ಪ್ರತಿಯೊಂದು ಯುದ್ಧಮುಗಿದ ಮೇಲೂ
ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು.
ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ
ಸರಿಯಾಗುವುದಿಲ್ಲ ತಾನೇ?
ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ
ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ
ಹೆಣ ಹೂತ್ತೆಗಾಡಿಗಳು
ಸಾಗುವುದಕ್ಕೆ ದಾರಿ ಮಾಡಬೇಕು.
ಯಾರಾದರೂ ಸರಿ
ಗಾಜಿನ ಚೂರು, ರಕ್ತದ ಬಟ್ಟೆ ರಾಶಿ,
ಸೋಫಾ ಸ್ಪ್ರಿಂಗು, ಕೆಸರು, ಬೂದಿ, ಇಟ್ಟಿಗೆ,
ಸಿಮೆಂಟು ಕಬ್ಬಿಣದ ಅವಶೇಷಗಳ ನಡುವೆ ಕಷ್ಪಪಡಲೇಬೇಕು
ಯಾರಾದರೂ ಬಂದು
ಗೋಡೆಗೆ ಆಸರೆಯಾಗಿ ಕಂಬವನ್ನು ಎತ್ತಿನಿಲ್ಲಿಸಬೇಕು,
ಕಿಟಕಿಗೆ ಗಾಜು ಹಾಕಬೇಕು, ಬಾಗಿಲುವಾಡ ಕೂಡಿಸಬೇಕು.
ಸಂಗೀತದ ಸದ್ದಿಲ್ಲ, ಫೋಟೋಗಳ ಸುಳಿವಿಲ್ಲ
ವರ್‍ಷಗಟ್ಟಲೆ ಸುಮೃನೆ ದುಡಿಯಬೇಕು.
ಕ್ಯಾಮೆರಾಗಳೆಲ್ಲ ಬೇರೆ ಹೊಸ ಯುದ್ಧಗಳ
ಫೋಟೋ ತೆಗೆಯಲು ಹೋಗಿವೆ.
ಸೇತುವೆಗಳು ಹೊಸವಾಗಬೇಕು,
ಅಂಗಿ ತೋಳು ಮೇಲಕ್ಕೆ ಮಡಿಸಿ ಮಡಿಸಿ
ಚಿಂದಿ ಚಿಂದಿಯಾಗಬೇಕು.
ಪೊರಕೆ ಹಿಡಿದ ಯಾರಾದರೂ
ಇದೆಲ್ಲ ಹೇಗಾಯಿತೆಂದು ನೆನಪು ಮಾಡಿಕೊಳ್ಳುತ್ತಾರೆ.
ಸುಮ್ಮನೆ ನಿಂತ ಇನ್ನು ಯಾರೋ
ಗಾಯವಿರದ ತಮ್ಮ ತಲೆ ತೂಗುತ್ತಾ ಕೇಳುತ್ತಾರೆ.
ಅಲ್ಲೆ ಸಮೀಪದಲ್ಲಿ ಬಹಳ ಜನ
ಈ ಹಳೆಯ ಯುದ್ಧದ ಕತೆಯೆಲ್ಲ
ಬರೀ ಬೋರು ಅಂದುಕೊಳ್ಳುತ್ತ ಇರಲೇಬೇಕು.
ಬೆಳೆದ ಮುಳ್ಳು ಪೊದೆಯ ಅಡಿಯಲ್ಲಿ
ಸಿಕ್ಕುಬಿದ್ದಿರುವ ತುಕ್ಕುಹಿಡಿದ
ವಾಗ್ವಾದವನ್ನು ಕಿತ್ತು ಆಗಾಗ ತಿಪ್ಪೆಗೆ ಎಸೆಯುವವರು
ಯಾರಾದರೂ ಇನ್ನೂ ಇರಲೇಬೇಕು.
ಇದೆಲ್ಲ ಆದದ್ದು ಏನು ಯಾಕೆ ಎಂದು
ತಿಳಿದಿರುವವರು
ಅಷ್ಟು ತಿಳಿಯದವರಿಗೆ ಅವಕಾಶ ಮಾಡಿಕೊಟ್ಟು
ಜಾಗಖಾಲಿ ಮಾಡಲೇಬೇಕು.
ಅಷ್ಟು ತಿಳಿಯದವರು
ಏನೂ ತಿಳಿಯದವರಿಗೆ
ಅವರು ಏನೇನೋ ತಿಳಿಯದು ಎಂದು ಕೂಡಾ ತಿಳಿಯದವರಿಗೆ
ಅವಕಾಶ ಮಾಡಿಕೊಡುತ್ತಾರೆ.
ಆಮೇಲೆ
ಕಾರ್‍ಯಕ್ರಮಗಳನ್ನೆಲ್ಲ ಮುಚ್ಚಿ ಬೆಳೆದ
ಹಸಿರು ಹುಲ್ಲಿನ ಮೇಲೆ,
ಹಲ್ಲಿನಲ್ಲಿ ಹುಲ್ಲಿನೆಳೆ ಕಚ್ಚುತ್ತಾ
ಮೇಲೆ ತೇಲುವ ಮೋಡವನ್ನು
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ
ಅಂಗಾತ ಮಲಗಿದವನು ಇದ್ದೇ ಇರಬೇಕು.
*****
ಮೂಲ: ವಿಸ್ಲಾವಾ ಝ್ಯಿಂಬ್ರೊಸ್ಕ / Wisława Szymborska