ಎಷ್ಟು ಸವರಿದರೂ ಮತ್ತೆ ಮತ್ತೆ
ಮುಟ್ಟಬೇಕೆನ್ನಿಸುವ
ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ
ಅಕ್ಷರಗಳು
ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ.
ಆತನ ತುಟಿಗಳ ಮೇಲೆ
ಬೆರಳಾಡಿಸಿದಾಗೆಲ್ಲ
ಅನೂಹ್ಯವಾದ ಬೆಸುಗೆ
ಕರುಳ ಕೊಂಡಿಯಂತೆ
ಒಳಗೊಳಗೆ ಬಲಿಯುತ್ತದೆ.
ನನ್ನೊಳಗಿನ ಆತ್ಮದ ಕುರುಡು
ಕರಗಿ ಹೋಗಲೆಂದು
ಆತನ ಪತ್ರಕ್ಕೆ ಮಾತ್ರ ರುಜು ಹಾಕಿದೆ.
ಸತ್ಯಕ್ಕೂ ಸುಳ್ಳಿಗೂ ನಡುವಿನ ಪಟ
ಕಳೆದು ಕಪ್ಪುಕಲೆಗಳು
ಎದ್ದುಬಿದ್ದು ಹೊರಳಾಡಿ
ಶುದ್ಧ ಮಣ್ಣಿನೆದೆಗಳು ಬರಸೆಳೆದು
ತಬ್ಬಿಕೊಂಡವು.
ಲೋಕದ ಜಂಜಾಟಗಳಿಗೆ
ಆರ್ತನಾದಗೈವ ಅಕ್ಷರಗಳಿಲ್ಲ ಈಗ
ನೀಲಾಕಾಶದ ನಿರಭ್ರತೆಯ
ಹೊಟ್ಟೆ ಸೀಳಿ
ಮಿಂಚಿನ ಕಣವೊಂದು ಆಳಕ್ಕೆ
ಗರ್ಭದೊಳಗೆ ಹೊಕ್ಕಿದ್ದೇ ತಡ,
ನೆಲ ಮುಗಿಲನ್ನು
ಮೋಹಿಸುತ್ತಾ ಎದೆತೆರೆದು ಕಣ್ಣರಳಿಸಿತು.
ಈ ದಾರಿಯ ಸೊಬಗಿನಲ್ಲಿ
ಕಣ್ಸೆಳೆಯುವ
ಬಿಸಿಲು-ಬೆಳದಿಂಗಳು, ಹಸಿರು-ಕೆಸರು
ಎಲ್ಲವನ್ನೂ ಇನ್ನಿಲ್ಲದಂತೆ ಪ್ರೀತಿಸುತ್ತಾ,
ಎರಡೂ ತೆಕ್ಕೆಗಳಲ್ಲಿ
ಬರಸೆಳೆದುಕೊಂಡು ಮುದ್ದಿಸುತ್ತಿದ್ದೇನೆ.
ಬಿಚ್ಚು ಮನಸ್ಸಿನಂತೆ
ದೇಹದ ಬಿಚ್ಚು ಕೂಡಾ ಆಪ್ತವಾದಂತೆ
ಅವನೂ ನಾನು ಕ್ಷಣಕ್ಷಣವೂ ಬಿಡದೇ
ಆವರಿಸಿಕೊಳ್ಳುತ್ತಲೇ,
ನೆಲದ ಹಸಿ ಚಿಗುರನ್ನು
ಜಗವೊಪ್ಪುವ ಪದಗಳಿಂದ ಹಿಡಿದು
ಮತ್ತದನ್ನು ಸುರವಿ ಹರವುದನು ಕಲಿತಿದ್ದೇನೆ.
ಆತನ ಕೈಸಂದಿನೊಳಗೆ
ಬೆರಳು ತೂರಿಸಿಕೊಂಡೇ
ದೇಹ ಮೀರಿದ ಪ್ರೇಮದ
ಠೇವಣಿ ಇಟ್ಟಿದ್ದು
ಮೊನ್ನೆ ಮೊನ್ನೆಯಷ್ಟೇ ನಗದಾಗಿದೆ.
ಈಗ ನಾನು ಅವನೂ ಕೂಡಿಯೇ
ಮನೆ ಕಟ್ಟುತ್ತಿದ್ದೇವೆ.
*****