೧
ನನ್ನ ಅಜ್ಜಿಯದು
ತುಂಬು ಸಂಸಾರ
ನನ್ನ ಅವ್ವನಿಗೆ
ನಾಲ್ಕು ಮಂದಿ ಮಕ್ಕಳು
ನನಗೆ-
ಒಬ್ಬಳೇ ಹೆಣ್ಣು ಮಗಳು
ಎಲ್ಲ ನೆನಪಾಗುವುದು-
ನಾನು, ನನ್ನ ತಂಗಿ
ತಮ್ಮಂದಿರು ಹಂಚಿಕೊಂಡೆವು
ಅನ್ನದಂತೆಯೇ ಪ್ರೀತಿಯನ್ನು
ಸಾಧಿಸಿದೆವು ದ್ವೇಷವನ್ನು
ಬಿಟ್ಟುಕೊಟ್ಟವು ಹಠವನ್ನು
ಒಟ್ಟಾಗಿಯೆ ಕಂಡೆವು ಕನಸುಗಳನ್ನು
ಕಿತ್ತಾಡಿದೆವು, ರಾಜಿಯಾದೆವು
ಕರುಬಿದೆವು, ಮರುಗಿದೆವು
ಪರಸ್ಪರ ಜೊತೆಯಾಗಿಯೇ
ಇಟ್ಟೆವು ಹೆಜ್ಜೆಗಳನ್ನು
ಅವ್ವ ನೋಯುವಳೆಂದು
ಬಲಿಕೊಟ್ಟೆವು
ಸಣ್ಣ ಪುಟ್ಟ ಆಕಾಂಕ್ಷೆಗಳನ್ನು
ಅಪ್ಪ ಬಸವಳಿಯದಿರಲಿ
ಎಂದು ಹೆಗಲು ಕೊಟ್ಟೆವು ನೊಗಕ್ಕೆ
ಬಯಸದ ಪ್ರತಿಫಲವನ್ನು
ಕೊಟ್ಟು-ಕೊಂಡೆವು ಪ್ರೀತಿಯ
ಈಜಿ ಪ್ರವಾಹದ ವಿರುದ್ಧ
ಸೇರಿದೆವು ದಡ ಒಟ್ಟಾಗಿ
೨
ಈಗ:
ನನ್ನ ಮಗಳು ಇಡೀ
ಪರಿವಾರದ ಕಣ್ಮಣಿ
ಅಣ್ಣ, ತಂಗಿ, ತಮ್ಮ
ಸಂಬಂಧಗಳ ಒಳಸುಳಿ ಅರಿಯಳು
ರಾಜಿಯಾಗುವುದು, ಹಂಚಿಕೊಳ್ಳುವುದು
ಅವಳಿಗೆ ನಿಘಂಟಿನ ಪದಗಳು
ಅಚ್ಚೆಯ ಕುಂಡದಲ್ಲಿ
ಅವ್ವ ಅಪ್ಪನ ನೆರಳಲ್ಲೇ
ಬೆಳೆದ ಹೂಬಳ್ಳಿ
ಪ್ರಖರ ಸೂರ್‍ಯನನು ಎದುರಿಸಲಾರಳು
ಅಂಜುಕುಳಿ-
ಗಾಳಿಯಾಟಕೂ ಬೆದರುವಳು
ವಿಚಿತ್ರವೆನಿಸುವುದು
ಎಷ್ಟು ಇತ್ತರೂ
ಏನೇ ಇತ್ತರೂ
ಮತ್ತಷ್ಟು ಬಯಸುವಳು
ಭಿಕ್ಷುಕಿಯಂತೆ….
ಇಡೀ ಲೋಕವ
ತಂದು ಸುರಿದರೂ ತುಂಬದವಳ
ಭಿಕ್ಷಾಪಾತ್ರೆ
ಹಸಿವು ಹಸಿವೆಂದು ಚೀರುವಳು
೩
ನನಗೊ ಒಳಗೊಳಗೆ ವೇದನೆ
ಮಮತೆ ಮುಳುವಾಯಿತೆ?
ಅನುಮಾನ-
ನಿದ್ರೆಯಿಲ್ಲದ ರಾತ್ರಿಗಳಲ್ಲಿ
ಕೆಟ್ಟ ಕನಸುಗಳು…
ಶುಭ್ರವಾದ ಆಕಾಶ
ಹಕ್ಕಿಯಾಗಿದ್ದಾಳೆ ನನ್ನ ಮಗಳು
ಅವಳಿಗೆ ರೆಕ್ಕೆಗಳೇ ಇಲ್ಲ!
ನೀಲಿ ಸಮುದ್ರ
ದೋಣಿಯಲ್ಲಿದ್ದಾಳೆ ನನ್ನ ಮಗಳು
ಹುಟ್ಟೇ ಇಲ್ಲ!
ನನೇ ನೆಟ್ಟು ನೀರುಣಿಸಿ
ಬೆಳೆಸಿದ ಸಸಿ
ಭರಭರ ಬೆಳೆದು ಸೊಕ್ಕಿ ನಿಂತಿದೆ
ಮರವಾಗಿ-
ಸ್ವಾರ್ಥವೇ ಅದರ ಫಲವಾಗಿ…
ಎದೆ ಹಾಲು
ಹಾಲಾಹಲವಾಗುವುದೆಂದರೆ…
*****