವಾದ್ದಲ್ಲವೆಂಬುದು ಕಮಲಮ್ಮನಿಗೂ ಗೊತ್ತಿದೆ.
‘ಮಗಳಿಗೆ ಮದುವೆ ಮಾಡ್ದೆ ಇದ್ದರೆ ಅವರ ಆತ್ಮಕ್ಕೆ ನೋವು ಆಗೋದಿಲ್ವಾ? ಇರೋ ಒಬ್ಬ ಮಗಳು, ನಮಗೆ ಇರೋಳೇ ಒಬ್ಳು ತಂಗಿ, ಅವಳ ಜೊತೆಯವರಿಗೆಲ್ಲಾ ಮಕ್ಕಳಾಗಿವೆ ಗೊತ್ತಾ?’ ವಾದ ಮಾಡುತ್ತಾನೆ ರಂಗ. ಯಾವ ವಿಷಯಕ್ಕೂ ಸೋದರರ ವಿರುದ್ಧ ದನಿ ಎತ್ತದ ಅವನು ತಂಗಿಯ ವಿಷಯ ಬಂದಾಗ ಮಾತ್ರ ವಾದಕ್ಕಿಳಿಯುತ್ತಾನೆ ಅಂಗಲಾಚುತ್ತಾನೆ. ತಂಗಿಗಾಗಿ ಮರುಗುತ್ತಾನೆ.
‘ಅಷ್ಟು ಕಾಳಜಿಯಿದ್ದರೆ ನೀನೇ ಮಾಡಯ್ಯ ಅವಳ ಮದುವೆ. ಮೂರು ಕಾಸು ದುಡಿಯೋ ಯೋಗ್ಯತೆಯಿಲ್ಲದಿದ್ದರೂ ಧಿಮಾಕಿನ ಮಾತಿಗೇನು ಕಡಿಮೆಯಿಲ್ಲ’ ಹಂಗಿಸಿ ಅವನ ಬಾಯಿಗೆ ಬೀಗ ಹಾಕುತ್ತಾರೆ ಸೋದರರು. ಹೀಗಾಗಿ ಗಂಡು ಬರುತ್ತದೆಂದರೆ ಕಾವೇರಿಯಲ್ಲಿ ಸಹಜ ಕುತೂಹಲ, ಉತ್ಸಾಹ, ಪುಳಕ ಯಾವುದೂ ಈಗ ಉಳಿದುಕೊಂಡಿಲ್ಲ. ಯಾಂತ್ರಿಕವಾಗಿ ಎಲ್ಲಾ ನಡೆದುಹೋಗುತ್ತದೆ. ವರದಕ್ಷಿಣೆ ಕೇಳದ ಗಂಡು ಪ್ರಪಂಚದಲ್ಲಿ ಹುಟ್ಟಿಯೇ ಇಲ್ಲವೇನೋ ಎಂದವಳು ಬಸವಳಿಯುತ್ತಾಳೆ.
ಈ ಸಲವೂ ಗಂಡಿನ ಕಡೆಯವರು ಬರುತ್ತಾರೆ. ಗಂಡು ಹೈಸ್ಕೂಲಲ್ಲಿ ಟೀಚರ್ ಲಕ್ಷಣವಾಗಿದ್ದಾನೆ. ಕಾವೇರಿಗೆ ತಕ್ಕ ಜೋಡಿ ಅನಿಸುತ್ತದೆ. ಮನೆಯವರೆಲ್ಲಾ ಕೂತು ಮೋಜು ನೋಡುವಾಗ ಕಾವೇರಿಯೇ ಬಂದ ಗಂಡಿನವರಿಗೆ ಮನೆಯವರಿಗೆ ತಿಂಡಿ ಪ್ಲೇಟು ಪಾನೀಯಗಳನ್ನು ಸರಬರಾಜು ಮಾಡುತ್ತಾಳೆ. ರಂಗ ಅವಳ ನೆರವಿಗೆ ನಿಲ್ಲುತ್ತಾನೆ. ದೊಡ್ಡ ಮನೆ, ಮನೆ ತುಂಬಾ ದುಡಿಯೋ ಜನ ಆಳುಕಾಳುಗಳಿದ್ದಾರೆ. ಕೇಳಿದಷ್ಟು ಕೊಟ್ಟಾರು ಎಂದು ಗಂಡಿನ ತಂದೆ ಬಿಸಿನೀರ ಬಸಪ್ಪ ಒಳಗೇ ಲೆಕ್ಕ ಹಾಕುತ್ತಾನೆ. ಎಷ್ಟು ಹೊತ್ತಾದರೂ ಇವರು ಹೆಣ್ಣನ್ನೇ ತೋರಿಸಲಿಲ್ಲವೆ ಎಂಬ ಎದೆಗುದಿ ಗಂಡು ಶಂಕರನದು. ಅದನ್ನು ಅರ್ಥಮಾಡಿಕೊಂಡ ಬಿಸಿನೀರು ಬಸಪ್ಪ, ‘ಹೆಣ್ಣಿಗೆ ಬರೋಕೆ ಹೇಳಿ ಸ್ವಾಮಿ…. ನಮ್ದು ದೂರದ ಪ್ರಯಾಣ’ ಅನ್ನುತ್ತಾನೆ. ಎಲ್ಲರೂ ಮುಸಿಮುಸಿ ನಗುವಾಗ ಗಂಡಿನ ತಾಯಿ ಬಸಮ್ಮನಿಗೆ ಮುಜುಗರವಾಗುತ್ತದೆ. ಸ್ವಲ್ಪ ಹೊತ್ತಿನಲ್ಲೇ ಒಂದಿಷ್ಟು ಸರಳವಾಗಿ ಅಲಂಕಾರ ಮಾಡಿಕೊಂಡು ಮೈಸೂರು ಸಿಲ್ಕ್ ಸೀರೆ ಉಟ್ಟು ಬಂದ ಕಾವೇರಿ ಎಲ್ಲರಿಗೂ ನಮಸ್ಕಾರ ಮಾಡಿದಾಗ ಗಂಡಿನವರಿಗೆ ಅಚ್ಚರಿ.
‘ಇದೇನ್ ಸ್ವಾಮಿ! ನಮಗೆ ತಿಂಡಿ ಸಪ್ಲೈ ಮಾಡಿದ್ದು ಇದೇ ಹುಡುಗಿಯಲ್ವಾ?’ ಎಂದು ಕಾಲು ಮೇಲೆ ಕಾಲು ಹಾಕಿ ಕೂತ ಮನೆ ಸೊಸೆಯರತ್ತ ನೋಡುತ್ತಾನೆ ಬಿಸಿನೀರು ಬಸಪ್ಪ.
‘ದುಡಿಯೋ ಹೆಂಗಸರಿಗೆ ಇದೆಲ್ಲಾ ಅಭ್ಯಾಸವಿರಲ್ಲ… ಅಲ್ದೆ ನೀವೂ ಸಂಕೋಚವಿಲ್ಲದೆ ನೋಡ್ಲಿಕ್ಕೂ ಅನುಕೂಲವಾಗುತ್ತೆ ಅಂತ ಈ ಏರ್ಪಾಡು. ಹುಡುಗಿ ಮನೆಕೆಲಸದಲ್ಲಿ ಅಚ್ಚುಕಟ್ಟು…’ ಗಣೇಶ ಲೆಕ್ಚರ್ ಕೊಡುತ್ತಾನೆ. ನಿಮಗೆ ಬೇರೆ ಕೆಲಸದವರ ಅಗತ್ಯವೇ ಇಲ್ಲ ಬಿಡಿ… ಎಲ್ಲಾ ವೈನಾಗಿ ಮಾಡಿಕೊಂಡು ಹೋಗ್ತಾಳೆ’ ರಾಗಿಣಿ ಶಿಫಾರಸ್.
‘ನಿಮ್ಮ ಹುಡ್ಗ ಚೆಂದವಾಗಿದಾನೆ… ನಮ್ಮ ಹುಡ್ಗಿನೇ ಸುಮಾರು… ಯಾರೂ ನಿರೀಕ್ಷಿಸದ ಮಾತು ಆಡಿ ದಂಗುಬಡಿಸುತ್ತಾಳೆ ಮಾಧುರಿ. ರಂಗನಿಗೆ ಮೈ ಉರಿಯುತ್ತದೆ. ಕಾವೇರಿ ಕಣ್ಣುಗಳು ಕೊಳಗಳಾಗುತ್ತವೆ.
‘ನೋಡಿ ಮೇಡಂ, ಸೌಂದರ್ಯ ಇರೋದು ನೋಡೋ ಕಣ್ಣುಗಳಲ್ಲಿ. ಹಾಗೆ ನೋಡಿದ್ರೆ ಈ ಮನೇಲಿ ಎಲ್ಲರಿಗಿಂತ ಚೆನ್ನಾಗಿರೋರು ಕಾವೇರಿ ಅವರೆ’ ಸ್ವತಹ ಶಂಕರನೇ ತಿರುಗೇಟು ನೀಡಿದಾಗ ಸೊಸೆಯರ ಮೋರೆ ಹಳಸಿದ ಚಿತ್ರಾನ್ನವಾಯಿತು. ರಂಗನಿಗೆ ಖುಷಿಯೋ ಖುಷಿ. ‘ಥ್ಯಾಂಕ್ಯು ಸಾರ್’ ಎಂದು ಕೈ ಕೈ ಮುಗಿದ. ಕಾವೇರಿ ನಿರ್ಲಿಪ್ತತೆ ತೋರಿದಳು. ಮಗ ಒಪ್ಪಿಗೆಯನ್ನು ಆತುರಾತುರವಾಗಿ ವ್ಯಕ್ತಪಡಿಸಿ ಡಿಮ್ಯಾಂಡಿಗೇ ಕಲ್ಲು ಹಾಕಿದನೆಂಬ ಸಂಕಟಕ್ಕೀಡಾದ ಬಿಸಿನೀರು ಬಸಪ್ಪ ತಣ್ಣಗಾದರು.
‘ಆತುರ ಪಡಬಾರದಯ್ಯ ಹೆಣ್ಣು ಕಾಣ್ದೋನಂಗೆ’ ಎಂದು ಮಗನ ಮೋರೆಯನ್ನು ಹುಳಿಹುಳಿ ನೋಡಿದರು. ಹೆಣ್ಣು ಬಂದವರಿಗೆ ಒಪ್ಪಿಗೆಯಾಗಿದೆ ಎಂಬ ಭರವಸೆ ಇತ್ತಾದರೂ ವರದಕ್ಷಿಣೆ ವರೋಪಚಾರವೆಂಬುದಿತ್ತಲ್ಲ. ಬಿಸಿನೀರು ಬಸಪ್ಪ ಎರಡು ಲಕ್ಷ ವರದಕ್ಷಿಣೆ ಕೇಳಿದ್ದಲ್ಲದೆ ಗ್ರಾಂಡ್ ಆಗಿ ಮದುವೆ ಮಾಡಿಕೊಡಬೇಕೆಂದು. ನೇರವಾಗಿ ಮಾತುಕತೆಗೆ ಶುರುಹಚ್ಚಿದಾಗ ಕಾವೇರಿ ಅಣ್ಣಂದಿರು ಗಲಿಬಿಲಿಗೊಂಡರು. ವರದಕ್ಷಿಣೆ ಜಾಸ್ತಿಯಾಯಿತೆಂದರು.
‘ಮನೆಮಂದಿಯೆಲ್ಲಾ ದುಡಿತಿರಾ. ಇರೋಳು ಒಬ್ಬಳು ತಂಗಿ. ಒಳ್ಳೆ ಸಂಬಂಧ ಬಂದಾಗ ಹಿಂದುಮುಂದು ನೋಡಬಾರ್‍ದು’ ಎಂದು ಮಧ್ಯಸ್ಥರೂ ತಿಳಿಸಿ ಹೇಳಿದರೂ ವಾತಾವರಣದಲ್ಲಿ ಕೊಂಚವೂ ಲವಲವಿಕೆಯಿಲ್ಲ. ಹುಡುಗಿಯನ್ನು ಮೆಚ್ಚಿಕೊಂಡಿದ್ದ ವರ, ತಂದೆಯೊಡನೆ ಗುಸುಗುಸು ಮಾತಾಡಿ ರೇಗುತ್ತಿದ್ದಂತೆ ಭಾಸವಾದಾಗ ಸಧ್ಯ ತೋಲಗಿದರೆ ಸಾಕೆಂದು ಅತ್ತಿಗೆಯರು ಕಾವೇರಿಯತ್ತ ದುರುಗುಟ್ಟಿ ಮನದಲ್ಲೇ ಹಿಡಿಶಾಪ ಹಾಕಿದರು. ಗಂಡಿನ ತಂದೆ ಸೋತ ಮುಖ ಮಾಡಿಕೊಂಡು ಒಂದು ಲಕ್ಷ ರೇಟು ಇಳಿಸಿದರು.
‘ನೋಡಿ, ನಮ್ಮ ಹುಡುಗನಿಗೆ ಹುಡುಗಿ ಒಪ್ಪಿಗೆಯಾಗಿದೆ. ಆ ಕಾರಣವಾಗಿ ಅವನ ಸಲುವಾಗಿ ವರದಕ್ಷಿಣೆಯಲ್ಲಿ ಕಡಿಮೆ ಮಾಡಿಕೊಂಡಿದ್ದೇನೆ’ ಬಿಸಿನೀರು ಬಸಪ್ಪ ಅಂದಾಗ ಅಡಿಗೆ ಕೋಣೆಯಲ್ಲಿದ್ದ ಕಮಲಮ್ಮ ದೇವರಪಟಕ್ಕೆ ಕೈ ಮುಗಿದರು.
‘ನಮ್ಮ ಹುಡ್ಗಿಯೇನು ಕುರುಡಿಯೆ, ಕುಂಟಿಯೆ? ಅದೂ ಹುಡುಗನೇ ಒಪ್ಪಿರುವಾಗ ವರದಕ್ಷಿಣೆ ಕೇಳೋದು ಅಪರಾಧ’ ಲಾಯರ್ ವೆಂಕಟ ಸೆಕ್ಷನ್‌ಗಳು ಹೇಳುವಾಗ ಗಂಡಿನವರ ತಿಕ ಉರಿಯಿತು.
‘ಆಯಿತು ಸ್ವಾಮಿ, ನಿಮ್ಮ ತಂಗಿನಾ ನಿಮ್ಮ ಮನೆಯಲ್ಲೇ ಇಟ್ಕೊಂಡು ಉಪ್ಪಿನಕಾಯಿ ಹಾಕ್ಕೋಳಿ’ ಅಂದ ಬಿಸಿನೀರು ಬಸಪ್ಪ ‘ಎದ್ದೇಳೊ ಮೇಲೆ’ ಎಂದು ಬಿಸಿಬಿಸಿಯಾಗಿ ಮಗನನ್ನು ಎಬ್ಬಿಸಿಕೊಂಡು ಹೊರಟೇಬಿಟ್ಟ. ಇತರರೂ ಹಿಂಬಾಲಿಸಿದರು. ರಂಗನಿಗೆ ಏನು ಮಾಡಬೇಕೋ ತೋಚಲಿಲ್ಲ. ನಾನಾದರೂ ಮೊದಲು ಹುಟ್ಟಬಾರದಿತ್ತೆ, ಕೂಲಿಮಾಡಿದರೂ ಅಷ್ಟು ಸಂಪಾದನೆ ಸಾಧ್ಯವಿಲ್ಲವೆ ಎಂದು ಮಮ್ಮಲ ಮರುಗಿದ. ಕಮಲಮ್ಮ ದೇವರ ಪಟದೆದುರು ಕಣ್ಣೀರ ಅಭಿಷೇಕ ಮಾಡಿದರು. ಒಂದಿಷ್ಟೂ ನೊಂದುಕೊಳ್ಳದೆ, ಯಾರಮೇಲೂ ಬೇಸರ ತೋರದೆ, ಹಂಗಿಸಿ ಮಾತನಾಡದೆ ಎಂದಿನಂತೆ ಲವಲವಿಕೆಯಿಂದ ಮನೆಯ ಕೆಲಸ ಬೊಗಸೆಗಳಿಗೆ ಸೆರಗು ಸೊಂಟಕ್ಕೆ ಸಿಕ್ಕಿಸಿ ಓಡಾಡಹತ್ತಿದ ಕಾವೇರಿಯ ಕಣ್ಣುಗಳನ್ನೇ ನೋಡಿದ ರಂಗ, ಅಲ್ಲಿ ಕಣ್ಣೀರಿರಲಿ ತೇವವು ಕಾಣಲಿಲ್ಲ. ಬತ್ತಿದ ಕೊಳದಂತಿರುವ ಕಣ್ಣುಗಳನ್ನು ನೋಡಲಾಗದೆ ದೃಷ್ಟಿ ಬೇರತ್ತ ಹೊರಳಿಸಿದ.
ಕಾಲೇಜಿನಲ್ಲಿನ ಪಾಠ ಪ್ರವಚನಗಳಲ್ಲೂ ಅವನಿಗೆ ಎಂದಿನಂತೆ ಆಸಕ್ತಿ ಕುಂದಿತ್ತು. ಅವನು ತನ್ನ ನೋವು ಹತಾಶೆಯನ್ನೆಲ್ಲಾ ಮರೆಯುತ್ತಿದ್ದದ್ದು ಗರಡಿ ಮನೆಯಲ್ಲಿ ಮಾತ್ರ. ಅಲ್ಲಿ ಸಾಧನೆಗೆ ನಿಂತವೆಂದರೆ ಜಗತ್ತನ್ನೇ ಮರೆತುಬಿಡುತ್ತಿದ್ದ. ಅವನ ಉಬ್ಬಿದ ಮಾಂಸಖಂಡಗಳು ಕೊಬ್ಬಿದ ದೇಹವನ್ನು ಕಂಡು ಉಬ್ಬಿಹೋಗುತ್ತಿದ್ದ. ಇಲ್ಲಿ ತನಗೆ ಸರಿಸಾಟಿಯಾದವರು ಯಾರು ಇಲ್ಲ. ಇದ್ದರೆ ಅದು ಬಸವ-ಬಸವನೆಂಬ ಗೂಳಿ ಎಂದು ಬೀಗುತ್ತಿದ್ದ. ಚಮನ್‌ಸಾಬ್‌ಗೂ ಅವನ ಬಾಡಿಬಿಲ್ಡಪ್ ಬಗ್ಗೆ ಬಲು ಮೊಹಬ್ಬತ್. ಹಳ್ಳಿಗೆ ಬರುವ ಹಾದಿಯಲ್ಲಿ ದೂರಕ್ಕೆ ನಿಂತ ಸ್ಕೂಟಿ ಅದಕ್ಕೊರಗಿ ನಿಂತ ಚಿನ್ನು ಕಂಡಳು. ‘ಓಲ್ಡಾನ್’ ಅಂತ ಅಡ್ಡ ಹಾಕಿದಳು.
‘ಮತ್ತೆ ರಿಪೇರಿನಾ?’ ಸೈಕಲ್ ನಿಲ್ಲಿಸಿ ಕೇಳಿದ. ಅವನಿಗೆ ರಿಪೇರಿ ಗೊತ್ತಿದೆ ಎಂದು ಗೊತ್ತಾದ್ದರಿಂದ,
‘ಇಲ್ಲ ಕಣೋ ಪೆಟ್ರೋಲ್ ಖಾಲಿ… ಪ್ಲೀಸ್ ನನ್ನನ್ನು ಕರ್‍ಕೊಂಡು ಹೋಗೋ’ ಅಳುವವಳಂತೆ ಬೇಡಿದಳು.
‘ಸರಿ ನಡಿ, ನೆಡ್ಕೊಂಡು ಹೋದ್ರಾಯಿತು’ ಅಂದ ರಂಗ.
‘ನಾನು… ನೆಡೆಯೋದಾ? ಆಗಲ್ಲಪ್ಪ ಅದೆಲ್ಲಾ ಸಾಧ್ಯವಿಲ್ಲ’ ಉಸ್ಸಪ್ಪ ಎಂದು ನಡೆಯುವ ಮೊದಲೆ ಉಸಿರುಬಿಟ್ಟಳು.
ಸರಿ ಹಿಂದುಗಡೆ ಕೂತ್ಕ…. ತಳ್ಕೊಂಡು ಹೋಗ್ತಿನಿ ಅಂದ. ಕ್ಷಣ ಆಲೋಚನೆಗೆ ಬಿದ್ದಳು.
‘ನೋ ನೋ… ಅದೆಲ್ಲಾ ಚೆನ್ನಾಗಿರೋಲ್ಲ. ನಾನು ಕೂತ್ಕೊಂಡು ಹಾಯಾಗಿ ಬರೋದು ನೀನು ದಬ್ಕೊಂಡು ಬರೋದು ಹುಂಹುಂ… ನಾಟ್‌ವೆಲ್, ಹೀಗೆ ಹೋದ್ರೆ ನಾವು ಹಳ್ಳಿ ಸೇರೋದು ಯಾವಾಗ? ಲೇಟಾದ್ರೆ ಏನ್ ಹೇಳ್ಳಿ ಮನೇಲಿ?’ ಗಾಬರಿಗೊಂಡವಳಂತೆ ನಟಿಸಿದಳು.
‘ನೋಡು, ನನಗಿದೆಲ್ಲಾ ಹಿಡಿಸೋದಿಲ್ಲ. ಹನುಮಂತನ ಭಕ್ತರು ನಾವು. ಏನೋ ಪಾಪ ನಮ್ಮ ಹಳ್ಳಿ ಹುಡ್ಗಿ ಕ್ಲಾಸ್‌ಮೇಟು ಹೆಣ್ಣು ಹೆಂಗ್ಸು ಅಂತ ಕರುಣೆ ತೋರಿಸಿದರೆ ನಖರಾ ಮಾಡ್ತಿಯಾ? ಇಲ್ಲೇ ಬಿಟ್ಟು ಹೋಗ್ತಿನಷ್ಟೆ’ ಸಿಡುಕಿದ.
‘ಅಯ್ಯೋ ಇಷ್ಟಕ್ಕೆಲ್ಲಾ ಯಾಕ್ ಸಿಡುಕ್ತಿಯೋ? ನಾನು ಕಂಬಿ ಮೇಲೆ ಕೂತ್ಕೋತೀನಿ… ಡಬ್ಬಲ್ ರೈಡ್ ಹೋಗೋಣ’ ಕಿಲಕಿಲನೆ ನಕ್ಕಳು.
‘ಭವಾನಿ’ ತಟ್ಟನೆ ಸಿಡಿದವನ ಕಂಗಳಲ್ಲಿ ಕ್ಷಣ ಕರೆಂಟ್ ಪಾಸಾದಂತಾಯಿತು. ಅವಳೇನು ಬೆಚ್ಚಿಬೀಳಲಿಲ್ಲ. ‘ಭವಾನಿ?… ಯಾರು ?’ ಸುತ್ತಲೂ ಕಣ್ಣು ಹಾಯಿಸಿದಳು.
‘ನೀನೇ. ಕಾಲೇಜ್ ಅಟೆಂಡೆನ್ಸ್‌ನಲ್ಲಿ ನಿನ್ನ ಹೆಸರು ಭವಾನಿ ತಾನೆ?’
‘ಆಫ್ ಕೋರ್ಸ್. ಎಲ್ಲರೂ ಪ್ರೀತಿಯಿಂದ ನನ್ನನ್ನು ಚಿನ್ನೂ ಅಂತಾರೆ. ನೀನೂ ಹಾಗೆ ಕರೆಯೋ ಪರ್ವಾಗಿಲ್ಲ’.
‘ಏನದು ಕರಿಯೋ? ನೀನು ತಾನು ಅಂತೆಲ್ಲಾ ಮಾತಾಡಿಸ್ತಿಯಲ್ಲಾ. ಇಷ್ಟು ಸಲಿಗೆ ಯಾರು ಕೊಟ್ಟರೆ ನಿನ್ಗೆ?’ ಮುನಿಸು ತೋರಿದ.
‘ಮಾರಾಯಾ, ನನ್ನ ಮನೆಯೋರು ಬಿಟ್ಟರೆ ಬೇರೆ ಯಾರೂ ನನ್ನನ್ನ ಸಿಂಗ್ಯುಲರ್ ಆಗಿ ಮಾತಾಡಿಸೋಲ್ಲ ಗೊತ್ತಾ ನಿನ್ಗೆ? ನಿನಗೆ ಸಲಿಗೆ ಕೊಟ್ಟೋರು ಯಾರು? ಹ್ಯಾಗೆ ಸಲಿಗೆ ತಗೊಂಡೆ? ಮರುಪ್ರಶ್ನೆ ಹಾಕಿದಳು. ಅದಕ್ಕೆ ಇಬ್ಬರಲ್ಲೂ ಸರಿಯಾದ ಉತ್ತರವಿರಲಿಲ್ಲ. ಇಬ್ಬರೂ ನಿರಾಳವಾಗಿ ನಕ್ಕುಬಿಟ್ಟರು. ಅವಳು ಕಂಬಿ ಏರಿ ಕುಳಿತಳು. ರಂಗ ಯಾವ ಮುಜುಗರಕ್ಕೂ ಒಳಗಾಗದೆ ರೈಡ್ ಮಾಡಿದ. ಒಂದಿಷ್ಟು ನಾಚಿಕೆ ಎರಡುಪಟ್ಟು ಹಿಗ್ಗುಪಟ್ಟುವಳು ಚಿನ್ನುವೆ. ತನ್ನ ಸನಿಯ ಕೂತಿದ್ದರೂ ಆಗೀಗ ಮೈಕೈ ತಾಗಿದರೂ ಅವನ ನಿರ್ಲಿಪ್ತ ನಡವಳಿಕೆಗೆ ಬೇಸರಿಸಿದ ಚಿನ್ನು ಆಂಜನೇಯನನ್ನೇ ಮನದಲ್ಲಿ ಶಪಿಸಿದಳು.
‘ಹಳ್ಳಿ ಹತ್ತಿರ ಇರೋ ದೊಡ್ಡ ಆಲದ ಮರದ ಹತ್ತಿರ ಇಳಿಸ್ತೀನಿ. ಅಲ್ಲಿಂದ ನಡ್ಕೊಂಡು ಹೋಗಬೇಕು ತಿಳೀತಾ?’ ಅವಳತ್ತ ಮುಖ ತಂದು ಹೇಳಿದಾಗ ಬಿಸಿಯುಸಿರಿನ ಝಳ ಬಡಿದು ಬೆಚ್ಚಗಾದಳು. ‘ಯಾಕೆ ? ಮನೆಯ ಹೊರಗೂ ಹೋದರಾಗದೆ?’ ಎಂಬಂತೆ ಅವನತ್ತ ನೋಡಿ ಹುಬ್ಬು ಕುಣಿಸಿದಳು.
‘ಮೊದಲೆ ನಿಮ್ಮ ಮನೆಯೋರ್‍ಗೆ ನನ್ನ ಕಂಡ್ರೆ ಆಗೋಲ್ಲ. ನಿನ್ನ ಮೈಮುಟ್ಟಿದೋರ ಕೈ ಕತ್ತರಿಸಿ ಹಾಕೋವಷ್ಟು ನಿನ್ನ ಮೇಲೆ ಅಭಿಮಾನವೋ… ಮೈಯೆಲ್ಲಾ ತುಂಬಿಕೊಂಡಿರೋ ಹಮ್ಮೋ ಯಾವನು ಬಲ್ಲ. ಪದೆಪದೆ ಬಡಿದಾಡೋಕೆ ನನಗಿಷ್ಟವಿಲ್ಲ… ದೊಡ್ಡ ಆಲದ ಮರತಾವ ಇಳ್ಕೊಂಬಿಡು’ ಜಬರಿಸಿದ.
‘ನನಗೆ ಫೈಟಿಂಗ್ ಅಂದ್ರೆ ಪ್ರಾಣ’ ಎಂದು ಲೊಟ್ಟೆ ಹೊಡೆದು ನಕ್ಕಳು. ರಂಗ ಮಾತನಾಡಲಿಲ್ಲ. ವೇಗವಾಗಿ ಸೈಕಲ್ ತುಳಿದ.
‘ನಂಗೆ ಸ್ಪೀಡ್ ಅಂದ್ರೆ ಇಷ್ಟ’ ಅಂದಳು. ಅವನು ಮಾತಾಡಲಿಲ್ಲ. ‘ಡಬ್ಬಲ್‌ರೈಡ್ ಅಂದ್ರೆ ನನಗೆ ಇಷ್ಟ’ ಅಂದಳು ಉತ್ತರವಿಲ್ಲ. ಉತ್ತರಕ್ಕವಳು ಕಾಯಲೂ ಇಲ್ಲ. ತನ್ನ ಮನದಲ್ಲಿದ್ದುದನ್ನು ಹೇಳಿ ಹಗುರಾಗಿದ್ದಳು. ಹೇಳದೆ ಉಳಿದ ಒಂದು ‘ಇಷ್ಟವಾದ ಮಾತು’ ಮಾತ್ರ ಅದೇಕೋ ಹೊರಬಾರದೆ ಗಂಟಲಲ್ಲೇ ಸಿಕ್ಕಿಕೊಂಡಿತು. ರಂಗ ಅವಳನ್ನು ದೊಡ್ಡ ಆಲದಮರದ ಬಳಿ ಇಳಿಸಿದ. ದೊಡ್ಡವರು ಯಾರೂ ನೋಡಲಿಲ್ಲವೆಂಬ ಸಮಾಧಾನ, ಪೈಮರಿ ಹುಡುಗರು ಗೋಲಿ ಆಟದಲ್ಲಿ ಮಗ್ನರಾಗಿದ್ದರು.
‘ಥ್ಯಾಂಕ್ಸ್ ಕಣೋ’ ಅಂದು ನಕ್ಕವಳೆ ನಿಧಾನವಾಗಿ ನಡೆದುಹೋದಳು, ನೀರಲ್ಲಿ ತೇಲಿ ಹೋಗುವ ಹಂಸದಂತೆ. ಕ್ಷಣ ನಿಂತು ನೋಡಿದ ರಂಗ ತಲೆಕೊಡವಿದ.
ನಡದೇ ಬಂದ ಚಿನ್ನುವನ್ನು ನೋಡಿದ ಆಳುಕಾಳು ಮೊದಲು ಗಾಬರಿಗೊಂಡರು, ‘ಅಮ್ಮೇರು ನಡದೇ ಬಂದರು’ ಅಂತ ಕೂಗಿದರು. ಅಮ್ಮ ಚಿಗಮ್ಮ ಈಚೆ ಓಡಿ ಬಂದರು.
‘ನಡ್ದೆ ಬಂದೇನೆ ಕೂಸು?’ ಅವಳ ಮೈಕೈ ದಡವಿದರು.
‘ಏನೇ ಮಾಡ್ಲಿ ಪೆಟ್ರೋಲ್ ಖಾಲಿ. ಅಲ್ಲೇ ನಿಲ್ಲಿಸಿ ಬಂದೆ’, ’ಕೀ’ ಬಿಸಾಡಿದಳು. ಆಳೊಬ್ಬ ಎತ್ತಿಕೊಂಡ.
‘ನಿಂಗಾ, ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಸ್ಕೂಟಿ ತಗೊಂಡು ಬಾ’ ಚಿನ್ನಮ್ಮ ಆಜ್ಞಾಪಿಸಿದಳು. ‘ಬಾರೆ ನನ್ನ ಚಿನ್ನಾ’ ಚಿಗಮ್ಮ, ಕೆಂಚಮ್ಮ ಒಳಗೆ ಕರೆದೊಯ್ದಳು. ‘ಉಸ್ಸಪ್ಪಾ ಸಾಕಾಗಿ ಹೋಯ್ತು… ನಡೆದು ನಡೆದು, ಕಾಲುಗಳು ನೋಡಿ ಹೆಂಗೆ ಬಾವು ಬಂದವೆ’ ಚಿನ್ನು ಸೋಫಾದಲ್ಲಿ ಕುಸಿದು ಅಂದಾಗ ಚಿನ್ನಮ್ಮ ಕೊಬ್ಬರಿ ಎಣ್ಣೆ ಬಿಸಿ ಮಾಡಿ ತಂದಳು. ಕೆಂಚಮ್ಮನಾಗಲೆ ಬಿಸಿನೀರಿನ ಕಾವು ಕೊಡುತ್ತಿದ್ದಳು.
‘ಎಣ್ಣೆ ಯಾಕೆ ತಂದ್ರಿ! ನೀವಿದರೆ ನೋವು ಹೋದಿತೇನಕ್ಕಾ’ ನಕ್ಕಳು ಕೆಂಚಮ್ಮ. ಅಷ್ಟರಲ್ಲಾಗಲೇ ವಿಷಯ ತಿಳಿದ ಮೈಲಾರಿ ನೋವು ನಿವಾರಕ ಆಯಿಂಟ್‌ಮೆಂಟ್ ಹಿಡಿದೇ ಬಂದ. ತಾನೇ ಕೂತು ಮುಲಾಮು ಸವರಿ ನೀವಿದಾಗ ತುಂಬಾ ನೋವೆಂಬಂತೆ ಬೇಕೆಂದೇ ಚೀರಾಡಿದಳು.
‘ನೋವು ಭಾಳೋಟು ಇದ್ದಂಗೈತೆ. ನಡಿ ಡಾಕ್ಟರ್‍ತಾವ ಹೋಗಿ ಒಂದು ಸೂಜಿ ಮಾಡಿಸೋಂವಾ’ ಎಂದು ಮೈಲಾರಿ ತಟ್ಟನೆ ಮೇಲೆದ್ದಾಗ,
‘ಅಯ್ಯಯ್ಯೋ… ಈಗ ಕಡಿಮೆ ಆಗಿದೆ ಚಿಗಪ್ಪ’ ಅಂತ ಹೆದರಿ ಕೂಗಿಕೊಂಡಳು. ಚಿನ್ನಮ್ಮ ತಿಂಡಿ ತಿನ್ನಿಸುವಾಗ ಕೆಂಚಮ್ಮ ಪ್ರೀತಿಯಿಂದ ಚಿನ್ನುವಿನ ಕಾಲುಗಳನ್ನು ಮೆದುವಾಗಿ ಒತ್ತಿ ಉಪಚಾರ ಮಾಡಿದಳು. ಅದೆಲ್ಲಿದ್ದರೋ ಉಗ್ರಪ್ಪ, ಭರಮಪ್ಪನವರೂ ಮನೆಗೆ ಬಂದರು.
‘ಪೆಟ್ರೋಲ್ ಐತೋ ಇಲ್ಲೋ ಮೊದ್ಲು ತಿಳ್ಕೊಂಡೆ ಗಾಡಿ ಹತ್ತಬೇಕವ್ವ, ರಿಸರ್ವ್‌ಗೆ ಬರುತ್ಲು ಪೆಟ್ರೋಲ್ ಹಾಕಿಸಿ ಬಿಡಬೇಕು ಇನ್ನೊಂದ್ಸಲ ಹಿಂಗಾಗಬಾರ್‍ದು ನೋಡು ತಾಯಿ’ ಭರಮಪ್ಪ ಅಕ್ಕರೆಯಿಂದ ಅಲವತ್ತುಕೊಂಡರು.
‘ಇನ್ನು ಮೇಲೆ ನಾನ್ ಚೆಕ್ ಮಾಡೇ ಕಳಿಸ್ತೀನಿ ಕಣೆ ಕೂಸೆ’ ಉಗ್ರಪ್ಪ ಬೇಸರಪಟ್ಟ.
‘ತುಂಬಾ ಕಾಲು ನೋವೇನೆ ಚಿನ್ನು’ ಉಗ್ರಪ್ಪ ಮಕ್ಕಳಂತೆ ಅಳುಮೋರೆ ಮಾಡಿಕೊಂಡಾಗ ಚಿನ್ನುಗೆ ನಗು ತಡೆಯಲಾಗದೆ ಗೊಳ್ಳನೆ ನಕ್ಕಳು.
‘ನಮಗೆ ನೋವಾದೀತು ಗಾಬರಿಬಿದ್ದೇವು ಅಂತ, ಮಗಾ ತನಗೆ ನೋವಾಗಿದ್ದರೂ ನಗ್ತದೆ ಪಾಪ’ ಭರಮಪ್ಪನವರ ಅನುಕಂಪ ಪ್ಲಸ್ ಮೆಚ್ಚಿಗೆ ಹೊರಬಂದಾಗ ತನ್ನ ನಟನೆ ಯಶಸ್ವಿಯಾಯಿತೆಂಬ ಹಿಗ್ಗಿನಲ್ಲಿ ಚಿನ್ನು ಮತ್ತಷ್ಟು ನಕ್ಕಳು.
*****