ಅಧ್ಯಾಯ ೫ ಸೊಸೆಯ ದೂರು
ಮನೆಗೆ ಬರುವಷ್ಟರಲ್ಲಿ ಊರಿನಿಂದ ಮನುವಿನ ತಮ್ಮ ರಾಜೀವ್ ಅಮ್ಮನನ್ನು ಕರೆದುಕೊಂಡು ಬಂದಿದ್ದ. ಅತ್ತೆ ಗಾಬರಿಯಾಗುವರೆಂದು ಮನು ಬಿದ್ದ ವಿಷಯ ಅಲ್ಲಿಗೆ ತಿಳಿಸುವುದು ಬೇಡವೆಂದು ತನುಜಾ ತಡೆದಿದ್ದಳು. ಆದರೆ ಹೇಗೊ ವಿಷಯ ತಿಳಿದೊಡನೆ ಸುಂದರಮ್ಮ ಹಟ ಹಿಡಿದು ಬಂದುಬಿಟ್ಟಿದ್ದರು. ಈಗ್ಯಾಕೆ ಇವರು ಬಂದರಪ್ಪ ಅಂತ ತನುಜಾಳಿಗೆ ಕ್ಷಣ ಅನ್ನಿಸದೆ ಇರಲಿಲ್ಲ. ಆದರೂ ಅದನ್ನು ತೋರ್ಪಡಿಸಿದೆ, “ರಾಜೀವ್, ಯಾವಾಗ ಬಂದ್ರಿ? ವಾಣಿ, ವಿಜೇತ ಚೆನ್ನಾಗಿದ್ದಾರಾ? ಅವರ್‍ಯಾಕೆ ಬರಲಿಲ್ಲ?” ವಿಚಾರಿಸಿದಳು.
“ಏನ್ ಅತ್ತಿಗೆ, ನಾವು ದೂರಾಗಿಬಿಟ್ವಾ? ಅಣ್ಣ ಬಿದ್ದು ಆಸ್ಪತ್ರೆಲಿ ಇದ್ರೂ ನಂಗೊಂದು ಫೋನ್ ಮಾಡದೆ ಇದ್ದಿರಿ” ಬೇಸರಿಸಿಕೊಂಡ.
“ಹಾಗಲ್ಲ ರಾಜೀವ್, ಅಂಥ ದೊಡ್ಡ ಆಕ್ಸಿಡೆಂಟೇನೂ ಅಲ್ಲ. ಅಲ್ಲದೆ ಅತ್ತೆ ಗಾಬರಿ ಆಗ್ತಾರೆ ಅಂತ ಯಾರಿಗೂ ತಿಳಿಸಿಲ್ಲ. ಧರಣಿಯನ್ನೂ ಸುಮ್ಮೆ ಫೋನ್ ಮಾಡಿ ಕರೆಸಿಕೊಂಡ್ವಿ. ಬೇಸರಪಡ್ಕೊಬೇಡಿ. ನಿಮಗ್ಯಾಕೆ ಗಾಬರಿ ಮಾಡಿಸಬೇಕು ಅಂತ ಭಾವಂಗೂ ಹೇಳ್ಲಿಲ್ಲ. ಆದ್ರೂ ಗೊತ್ತಾಗಿಬಿಟ್ಟಿದೆ ನಿಮ್ಗೆ.”
“ಬೆಳಗ್ಗೆ ಧರಣಿಗೆ ಫೋನ್ ಮಾಡಿದ್ದೆ ಅತ್ತಿಗೆ, ನಂಗೆ ಡೆಲ್ಲಿಗೆ ಟ್ರೈನಿಂಗ್ ಹಾಕಿದ್ದಾರೆ. ಸ್ವಲ್ಪ ದಿನ ಅಲ್ಲಿಗೆ ಬಂದಿರ್ಲಿ ಅಂತ ಅಂದುಕೊಂಡಿದ್ದೆ. ಆದ್ರೆ ಅಣ್ಣಂಗೆ ಹೀಗಾಗಿಬಿಟ್ಟಿದೆ. ವಾಣಿ ತಮ್ಮ ಬಂದಿರ್ತಾನೆ ಬಿಡಿ, ಧರಣಿ ಇಲ್ಲೇ ಇರ್ಲಿ. ನಾನು ಹೊರಡ್ತೀನಿ ಅತ್ತಿಗೆ” ಹೊರಡಲು ಅವಸರಿಸಿದ.
“ಇದೇನೋ ರಾಜು, ಈಗ ಬಂದು ಈಗ ಹೋಗೋದೇ? ಬೆಳಗ್ಗೆ ಹೋದ್ರೆ ಆಯ್ತುಬಿಡು, ಈ ಕತ್ತಲಲ್ಲಿ ಡ್ರೈವ್ ಮಾಡ್ಕೊಂಡು ನೀನು ಊರು ತಲಪೋ ಹೊತ್ತಿಗೆ ಅರ್ಧ ರಾತ್ರಿ ಆಗಿರುತ್ತೆ” ಮನು ಆಕ್ಷೇಪಿಸಿದ.
“ಇಲ್ಲಾ ಅಣ್ಣ, ನಾನು ಬರೋ ಹಾಗೆ ಇರ್‍ಲಿಲ್ಲ. ವಿಷಯ ಗೊತ್ತಾದ ಮೇಲೆ ಮನಸ್ಸು ತಡೆಯದೆ ಬಂದುಬಿಟ್ಟೆ. ಅಮ್ಮ ಬೇರೆ ಹೋಗ್ಲೇಬೇಕು ಅಂತ ಹಟ ಮಾಡಿ ಅಳ್ತಾ ಕೂತಿದ್ದಳು. ಅದಕ್ಕೇ ಬಂದುಬಿಟ್ಟೆ. ನಾಳೆ ಡ್ಯೂಟಿಗೆ ಹೋಗಲೇಬೇಕು. ಡೆಲ್ಲಿಗೆ ಬೇರೆ ಹೋಗಬೇಕಲ್ಲ. ಇನ್ನೊಂದು ಸಲ ವಾಣಿ, ವಿಜೇತ ಎಲ್ರೂ ಬಂದಾಗ ಉಳ್ಕೋತೀನಿ. ನೀನು ಬೇಗ ಹುಷಾರಾಗು. ಬರ್‍ಲಾ, ಅತ್ತಿಗೆ ಬರ್‍ಲಾ. ರಿತುಗೆ ಕೆಲ್ಸ ಸಿಕ್ತಂತೆ. ಅವಳನ್ನೂ ನೋಡೋಕೆ ಆಗಲಿಲ್ಲ” ಹಾಗನ್ನುವುದಕ್ಕೂ ರಿತುವಿನ ಗಾಡಿ ಮನೆ ಮುಂದೆ ನಿಲ್ಲುವುದಕ್ಕೂ ಸರಿಹೋಯ್ತು.
“ಹಾಯ್ ಚಿಕ್ಕಪ್ಪ ಯಾವಾಗ ಬಂದ್ಯೋ? ಧೂಮಕೇತು ಬಂದಂತೆ ಬಂದುಬಿಟ್ಟಿದ್ದೀಯಾ” ಛೇಡಿಸುತ್ತಲೇ ರಿತು ಒಳಬಂದಳು.
“ಛೇ, ಏನು ಮಾತು ಅಂತ ಆಡ್ತಾ ಇದ್ದೀಯಾ ರಿತು” ತನುಜಾ ರೇಗಿದಳು.
“ಬಿಡಿ ಅತ್ತಿಗೆ, ಈ ಕೋಡಂಗಿ ನನ್ನ ಆದೇನು ಹೊಸದಾ? ಈ ಮಹಾತಾಯಿ ನೋಡ್ಕೋತಿರೋ ಆ ವಯಸ್ಸಾದವರ ಗತಿ ಏನು ಅಂತ ನಂಗೆ ಚಿಂತೆ ಆಗಿಬಿಟ್ಟಿದೆ” ದೊಡ್ಡ ಚಿಂತೆ ಹೊತ್ತವನಂತೆ ಮೊಗ ಮಾಡಿದ.
“ಏಯ್ ಚಿಕ್ಕಪ್ಪ, ಹಾಗೆಲ್ಲ ನನ್ನ ಅಂಡರ್ ಎಸ್ಟಿಮೇಟ್ ಮಾಡಬೇಡ, ಇನ್ನೂ ನಾನು ಕೆಲ್ಸಕ್ಕೆ ಸೇರಿ ನಾಲ್ಕು ದಿನ ಆಗಿಲ್ಲ. ಅವರೆಲ್ಲ ನನ್ನ ಎಷ್ಟೊಂದು ಹಚ್ಕೊಂಡಿದ್ದಾರೆ ಗೊತ್ತಾ? ಮತ್ತೊಂದು ವಿಷಯ ಅಂದ್ರೆ ನಿಂಗೊಸ್ಕರ ಒಂದು ಸೀಟು ರಿಸರ್ವೆಶನ್ ಮಾಡಿದ್ದೀನಿ ಕಣೋ.”
“ಥೂ ಕತ್ತೆ, ನೀನಿರೋ ಆ ಆಶ್ರಮಕ್ಕಂತೂ ನಾನು ಬರಲ್ಲ ಬಿಡು. ಊಟ, ತಿಂಡಿ ಹಾಕದೆ ಬೇಗ ಟಿಕೆಟ್ ಕೊಡ್ಸಿಬಿಡ್ತೀಯಾ ನಂಗೆ.”
“ಹೀಗೆ ಮಾತಾಡ್ತಾ ಇರ್ತಿಯೋ, ಕತ್ಲೆ ಬೇರೆ ಆಗ್ತಾ ಇದೆ. ಹೊರಡುವುದಾದರೆ ಹೊರಟು ಬೇಗ ಮನೆ ಸೇರ್‍ಕೊ” ಸುಂದರಮ್ಮ ಮಗನಿಗೆ ಹೇಳಿದರು.
“ಇವಳ ಜತೆ ಜಗಳ ಕಾಯ್ತಾ ಇದ್ ಹೊತ್ತೊಗೋದೆ ಗೊತ್ತಾಗುವುದಿಲ್ಲ. ನಾ ಬರ್‍ತೀನಿ.”
“ಯಾಕೋ ಚಿಕ್ಕಪ್ಪ, ಇವತ್ತು ಇದ್ದು ನಾಳೆ ಹೋಗಬಾರದೆ? ನಾನು ಬಂದ ಕೂಡಲೇ ಹೊರಟುಬಿಟ್ರೆ” ಕೆನ್ನೆ ಊದಿಸಿಕೊಂಡಳು ರಿತು.
“ಕೋಪ ಮಾಡ್ಕೋಬೇಡ ಕಣೆ ಮುದ್ದು. ಇನ್ನೊಂದು ಸಲ ಬಂದಾಗ ಎಂಟು ದಿನ ಇರ್‍ತಿನಿ. ನಾನು ಡೆಲ್ಲಿಗೆ ಹೋಗ್ತಾ ಇದ್ದೀನಿ. ನಿಂಗೇನು ಬೇಕು ಅಂತ ಲಿಸ್ಟ್ ಮಾಡಿ, ಫೋನ್ ಮಾಡು, ನಾ ಹೊರಟೆ.” ಎಂದು ಹೊರಬಂದು ಕೈಬೀಸುತ್ತ ಕಾರಿನತ್ತ ನಡೆದ.
ತನುಜಾಳಿಗೆ ಮದ್ವೆ ಆದಾಗ ರಾಜೀವ ಇನ್ನೂ ಓದ್ತಾ ಇದ್ದ. ಮನೆಗೆ ಮಗು ಬಂದ ಮೇಲಂತೂ ರಾಜೀವ್ ಸಣ್ಣ ಹುಡುಗನೇ ಆಗಿಬಿಟ್ಟಿದ್ದ. ರಿತುವನ್ನು ಸಾಕಷ್ಟು ಹಚ್ಚಿಕೊಂಡಿದ್ದ. ರಿತು ಕೂಡ ಎಲ್ಲದಕ್ಕೂ ಚಿಕ್ಕಪ್ಪನೇ ಬೇಕು ಅಂತ ಹಟ ಹಿಡಿಯುತ್ತಿದ್ದಳು. ಈಗ್ಲೂ ಅದೇ ಸಲುಗೆ, ಅವರಿಬ್ಬರೂ ಫ್ರೆಂಡ್ಸ್ ಥರಾನೇ ಈಗ್ಲೂ ಇದ್ದಾರೆ. ಆದ್ರೆ ಈ ಪ್ರೀತಿ, ವಿಶ್ವಾಸ, ಸಲುಗೆ ಬಗ್ಗೆ ವಾಣಿಗೆ ಯಾವಾಗ್ಲೂ ಅಸಮಾಧಾನ. ರಿತು ಮೇಲಿರೋ ಪ್ರೀತಿ ಹೊಟ್ಟೆಯಲ್ಲಿ ಹುಟ್ಟಿದ ಮಗನ ಮೇಲಿಲ್ಲ ಅನ್ನುವುದು ಅವಳ ಆಕ್ಷೇಪ. ಹಾಗಾಗಿಯೇ ತನುಜಾ ರಿತುವನ್ನು ಅವಾಯ್ಡ್ ಮಾಡುತ್ತಿದ್ದಳು. ರಾಜೀವ್‌ಗೆ ಕಷ್ಟವಾಗಬಾರದಲ್ಲ. ಹೆಂಡತಿಯನ್ನು, ಮಗನನ್ನು ಕಡೆಗಣಿಸಲು ಸಾಧ್ಯವೇ? ಆದರೆ ಅದೆಲ್ಲ ವಾಣಿಗೆ ಅರ್ಥವಾಗುತ್ತಿರಲಿಲ್ಲ. ರಾಜೀವ್ ಇಲ್ಲಿಗೆ ಬರುವುದನ್ನೇ ವಿರೋಧಿಸುತ್ತಿದ್ದಳು. ಅದು ಚೆನ್ನಾಗಿಯೇ ತಿಳಿದಿದ್ದ ಮನು, ತನುಜಾ, ರಾಜೀವ್ ಇಲ್ಲಿಗೆ ಬರುವುದನ್ನೇ ತಡೆಯುತ್ತಿದ್ದರು. ಈ ಕಾರಣಕ್ಕಾಗಿಯೇ ರಾಜೀವ್‌ಗೆ, ಮನು ಬಿದ್ದ ವಿಚಾರದ ಬಗ್ಗೆ ಫೋನ್ ಮಾಡಿರಲಿಲ್ಲ.
ಈಗೊಂದು ತಿಂಗಳ್ಹಿಂದೆ ಅಷ್ಟೇ ರಾಜೀವ್ ತಾಯಿಯನ್ನು ಕರೆದುಕೊಂಡು ಹೋಗಿದ್ದ. ತಾಯಿಯನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ ಕೂಡ ಅಲ್ಲವೇ? ಇಷ್ಟು ದಿನ ನೀವು ನೋಡಿಕೊಂಡ್ರಿ. ಈಗಲಾದ್ರೂ ನಾನು ನೋಡಿಕೊಳ್ತಿನಿ ಅಂತ ಹಟ ಹಿಡಿದಿದ್ದ. ವಾಣಿಯ ಬುದ್ದಿ ಗೊತ್ತಿದ್ದ ತನುಜಾ ಬೇಡವೆಂದೇ ತಡೆದಿದ್ದಳು. ಕೊನೆಗೆ ‘ಅವರೂ ಮಗ ತಾನೇ? ನೋಡಿಕೊಳ್ಳಲಿ’ ಅಂತ ಸುಮ್ಮನಾಗಿಬಿಟ್ಟಿದ್ದಳು. ಅಲ್ಲಿನ ವಿಷಯಗಳ್ಯಾವುವೂ ಇಲ್ಲಿಗೆ ತಿಳಿಯುವಂತಿರಲಿಲ್ಲ. ಹಾಗಾಗಿ ಅತ್ತೆಯನ್ನು ವಾಣಿ ಹೇಗೆ ನೋಡಿಕೊಂಡಳೋ ತಿಳಿದಿರಲೇ ಇಲ್ಲ. ಅತ್ತೆ ಆಗಾಗ್ಗೆ ಫೋನ್ ಮಾಡುತ್ತಿದ್ದರೂ ಅಲ್ಲಿನ ಯಾವ ವಿಷಯದ ಬಗ್ಗೆಯೂ ಹೇಳುತ್ತಿರಲಿಲ್ಲ. ತನುಜಾಳೂ ಕೇಳುತ್ತಿರಲಿಲ್ಲ. ಆದ್ರೆ ಅಷ್ಟೊಂದು ಸಂತೋಷವಾಗಿಯೇನೂ ಇಲ್ಲ ಎನ್ನುವುದಂತೂ ತನುಜಾಳ ಸೂಕ್ಷ್ಮ ಮನಸ್ಸಿಗೆ ಹೊಳೆದುಬಿಟ್ಟಿತ್ತು. ಈಗ ಲಗೇಜ್ ಸಮೇತ ಅತ್ತೆ ಬಂದಿರುವುದನ್ನು ಗಮನಿಸಿದರೆ, ಮತ್ತೆ ಅಲ್ಲಿಗೆ ಹೋಗುವ ಅಂದಾಜು ಇಲ್ಲ ಎಂದೇ ಭಾವಿಸಿದಳು.
ಒಳ್ಳೆಯದೇ ಆಯಿತು. ಇಲ್ಲಿರುವಷ್ಟು ನೆಮ್ಮದಿ, ಸ್ವಾತಂತ್ರ್ಯ, ಸುಖ ಬೇರೆ ಎಲ್ಲೂ ಅತ್ತೆಗೆ ಸಿಗದು ಎಂದು ಅತ್ತೆಗೂ ಈಗ ಮನದಟ್ಟಾಗಿರಬೇಕು. ಒಟ್ಟಿನಲ್ಲಿ ಅತ್ತೆ ಎಲ್ಲೋ ನೆಮ್ಮದಿಯಾಗಿದ್ದು ಬಿಡಲಿ, ತಾವು ಇನ್ನೇನು ಕೊಡೋಕೆ ಸಾಧ್ಯ? ಬದುಕಿನ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು ಎಂದುಕೊಂಡಳು ತನುಜಾ.
“ಇನ್ನೇನಮ್ಮ ಊರಿನ ಸಮಾಚಾರ ? ವಾಣಿ ಹೇಗೆ ಈವಾಗ” ಕಾಫಿ ಬೆರೆಸುತ್ತ ಅತ್ತೆಯನ್ನು ಕೇಳಿದಳು.
“ನಿಂಗೆ ಗೊತ್ತೇ ಇದೆಯಲ್ಲ ಅವಳ ಸ್ವಭಾವ. ರಾಜೀವ್ ನನ್ನ ಕರ್ಕೊಂಡು ಹೋಗಿದ್ದು, ಅವಳಿಗೆ ಸ್ವಲ್ಪಾನೂ ಇಷ್ಟವಾಗಿರ್ಲಿಲ್ಲ. ನನ್ನನ್ನ ಸರಿಯಾಗಿ ಮಾತಾಡಿಸುತ್ತಲೇ ಇರಲಿಲ್ಲ. ನನ್ನ ಬಗ್ಗೆ ರಾಜೀವನೇ ಎಲ್ಲಾ ಕೇರ್ ತಗೋಬೇಕಿತ್ತು. ತುಂಬಾ ಕಷ್ಟವಾಗ್ತಾ ಇತ್ತು ಅವನಿಗೆ. ಆದರೂ ಹಟ ಹಿಡಿದವನಂತೆ ನನ್ನ ಅಲ್ಲೇ ಇರಿಸ್ಕೋಬೇಕು ಅಂತಿದ್ದ. ರಾಜೀವ್ ಮನೆಯಲ್ಲಿ ಇರೋ ತನಕ ಪರವಾಗಿರಲಿಲ್ಲ. ಆಮೇಲಂತೂ ಅಲ್ಲಿ ಇರೋಕೆ ನನ್ನ ಕೈಲಿ ಆಗ್ತಾ ಇರ್ಲಿಲ್ಲ. ಒಂದು ಮಾತೂ ಆಡಿಸ್ತಾ ಇರ್ಲಿಲ್ಲ ಕಣೆ ಅವಳು. ನಿನ್ನ ಹಾಗಲ್ಲ ಅವಳು. ಸೊಸೆ ಅಂತ ತೋರಿಸಿಬಿಟ್ಟಳು. ಇಲ್ಲಿಗೆ ಬಂದಾಗಲೆಲ್ಲ ಅರಗಿಣಿಯಂತೆ ಅಮ್ಮ ಅಮ್ಮ ಅದು ಮಾಡಿಕೊಡಿ, ಇದು ಮಾಡಿಕೊಡಿ ಅಂತ ನಾಟಕ ಆಡಿ, ಪ್ರತೀ ಸಾರಿ ಊರಿಗೆ ಹೋಗುವಾಗ್ಲೂ ರಾಶಿರಾಶಿ ಹಪ್ಪಳ, ಮೆಣಸಿನಪುಡಿ, ಹುಳಿಪುಡಿ, ಉಪ್ಪಿನಕಾಯಿ, ಪುಳಿಯೋಗರೆಗೊಜ್ಜು ಅಂತ ಹೊತ್ಕೊಂಡು ಹೋಗ್ತಾ ಇದ್ಲಲ್ಲ. ನಾನು ಅಲ್ಲೇ ಪರ್ಮನೆಂಟಾಗಿ ಇದ್ದುಬಿಡ್ತೀನಿ ಅಂತ ಅದೆಷ್ಟು ಅಸಡ್ಡೆ ಮಾಡ್ತಾ ಇದ್ದಳು ಗೊತ್ತಾ ತನುಜಾ? ನಂಗಂತೂ ಎಷ್ಟೋ ಸಲ ಇಲ್ಲಿಗೆ ಬಂದುಬಿಡಬೇಕು ಅಂತ ಮಾಡಿದ್ದೆ. ಆದ್ರೆ ರಾಜೀವಂಗೆ ಬೇಸರ ಆಗುತ್ತಲ್ಲ ಅಂತ ಸಹಿಸ್ಕೊಂಡು ಇರ್ತಿದ್ದೆ ಕಣೆ. ಮನು ವಿಷಯ ಗೊತ್ತಾದ ಕೂಡಲೇ ಒಂದು ಘಳಿಗೆ ಕೂಡ ಇರೋಕಾಗ್ಲಿಲ್ಲ. ಎಷ್ಟು ಹೊತ್ತಿಗೆ ಬಂದು ನಿಮ್ಮನ್ನೆಲ್ಲ ನೋಡ್ತೀನೋ ಅನ್ನಿಸಿಬಿಟ್ಟಿತ್ತು. ಇದೇ ಕಣೆ ನನ್ ಮನೆ. ಮತ್ಯಾವ ಮಗನ ಮನೆಗೆ ಹೋದರೂ ಅದು ನನ್ನ ಮನೆ ಅಂತ ಅನ್ನಿಸಿಕೊಳ್ಳೋದೇ ಇಲ್ಲ. ನೆಂಟರ ಮನೆಗೆ ಹೋದ ಹಾಗೆ ಇರುತ್ತೆ.”
ಕಾಫಿ ಕುಡಿಯುತ್ತಾ ಎಲ್ಲವನ್ನೂ ವಿಶದವಾಗಿ ತಿಳಿಸಿದರು ಸುಂದರಮ್ಮ.
“ಹೋಗ್ಲಿ ಬಿಡೀಮ್ಮ, ರಾಜೀವಂಗೂ ನಿಮ್ಮನ್ನ ಇಟ್ಕೊಂಡ ಸಂತೋಷ ಸಿಗ್ತಲ್ಲ. ಇನ್ನು ಮತ್ತೆ ಅಲ್ಲಿಗೆ ಹೋಗದೆ ಇದ್ರೆ ಆಯ್ತು. ರಿತು ಆಂತೂ ಪ್ರತಿದಿನ ನಿಮ್ಮನ್ನ ಮಿಸ್ ಮಾಡ್ಕೋತಿದ್ದಳು. ಯಾಕೆ ಅಜ್ಜಿನ ಚಿಕ್ಕಪ್ಪನ ಮನೆಗೆ ಕಳುಹಿಸಿದೆ ಅಂತ ನನ್ನ ಬಯ್ತಾ ಇದ್ದಳು. ಈಗ ಬಂದ್ರಲ್ಲ. ಅವಳಿಗೂ ಖುಷಿಯಾಗಿದೆ. ರಾಜೀವನ ಮುಖ ನೋಡ್ಕೊಂಡು ಸುಮ್ಮನಾಗಬೇಕಾಗಿದೆ. ಇನ್ನು ರಾಜೀವನೂ ನಿಮ್ಮನ್ನ ಕರೆಯೋ ಧೈರ್ಯ ಮಾಡಲಾರ. ರಾತ್ರಿಗೆ ನಿಮಗೆ ಏನು ಮಾಡಲಿ? ಅವಲಕ್ಕಿನಾ ಮೊಸರಲ್ಲಿ ಕಲಸಿಕೊಡಲಾ?”
ಸೊಸೆಗೆ ತನ್ನ ಬಗ್ಗೆ ಇರುವ ಕಾಳಜಿಯ ಬಗ್ಗೆ ಸುಂದರಮ್ಮನಿಗೆ ಹೃದಯ ತುಂಬಿ ಬಂತು. ರಾತ್ರಿ ಊಟ ಮಾಡಿದ್ರೆ ಅರಗೋಲ್ಲ ಅಂತ ರಾತ್ರಿ ಊಟ ಬಿಟ್ಟು ತುಂಬಾ ವರ್ಷಗಳಾಗಿದ್ದವು. ರಾಜೀವಂಗೂ ಇದು ಅರ್ಥವಾಗದೆ ರಾತ್ರಿ ಊಟ ಮಾಡು ಅಂತ ಬಲವಂತವಾಗಿ ಊಟ ಮಾಡಿಸಿ, ರಾತ್ರಿ ಎಲ್ಲಾ ನನ್ನ ನರಳೋ ಹಾಗೆ ಮಾಡ್ತಾ ಇದ್ದದ್ದು
ನೆನಪಾಗಿ, ಪಾಪ ಅವನು ತಾನೇ ಏನು ಮಾಡುತ್ತಾನೆ? ಹೆಂಡತಿ ಸರಿಯಾಗಿ, ನೋಡ್ಕೊತಿಲ್ಲ ಅಂತ ತಾನಿದ್ದ ವೇಳೆಯಲ್ಲಿ ಅತಿಯಾಗಿ ಉಪಚಾರ ಮಾಡ್ತಾ ಇದ್ದ. ಅವನಿಗೆ ನೋವಾಗದೆ ಇರಲಿ ಅಂತ ಕಷ್ಟಪಟ್ಟು ತಿಂದು ಒದ್ದಾಡಿದ್ದಾಗಿತ್ತು. ಸದ್ಯ ಈಗ ಆ ಅವಸ್ಥೆ ಇಲ್ಲ. ತನುಜಾಳಿಗೆ ತನ್ನ ಬಗ್ಗೆ ಎಲ್ಲಾ ಗೊತ್ತಿದೆ. ಅದಕ್ಕೆ ತಾನು ಇಲ್ಲಿರುವವರೆಗೆ ಅನಾರೋಗ್ಯ ಎಂದೇ ಮಲಗಿದ್ದಿಲ್ಲ. ಅಲ್ಲಿ ಹೋಗಿ ಒಂದೇ ವಾರಕ್ಕೆ ಇಲ್ಲದ ಕಾಯಿಲೆಗಳೇ ಮುತ್ತಿಕೊಂಡಿವೆ. ಈಗ ನಿಧಾನಕ್ಕೆ ಸುಧಾರಿಸ್ಕೋಬೇಕು.
“ಏನೂ ಬೇಡ ಕಣೆ ತನುಜಾ. ಇನ್ನು ಸ್ವಲ್ಪ ದಿನ ರಾತ್ರಿ ಏನೂ ತಿನ್ನೋದೇ ಬೇಡ ಅಂದ್ಕೊಂಡಿದ್ದೀನಿ. ಇತ್ತೀಚಿಗಂತೂ ಏನೂ ತಿನ್ನೋಕೆ ಆಗಲ್ಲ, ತೂಕ ಬೇರೆ ಜಾಸ್ತಿ ಆಗಿಬಿಟ್ಟಿದೆ. ನಾಳೆಯಿಂದಲೇ ನಾನೂ ರಿತು ಜತೆ ಬೆಳಗ್ಗೆ ವಾಕ್ ಹೋಗ್ತೀನಿ.”
“ಅಯೊ ಅತ್ತೆ, ಅವಳ ಜತೆ ನೀವು ಓಡೋಕೆ ಆಗುತ್ತಾ? ನಿಮ್ಮ ಮಗ ಬೇರೆ ಕಾಲು ಮುರ್ಕೊಂಡು ಕೂತಿದ್ದಾರೆ. ನೀವೂ ಮುರ್ಕೊಂಡು ಮೂಲೆ ಹಿಡಿದುಬಿಡಿ” ಆತಂಕಪಟ್ಟಳು.
“ನಾನೆಲ್ಲಿ ಅವಳ ಜತೆ ಓಡ್ತೀನಿ ಅಂದೆ ಅವಳ ಜತೆ ಹೊರಡ್ತೀನಿ ಅಷ್ಟೆ. ಎಷ್ಟು ದೂರ ಆಗುತ್ತೋ ಅಷ್ಟು ದೂರ ನಿಧಾನವಾಗಿ ನಡ್ಕೊಂಡು ಹೋಗಿ ಬರ್ತಿನಿ. ನೀನೇನೂ ಆತಂಕಪಡಬೇಡ” ಎಂದರು ಸುಂದರಮ್ಮ.
“ಅತ್ತೆ-ಸೊಸೆ ಸೇರ್ಕೊಂಡು ಅದೆಷ್ಟು ವರ್ಷದ ಮಾತು ಆಡ್ತಾ ಇದ್ದೀರಿ? ಅಜ್ಜಿ ಏನು ಫಾರಿನ್‌ಗಾಗಿ ಹೋಗಿದ್ರು? ಅಜ್ಜಿ ಇನ್ನೆಲ್ಲೂ ಹೋಗಲ್ಲ. ನಿಧಾನವಾಗಿ ಮಾತಾಡ್ಕೋಳ್ತಿರಂತೆ. ಈಗ ನಂಗೆ, ಅಪ್ಪಂಗೆ ಬಿಸಿ ಬಿಸಿ ಪಕೋಡ ಬೇಕು. ಹೊರಗಡೆನೂ ಹೋಗೋ ಹಾಗಿಲ್ಲ. ಮಾಡು ಅಮ್ಮ” ಮುದ್ದುಗರೆದಳು.
“ಸರಿ ಸರಿ, ಮಾಡ್ತೀನಿ. ಈರುಳ್ಳಿ ಹೆಚ್ಚಿ ಕೊಡು.”
“ಆ ಮಗುಗೇಕೆ ಹೇಳ್ತಿಯಾ? ಕೊಡು ನಾನೇ ಹೆಚ್ತೀನಿ. ಮನೆ ಕೆಲ್ಸ ಮಾಡದೆ ಮೈಯೆಲ್ಲ ಜಡ್ಡು ಹಿಡಿದು ಹೋಗಿದೆ. ಅಲ್ಲಂತೂ ನಾನು ಅಡುಗೆ ಮನೆಗೆ ಹೋಗ್ತಾ ಇರ್ಲಿಲ್ಲ. ನಾನು ಹೋದ್ರೂ ವಾಣಿಗೆ ಸರಿಹೋಗ್ತಾ ಇರ್‍ಲಿಲ್ಲ. ಮಾತ್ಯಾಕೆ ರಾಜೀವನ ಮುಂದೆ ರಾಮಾಯಣ ಅಂತ ಹೊರಗೆ ಇದ್ದುಬಿಡುತ್ತಿದೆ” ಎನ್ನುತ್ತ ಈರುಳ್ಳಿ ತೆಗೆದುಕೊಂಡು ಹೆಚ್ಚತೊಡಗಿದರು ಸುಂದರಮ್ಮ.
“ಮೈ ಸ್ವೀಟ್ ಅಜ್ಜಿ, ನೀನು ಊರಿಗೆ ಹೋದ ಮೇಲೆ ಇಡೀ ಅಡುಗೆ ಮನೆಗೆ ಚಾರ್ಜ್ ನಂದೇ ಆಗಿತ್ತಜ್ಜಿ. ಈ ಆಮ್ಮ ಅಂತೂ ತುಂಬಾ ಗೋಳಾಡಿಸಿಬಿಟ್ಟಳು. ಅದು ಮಾಡು, ಇದು ಮಾಡು ಅಂತ ಹಿಂಸೆ ಕೊಡ್ತಾ ಇದ್ದಳು. ಅಬ್ಬಾ! ಈಗ ಪಾರಾದ ಹಾಗಾಯ್ತು” ತುಂಬಾ ಕಷ್ಟಪಟ್ಟವಳಂತೆ ನುಡಿದ ಮಗಳನ್ನು ಹೊಡೆಯುವಂತೆ ಕೈ ಎತ್ತಿ.
“ಹೋಗೆ, ಅಜ್ಜಿ ಮುಂದೆ ದೂರ್ತಾ ಇದ್ದೀಯಾ? ಏನೋ ಮಾಡಬಾರದ್ದು ಮಾಡ್ದೆ ಅಂತ. ಕೆಲ್ಸ ಕಲಿತುಕೊಂಡರೆ ನಿಂಗೆ ಒಳ್ಳೇದು ಅಲ್ವಾ? ನಾಳೆ ನೀನೇ ಎಲ್ಲಾ ನಿಭಾಯಿಸುತ್ತೀಯಾ.”
“ಯಾಕಮ್ಮ? ಈಗ ನಂಗೆ ಏನು ಮಾಡೋಕೆ ಬರಲ್ಲ ಹೇಳು. ಎಲ್ಲಾ ಕಲ್ತ್‍ಕೊಂಡಿದ್ದೀನಿ. ಆದರೆ ಮಾಡೋಕೆ ಬೇಜಾರು.”
“ಬೇಡ ಬಿಡು ಪುಟ್ಟಾ, ನಾನಿದ್ದೀನಲ್ಲ. ನಾನು ಎಲ್ಲಾ ಮಾಡ್ಕೋತೀನಿ. ಕೆಲ್ಸಕ್ಕೆ ಬೇರೆ ಹೋಗ್ತಾ ಇದ್ದೀಯಾ. ಅಲ್ಲೆ ಸಾಕಾಗಿರುತ್ತೆ. ಇನ್ನು ಮನೆಯಲ್ಲಿ ಬೇರೆ ಕೆಲ್ಸ ಮಾಡಿ ಸೊರಗಬೇಕಾ? ಇನ್ಮೇಲೆ ಅಡುಗೆ ಮನೆಗೆ ಬರಬೇಡ ಚಿನ್ನು” ಮೊಮ್ಮಗಳನ್ನು ಅಪ್ಪಿಕೊಂಡರು.
“ಸರಿ ಸರಿ, ಹೀಗೆ ಮುದ್ದು ಮಾಡಿ ಮಾಡಿ ಮೇಲೆ ಕೂರಿಸಿಬಿಡಿ. ಆಮೇಲೆ ಇಳಿಸೋಕೆ ನಂಗೆ ಎಷ್ಟು ಕಷ್ಟ ಗೊತ್ತಾ? ನಾಳೆ ಮದ್ವೆ ಆದ್ರೆ ಇಡೀ ಸಂಸಾರಾನಾ ನಿಭಾಯಿಸಿಕೊಂಡು ಹೋಗಬೇಡ್ವಾ?” ಪಕೋಡ ಕರಿಯುತ್ತಲೇ ಅತ್ತೆಯನ್ನು ಆಕ್ಷೇಪಿಸಿದಳು.
“ಆಲ್ವೆ ತನುಜಾ, ನೀನು ಮದ್ವೆ ಆಗಿ ಬಂದಾಗ ನಿಂಗೇನು ಬರ್ತಾ ಇತ್ತು? ಮನುವೇ ಕಷ್ಟಪಡ್ತಾ ಇದ್ದದ್ದು ಮರೆತುಹೋಯ್ತಾ? ಆಮೇಲೆ ತಾನೇ ನೀನು ಎಲ್ಲಾ ಕಲಿತದ್ದು. ರಿತುನ ನೋಡೋಳ್ಳೋದಕ್ಕೆ ನಾನು ಬಂದ ಮೇಲೆ, ನಿನ್ನ ಕಷ್ಟ ನೋಡಲಾರದೆ ಅಡುಗೆ ಮನೆ ಚಾರ್ಜು ನಾನೇ ಅಲ್ವಾ ವಹಿಸ್ಕೊಂಡದ್ದು” ಹಳೆಯದನ್ನು ನೆನಪಿಸಿಕೊಂಡರು.
“ನಿಮ್ಮಂಥ ಅತ್ತೆ ಸಿಕ್ಕಿದ್ರೆ ಪರವಾಗಿಲ್ಲ. ಗೋಳು ಹುಯ್ಕೊಳ್ಳೋ ಅತ್ತೆ ಸಿಕ್ಕಿದ್ರೆ ಏನತ್ತೆ ಮಾಡೋದು?”
“ಆಗ ರಿತುನಾ ನಮ್ಮ ಮನೆಯಲ್ಲಿಯೇ ಇಟ್ಕೊಂಡುಬಿಡೋದು ಅಷ್ಟೆ.”
“ಗುಡ್ ಅಜ್ಜಿ ಸರಿಯಾಗಿ ಹೇಳ್ದೆ” ಅಮ್ಮನಿಗೆ ಕಣ್ಣು ಹೊಡೆಯುತ್ತ ರಿತು ಅಜ್ಜಿಯನ್ನು ಬೆಂಬಲಿಸಿದಳು.
“ಸರಿಯಾಗಿದೆ ಇಬ್ಬರಿಗೂ, ಮೊದ್ಲು ನಿಮ್ಮಪ್ಪನಿಗೆ ಪಕೋಡ ಕೊಟ್ಟು ಬಾ” ತಟ್ಟೆಗೆ ಪಕೋಡ ಹಾಕಿಕೊಟ್ಟಳು.
*****