ತುಟಿಯಂಚಿನ ಜೊಲ್ಲಲ್ಲಿ
ನಕ್ಷತ್ರಗಳ ನಗ್ನ ಚಿತ್ರ
ಮಾಯಕದ ದಂಡೆಯೇ ಮುಡಿಗೇರಿದೆ.
ಬೆರಳಿಂದ ಬೆರಳಿಗೆ
ಹೊಕ್ಕಳಿಂದ ಹೊಕ್ಕಳಿಗೆ
ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ.
ಇರುಳ ಹೊಳಪಿಗೆ
ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು
ಕಪ್ಪುರಂಧ್ರದ ಒಳಹೊಕ್ಕವು
ಕಾಲದ ಅರಿವಿಲ್ಲ
ಕನ್ನಡಿಯಲ್ಲಿ ಅಮೋಘ ಘಮ ಘಮದ
ಹೂಗಳು.
ಗಾಳಿಯನ್ನೆ ಹೊದ್ದ ಹಾದಿ
ಜೀವ ಉಸಿರ ಚೆಲುವಿಗೆ
ನಿತಾಂತ ನಡೆಯುತ್ತಲೇ ಇದೆ.
ಲೋಕದ ನಿನಾದಗಳೆಲ್ಲಾ
ಆ ನುಡಿವಣ್ಣನ ನಾಸಿಕದ ತುದಿಯಲ್ಲಿದೆ.
ಮಂದ್ರ ಸ್ಥಾಯಿಯಲ್ಲಿ ಎದೆಗೋಣೆಯ
ಕವಾಟ ಸರಿಸಿ ಗುನುಗುತ್ತಿದ್ದಾಳೆ ಆಕೆ.
ಹೇ… ಕೃಷ್ಣಾ.. ಮುರಾರಿ..
*****