ಕಾಲೇಜಿನ ಮೊದಲ ದಿನ ಯಾರೇ ಹೊಸಬರು ಬಂದರೂ ಕಾಲೇಜ್ ಹೀರೊ ಎಂದೇ ಎಲ್ಲರೂ ಅಂದರೆ ಸಹಪಾಠಿಗಳಷ್ಟೇ ಅಲ್ಲ ಲೆಕ್ಚರರಳು ಕೂಡ ಒಪ್ಪಿಕೊಂಡವರಂತೆ ಕಾಣುತ್ತದೆ. ಪ್ರಾಯಶಃ ಸಂಗ್ರಾಮಸಿಂಹ ಅವನ ಪಟಾಲಂಗಳ ಗುಂಡಾಗಿರಿಯ ಭಯವೋ ಕಾಲೇಜಿನ ಫೌಂಡರ್ ಅಲ್ಲದೆ ಮಾಜಿಮಂತ್ರಿಗಳಾದ ಆತನ ತಂದೆ ದುರ್ಗಸಿಂಹನ ಮೇಲಿನ ಗೌರವವೋ ಅಭಿಮಾನವೋ ಅಧಿಕಭಯವೋ ಅಥವಾ ಇವೆಲ್ಲವೂ ಪ್ರಭಾವ ಬೀರಿರಲೂಬಹುದು. ಕಾಲೇಜ್ ಹೀರೋ ಅಂದುಕೊಳ್ಳಲಿ ಬಿಡಿ ಅದು ವಯೋಸಹಜ ಹುಡುಗಾಟ ಅಂದುಕೊಳ್ಳುವವರೂ ಅವನ ಉದ್ಧಟತನವನ್ನು ತಾಳಲಾರದೆ ತಾಳ್ಮೆಗೆಟ್ಟವರೇ ಹೆಚ್ಚು. ಕಾರಣ ಕಾಲೇಜಿಗೆ ಹೊಸದಾಗಿ ಎಂಟ್ರಿ ಕೊಡುವ ಹುಡುಗ, ಹುಡುಗಿಯರಾಗಲಿ ಅವನ ಕೈಗೆ ಗುಲಾಬಿ ಹೂಕೊಟ್ಟು ‘ವಿಶ್’ ಮಾಡಿಯೇ ಅಡ್ಮಿಶನ್ ಪಡೆಯಬೇಕು. ಇದೆಲ್ಲಾ ಕೆಲವರಿಗೆ ಹಿಂಸೆಯಾದರೆ ಹಲವರಿಗೆ ಮೋಜು ಮಸ್ತಿ. ಹೂ ಕೊಡಲು ನಿರಾಕರಿಸಿದವರಿಗೆ ಅವನ ಚೇಲಾ ಪಡೆ ನಾಲ್ಕು ತದಕಿಯಾದರೂ ತಮ್ಮ ಗುರುವಿಗೆ ಶರಣಾಗುವಂತೆ ಮಾಡುತ್ತದೆ. ರ್‍ಯಾಗಿಂಗ್ನ ಇನ್ನೊಂದು ಮಾದರಿ ಇದಾದರೂ ಯಾರೂ ಕಂಪ್ಲೇಂಟ್ ಕೊಡುವ ಧೈರ್ಯ ಮಾಡಿಲ್ಲ. ಇನ್ನು ಲೆಕ್ಚರರ್ ಪ್ರಿನ್ಸಿಪಾಲರಿಗಂತೂ ಇದೆಲ್ಲಾ ಗೊತ್ತೇ ಇಲ್ಲವೆಂಬ ಸೋಗು. ಗುಲಾಬಿ ಹೂ ತರುವ ತೊಂದರೆಯೇನಿಲ್ಲ, ಸಂಗ್ರಾಮ ಸಿಂಹನ ಚೇಲಾಗಳು ಕಾಲೇಜ್ ಆವರಣದಲ್ಲೇ ಬೇಜಾನ್ ಗುಲಾಬಿ ಗಿಡಗಳನ್ನೇ ಬೆಳಸಿದ್ದಾರೆ. ಹೂ ಅರಳಿ ನಳನಳಿಸುವ ಗುಲಾಬಿ ಗಿಡಗಳು ಕಾಲೇಜಿಗೆ ಸೊಬಗು ಹೆಚ್ಚಿಸಿದರೂ ಹಲವು ಅಸಹಾಯಕರ ಪಾಲಿಗದೂ ಕೊರಗೂ ತಂದಿದೆ. ರಂಗ ಸೈಕಲಲ್ಲಿ ಬಂದಿಳಿದಾಗ ಸಂಗ್ರಾಮನ ಗುಂಪು ಅವನ ಡಕೋಟ ಸೈಕಲ್ಲು ನೋಡಿ ಕಿಸಕ್ಕನೆ ನಗುವರು. ಸೈಕಲ್ ಸ್ಟಾಂಡ್‌ನಲ್ಲಿ ಸೈಕಲ್ ನಿಲ್ಲಿಸಿ ಕ್ಲಾಸ್‌ರೂಮಿನತ್ತ ಹೆಜ್ಜೆ ಹಾಕುವ ರಂಗನನ್ನು ತಡೆದ ಚೇಲಾಗಳು ಸಂಗ್ರಾಮಸಿಂಹನ ಕಂಡೀಷನ್ ಹೇಳುವರು. ‘ನಮ್ಮ ಗುರು ಕೋಟಿಗೆ ಗುಲಾಬಿ ಸಿಕ್ಕಿಸಿ ‘ವಿಶ್’ ಮಾಡಿದರೆ ಕಾಲೇಜಿಗೆ ಎಂಟ್ರಿ ಇಲ್ಲವಾದ್ರೆ ನೇರವಾಗಿ ಹಾಸ್ಪಿಟಲ್‌ಗೆ ಎಂಟ್ರಿ’ ರಂಗನ ಕೈಗೆ ಗುಲಾಬಿ ಕೊಡುವರು. ರಂಗ ಅದನ್ನು ಹಿಡಿದು ಸರಸರನೆ ಸಂಗ್ರಾಮನ ಬಳಿ ಸಾಗಿ ಅವನ ಕೋಟಿಗೆ
ಗುಲಾಬಿಯನ್ನು ಸಿಕ್ಕಿಸಿ ಮುಗುಳ್ನಕ್ಕು ಕೈಕುಲುಕುವನು. ‘ಗುಡ್. ಬೆಸ್ಟ್ ಆಫ್ ಲಕ್’ ಅನ್ನುವನು ಗತ್ತಿನಿಂದ ಸಂಗ್ರಾಮ ‘ಥ್ಯಾಂಕ್ಯು’ ಎಂದ್ಹೇಳಿ ಮುಂದೆ ನಡೆವನು ರಂಗ. ಇವನ ಬಾಡಿ ಬಿಲ್ಡಪ್ ನೋಡಿ ಒಂದಿಷ್ಟು ನಖ್ರಾ ಮಾಡಿ, ಏಟು ತಿಂದ ಮೇಲೆ ದಾರಿಗೆ ಬರ್‍ತಾನೇನೋ ಅನ್ಕೊಂಡಿದ್ದೆ ಗುರು, ಏಕ್ದಂ ಸರೆಂಡರ್ ಆಗಿಬಿಟ್ಟ’ ಗೆಳೆಯ ಪ್ರಸಾದ್ ನಗುತ್ತಾ ಬೀಗುವನು. ‘ಅವನ ಡಕೋಟ ಸೈಕಲ್ಲು ಹಳೆ ಪ್ಯಾಂಟು ಸಾದಾ ಷರ್‍ಟು ನೋಡಿಯೇ ಇದು ಅಡ್ಜಸ್ಟ್ ಪಾರ್ಟಿ ಅಂತ ಗೆಸ್ ಮಾಡ್ದೆ. ಹೀಗಿದ್ದರೆ ನಾವಾದ್ರೂ ಯಾಕೆ ಕೈಗೆ ಕೊಡ್ತೀವಿ ಹೇಳು’ ಸಂಗ್ರಾಮ ಸಿಗರೇಟು ಹಚ್ಚಿದ. ‘ಎಲ್ಲಂದರಲ್ಲಿ ಸಿಗರೇಟು ಸೇದೋ ಹಂಗಿಲ್ಲಮ್ಮ’ ಶಂಕರ ಎಚ್ಚರಿಸಿದ. ‘ಹೊಡಿ ಗೋಲಿ, ಕಾನೂನು ಕ್ಯಾಚ್ ಮಾಡೋದು ಓನ್ಲಿ ಮಿಡ್ಲ್ ಕ್ಲಾಸ್‌ಗಳನ್ನ ಕೂಲಿನಾಲಿಗಳನ್ನ. ನಮ್ಮಂಥವರನ್ನು ಟಚ್ಚೂ ಮಾಡೋಲ್ಲಮ್ಮ… ರಿಲ್ಯಾಕ್ಸ್’ ಸಂಗ್ರಾಮ ಹೇಳುತ್ತಾ ಹೊಗೆಯುಗುಳಿದ.
ದೂರದಲ್ಲಿ ನವಿಲುಗರಿ ನಡೆದು ಬರುತ್ತಿರುವಂತೆ ತೋರಿದಾಗ ಪಡ್ಡೆಗಳೆಲ್ಲರ ಕಣ್ಣುಗಳತ್ತ ಕೀಲಿಸಿದವು. ಪಾಳೇಗಾರ ಉಗ್ರಪ್ಪನ ಏಕೈಕ ಪುತ್ರಿ ಚಿನ್ನು ಸ್ಕೂಟಿ ಇಳಿದು ನಡೆದು ಬರುವ ಶೈಲಿಯಲ್ಲಿ ಸ್ಟೈಲಿದೆ ಅರ್ಥಾತ್ ಮಂದಹಾಸದ ಲೇಪನವಿದೆ. ಅವಳು ಹತ್ತಿರವಾದಂತೆ ಹಲವು ಮೇಲ್ ಜಂಡರ್‌ಗಳು ರೆಪ್ಪೆ ಬಡಿವುದನ್ನೇ ಮರೆತವು. ಮಿರಿಮಿರಿ ಸಿಂಚುವ ಜರಿ ಅಂಚಿನ ಚೂಡಿದಾರ್ ಸ್ಕಿನ್ ಟೈಟಾಗಿದ್ದು ಎದೆಯ ಮೇಲೆ ವಿರಮಿಸಿರುವ ಗಾಳಿಗೆ ಆಗಾಗ ಹಾರುವ ರೋಸ್‍ಕಲರಿನ ವೇಲು, ಗೂಟದ ಚಪ್ಪಲಿ ಕ್ಯಾಟ್ ವಾಕ್ ತುಟಿಯಂಚಿನಲ್ಲಿ ನಗೆಯ ಶೋಕ್ ಇವನ್ನೆಲ್ಲಾ ಸಾರಾಸಗಟಾಗಿ ಅತ್ತ ಸರಿಸಿ ತನ್ನತ್ತ ಸೆಳೆವ ಗುಲಾಬಿ ಮೊಗ್ಗನ್ನು ಕೆನೆ ಹಾಲಿನಲ್ಲಿ ಅದ್ದಿ ತೆಗೆದಂತಹ ಮೈಬಣ್ಣ, ಬೆನ್ನ ಮೇಲೆ ಹರವಿಕೊಂಡ ಕೇಶರಾಶಿ ನೊಸಲ ಮೇಲೆ ಸುಳಿದಾಡುವ ಮುಂಗುರುಳು ಬಿಳಿಗುಲಾಬಿದಳದ ಮೇಲೆ ಪುಟ್ಟ ನೇರಳೆ ಇಟ್ಟಂತೆ ತೋರುವ ದುಂಬಿಕಂಗಳ ಚಂಚಲತೆ ಸಂಪಿಗೆ ನಾಸಿಕ ತುಂಬು ತುಟಿಗಳ ಪುಟ್ಟ ಬಾಯಿಯ ಕೆಂಬಣ್ಣ, ಮಾವುಗೆನ್ನೆ ಸೇಬುಗಲ್ಲ ಪುಟಿವ ಅಂಗಾಂಗಗಳ ಮಾದಕತೆ ಒಟ್ಟಾರೆ ಅವಳೇ ಒಂದು ಲತೆ-ಕವಿತೆ.
‘ಕಡ್ಕೊಂಡು ತಿನ್ನೋ ಹಂಗಿದಾಳಲ್ಲ ಗುರು’ ಶಂಕರ ಜೊಲ್ಲು ಸುರಿಸಿದ.
‘ಇವಳು ನಮ್ಮ ಕಾಲೇಜಲ್ಲಿ ಪಿಯು ಓದ್ದೋಳಲ್ಲಮ್ಮ, ಡಿಗ್ರಿಗೆ ಸೇರ್‍ಕೊಂಡಿದಾಳೆ ಮೊದ್ದು ಮಹಾರಾಣಿ ಕಾಲೇಜಲ್ಲಿದ್ಳು… ಆಗ್ಲೆ ನೋಡಿದ್ದೆ ಸಖತ್ತಾಗವಳಲ್ವೆ?’
‘ಯಕ್ಷರು ಕಿನ್ನರು ಕಿಂಪುರುಷರು ಅಂತ ಕನ್ನಡ ಮೇಷ್ಟ್ರು ಪಾಠ ಮಾಡೋವಾಗ ವರ್ಣಿಸಿದ್ದರಲ್ಲ… ಇವಳನ್ನೇನಾದ್ರೂ ನಮಗಿಂತ ಮೊದ್ಲೆ ನೋಡಿದ್ರೇನಪ್ಪ!’ ಸಂಗ್ರಾಮನ ಗೆಳೆಯರ ಗುಂಪು ಮೋಡಿಗೆ ಒಳಗಾಗಿತ್ತು.
‘ಆಫ್‌ಕೋರ್ಸ್, ನಾನು ಲವ್ ಮಾಡ್ಬೇಕು ಅಂತ ಹುಡುಕ್ತಾ ಇದ್ದ ಹುಡುಗಿ ಪ್ರಾಯಶಃ ಇವಳೇ ಇರ್‍ಬೇಕು… ಗುಲಾಬಿ ಕೊಡೋಕೆ ಬರ್‍ಲಿ ವಿಚಾರಿಸ್ಕೊಂಡ್ರಾಯ್ತು… ಹುಂ’ ಖುಷಿಯ ಮೂಡ್‌ನಲ್ಲಿದ್ದ ಸಂಗ್ರಾಮ ಸಡಗರದಿಂದ ಗೆಳೆಯರತ್ತ ಸನ್ನೆ ಮಾಡಿದ. ಒಂದಿಬ್ಬರು ಹೋಗಿ ಅವಳನ್ನು ಅಡ್ಡ ಹಾಕಿದರು.
‘ಯಾರ್ ನೀವು?’ ಹುಬ್ಬೇರಿಸಿದಳು ಚಿನ್ನು.
‘ನಿನ್ನ ಫ್ರೆಂಡ್ಸು’ ಹಲ್ಲುಗಿಂಜಿದರು.
‘ನಂಗೊತ್ತಿಲ್ವೆ?’ ಕತ್ತು ಕೊಂಕಿಸಿದಳು. ಅವಳೇನು ಅಳುಕಿದಂತೆ ಕಾಣಲಿಲ್ಲ.
‘ಗೊತ್ತು ಮಾಡ್ಕೊಂಡ್ರಾಯ್ತು ಬಿಡಿ. ಒಂದೇ ಕಾಲೇಜ್‌ನಲ್ಲಿ ಸ್ಪಡಿ ಅಂದ್ಮೇಲೆ ಫ್ರೆಂಡ್‌ಶಿಪ್ಪಿಗೆ ರೆಡಿ ಇರಬೇಕಲ್ವೆ…. ತಗೊಳ್ಳಿ ಗುಲಾಬಿ’ ಸೀನ ಅವಳತ್ತ ಹೂ ಹಿಡಿದ.
‘ಯಾಕೆ?’ ಕ್ಷಣ ಬೆಚ್ಚಿದಳು. ಹುಡುಗರು ಹುಡುಗಿಯರು ಗುಂಪುಗುಂಪಾಗಿ ನಿಂತು ಇವಳತ್ತಲೇ ನೋಡುತ್ತಿದ್ದಾರೆಂಬುದೂ ಅವಳಲ್ಲಿ ಬೆರಗು ಮೂಡಿಸಿತು.
‘ಈ ಗುಲಾಬಿನಾ ಅಲ್ಲಿ ನಿಂತಿದ್ದಾರಲ್ಲ ನಮ್ಮ ಕಾಲೇಜ್ ಹೀರೋ ಸಂಗ್ರಾಮಸಿಂಹರ ಕೋಟಿನ ಜೇಬಿಗೆ ಸಿಕ್ಕಿಸಬೇಕು. ನಂತರ ಕಾಲೇಜಿಗೆ ಎಂಟ್ರಿ’ ಸಂಕ್ಷಿಪ್ತವಾಗಿ ವಿವರಿಸಿದ ಶಂಕರ.
‘ಈ ಹೂವು ತಗೊಳ್ಳದಿದ್ದರೆ?’ ದುರುಗುಟ್ಟಿದಳು ಚಿನ್ನು,
‘ಇದುವರೆಗೂ ಯಾರು ಈ ಮಾತು ಆಡೇ ಇರಲಿಲ್ಲ. ಎಲ್ಲಾ ನಮ್ಮ ಗುರುಗೆ ಸರೆಂಡರ್ ಆಗೊರೆ, ಧಿಮಾಕು ಮಾಡಿದ್ರೆ ಚೆಂದದ ಮುಖ ಚಿತ್ರಾನ್ನವಾಗಬಹುದು’ ಸೀನ ಹುಳ್ಳಗೆ ನಗುತ್ತಾ ತೋರುಬೆರಳು ಮಧ್ಯದ ಬೆರಳ ಮಧ್ಯೆ ಹುದುಗಿಸಿದ ಬ್ಲೇಡ್ ಪ್ರದರ್ಶಿಸಿದ. ಮರುಮಾತನಾಡದೆ ಚಿನ್ನು ಗುಲಾಬಿ ತೆಗೆದುಕೊಂಡು ಸಂಗ್ರಾಮಸಿಂಹನ ಬಳಿ ನಿಧಾನವಾಗಿ ನಡೆದು ಬಂದಳು. ಸಂಗ್ರಾಮ ಈ ಮೊದಲೆ ತನ್ನ ಕೋಟನ್ನು ಅಲಂಕರಿಸಿದ್ದ ಕೆಂಗುಲಾಬಿ ತೆಗೆದು ಬಿಸಾಡಿ ಮುಗುಳ್ನಕ್ಕ. ಸಂಗ್ರಾಮ ನಿರೀಕ್ಷಿಸಿದಂತೆ ಗುಲಾಬಿ ಅವನ ಕೋಟನ್ನಲಂಕರಿಸಲಿಲ್ಲ. ಅವನತ್ತ ತಿರಸ್ಕಾರದಿಂದ ನೋಡಿದ ಚಿನ್ನು ಗುಲಾಬಿಯನ್ನು ತನ್ನ ಮುಡಿಗೆ ಸಿಕ್ಕಿಸಿಕೊಂಡು ನಂತರ ಒಂದು ತೆಳುನಗೆಯನ್ನು ಎಲ್ಲರತ್ತ ಒಗೆದು ನಡೆವಾಗ ನೆರೆದವರಲ್ಲಿ ಅಚ್ಚರಿ ಗಾಬರಿ. ಹಸಿದ ಹುಲಿಯಂತಾದ ಸಂಗ್ರಾಮ ತಟ್ಟನೆ ಅವಳನ್ನು ಅಡ್ಡಹಾಕಿದ. ‘ನಾನು ಯಾರು ಗೊತ್ತ?’ ಮಾತಿನಲ್ಲಿ ಅಹಂ ಮಿನುಗಿತು. ‘ನಾನು ಯಾರು ಗೊತ್ತಾ?’ ಚಿನ್ನು ಅದೇ ಪ್ರಶ್ನೆ ಎಸೆದಳವನಿಗೆ.
‘ನೀನು ಯಾರಾದ್ರೆ ನನಗೇನು? ನನ್ನ ಕೋಟಿಗೆ ಗುಲಾಬಿ ಸಿಕ್ಕಿಸಿದವರಿಗೆ ಮಾತ್ರ ಇಲ್ಲಿ ಅಡ್ಮಿಶನ್… ಏನ್ ನಖ್ರ ಮಾಡ್ತೀಯಾ’ ಬುಸುಗುಟ್ಟಿದ ಸಂಗ್ರಾಮ.
‘ನಾನು ಪಾಳೇಗಾರ ಉಗ್ರಪ್ಪನ ಡಾಟರ್ ಗೊತ್ತಾ?’ ಸೆಟೆದು ನಿಂತಳು ಚಿನ್ನು.
‘ಇಂಥ ಪಾಳೇಗಾರನ್ನ ಭಾಳ ನೋಡಿದೀನಿ. ಮೊದ್ಲು ಹೇಳಿದಷ್ಟು ಮಾಡು… ಇಲ್ಲಾ…’
‘ಏನೋ ಮಾಡ್ತೀಯಾ ಫೂಲ್. ಸುಮ್ನೆ ದಾರಿ ಬಿಡೋ’
ಸಂಗ್ರಾಮ ಮಾತನಾಡಲಿಲ್ಲ ಅವಳ ಹರವಾದ ತಲೆಗೂದಲಿಗೆ ಕೈಹಾಕಿ ಬರ್ರನೆ ತನ್ನತ್ತ ಸೆಳೆದುಕೊಂಡ. ಚಿನ್ನು ನೋವಿನಿಂದ ಚೀರಿದಳು. ‘ಹೇಳಿದಷ್ಟು ಮಾಡ್ತೀಯೋ ಇಲ್ವೋ?’ ಗುಂಜಾಡಿದ ಸಂಗ್ರಾಮ, ಸಹಪಾಠಿಗಳಿದ್ದಾರೆ. ಅಲ್ಲಲ್ಲಿ ಉಪನ್ಯಾಸಕರೂ ಓಡಾಡುತ್ತಿದ್ದಾರೆ, ಯಾರೂ ಏನೂ ನಡೆಯುತ್ತಲೇ ಇಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ತಾವಿರುವುದನ್ನು ಕಂಡು ಚಿನ್ನುಗೀಗ ಒಳಗೇ ಆತಂಕ ಶುರುವಾಯಿತು. ‘ಬಿಡೋ ನಾಯಿ, ಇಲ್ಲದಿದ್ದರೆ ತೊಂದರೆ ಅನುಭವಿಸ್ತಿಯಾ’ ಅಲ್ಲಿಗೂ ಅವಳು ಸೋಲಲಿಲ್ಲ-ಆದರವಳ ದನಿ ಸೋತಿತ್ತು, ಅಪಮಾನ ಅಣಕಿಸುತ್ತಿತ್ತು. ಇದೀಗ ರಂಗ ಸರಸರನೆ ನಡೆದು ಅವರ ಮಧ್ಯೆ ಬಂದ ‘ಪ್ಲೀಸ್ ಬಿಟ್ಬಿಡಿ ಅವರನ್ನ…’ ಕೈ ಮುಗಿದು ಬೇಡಿದ. ‘ನಿನಗೇನ್ ಆಗ್ಬೇಕೋ ಇವಳು ಗರ್ಲ್‌ಫ್ರೆಂಡಾ? ಸಂಗ್ರಾಮ ಗೇಲಿಮಾಡಿ ನಕ್ಕ. ‘ನಮ್ಮ ಹಳ್ಳಿ ಹುಡ್ಗಿ ಕಣ್ರಿ… ಪ್ಲೀಸ್’ ಅಂಗಲಾಚಿದ ರಂಗ. ‘ಸೊ, ಅವಳಿಗೆ ಹೇಳು ನನ್ನ ಕೋಟಿಗೆ ಗುಲಾಬಿ ಸಿಕ್ಕಿಸು ಅಂತ’ ‘ನಾನು ಸಿಕ್ಕಿಸೋಲ್ಲ’ ಸಿಡುಕಿದ ಚಿನ್ನು, ‘ಮೊದ್ಲು ಕೂದಲು ಬಿಡೋಲೋ’ ಎಂದು ಚೀರಿದಳು. ‘ಅವರು ಒಪ್ಪುತ್ತಿಲ್ಲ ಸಂಗ್ರಾಮ. ಬಲವಂತದಿಂದ ಪಡೆಯೋದು ಮರ್ಯಾದೆಯಲ್ಲ… ಬಿಟ್ಟುಬಿಡಿ ಹೋಗ್ಲಿ’ ಮತ್ತೆ ಬೇಡಿಕೊಂಡ ರಂಗ. ‘ಹೋಗಲೋ ಹಳ್ಳಿ ಗುಗ್ಗು’ ಎಂದವನನ್ನು ತಳ್ಳಿದ ಸಂಗ್ರಾಮ, ಚಿನ್ನು ಕೂದಲನ್ನು ಹಿಡಿದು ಬರ್ರನೆ ತನ್ನತ್ತ ಎಳೆದುಕೊಂಡ ರಭಸಕ್ಕೆ ಅವಳು ಚೀರಿಕೊಂಡಳು. ಕಾಲೇಜು ಕಟ್ಟಡ ಅದನ್ನೇ ಪ್ರತಿಧ್ವನಿಸಿತು. ಕೆಳಗೆ ಬಿದ್ದಿದ್ದ ರಂಗ ಕೊಡವಿಕೊಂಡು ಮೇಲೆದ್ದವನೇ ಸಂಗ್ರಾಮನ ಮೇಲೆ ಚಿರತೆಯಂತೆ ಹಾರಿದ. ಮುಂದಿನದನ್ನು ಹೇಳೋದೇ ಬೇಡ. ಸಂಗ್ರಾಮ ನುಜ್ಜುಗುಜ್ಜಾದ. ಅವನನ್ನು ರಕ್ಷಿಸಲು ಬಂದ ಚೇಲಾಗಳು ಮೊದಲು ಚಿಂದಿ ಎದ್ದರು. ಈಗಲೂ ನೆರೆದವರು ನೋಡಿಯೂ ನೋಡದಂತಿದ್ದರೂ ಮೊರೆಗಳಲ್ಲಿ ಅದೊಂದು ಬಗೆಯ ಉಲ್ಲಾಸ ಇಣುಕಿತ್ತು. ನಿಧಾನವಾಗಿಯೇ ನಡೆದುಬಂದು ಜಗಳ ಬಿಡಿಸಿ ರಂಗನ ಕೆನ್ನೆಗೇ ಒಂದೆರಡು ಬಾರಿಸಿದರು ಪ್ರಿನ್ಸಿಪಾಲರು. ‘ಸಾರ್, ನಂದೇನು ತಪ್ಪಿಲ್ಲ ಸಾರ್. ಇಲ್ಲಿ ಏನ್ ನಡೀತು ಗೊತ್ತಾ ಸಾರ್? ಬಡಬಡ ಹೇಳಿದ ರಂಗ.
‘ಷಟ್‌ಅಪ್, ನೀವೇನು ಕಾಲೇಜಿಗೆ ಓದಲಿಕ್ಕೆ ಬಂದಿದ್ದೀರೋ ಫೈಟ್ ಮಾಡೋಕೆ ಬಂದಿದಿರೋ….? ಮುಂದೆ ಹೀಗಾದ್ರೆ ಟಿಸಿ ಕೊಟ್ಟು ಮನೆಗೆ ಕಳಿಸಿಬಿಡ್ತೀನಿ… ಹುಷಾರ್? ಸಂಗ್ರಾಮನತ್ತ ಬೆನ್ನು ಮಾಡಿ ನಿಂತ ಪ್ರಿನ್ಸಿಪಾಲರು ರಂಗನಿಗೆ ಧೂಳು ಜಾಡಿಸಿದರು. ಅವರ ಸ್ಥಿತಿ ಕಂಡು ಅವನಿಗೆ ನಗು ಬಂತು.
‘ಸಾರ್… ಫೀಸ್ ಲಿಸನ್ ಮಿ, ಈ ಲೋಫರ್ ಇದಾನಲ್ಲ ಇವನ ಕೋಟಿಗೆ ಗುಲಾಬಿ ಇಟ್ಟರೆ ಕಾಲೇಜಿಗೆ ಎಂಟ್ರಿ ಅಂತೆ. ನಾನ್ ಇಡೋಲ್ಲ ಕಣೋ ಅಂದೆ… ಅದಕ್ಕೆ’
‘ನಿಮ್ಮ ಎಕ್ಸ್‌ಪ್ಲನೇಶನ್ ನಂಗೆ ಬೇಡ… ನಡೀರಿ ಎಲ್ಲ ಕಾಲೇಜಿಗೆ… ಹುಂ ಔಟ್’ ಅಳತೆಗೂ ಮೀರಿ ಪ್ರಿನ್ಸಿಪಾಲ್ ಕೂಗಾಡಿದ್ದರಿಂದ ಚಿನ್ನೂಗೆ ಕಂಪ್ಲೇಂಟ್ ಮಾಡುವ ಅವಕಾಶವೇ ಸಿಗಲಿಲ್ಲ. ಇವನೆಂತಹ ಪ್ರಿನ್ಸಿ ಇದೆಂತಹ ಕಾಲೇಜ್ ಅಂದುಕೊಂಡು ಖಿನ್ನಳಾದಳು. ಹೋಗುವಾಗ ರಂಗನೇ ಏಟುತಿಂದ ಸಂಗ್ರಾಮನತ್ತ ನಡೆದು, ‘ಸಾರಿ ಕಣ್ರಿ ಸಂಗ್ರಾಮ್… ಖಂಡಿತ ನಾವು ಬಂದಿರೋದು ಹೊಡೆದಾಡೋಕಲ್ಲ… ಓದೋದಕ್ಕೆ. ಯಾವತ್ತೂ ನಿಜವಾದ ಗಂಡಸು ಹೆಂಗಸಿನ ಮೇಲೆ ಕೈ ಮಾಡೋಲ್ಲ. ಅದಕ್ಕೆ ಅಡ್ಡ ಬಂದೆ. ಬೇಡಾರೀ ಅಂದೆ ನೀವು ಕೇಳ್ಲಿಲ್ಲ… ಅದಕ್ಕೆ… ಸಾರಿ. ಮರ್ತುಬಿಡಿ ಎಲ್ಲಾ’ ಸ್ನೇಹದ ನಗೆ ಬೀರಿದ.
‘ಮರೆಯೋದಾ? ನಿನ್ನ ಈ ಕಾಲೇಜಿಂದ ಎತ್ತಂಗಡಿ ಮಾಡಿಸಿದ ಮೇಲೆಯೇ ನಾನು ಮಲಗೋದು… ಮೈಂಡ್ ಇಟ್’ ಸರಕ್ಕನೆ ನಡೆದುಹೋದ ಸಂಗ್ರಾಮ ತನ್ನ ಹಿಂಡನ್ನು ಸೇರಿಕೊಂಡ. ಬಹಳಷ್ಟು ಸಂತೋಷವಾಗಿತ್ತು ಎಲ್ಲರಿಗೂ ಆದರೂ ತೋರಿಸುವಂತಿಲ್ಲ. ರಂಗನನ್ನು ವಿಶ್ ಮಾಡುವಂತಿಲ್ಲ. ಆದರೂ ನೀನು ಅವನಿಗೆ ಬಾರಿಸಿದ್ದು ಖುಷಿ ತಂದಿದೆ ಎಂಬಂತೆ ಅವನನ್ನು ಮೆಚ್ಚಿಗೆಯಿಂದ ನೋಡುತ್ತ ಅವನ ಅಕ್ಕಪಕ್ಕೆ ಹಿಂದೆಯ ಹೆಜ್ಜೆ ಹಾಕಿದರು. ಚಿನ್ನು ಮಾತ್ರ ರಂಗನ ಬಳಿ ಸಾಗಿ ‘ಥ್ಯಾಂಕ್ಸ್ ಕಣ್ರಿ… ಥ್ಯಾಂಕ್ಯು ವೆರಿ ಮಚ್’ ಎಂದು ಕಣ್ಣುಗಳಲ್ಲಿ ಕೃತಜ್ಞತೆಯನ್ನು ಸುರಿಸಿದಳು. ಅವನ ಮೋರೆಯಲ್ಲಿ ಯಾವ ರೀ-ಆಕ್ಷನ್ನೂ ಕಾಣಲಿಲ್ಲ. ಒಮ್ಮೆ ಅವಳತ್ತ ನೋಡಿ ದುಡುದುಡು ನಡೆದ. ‘ಎನಿವೇ… ನನಗೆ ಫೈಟ್ ಇಷ್ಟ ಕಣ್ರಿ’ ಅವಳು ಕೂಗಿ ಹೇಳಿದಾಗ ಅನೇಕರು ವಿಸ್ಮಯಗೊಂಡರು. ಬೆಲ್ ಆದಾಗ ಕ್ಲಾಸ್‌ಗಳತ್ತ ಲಗುಬಗೆಯಿಂದ ನಡೆದರು.
* * *
ಈ ರೀತಿಯಲ್ಲಿ ಆರಂಭದಲ್ಲೇ ಬಡಿದಾಡುತ್ತಲೇ ಕಾಲೇಜ್ ಶುಭಾರಂಭಗೊಂಡಿತ್ತು. ಸಂಪಿಗೆಹಳ್ಳಿಯಿಂದ ಬಂದ ಹುಡುಗ ಈ ಪಾಟಿ ಧೈರ್ಯ ಇರೋನೆ ಎಂದು ಸ್ವತಹ ಲೆಕ್ಚರರ್‍ಗಳೇ ತಬ್ಬಿಬ್ಬಾದರೂ ಅವನ ಶಕ್ತಿ ಸಾಮರ್ಥ್ಯ ಬೀಸುವ ಪೆಟ್ಟುಗಳನ್ನೂ ಕಂಡಿದ್ದ ಅವರು ಇದಂತೂ ಶುಭಾರಂಭ ಅಂದುಕೊಳ್ಳಲು ಅದೇಕೊ ಹಿಂಜರಿದರು. ಮುಂದೇನು ಕಾದಿದೆಯೋ ಎಂದು ಸ್ವತಹ ಪ್ರಿನ್ಸಿಪಾಲರು ಒಳಗೆ ತಳಮಳಿಸಿದರೂ ತೋರಗೊಡಲಿಲ್ಲವಷ್ಟೆ. ಸಂಜೆ ಕಾಲೇಜು ಮುಗಿದಾಗ ಚಿನ್ನು ಮತ್ತು ರಂಗ ಒಂದೇ ದಾರಿಯಲ್ಲೇ ಹೋಗಬೇಕು. ಸಂಪಿಗೆಹಳ್ಳಿ ಎಂದರೆ ಅದೇನು ತೀರಾ ಹಿಂದುಳಿದ ಕಗ್ಗಹಳ್ಳಿ ಅಲ್ಲ-ಹೋಬಳಿ, ಗ್ರಾಮಪಂಚಾಯ್ತಿ ಕೆಇಬಿ ಬ್ರಾಂಚ್ ಸ್ಕೂಲ್‌ನಿಂದ ಹಿಡಿದು ಮೂರು ನಾಲ್ಕು ಮಂದಿ ಪೊಲೀಸರು ಒಬ್ಬ ಎಎಸ್‌ಐ ಇರುವ ಠಾಣೆ, ಅರಣ್ಯ ಇಲಾಖೆ ಬ್ರಾಂಚ್ ಎಲ್ಲವೂ ಇದ್ದು ಚೇರ್ಮನ್ ಪಾಳೇಗಾರ ಉಗ್ರಪ್ಪನ ಬೆರಳೆಣಿಕೆಯ ಇಶಾರೆಯಲ್ಲೇ ಡ್ಯೂಟಿ ಮಾಡುತ್ತಿದ್ದವು. ಜಾತ್ರೆ ಪರಸೆ ಹಬ್ಬ ಹರಿದಿನಗಳಲ್ಲಿ ಪಾಳೇಗಾರರ ಮನೆಯವರದೇ ಕಾರುಬಾರು-ದರ್ಬಾರು. ಹಳ್ಳಿಗೆ ಡಕೋಟಾ ಸೈಕಲ್ ಏರಿ ಹೊರಟ ರಂಗನನ್ನು ದಾಟಿ ಹೊಸ ಸ್ಕೂಟಿಯಲ್ಲಿ ಚಿನ್ನು ಹಾರಿಹೋದಳು.
ಚಿನ್ನು ಕಾಲೇಜಿಂದ ಮನೆಗೆ ಹೋದೊಡನೆ ಮನೆಯ ಸಮಸ್ತರೂ ಅವಳ ಸೇವೆಗೆ ನಿಂತರು. ಚಿನ್ನು ಹೆಗಲ ಮೇಲಿದ್ದ ಭಾರವಾದ ಬ್ಯಾಗನ್ನು ಕೆಂಚಮ್ಮ ಆಲಿಯಾಸ್ ಸುಮ ತೆಗೆದುಕೊಂಡರೆ ಬಿಚ್ಚೆಸೆದ ಬಟ್ಟೆಬೂಟುಗಳನ್ನು ಹೆಣ್ಣಾಳುಗಳು ಎತ್ತಿಟ್ಟರು. ಹೊಸ ಧಿರಿಸು ಧರಿಸಿ ಡೈನಿಂಗ್ ಟೇಬಲ್ಗೆ ಬರುವುದರಲ್ಲಿ ಚಿನ್ನಮ್ಮ ಚಿಕನ್ ಬಿರಿಯಾನಿ ತಂದಿಟ್ಟು ನಿಂತಿದ್ದಳು. ಮಗಳು ಏನೋ ಗುಡ್ಡ ಕಡಿದು ಹಾಕಿ ಬಂದಂತೆ ಭಾರವಾದ ಉಸಿರೊಂದನ್ನು ಹೊರಚೆಲ್ಲುತ್ತಾ ಕೂತಾಗ ಮಗಳಿಗೆ ತಾವೇ ತಿನ್ನಿಸಿದರು. ಮೂಳೆಗಳನ್ನು ತೆಗೆದು ಮೆದುವಾದ ಮಾಂಸ ಬಿಡಿಸಿ ಬಾಯಿಗೆ ಇಟ್ಟರು. ‘ಹೆಂಗೈತೆ ಮಗಾ?’ ತಾಯಿ ಜೀವ ಕೇಳಿತು. ‘ಅದನ್ನೇನು ಕೇಳ್ತಿ ಮಮ್ಮಿ ದಿನಾ ಇದ್ದಂಗೇ ಐತೆ. ನೀನೇನೇ ಮಾಡು ಐಶ್ವರ್ಯ ಹೋಟೆಲ್ ಬಿರಿಯಾನಿ ಖದರ್ರೇ ಬೇರೆ…’ ಲೊಟ್ಟೆ ಹೊಡೆದಳು ಚಿನ್ನು. ಚಿನ್ನಮ್ಮನಿಗೇನೂ ಬೇಸರವಾಗಲಿಲ್ಲ. ‘ಮುಂದಿನ ವಾರ ಸಿಟಿಗೆ ಹೋದಾಗ ಹೋದ್ರಾತೇಳು ಕಂದಾ’ ಎಂದವಳ ತಲೆ ನೇವರಿಸಿದಳು. ‘ಕಾಲೇಜ್ ಹೆಂಗಾಯ್ತ್ ಮಗಾ’ ಗೊಗ್ಗರ ದನಿಯಲ್ಲಿ ಕೇಳುತ್ತಲೇ ಭರಮಪ್ಪ ಉಪ್ಪರಿಗೆ ಇಳಿದು ಬರುವಾಗ ಅವರ ಹಿಂದೆಯೇ ಇಳಿಯುತ್ತಿದ್ದ ತಂದೆ, ಚಿಗಪ್ಪನೂ ಕಂಡರು. ಕಾಲೇಜಲ್ಲಿ ನಡೆದ ಘಟನೆಯ ಝಲಕ್ ಅನ್ನು ಹೇಳಬೇಕೆನಿಸಿತು. ರಂಗನನ್ನು ಹೊಗಳಬೇಕೆನಿಸಿತಾದರೂ ಚಿನ್ನು ಹಿಂಜರಿದಳು. ‘ನಿನ್ನ ಮೈ ಮುಟ್ಟಿದೋನ ಕೈ ಕತ್ತರಿಸಿಬಿಡ್ತೀನಿ, ಪಾಳೇಗಾರರ ಮನೆಯ ಹೆಣ್ಣುಮಕ್ಳು ಅಂದ್ರೇನು? ಅವರನ್ನು ಇತರರು ತಲೆಎತ್ತಿ ನೋಡೋದು ಅಂದ್ರೇನು. ಕಣ್ಣುಗುಡ್ಡೆಗಳನ್ನು ಬಗೆದುಬಿಟ್ಟೇನು’ ಎಂದು ಸದಾ ಆಕ್ರೋಶದ ಮಾತುಗಳನ್ನಾಡುತ್ತ ನುಡಿದಂತೆ ನಡೆವ ಚಿಗಪ್ಪನೆಂದರೆ ಆಕೆಗೆ ಒಂದಿಷ್ಟು ಭಯವೆ. ತಂದೆಯೂ ಅದೇ ಮಾಡೆಲ್ ಆದರೂ ಎತ್ತು ಈದಿತು ಅಂದೊಡನೆ ಕೊಟ್ಟಿಗೆಗೆ ಕಟ್ಟು ಅನ್ನುವಷ್ಟು ಹುಂಬತನವಿಲ್ಲ. ಇದನ್ನೆಲ್ಲಾ ಆಲೋಚಿಸುವಾಗ ಕಾಲೇಜಿನಲ್ಲಿ ನಡೆದ ಫೈಟಿಂಗ್ ಸೀನ್ ಬಗ್ಗೆ ಹೇಳದಿರುವುದೇ ಮೇಲೆನಿಸಿ ಮೌನವಾಗಿ ಬಿರಿಯಾನಿ ಸವಿದಳು. ‘ಏನಾದ್ರೂ ತೊಂದರೆ ಆಯ್ತೆ ಚಿನ್ನು?’ ಇದೀಗ ತಂದೆಯೇ ಕೇಳಿದಾಗ ಅವಳು ಏನೂ ಆಗಿಲ್ಲ. ಆಗೊಲ್ಲವೆಂಬಂತೆ ನಿರಾಳ ನಗೆ ನಕ್ಕಳು. ‘ನಿನ್ನ ತಂಟೆಗೆ ಯಾರಾದ್ರೂ ಬಂದ್ರೆ ತಿಳಿಸು… ಹಾಂ’ ಹುರಿದು ಮುಕ್ಕಿಬಿಡ್ತೀವಿ ಎಂಬ ಧಾಟಿಯಿತ್ತು ಮೈಲಾರಿ ಮಾತಿನಲ್ಲಿ. ಆ ಮಾತಿಗೂ ಅವಳ ನಗುವೇ ಉತ್ತರವಾದಾಗ ಹಗುರಾದ ಪಾಳೇಗಾರರು ಪಡಸಾಲೆ ದಾಟಿದ ಮೇಲೆಯೇ ಹೆಂಗಸರ ಉಸಿರಾಟದ ಕ್ರಿಯೆ ಸರಾಗಗೊಂಡಿತು.
ಸಂಗಮನಿಗೇನೋ ಅಪಮಾನವಾಗಿತ್ತು ಅದರ ಸೇಡೂ ಅವನ ನರನಾಡಿಗಳನ್ನು ಹುರಿಗೊಳಿಸಿತ್ತು ಕಾಲೇಜಿನ ದಿನಗಳು ಮೊದಲಿನಷ್ಟು ಚೇತೋಹಾರಿಯಾಗಿಲ್ಲವೆನ್ನಿಸಿತ್ತು. ಸೋಲನ್ನೆಂದೂ ಕಾಣದವನು ಸೋತಿದ್ದಾಗಿತ್ತು. ಗೆದ್ದವ ಬೇರೆ ಕಣ್ಣೆದುರೇ ಸುಳಿದಾಡುತ್ತಿದ್ದಾಗ ಹತ್ತಿದ ಬೆಂಕಿ ಹೊಗೆಯಾಡುತ್ತಲೇ ಇತ್ತು. ಇಂಥ ದಿನಗಳಲ್ಲಿ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಸೇಡು ತೀರಿಸಿಕೊಳ್ಳುವವರಿಗೆ ತಕ್ಕ ವೇದಿಕೆ ಕಲ್ಪಿಸಿತು. ಸಂಗ್ರಾಮಸಿಂಹನ ತಂಡ, ರಂಗನ ತಂಡ ನಿರೀಕ್ಷಿಸಿದಂತೆಯೇ ಎದುರಾಳಿಗಳಾದ ಪಂದ್ಯಾವಳಿಗೆ ಹೊಸರಂಗು, ಹಳ್ಳಿಗ ಅವನಿಗೇನು ಗೊತ್ತು, ಬ್ಯಾಸ್ಕೆಟ್‌ಬಾಲ್ ಗೇಮ್ ಎಂದೇ. ಸಂಗ್ರಾಮ ಮತ್ತು ಅವನ ತಂಡ ಆತ್ಮವಿಶ್ವಾಸದಿಂದ ಬೀಗಿತು, ದಿನವೂ ಪ್ರಾಕ್ಟಿಸ್ ಎಡೆಬಿಡದೆ ಸಾಗಿ ಪಂದ್ಯಾವಳಿ ಆರಂಭಗೊಂಡಿತು. ಆಟವೆಂದರೆ ಮೂಗುಮುರಿದ ಹುಡುಗ ಹುಡುಗಿಯರೂ ಹಿಡಿದರೆ ಪುಸ್ತಕ ಬಿಡದ ಬುಕ್‌ವರ್ಮ್‌ಗಳಂಥವರೂ ಕುತೂಹಲ ತಾಳಲಾರದೆ ಗ್ಯಾಲರಿಗೆ ಬಂದು ಕೂತರು. ಶಿಳ್ಳೆ ಚಪ್ಪಾಳೆಗಳ ಮಧ್ಯೆ ಆರಂಭವಾದ ಆಟ, ನಿಮಿಷಗಳುರುಳಿದಂತೆ ರಭಸ ಪಡೆಯಿತು. ಸಂಗ್ರಾಮನನ್ನು ರೊಚ್ಚಿನ ಸೆಣಸಾಟ. ಸೋತೇವೆಂಬ ಟೆನ್ಶನ್, ಗೆಲ್ಲಲೇಬೇಕೆಂಬ ಹಪಹಪಿಕೆಗಳ ನಡುವೆ ಚಿಂಕೆಗಳಂತೆ ಚಮತ್ಕಾರ, ನೆಗೆತ ಗುರಿ ಮುಟ್ಟುವ ಸಕಲ ತಂತ್ರ ಕುತಂತ್ರಗಳನ್ನು ಬಳಸಿಕೊಂಡರೂ ಯಾವುದೇ ಆತಂಕವಿಲ್ಲದೆ ಗಮನವನ್ನೆಲ್ಲಾ ಗೆಲುವಿನತ್ತ ಕೇಂದ್ರೀಕರಿಸಿದ ರಂಗನ ತಂಡ ಸುನಾಯಾಸವಾಗಿ ಮೊದಲ ಪಂದ್ಯ ಗೆದ್ದೇಬಿಟ್ಟಿತು. ಇಡೀ ಕಾಲೇಜೇ ಹರ್ಷೋದ್ಗಾರ ಮಾಡುವಾಗ ಗುರುಗಳೂ ತಾವೂ ಇದನ್ನೇ ಅಪೇಕ್ಷಿಸಿದ್ದವರಂತೆ ಸಮಾಧಾನದ ನಿಟ್ಟುಸಿರು ಹೊರಚೆಲ್ಲಿ ಮೆಲುನಗೆಯನ್ನು ಮುಖದಲ್ಲಿ ತೋರಿದರು. ಎಲ್ಲರೂ ಗೆದ್ದವರ ಕೈ ಕುಲುಕುವರೆ. ಚಿನ್ನೂಗೂ ಹಿಗ್ಗು, ಅವನ ಬಳಿ ಹೋಗಿ ಕೈ ಕುಲುಕುವುದು ಇದೆಲ್ಲಾ ತಮ್ಮ ಮನೆತನದ ಘನತೆಗೆ ತಕ್ಕದ್ದಾಗದೆಂದೇ ಭಾವಿಸಿ ನಿಂತಲ್ಲೆ ಮಚ್ಚಿಗೆಯ ಬಾಣವನ್ನು ಬೀರಿದಳು. ರಂಗ ಅದನ್ನು ಗಮನಿಸದಿದ್ದಾಗ ಒಳಗೇ ನಿರಾಶೆ, ಹೀಗೇಕೆ ಆಗುತ್ತಿದೆ ಎಂದವಳ ಇಡೀ ವದನಾರವಿಂದವೇ ಎಕ್ಸಲಮೇಟ್ರಿ ಮಾರ್ಕ್ ಆಯಿತು. ತಮ್ಮ ಹಳ್ಳಿ ಹುಡುಗ ಕಾಲೇಜಿನ ಪಂದ್ಯಾವಳಿಯೊಂದರಲ್ಲಿ ಗೆದ್ದನೆಂಬ ಹಿಗ್ಗನ್ನು ಮನೆಯಲ್ಲಿ ಹೇಳಿಕೊಳ್ಳುವ ತವಕ, ಕೇಳೋರು ಯಾರು? ಕೇಳಿದರೆ ಚಿಗಮ್ಮ ಕೇಳಿಯಾಳು. ಅದೇಕೋ! ಅವಳೊಂದಿಗೆ ಮಾತನಾಡಿದರೆ ಬೆರೆತರೆ ಮನೆಯ ಇತರರಿಗೆ, ಇತರರಿಗೇನು ತಾತ, ತನ್ನ ತಂದೆ ತಾಯಿಗೂ ಸೈರಣೆಯಿಲ್ಲವೆಂಬುದವಳ ಗುಮಾನಿ. ಯಾರೂ ಬಾಯಿಬಿಟ್ಟು ಆಡದಿದ್ದರೂ ಮನಸ್ಸಿನಲ್ಲೇ ಒತ್ತುವ ಅಸಹನೆ ಮನೆಯ ಮೂಲೆ ಮೂಲೆಯಲ್ಲೂ ಹರಿದಾಡುವ ಬಗ್ಗೆ ಹೆಚ್ಚಿನ ಸಾಕ್ಷಾಧಾರಗಳ ಅಗತ್ಯವಿರಲಿಲ್ಲ. ಚಿಗಮ್ಮ ಒಂದಿಷ್ಟು ಫ್ಯಾಶನ್ ಮಾಡ್ತಾಳೆ. ಗುರುಹಿರಿಯರ ಬಗ್ಗೆ ಗೌರವವಿದ್ದರೂ ಭಯವಿಲ್ಲ. ಸಮಯಬಿದ್ದರೆ ಎದುರು ಮಾತನಾಡಬಲ್ಲಳು. ಕೆಟದ್ದನ್ನು ಖಂಡಿಸುವ ಎದೆಗಾತಿ. ಅಂತಹ ಒರಟ ಗಂಡನ ದರ್ಪ ದೌಲತ್ತು ನಿರ್ದಯೆ ಅಬ್ಬರಗಳಿಗೆ ಪೂರಾ ಕಡಿವಾಣವನ್ನು ಹಾಕಲಾಗದಿದ್ದರೂ ಅದನ್ನು ತೀರಾ ತನ್ನ
ಸನಿಹಕ್ಕೆ ಬಿಟ್ಟುಕೊಂಡವಳಲ್ಲ. ಈಗಲೂ ತಿಕ್ಕಲು ತಿರುಗಿದಾಗ ತನ್ನ ತಂದೆ ತನ್ನಮ್ಮನನ್ನು ಹೊಡೆದು ಕೋಪವನ್ನು ಶಮನಗೊಳಿಸಿಕೊಳ್ಳುವುದುಂಟು. ಆದರೆ ಮೈಲಾರಿ ಚಿಗಪ್ಪನ ತಿಕ್ಕಲುಮುಕ್ಕಲುಗಳು ಏನಿದ್ದರೂ ಮನೆ ಹೊರಗೆ ನಡೆದರೂ, ಕೆಂಚಮ್ಮ ಅಲಿಯಾಸ್ ಸುಮಳ ಕೋಣೆ ಹೊಸ್ತಿಲು ದಾಟುವ ದಾರ್ಷ್ಟ್ಯವನ್ನೆಂದೂ ತೋರಿದ್ದಿಲ್ಲ. ಅದಕ್ಕೇ ಚಿನ್ನೂಗೆ ತನ್ನ ಚಿಗಮ್ಮ ಹೆಚ್ಚು ಇಷ್ಟ. ಕದ್ದುಮುಚ್ಚಿಯಾದರೂ ಆಕೆಯ ಸಂಗ ಚಿನ್ನೂಗೆ ಬೇಕು.
ಚಿನ್ನು ತನ್ನ ಮನೆಯಲ್ಲಿ ಬ್ಯಾಸ್ಕೆಟ್‌ಬಾಲ್ ವಿಷಯ ಹೇಳದಿದ್ದರೇನಂತೆ ಸಂಗ್ರಾಮ್ ಹೇಳದಿರಲು ಸಾಧ್ಯವೆ? ಸಂಗ್ರಾಮಸಿಂಹನ ತಂದೆ ದುರ್ಗಸಿಂಹರು ಮಾಜಿ ಸಚಿವರು ಮುಂದಿನ ಚುನಾವಣೆಗೆ ನಿಲ್ಲುವ ಭರವಸೆಯ ಕ್ಯಾಂಡಿಡೇಟ್. ಪಕ್ಷವೀಗ ಅಧಿಕಾರದಲ್ಲಿ ಇಲ್ಲದಿದ್ದರೇನು ಮುಂದಿನ ಸಲ ಪಕ್ಷ ಅಧಿಕಾರವನ್ನು ಹಿಡಿಯುವುದೆಂಬ ಭರವಸೆ ಎದೆಗೂಡಿನಲ್ಲಿ ಹೆಪ್ಪುಗಟ್ಟಿತ್ತು. ಇದನ್ನರಿತ ಅಧಿಕಾರವರ್ಗವೂ ದುರ್ಗಸಿಂಹರ ಯಾವ ಫೈಲನ್ನೂ ಬದಿಗೆ ಸರಿಸುವ ಗೊಡವೆಗೆ ಎಂದೂ ಹೋದವರಲ್ಲ. ಅಧಿಕಾರ ಕಳೆದುಕೊಂಡರೂ ಅಧಿಕಾರ ಚಲಾಯಿಸುವ ತಾಕತ್ತು ಗಳಿಸಿಕೊಂಡ ಹಳೆಪಕ್ಷದ ಹಳೆವರಸೆಗಳೇ ಹಾಗಿದ್ದವು. ಜೊತೆಗೆ ಲಾಭದಲ್ಲಿ ನಡೆಯುವ ಬಿಸ್ಕೆಟ್ ಫ್ಯಾಕ್ಟರಿ, ರಿಯಲ್ ಎಸ್ಟೇಟ್, ಗ್ರಾನೈಟ್ ಮೈನ್ಸ್‌ನಂತಹ ದಂಧೆಗಳೂ ಕೈಹಿಡಿದಿದ್ದವು. ಅಂತಹ ಕೋಟ್ಯಾಧಿಪತಿಗಳ ಮಗ ತಮ್ಮ ಸುಪರ್ದಿನಲ್ಲಿರುವ ಕಾಲೇಜಿನಲ್ಲೇ ಸೋಲುವುದೆಂದರೇನು ? ವಿಷಯ ತಿಳಿದ ಅವರಿಗೂ ಮುಜುಗರವಾಯಿತು. ಆಫ್ಟರ್ ಆಲ್ ಗೇಮ್ ಎಂದು ಸುಮ್ಮನೆ ಕೈಬಿಟ್ಟುಬಿಡಬಹುದಿತ್ತೇನೋ. ಮಗನಿಗೆ ಈಗಿನಿಂದಲೇ ಸೋಲಿನ ಅನುಭವವಾಗಬಾರದು. ಮುಂದೆ ದೇಶ ಆಳುವ ತನ್ನ ಮಗ ಜುಜುಬಿ ಕಾಲೇಜಿನ ಆಟಗಳಲ್ಲಿ ಸೋಲುವುದು ಅವನ ಕೆಲಸಕ್ಕೆ ಹಿನ್ನಡೆ ಎಂದಾಗ ಕಹಿಯಾದ. ಹೇಗಾದರೂ ಮಾಡಿ ಜಯಿಸಬೇಕು ಎಂಬ ರಾಜಕಾರಣದ ಪ್ರಸ್ತುತ ತತ್ವ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿದ್ದ ದುರ್ಗಸಿಂಹ, ಮಗನ ಮೋರೆಯಲ್ಲಿ ನಿರಾಶೆಯ ಗೆರೆ ಮೂಡಲು ಬಿಡಬಾರದೆಂದುಕೊಂಡರು. ರಂಗನ ಪೂರ್ವಾಪರ ತಿಳಿದುಕೊಂಡರು.
ಲಾಯರ್ ವೆಂಕಟ ಯಾವುದೋ ಕ್ರಿಮಿನಲ್ ಕೇಸ್ ಒಂದನ್ನು ಗೆದ್ದಿದ್ದರಿಂದ ತನ್ನ ಗೆಳೆಯರಿಗೆ ಮನೆಯಲ್ಲೇ ಸಣ್ಣ ಪಾರ್ಟಿಯನ್ನು ಏರ್ಪಡಿಸಿದ್ದ. ಲಾಯರ್‌ಗಳು ಅವರ ಹೆಂಡಂದಿರು ಮಕ್ಕಳು ಗೆಳೆಯರೂ ಆಗಮಿಸಿದ್ದರು. ವೆಜಿಟೇರಿಯನ್ ಪಾರ್ಟಿಯಾದ್ದರಿಂದ ಅಂತಹ ರಂಗು ಗುಂಗುಗಳಿರಲಿಲ್ಲ. ಆ ಕಾರಣವಾಗಿಯೇ ಮನೆಯಲ್ಲೇ ಸಿಂಪಲ್ಲಾಗಿ ಪಾರ್ಟಿ ಜರುಗಿತ್ತು. ಹೊರಗಡೆಯಿಂದ ಸ್ವೀಟ್ಸು, ತಂಪು ಪಾನೀಯಗಳು ಐಸ್ ಕ್ರೀಂಗಳು ಬಿಜಯಂಗೈದಿದ್ದರೂ ಕಮಲಮ್ಮ, ಕಾವೇರಿ ಮನೆಯಲ್ಲಿ ಕಾಯಿ ಹೋಳಿಗೆ ಫಲಾವ್ ಅನ್ನ ಸಾಂಬಾರ್ ಇತರೆ ಐಟಮ್ಸ್‍ಗಳನ್ನು ಮಾಡಿದ್ದರು. ಅವರೊಂದಿಗೆ ರಂಗನೂ ಬಂದ ಅತಿಥಿಗಳ ಉಸ್ತುವಾರಿ, ಅವರಿಗೆ ಬೇಕಾದ್ದನ್ನು ಸರಬರಾಜು ಮಾಡುವ, ಕೇಳಿದ್ದನ್ನು ತಂದು ಅಚ್ಚುಕಟ್ಟಾಗಿ ಬಡಿಸುವ ಕಾರ್ಯಗಳಲ್ಲಿ ನೆರವಿಗೆ ನಿಂತಿದ್ದ. ವೆಂಕಟ, ಪರಮೇಶಿ, ಗಣೇಶ ಅವರ ಹೆಂಡಂದಿರು ಮಕ್ಕಳದ್ದೇ ಅಟ್ಟಹಾಸ ‘ಸರಿಯಾಗಿ ಬಡಿಸಲೆ ಕತ್ತೆ’ ಎಂದೂ ವೆಂಕಟ ಕೂಗಾಡುವಾಗ ಅತಿಥಿಗಳೂ ‘ಅಲೆ, ಏನೋ ನಿನ್ನ ಹೆಸರು?’ ಎಂದು ಕೇಳಿ ತಿಳಿದುಕೊಂಡರು. ‘ಅಲೆ ರಂಗಾ, ಫಲಾವ್ ತಾರಲೆ, ಹಪ್ಪಳ ಬಡ್ಸೋ’ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಕಮಲಮ್ಮ, ಕಾವೇರಿ ನಯನಾಜೂಕಾಗಿ ಕೇಳಿ ಕೇಳಿ ಬಡಿಸುವಾಗ ಹೊಟ್ಟೆಬಾಕರಲ್ಲಿ ಕೆಲವರಿಗೆ ಆತುರ. ‘ಏನ್ರಿ ಇಂತಹ ದರವೇಶಿ ಹೆಂಗಸರುಗಳನ್ನು ಇಟ್ಗೊಂಡಿದಿರಾ? ಬೇಗ ಬೇಗ ಬಡಿಸಿರಮ್ಮ. ಏಯ್ ಹುಡ್ಗಿ ಫಲ್ಯ ತಾರೆ ಇಲ್ಲಿ… ವಿದ್ಯಾವಂತ ಅತಿಥಿಗಳ ಅಟ್ಟಹಾಸ ‘ಏಯ್ ಐಸ್ ಕ್ರೀಂ ಕೊಡೆ’ ಮಕ್ಕಳ ಚೀರಾಟ. ಹೈರಾಣವಾದರು ಬಡಿಸುವವರು. ‘ಏನ್ ಕೆಲಸದವರನ್ನ ಇಡ್ಕೊಂಡಿದ್ದೀರಿ… ಚುರುಕೇ ಇಲ್ಲ. ನಿಮ್ಮ ಮತುಗಳಿಗೆ ಅವರ ರಿ-ಆಕ್ಷನ್ನೂ ಇಲ್ಲ. ಒಂದಿಷ್ಟು ತಗ್ಗಿ ಬಗ್ಗಿ ನಡಿಯೋರನ್ನ ಇಟ್ಟೋಬೇಕ್ರಿ’ ಸಮಾ ಇಳಿಸುತ್ತಿದ್ದ ಲಾಯರ್ ಒಬ್ಬನ ಪುಗಸಟ್ಟೆ ಸಲಹೆ. ‘ನೋಡ್ರಿ, ಆ ಹೆಂಗಸು ಕೈಯಿಂದ ಬಡಿಸ್ತಾ ಇದಾಳೆ ಛಿ ಛಿ ಛಿ…’ ಲಾಯರ್‍ನ ಮಡದಿಯೊಬ್ಬಳು ಕಮಲಮ್ಮನ ಕೆನ್ನೆಗೆ ರಾಚಲು ಕೈಬೀಸಿದಳು. ಕೈ ಮುಂದೆ ಹೋಗುವುದಿರಲಿ ಸ್ತಬ್ಧವಾಗಿದೆ! ರಂಗ ಆ ಕೈಯನ್ನು ಗಕ್ಕನೆ ಹಿಡಿದಿದ್ದ. ‘ಫಲ್ಯ ಕೋಸಂಬ್ರಿನೆಲ್ಲಾ ಹೀಗೆ ಕಣ್ರಿ ಬಡಿಸೋದು, ಸುಮ್ನೆ ತಿಂದು ಹೋಗ್ರಿ, ಕೈ ಪೈ ಎತ್ತಿದರೆ ತಿಂದದ್ದು ಕಕ್ಕಿಸಿಬಿಡ್ತೀನಿ ಹುಷಾರ್’ ಅಂದ ಮೆಲುದನಿಯಲ್ಲಿ. ‘ನನ್ನ ಹೆಂಡ್ತಿ ಕೈ ಹಿಡಿಯೋವಷ್ಟು ಕೊಬ್ಬೇನೋ ಗುಲಾಮ ನಿನ್ಗೆ?’ ಅಬ್ಬರಿಸಿದ ಲಾಯರ್.
‘ನಾನೂ ಅತಿಥಿಗಳು ಅಂತ್ಲೇ ಸುಮ್ನೆ ಬಿಟ್ಟಿದೀನಿ. ಇನ್ನೊಬ್ಬರ ಮನೆಗೆ ಅತಿಥಿಗಳಾಗಿ ಬಂದೋರೂ ಸೌಜನ್ಯದಿಂದ ವರ್ತಿಸಬೇಕು ಸಾರ್. ಮರ್ಯಾದೆ ಎಲ್ಲರಿಗೂ ಇರುತ್ತೆ. ಮರ್ಯಾದೆ ಕೊಟ್ಟು ಮರ್ಯಾದೆ ಪಡೀಬೇಕು’ ತಣ್ಣಗೆ ಹೇಳಿದ ರಂಗ.
‘ಏನ್ರಿ ಇದು ಮಿಸ್ಟರ್ ವೆಂಕಟ್! ಜವಾನರನ್ನೆಲ್ಲಾ ತಲೆಮೇಲೆ ಕೂರಿಸ್ಕೊಂಡಿದೀರಿ… ಇವನಿಗೆ ರೆಸ್ಪೆಕ್ಟ್ ಬೇರೆ ಕೊಡಬೇಕಂತೆ?’ ಅತಿಥಿಗಳಲ್ಲಿ ಹಲವರು ಸಿಡಿಮಿಡಿಗೊಂಡರು. ಆಗಲೂ ವೆಂಕಟ್ ಆಗಲಿ ಪರಮೇಶಿ ಗಣೇಶರಾಗಲಿ ತುಟಿಬಿಚ್ಚದೆ ಹಲ್ಲುಗಿಂಜಿದರು. ‘ಏಯ್ ರಂಗ, ಮನೆಗೆ ಬಂದ ಅತಿಥಿಗಳ ಮೇಲೆ ಹಾಗೆಲ್ಲಾ ರೇಗಬಾರ್‍ದೋ… ನಿನ್ನ ಕೈಲಾಗದಿದ್ರೆ ಒಳಗೆ ಹೋಗು… ನಾವೇ ಬಡಿಸ್ಕೋತೇವೆ’ ವೆಂಕಟನ ಧರ್ಮಪತ್ನಿ ಪಾರ್ವತಿ ದುರುಗುಟ್ಟಿದಳು.
‘ಬಡಿಸ್ಲಿಬಿಡ್ರಿ ಅವರಿರೋದ್ಯಾಕೆ? ಏನಮ್ಮ, ನಿನ್ನ ಮಗನಿಗೆ ಬುದ್ಧಿ ಹೇಳೋಕೆ ಆಗೋಲ್ವೆ?’ ಕಮಲಮ್ಮಳತ್ತ ಉರಿಗಣ್ಣುಬಿಟ್ಟನೊಬ್ಬ.
‘ಬುದ್ಧಿ ಹೇಳಬೇಕಾಗಿರೋದು ಈ ನನ್ನ ಮಗನಿಗಲ್ಲ… ಈ ನನ್ಮಕ್ಳಿಗೆ’ ಎಂದು ವೆಂಕಟ ಪರಮೇಶಿ ಗಣೇಶರತ್ತ ಬೆರಳು ಮಾಡಿದ ಕಮಲಮ್ಮ ಸಿಡಿದಾಗ ಅತಿಥಿಗಳ ಬಾಯಲ್ಲಿದ್ದದ್ದು ಒಳಗಿಳಿಯಲಿಲ್ಲ. ತಮ್ಮನ್ನು ಊಟಕ್ಕೆ ಕರೆದ ವೆಂಕಟನೂ ಅವನ ತಮ್ಮಂದಿರು ಹೆಂಡಿರೂ ಪ್ರತಿಮೆಗಳಂತೆ ನಿಂತಾಗ ಬಂದ ಅತಿಥಿಗಳೂ ಅಸಹಾಯಕರು. ಬೆದರು ಕಂಗಳಿಂದ ಕಮಲಮ್ಮನನ್ನು ನೋಡಿದರು.
‘ನೋಡಮ್ಮ ತಾಯಿ, ನಿನ್ನ ಮಗನ ಮೇಲೆ ತಾಯಿಯಾದ ನಿನ್ನ ಅಭಿಮಾನವಿರಬೇಕು ನಿಜ… ಆದರೆ ಸಂಬಳ ಕೊಟ್ಟು ಇಟ್ಟುಕೊಂಡ ಧಣಿಗಳ ಬಗ್ಗೆನೂ ನಿಮಗೆ ಗೌರವ ಇರಬೇಕಲ್ವೆ?’ ವೃದ್ಧ ಲಾಯರ್ ಒಬ್ಬ ಸಮಾಧಾನವಾಗಿ ತಿಳಿ ಹೇಳಿದ.
‘ಎತ್ತ ತಾಯಿ, ಒಡಹುಟ್ಟಿದವರ ಮೇಲೂ ಈ ವಿದ್ಯಾವಂತರಿಗೆ ಕಿಂಚಿತ್ತಾದರೂ ಅಂತಃಕರಣ ಇರಬೇಕಲ್ವೆ ಸಾರ್?’ ಕಮಲಮ್ಮ ಬಿಕ್ಕಿದಳು.
‘ಈನೇನ್ ಹೇಳ್ತಿದೀಯಮ್ಮಾ ಅರ್ಥವಾಗ್ತಿಲ್ಲ’ ವೃದ್ಧ ಲಾಯರ್ ಆಕೆಯತ್ತ ನೋಡುವಾಗ ಎಲ್ಲರ ನೋಟವೂ ಅವರನ್ನು ಅನುಸರಿಸಿತು.
‘ಅಪ್ಪಾ ಕ್ರಿಮಿನಲ್ ಮೈಂಡೆಡ್ ಲಾಯರ್ ಈಗಲಾದರೂ ನಮ್ಮನ್ನು ಯಾರೂ ಅಂತ ಇಂಟ್ರಡ್ಯೂಸ್ ಮಾಡ್ತಿಯೋ ನಾವೇ ಮಾಡ್ಕೊಬೇಕೋ?’ ರಂಗ ಸೀಳುನೋಟ ಬೀರಿದ.
ಲಾಯರ್ ವಂಕಟ ಸಾವರಿಸಿಕೊಂಡು ಎದ್ದು ನಿಂತು ಮಾತನಾಡುವಾಗ ಅವನ ಮುಖ ರಸಹೀರಿದ ಕಬ್ಬಿನಂತಾಗಿತ್ತು. ‘ಸಾರಿ ಫ್ರೆಂಡ್ಸ್, ನೀವು… ನೀವು ನಿಮ್ಮಿಂದಾಗಿ ಒಂದು ಸಣ್ಣ ಮಿಸ್ಟೇಕ್ ಆಗಿದೆ… ಅಥವ ನನ್ನಿಂದಲೇ ಅಂದ್ಕೋಳಿ. ಈಕ ನನ್ನ ತಾಯಿ, ಇವಳು ತಂಗಿ… ಇವನು ತಮ್ಮ ನಾನು ಮೊದಲೆ ಪರಿಚಯ ಮಾಡಿಸಬೇಕಿತ್ತು… ನಿಮಗೆಲ್ಲಾ ಗೊತ್ತಿದೆ ಅನೇಕ ಸಾರಿ ಮನೆಗೆ ಬಂದಿದೀರಾ ಗೊತ್ತಿಲ್ಲದೆ ಇದ್ದೀತೆ ಅಂತ ಭಾವಿಸಿದೆ… ವೆರಿ ಸಾರಿ, ಊಟ ಮುಂದುವರೆಸಿ ಪ್ಲೀಸ್.
‘ಮಿಸ್ಟರ್ ವೆಂಕಟ್, ನಮ್ಮಲ್ಲಿ ಕೆಲವರು ನಿಮ್ಮ ಮನಗೇನೋ ಬಂದಿದ್ದೀವಿ… ಆದ್ರೂ ನೀವು ಇವರನ್ನು ಪರಿಚಯ ಮಾಡಿಸೋದಿರ್‍ಲಿ, ಆಳುಗಳಂತೆಯೇ ನಡೆಸ್ಕೋತಿದ್ದಿರಿ. ನಾವೂ ಹಾಗೆ ತಿಳ್ಕೊಂಡ್ವಿ… ಸಾರಿ ಅಮ್ಮಾ, ತಿಳೀದೆ ನಮ್ಮಿಂದ ದೊಡ್ಡ ತಪ್ಪಾಗಿದೆ’ ಒಬ್ಬ ಎಂಜಲ ಕೈ ಜೋಡಿಸಿಬಿಟ್ಟ. ಇತರರ ಅಂತಃಕರಣವೂ ಕಲಕಿದಂತಾಯಿತು ‘ಸೊ ಸಾರಿ ತಿಳೀಲಿಲ್ಲ’ ಹಲವರು ತಾಯಿ ತಂಗಿ ತಮ್ಮನ ಮುಖವನ್ನು ನೋಡುತ್ತಾ ಉದ್ಗರಿಸುವಾಗ ವೆಂಕಟನಿಗೆ ಭೂಮಿ ಬಾಯಿ ತೆರೆದು ನುಂಗಬಾರದೆ ಅನ್ನಿಸಿತು. ‘ಅಯ್ಯೋ ಬಿಡಿ. ಯಾವಾಗ್ಲೂ ತೆಪ್ಪಗೆ ಇರೋರು ಈವತ್ತೇನೋ ಕೊಂಬು ಬಂದೋರ ಹಾಗೆ ಆಡ್ತಾರೆ ಅಂತ ಯಾರಿಗೆ ಗೊತ್ತು?’ ಫ್ಯಾಕ್ಟರಿ ಪರಮೇಶಿ ಹೆಂಡತಿ ಮಾಧುರಿ ಕಟಕಿಯಾಡಿದಳು.
‘ಆದ್ದಾಯಿತು ಊಟ ಮಾಡ್ರಪ್ಪಾ. ಮನೆಗೆ ಬಂದ ಅತಿಥಿಗಳು ನೊಂದ್ಕೋಬಾರ್‍ದು ನಮಗಿದೆಲ್ಲಾ ಅಭ್ಯಾಸವಾಗಿದೆ. ರಂಗ ಯಾಕೋ ಈವತ್ತು ಎಲ್ಲಾ ಅಭಾಸ ಮಾಡಿಬಿಟ್ಟ… ನೀವು ಕೇಳಿ ಬಡಿಸ್ಕೊಂಡು ಊಟಮಾಡಿ’ ಕಮಲಮ್ಮ ಕ್ಷಣದಲ್ಲೇ ಎಲ್ಲವನ್ನೂ ಮರೆತು ಉಲ್ಲಾಸದಿಂದ ಬಡಿಸುವಾಗ ಮುಖದಲ್ಲಾಗಲಿ ನಡವಳಿಕೆಯಲ್ಲಾಗಲಿ ಕಹಿ ಉಳಿಸಿಕೊಳ್ಳಲಿಲ್ಲ. ರಂಗ, ಕಾವೇರಿ ತಾಯಿಯ ಜೊತೆಗೂಡಿ ಬಡಿಸುವಾಗ ಅತಿಥಿಗಳು ಅವರ ಆತಿಥ್ಯಕ್ಕೆ ಶರಣಾದರು. ಬಂದವರಲ್ಲಿ ಕೆಲವರ ಮನೆಯಲ್ಲಿ ಇದೇ ರೀತಿ ನೀತಿಗಳು ಜಾರಿಗೆ ಬಂದಿದ್ದರಿಂದ, ದುಡಿಯದೇ ಕಾಂಚಾಣ ತಾರದೆ ಮನೆಯಲ್ಲಿ ತಿನ್ನುವ ಹಿರಿಯರು ಕಿರಿಯರನ್ನು ತದ್ರೂಪು ಹೀಗೇ ನಡೆಸಿಕೊಳ್ಳುವ ಜಾಯಮಾನದವರು ಇದ್ದುದರಿಂದ ಅವರಿಗೇನು ಇದು ಮಹಾ ಅಪರಾಧವೆಂಬಂತೆ ಭಾಸವಾಗಲಿಲ್ಲ. ‘ಮೂರು ಕಾಸು ಸಂಪಾದ್ನೆ ಮಾಡೋ ಯೋಗ್ಯತೆ ಇಲ್ಲದಿದ್ದರೂ ನಿಮ್ಮವರಲ್ಲಿ ಜೇಂಕಾರಕ್ಕೇನು ಕಡಿಮೆಯಿಲ್ಲ ಬಿಡಿ’ ಎಂದೂ ಗುಸಗುಸ ಪಿಸಪಿಸ ಪರವಹಿಸಿದವರೂ ಇದ್ದರು. ಪಾರ್ವತಿ ಮಾಧುರಿ ರಾಗಿಣಿ ಅವರ ಮಾತಿಗೆ ತಲೆದೂಗಿ ಜಯದ ನಗೆ ಬೀರಿದರು. ಲೋಕೊಭಿನ್ನ ರುಚಿಯ ನಡುವೆಯೂ ರುಚಿಯಾದ ಭೋಜನ ಸವಿದ ಅತಿಥಿಗಳು ಹೋಗುವಾಗ ಹೆಚ್ಚಾಗಿ ಕಮಲಮ್ಮ ಕಾವೇರಿ ರಂಗನನ್ನೇ ಅಭಿನಂದಿಸಿದರು. ‘ಸಾರಿ ಕಣಪ್ಪ. ತಿಳಿದೇ ನಿಮ್ಮ ತಾಯಿ ಮೇಲೆ ಕೈ ಮಾಡಿಬಿಡ್ತಿದ್ದೆ’ ಕೈ ಎತ್ತಿದಾಕೆ ರಂಗನಲ್ಲಿ ಕ್ಷಮೆ ಯಾಚಿಸಿದಳು.
‘ತಿಳೀದೇ ಮಾಡೋದು ತಪ್ಪಲ್ಲ ಬಿಡಿ. ಆದ್ರೂ ಯಾರ ಮೇಲೆ ಆಗ್ಲಿ ನೆರೆದವರ ಎದುರು ಕೈ ಮಾಡಬಾರು ಮೇಡಮ್. ಅದೂ ವಯಸ್ಸಾದವರು ಕೂಲಿಗಳೇ ಆಗಿರ್‍ಲಿ ಕರುಣೆ ತೋರೋದು ಮಾನವೀಯತೆ’ ರಂಗ ವಿನಯ ತೋರಿದ.
‘ಯು ಆರ್ ಕರೆಕ್ಟ್ ಯಂಗ್ ಮ್ಯಾನ್’ ಆಕೆಯ ಗಂಡ ಕೈ ಕುಲುಕಿದ. ಎಲ್ಲರೂ ಕಹಿಯನ್ನು ಮರೆತು ವೆಂಕಟನ ಕೈ ಕುಲುಕಿ ಹೊರಟುಹೋದರು. ಎಲ್ಲರ ಎದುರು ಈಗ ಮತ್ತೆ ಅಪರಾಧಿಗಳಂತೆ ನಿಂತವರು ಅದೇ ಕಮಲಮ್ಮ, ಕಾವೇರಿ ಮತ್ತು ರಂಗ! ವೆಂಕಟನಿನ್ನೂ ಕಹಿ ಮರೆತಿರಲಿಲ್ಲ. ಕಹಿಗೆ ಮತ್ತೆ ಕಹಿ ಬೆರೆಸಿದ ಫ್ಯಾಕ್ಟರಿ ಸೂಪರ್‌ವೈಸರ್ ಪರಮೇಶಿ. ‘ಈ ರಂಗನನ್ನು ಹೀಗೆ ಬಿಟ್ರೆ ನಾಳೆ ನಾವೆಲ್ಲಾ ಜೈಲು ಕಂಬಿ ಎಣಿಸಬೇಕಾಗುತ್ತೆ. ಇರೋ ನೌಕರಿ ಕಳ್ಕೊಂಡು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೋಬೇಕಾಗುತ್ತೆ ನಮ್ಮ ಹೆಂಡಿರು ಮಕ್ಕಳು ಬೀದಿ ಪಾಲಾಗ್ತಾರೆ. ಇವನಿಂದ ಈ ಮನೆ ಶಾಂತಿ ನೆಮ್ಮದಿ ಮಣ್ಣು ಪಾಲಾಗೋದು ಗ್ಯಾರಂಟಿ’ ಕೂಗಾಡಿದ ಪರಮೇಶಿ. ನನ್ನಿಂದ ಅಂತದ್ದೇನಾಯಿತಪ್ಪಾ ಎಂದು ರಂಗನಿಗೇ ಅಚ್ಚರಿ. ಎಲ್ಲರೂ ಅದೇ ಪ್ರಶ್ನೆ ಹಾಕಿದರು. ‘ಇನ್ನೇನು ಆಗ್ಬೇಕಣ್ಣಾ. ಸಿಕ್ಕ ಸಿಕ್ಕೋರ ಮೇಲೆ ಜಗಳ ಆಡ್ತಾನೆ, ದೊಡ್ಡೋರು ಸಣ್ಣೋರು ಅಂತ ಮಕಮೂತಿ ನೋಡ್ದೆ ಹೊಡಿತಾನೆ ಅಯೋಗ್ಯ. ಹರೇವು ಅನ್ನೋದು ಹಬ್ಬವಾಗೇತೆ ಇವನ್ಗೆ… ಆವತ್ತು ಪಾಳೇಗಾರರ ಮನೇರ ಮೇಲೆ? ದೊಡ್ಡ ರಾಜಕಾರಣಿ, ನಮ್ಮ ಫ್ಯಾಕ್ಟರಿ ಓನರ್ ದುರ್ಗಸಿಂಹರ ಮಗ ಸಂಗ್ರಾಮನ ಮೇಲೆ…’ ಪರಮೇಶಿ ಒದರಿದ.
‘ಹೌದೇನಲೋ ಈಡಿಯಟ್?’ ಅಣ್ಣ ಅತ್ತಿಗೆಯರು ಏಕಕಾಲದಲ್ಲಿ ಅವನನ್ನು ಸುಟ್ಟು ಬಿಡುವಂತೆ ನೋಡುತ್ತಾ ಪ್ರಶ್ನಿಸಿದರು.
‘ಅದೇನು ನಡೀತು ಅಂದ್ರೆ ವೆಂಕಟೇಶಣ್ಣಾ’ ನಡೆದದ್ದನ್ನು ಹೇಳಿದರೆ ಖಂಡಿತ ತನ್ನನ್ನು ಮೆಚ್ಚುತ್ತಾರೆಂದು ರಂಗ ಹೇಳಲನುವಾದ. ಆದರೆ ಪರಮೇಶಿ ಎಲ್ಲಿ ಬಿಟ್ಟಾನು. ‘ಮುಚ್ಚೋಬಾಯಿ. ನಿನ್ನ ಎಕ್ಸ್‌ಪ್ಲನೇಶನ್ ಬೇಕಿಲ್ಲ ನನ್ಗೆ… ಅಷ್ಟು ಸಾಲದು ಅಂತ ಮೊನ್ನೆ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿನಲ್ಲಿ ಸಂಗ್ರಾಮನ ಬ್ಯಾಚ್‌ನ ಸೋಲಿಸಿದ್ದೀಯ ಹೌದೋ? ಅಲ್ಲವೋ ಬೊಗಳೋ?’ ಪರಮೇಶಿ ಭರತನಾಟ್ಯಗೈದ. ತಲೆಯಾಡಿಸಿದ ರಂಗ. ‘ನೋಡಿದ್ರಾ? ಇವನ ಹೈಲಾಟಗಳಿಂದ ನನ್ನ ನೌಕರಿಗೇ ಕುತ್ತು ಬಂದಿದೆ ಕಣೋ ನನ್ನ ಹೆಂಡ್ತಿ ಮಕ್ಳು ಬೀದಿಪಾಲೇ’ ಕೂಗಾಟಕ್ಕಿಗ ಸಣ್ಣ ಅಳುದನಿಯೂ ಸಾಥ್ ನೀಡಿತು. ‘ಅಲ್ವೋ ನಿನ್ನ ನೌಕರಿಗೂ ಬ್ಯಾಸ್ಕೆಟ್‌ಬಾಲ್ ಆಟಕ್ಕೂ ಏನೋ ಸಂಬಂಧ?’ ಗಣೇಶ ತಲೆಪರಚಿಕೊಂಡ.
‘ಆಗ್ಲೆ ಹೇಳಿದ್ನಲ್ಲ. ಇವನು ಸೋಲಿಸಿದ್ದು ನನ್ನ ಧಣಿ ಮಗನ್ನ ಇವನು ಹೊಡೆದಿದ್ದು ನನ್ನ ಧಣಿ ಮಗನ್ನ…’ ಬಾಯಿ ಬಡಿದುಕೊಂಡ ಪರಮೇಶಿ.
‘ಅದಕ್ಕೆ ಅವನೇನ್ ಮಾಡಬೇಕ್ರಿ ಈಗ. ಬೇಗ ಹೇಳ್ರಿ’ ಮಾಧುರಿ ಕಳವಳಿಸಿದಳು.
‘ನನ್ನ ನೌಕರಿ ಉಳಿಬೇಕು ಈ ಸಂಸಾರ ಚೆನ್ನಾಗಿರ್‍ಬೇಕು ಅಂದ್ರೆ ರಂಗ ನೆಕ್ಸ್ಟ್ ಗೇಮಲ್ಲಿ ಸೋಲಬೇಕು ಕಣೆ… ಸೋಲಬೇಕು… ಇದು ದುರ್ಗಸಿಂಹರ ಆರ್ಡರ್.’
‘ನಿನ್ನ ನೌಕರಿಗಿಂತ ಇವನ ಮ್ಯಾಚ್ ಹೆಚ್ಚಾ? ಸೋಲ್ತಾನೆ ಬಿಡು’ ಲೆಕ್ಚರರ್ ಗಣೇಶ ಒಪ್ಪಿಗೆಯನ್ನಿತ್ತ. ‘ಅಣ್ಣಾ, ಅದು ಫೈನಲ್ ಮ್ಯಾಚ್ ಅಣ್ಣ’ ಕಂಗಾಲಾದ ರಂಗ.
‘ಅಯ್ಯೋ ಪಾಪಿ, ನಿನ್ನ ಅಣ್ಣನ ಬಗ್ಗೆ ಗೌರವ ಇಲ್ವೇನೋ ಕರುಣೆ ಇಲ್ವೇನೋ? ಅವರ ನೌಕರಿ ಹೋದ್ರೆ ಅಷ್ಟಕ್ಕೆ ಸುಮ್ಮನಾಗ್ತಾರೇನೋ ಸಾಹೇಬರು? ನಾನೂ ಅಲ್ಲೇ ದುಡೀತಾ ಇದೀನಿ. ನನ್ನ ಮನೆಗೆ ಓಡಿಸ್ತಾರೆ. ನಮ್ಮ ಸಂಸಾರದ ಗತಿ ಏನೋ ಪಾಪಿ… ನಾವು ಬೀದಿಗೆ ಬಿದ್ದರೆ ನಿನಗೆ ಆನಂದವಾಗುತ್ತೇನೋ’ ಮಾಧುರಿ ನಿಜಕ್ಕೂ ಬೆದರಿದ ಹರಿಣಿಯಂತಾಗಿದ್ದಳು.
‘ಸಾಧ್ಯವಿಲ್ಲ. ನಾನು ಸೋಲೋದು ತಂಡಕ್ಕೆ ಮಾಡಿದ ಅಪಮಾನ, ಇದು ನನ್ನ ಪ್ರೆಸ್ಟೀಜ್ ಕೊಶ್ಚನ್’ ಅಳುಕದೆ ಮರುನುಡಿದ ರಂಗ.
‘ಬೆಂಕಿ ಇಡ್ಲಿ ನಿನ್ನ ಪ್ರೆಸ್ಟೀಜ್ಗೆ. ಅಣ್ಣ ಅತ್ತಿಗೆಯ ಸಂಸಾರಕ್ಕಿಂತ ನಿನ್ನ ಗೆಲುವು ದೊಡ್ಡದೇನೋ ಸ್ವಾರ್ಥಿ… ನೀವಾದ್ರೂ ಹೇಳಿ ಆತ್ತೆ’ ಕಣ್ಣೀರೆದಳು ಮಾಧುರಿ. ಅವಳು ಮೊದಲ ಬಾರಿಗೆ ‘ಅತ್ತೆ’ ಎಂದು ಕರೆದಾಗ ಅವರಿವರಿಗೇನು ಸ್ವತಹ ಕಮಲಮ್ಮಳಲ್ಲೇ ಪುಳಕ. ಪದೆಪದೆ ಆಕೆ ಬೇಡುವಾಗ ಕನಿಕರಿಸಿದ ಕಮಲಮ್ಮ, ‘ರಂಗಾ ಸೋತು ಬಿಡಪ್ಪಾ, ನಿನ್ನ ಅಣ್ಣ ಅತ್ತಿಗೆಯರ ಸುಖಕ್ಕಿಂತ ಆ ಗೆಲುವು ಮುಖ್ಯವಲ್ಲ’ ಎಂದು ಗದ್ಗದಿತಳಾದರು. ಎಲ್ಲರೂ ಅದನ್ನೇ ಪುನರುಚ್ಚರಿಸಿದರು. ‘ನೋ ನೋ… ನನ್ನ ಮನಸ್ಸು ಒಪ್ತಾ ಇಲ್ಲ’ ರಂಗ ಸಂದಿಗ್ಧಕ್ಕೆ ಒಳಗಾಗಿದ್ದ. ‘ನೀನು ಈ ಮ್ಯಾಚ್ ಸೋಲ್ತೀಯಾ ಅಷ್ಟೆ’ ಕಮಲಮ್ಮನ ದನಿ ಬುಲೆಟ್‌ನಂತೆ ಬಂದು ರಂಗನ ಮನವನ್ನು ತಾಕಿತ್ತು.
‘ಅಮ್ಮಾ’ ಎಂದ ವೇದನೆಯಿಂದ. ಕಮಲಮ್ಮ ಸರಕ್ಕನೆ ಅಡಿಗೆಮನೆ ಸೇರಿಕೊಂಡರು, ಅವರ ಕಣ್ಣಂಚಿನಲ್ಲಿ ನೀರಿತ್ತು.
*****