ಕಾಳ ರಾತ್ರಿ ಚೋಳ ರಾತ್ರಿ
ಹಾಳ ಗೂಗಿ ಹಾಡಿದೆ
ಗಗನದಲ್ಲಿ ಚಿಕ್ಕಿ ಮೂಡಿ
ಮೂಡಿ ಮುಳುಗಿ ಸತ್ತಿದೆ ||೧||
ತೇಲಿ ತೇಲಿ ಚಳಿಯ ಗಾಳಿ
ಹುಳ್ಳ ಹುಳಿಯ ಮಾಡಿದೆ
ಮಳೆಯ ಗೂಗಿ ಹಳೆಯ ಕಾಗಿ
ಸವುಳು ಸುಣ್ಣಾ ಆಗಿದೆ ||೨||
ಬೆಟ್ಟದಲ್ಲಿ ಕಾಡು ಕೋಳಿ
ಗಟ್ಟಿಯಾಗಿ ಕೂಗಿದೆ
ಮುಳ್ಳ ಬೇಲಿ ಕಳ್ಳಿ ಕೋಲಿ
ವಿಷದ ತೋಂಡಿ ಸುರಿದಿದೆ ||೩||
ಕುಣಿಯ ನರಿಯು ಕಣಿಯ ನವಿಲ
ರುಂಡ ಮುರಿದು ತಿಂದಿದೆ
ಹೊನ್ನ ಗಣಿಯ ರತುನ ಪಕ್ಷಿ
ಹಾವ ಬಾಯ್ಗೆ ಬಿದ್ದಿದೆ ||೪||
ಠಣ್ಣ ಠಣಣ ಕಣ್ಣ ನೀರು
ಜಲತರಂಗ ನುಡಿಸಿದೆ
ಮೊದಲ ಮಿಂಚು ಗಿರಿಯ ಅಂಚು
ಮಿಂಚಿ ವೀಣೆ ಮಿಡಿದಿದೆ ||೫||
*****