ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ.
ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ :
ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ,
ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು,
ನಾಲ್ಕು ತಿಂಗಳು ಹಳೆಯ ವಾರಪತ್ರಿಕೆ, ಕಾಫಿ ಗಸಿ ಇದ್ದ ಎರಡು ಲೋಟ.
ಪಕ್ಕದ ಬೆಡ್ಡಿನಲ್ಲಿ ಕ್ಯಾನ್ಸರ್ ಬಂದ ಟೈಲರು.
ನಿನಗೆಷ್ಟು ವಯಸ್ಸೆಂದರೆ
ಸಾವೂ ಲೆಕ್ಕ ಇಡುವುದು ಮರೆತಿದೆ
ಎಂದು ಡಾಕ್ಬರು ಹೇಳುತಿದ್ದರು.
ನಿನಗೆಷ್ಟು ವಯಸ್ಸೆಂದರೆ
ನಿನ್ನ ಬೀದಿಯ ಮಕ್ಕಳು,
ಹಳ್ಳ ಬಿದ್ದ ಫುಟ್ ಪಾತಿನಲ್ಲಿ
ಕುಗ್ಗಿಕುಸಿದು ಬಿದ್ದ ಸಾಮ್ರಾಜ್ಯದ ಹಾಗೆ,
ನೀನು ಕಳೆದ ಶತಮಾನವೆನ್ನುತ್ತಿದ್ದರು.
ಸಾವು ಬಂದಾಗ ನಿನಗೆ ಯೌವನವೂ ಬಂತು :
ಇದ್ದಕ್ಕಿದ್ದಂತೆ ಬಾಲಭಾಷೆಯಲ್ಲಿ ಮಾತನಾಡಿದೆ,
ನಿನಗೂ ಬದುಕಿದ್ದವರಿಗೂ ನಡುವೆ ಇದ್ದ
ಬಿಳಿಯ ತೆರೆ ಗ್ಲೈಡರಿನ ರೆಕ್ಕೆಯಂತಿತ್ತು.
ನಿನ್ನ ನರಕ್ಕೆ ಚುಚ್ಚಿದ್ದ ಗ್ಲೊಕೋಸು ನಳಿಗೆ
ತೊದಲಿತು, ಚೆಜ್ಜಾದ ಮೇಲೆ ಕುಳಿತ ಪಾರಿವಾಳ
ಪತರ ಗುಟ್ಟಿತು. ನಿನ್ನ ಬಗ್ಗೆಯೇ ನೀನೇ
ಮಾತಾಡಿಕೊಳ್ಳುತ್ತಾ ಈ ಬೇಸತ್ತ ಜಾಗದಿಂದ
ಸಾವಿನ ನಾಡಿಗೆ ನಡೆದಿದ್ದೆ : ಹದಿನೆಂಟರ ಹರೆಯದ
ಹುಮ್ಮಸ್ಸಿನ ಯುವಕ, ವಿದ್ಯಾರ್ಥಿಗಳ ತಲೆಹರಟೆ
ಸಹಿಸದ ಮೂವತ್ತರ ಪ್ರಬುದ್ಧ ಜರ್‍ಮನ್ ಮೇಷ್ಟ್ರು,
ದಿನವೂ ಬೆಳಗ್ಗೆ ಒಂಟಿ ವಾಕಿಂಗ್ ಹೋಗುವ
ಪಿಂಚಣಿದಾರ, ನೀನು ಒಟ್ಟು ನಡೆದ ದೂರ ಲೆಕ್ಕ ಇಟ್ಟಿದ್ದರೆ
ಈ ಭೂಮಿಯಿಂದ ಸ್ವರ್‍ಗವನ್ನೆ ತಲುಪುತ್ತಿದ್ದಯೋ ಏನೋ.
ಸಾವನ್ನು ಸ್ವಾಗತಿಸಲು ನಿನ್ನ ನೀನೇ
ಮತ್ತೆಮೊದಲಿಂದ ಹೊಸಬನಾಗಿ ಮಾಡಿಕೊಂಡೆ.
ಹಾಲ್‍ನಲ್ಲಿ ಕಿಸಕ್ಕನೆ ಯಾತಕ್ಕೋ ನಕ್ಕು
ನಗು ಅದುಮಿಟ್ಟುಕೊಂಡ ನರ್ಸುಗಳು.
ಕಿಟಕಿ ಅಂಚಿನಲ್ಲಿ ಅನ್ನದ ಅಗುಳಿಗೆ
ಜಗಳವಾಡುವ ಗುಬ್ಬಚ್ಚಿಗಳು.
*****
ಮೂಲ: ಆಡಂ ಝಗಯೇವ್ಸ್‍ಕಿ