ಅಧ್ಯಾಯ ೧೯ ಅನ್ಯಾಯದ ವಿರುದ್ಧ ಕಾರ್‍ಯಾಚರಣೆ
ಸೂರಜ್ ಆಶ್ರಮದ ಕಟ್ಟಡದಲ್ಲಿಯೇ ಒಂದು ರೂಮಿನಲ್ಲಿ ತನ್ನ ಆಫೀಸ್ ತೆರೆದಿದ್ದ. ಒಂದಷ್ಟು ಕಂಪನಿಗಳು ಟ್ಯಾಕ್ಸ್ ಕನ್ಸಲ್ವೆಂಟಿಂಗ್‌ಗೆ ಇವನನ್ನೇ ನೇಮಿಸಿಕೊಂಡಿದ್ದರು. ಹಾಗಾಗಿ ತಿಂಗಳಿಗೆ ಇಷ್ಟು ಎಂದು ಆದಾಯ ಬರುವಂತಾಗಿತ್ತು. ಇನ್ನುಳಿದ ಸಮಯದಲ್ಲಿ ಆಶ್ರಮದ ಕೆಲಸದ ಜೊತೆಗೆ ಇನ್ನಿತರೇ ಆದಾಯ ತೆರಿಗೆಯ ಸಲಹೆ ನೀಡಲು ಎಂಗೇಜ್ ಆದನು. ಹಾಗಾಗಿ ಆಶ್ರಮದ ಹೆಚ್ಚಿನ ಕೆಲಸದ ಹೊರೆ ರಿತುವಿನದೇ ಆಗಿತ್ತು. ಸೂರಜ್ ಬಂದ ಮೇಲೆ ವಾಸು ಕೂಡ ಬದಲಾಗಿದ್ದ. ವೆಂಕಟೇಶರನ್ನು ಮೋಸ ಮಾಡಿದಂತೆ ಸೂರಜ್‌ಗೆ ಮಾಡುವುದು ಕಷ್ಟವಾಗಿತ್ತು. ಅಲ್ಲದೆ ರಿತುವಿಗೆ ತನ್ನ ಕಳ್ಳತನ ಗೊತ್ತಾಗಿರುವುದರಿಂದ ತನ್ನ ಕೆಲಸಕ್ಕೆ ಸಂಚಕಾರವೆಂದು ತಿಳಿದ ವಾಸು ತನ್ನ ಕಳ್ಳ ಚಾಳಿ ಬಿಟ್ಟು ಪ್ರಾಮಾಣಿಕವಾಗಿ ನಡೆಯಲು ಪ್ರಯತ್ನಿಸುತ್ತಿದ್ದ. ಸೂರಜ್‌ನದು ಹದ್ದಿನ ಕಣ್ಣು, ಎಲ್ಲೂ ಯಾರಿಗೂ ಅನ್ಯಾಯವಾಗದಂತೆ ಕಾಯುತ್ತಿದ್ದ. ಅವನ ಕಣ್ಣು ತಪ್ಪಿಸಿ ಈ ಆಶ್ರಮದಿಂದ ಏನೂ ಹೊರಸಾಗಿಸಲು ಅಸಾಧ್ಯವಾಗಿತ್ತು. ಹಾಗಾಗಿ ವಾಸು ಸೂರಜ್ ಮುಂದೆ ಒಳ್ಳೆಯವನೆನಿಸಿಕೊಳ್ಳುವ ಯತ್ನ ನಡೆಸಿ ಗೆದ್ದಿದ್ದ. ಈ ಬದಲಾವಣೆಯಿಂದ ರಿತುವಿಗೂ ಸಮಾಧಾನ ತಂದಿತ್ತು. ಹಾಗಾಗಿ ವಾಸುವನ್ನು ಸಂಪೂರ್ಣವಾಗಿ ನಂಬುತ್ತಿದ್ದಳು. ಸೂರಜ್ ಬಿಜಿಯಾಗಿದ್ದಾಗ ವಾಸುವನ್ನೆ ಕೂರಿಸಿಕೊಂಡು ಲೆಕ್ಕಾಚಾರ ನೋಡುತ್ತಿದ್ದಳು.
ಹಾಗೆ, ಆಫೀಸಿನ ಕೆಲಸದಲ್ಲಿ ಮಗ್ನರಾಗಿರುವಾಗಲೇ ವಾಸು ಮೆಲ್ಲನೆ ವಿಷಯ ಎತ್ತಿದ. “ಮೇಡಂ, ಆ ಜಾನಕಿ ಟ್ರಸ್ಟ್‌ನವರು ನಡೆಸುತ್ತಾ ಇರೋ ಕೆಲವರು ಸಿಕ್ಕಿದ್ದರು. ಅಲ್ಲಿ ಅವರಿಗೆ ತುಂಬಾ ಕಷ್ಟವಾಗ್ತ ಇದೆಯಂತೆ. ಅದಕ್ಕೆ ಇಲ್ಲೇನಾದ್ರೂ ಅವಕಾಶ ಸಿಕ್ಕಿದ್ರೆ ಸೇರ್‍ಕೋತೀವಿ ಅಂತ ಹೇಳಿದ್ರು. ನೀವೊಂದು ಸಲ ವೆಂಕಟೇಶ್ ಸರ್‌ರವರನ್ನು ವಿಚಾರಿಸಿ ಮೇಡಂ” ಎಂದ.
ಕತ್ತೆತ್ತದೆ “ಏನಂತೆ ಪ್ರಾಬ್ಲಂ” ಆಶ್ರಮ ಚೆನ್ನಾಗಿ ನಡೆಯುತ್ತಿದೆ ಅಂತ ಪತ್ರಿಕೆಲೆಲ್ಲಾ ಬಂದಿತ್ತಲ್ಲ. ಆ ಜಾನಕಿಯವರಿಗೆ ಅವಾರ್ಡ್ ಬೇರೆ ಸಿಕ್ಕಿದೆ. ಜೊತೆಗೆ ಅಲ್ಲಿ ಇಲ್ಲಿ ತಿಂಗಳು ತಿಂಗಳು ಹಣ ಕಟ್ಟಬೇಕಲ್ಲ”
ಉತ್ತರ ಬರದೇ ಇದ್ದಾಗ ತಲೆ ಎತ್ತಿದ ರಿತು “ಯಾಕೆ ವಾಸು ಮಾತಾಡ್ತ ಇಲ್ಲ, ನೀವೇ ಇಷ್ಟೊಂದು ಆಸಕ್ತಿ ತಗೊಂಡಿರುವಾಗ ನಾನು ಸುಮ್ಮೇ ಇರೋಕೆ ಆಗುತ್ತಾ, ನಾಳೆನೇ ಸರ್ ಹತ್ತಿರ ಮಾತಾಡ್ತೀನಿ. ಅದಕ್ಕೂ ಮೊದಲು ಅಲ್ಲಿದ್ದವರನ್ನ ಭೇಟಿ ಮಾಡಬೇಕು.”
“ಆಯ್ತು ಮೇಡಂ, ಮಧ್ಯಾಹ್ನವೇ ಕರ್ಕೊಂಡು ಬರ್ತಿನಿ. ನೀವೇ ಅವರ ಜೊತೆ ಮಾತಾಡಿ” ಎಂದ.
ಮಾತಿಗೆ ತಪ್ಪದಂತೆ ಮಧ್ಯಾಹ್ನ ತನ್ನೊಂದಿಗೆ ಇಬ್ಬರು ವಯಸ್ಸಾದ ಹೆಂಗಸರನ್ನು ಕರೆತಂದ. ಹಿಂದೆ ಸೀರೆಯಲ್ಲಿ ಕೃಶವಾಗಿ ಕಾಣುತ್ತಿದ್ದ ಅವರನ್ನು ನೋಡಿ ರಿತುವಿಗೆ ಅಯ್ಯೋ ಎನಿಸಿತು.
“ಬನ್ನಿ, ಕೂತ್ಕೊಳ್ಳಿ ಊಟ ಮಾಡಿದ್ದೀರಾ” ಎಂದು ಕೇಳಿದ ರಿತುವಿಗೆ ಇಲ್ಲಾ ಎನ್ನುವಂತೆ ತಲೆಯಾಡಿಸಿದರು. “ವಾಸು, ಭಟ್ಟರಿಗೆ ಹೇಳಿ ಇವರಿಗೆ ಊಟ ತರಿಸಿ, ಹಾಗೆ ಸೂರಜ್ ಫ್ರೀಯಾಗಿದ್ದರೆ ಬರೋಕೆ ಹೇಳಿ” ವಾಸುವಿಗೆ ಹೇಳಿದಳು.
ವಾಸು ಆಗಲೆಂದು ತಲೆಯಾಡಿಸಿ ಹೊರಹೊರಟ. ಹತ್ತಾರು ನಿಮಿಷದಲ್ಲಿ ಎರಡು ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ಬಂದು “ಯಾರಿಗ್ರಿಂತಮ್ಮ ಊಟ, ಅಲ್ಲೇ ಕಳುಹಿಸಬಹುದಿತ್ತಲ್ಲ” ಎನ್ನುತ್ತ ಒಳಬಂದರು.
“ಬನ್ನಿ, ಭಟ್ಟರೆ, ಇವರು ಜಾನಕಿ ಟ್ರಸ್ಟ್ ನಡೆಸುತ್ತಾ ಇರುವ ವೃದ್ಧಾಶ್ರಮದವರು, ಊಟ ಆಗಿಲ್ಲವಂತೆ ಅದಕ್ಕೆ ತರಿಸಿದೆ. ತಗೊಳಿಯಮ್ಮ ಮೊದಲು ಊಟ ಮಾಡಿ” ಎಂದು ಅರಿತು ಅವರಿಗೆ ಊಟ ಮಾಡಲು ತಿಳಿಸಿ ತನ್ನ ಕೆಲಸದಲ್ಲಿ ಮುಳುಗಿದಳು.
ಗಬಗಬನೆ ತಿನ್ನುತ್ತಿರುವ ಅವರ ಆತುರವನ್ನು ಕಿರುಗಣ್ಣಿನಲ್ಲಿ ನಿಟ್ಟಿಸಿದಳು. ಊಟ
ಮಾಡಿ ಎಷ್ಟೋ ದಿನಗಳಾಗಿದ್ದವೋ ಎನ್ನುವಂತೆ ದೊಡ್ಡ ದೊಡ್ಡ ತುತ್ತು ಮಾಡಿ ಬಾಯಿಗಿರಿಸಿಕೊಂಡು ಐದೇ ನಿಮಿಷದಲ್ಲಿ ತಟ್ಟೆಯಲ್ಲಿರುವುದನ್ನೆಲ್ಲ ಖಾಲಿ ಮಾಡಿಬಿಟ್ಟರು. ಭಟ್ಟರೇ ಇನ್ನೊಂದು ಸ್ವಲ್ಪ ಅನ್ನ ತನ್ನಿ ಎಂದು ಆಜ್ಞಾಪಿಸಿದಳು. ತಟ್ಟೆ ತುಂಬಾ ಮತ್ತೆ ಅನ್ನ ಸಾಂಬಾರ್ ಹಾಕಿಸಿಕೊಂಡು ತೃಪ್ತಿಯಿಂದ ಉಂಡರು.
“ದೇವರು ಒಳ್ಳೆಯದು ಮಾಡಲಿ ತಾಯಿ ನಿಮಗೆ, ಈ ಥರ ಊಟ ಮಾಡಿ ಅದೆಷ್ಟು ಯುಗವಾಗಿತ್ತೋ, ಇಂಥ ರುಚಿಯಾದ ಊಟ ಅಂತೂ ನಮ್ಗೆ ಮರೆತೇಹೋಗಿತ್ತು. ಇವತ್ತು ತೃಪ್ತಿಯಾಗಿ ಊಟ ಮಾಡಿದ್ವಿ” ಸಂತೃಪ್ತಿಯಿಂದ ನುಡಿದಳು ಒಬ್ಬಾಕೆ.
“ಈಗ ಹೇಳಿ, ನಿಮ್ಮ ಸಮಸ್ಯೆಗಳೇನು, ಅಲ್ಲೇನು ನಿಮಗೆ ತೊಂದರೆ ಆಗ್ತಾ ಇದೆ” ಫೈಲುಗಳನ್ನೆಲ್ಲ ತೆಗೆದಿರಿಸಿ, ಅವರು ಹೇಳುವ ಮಾತುಗಳಿಗಾಗಿ ಆಸಕ್ತಿ ತೋರಿದಳು. ಅಷ್ಟರಲ್ಲಿ ಸೂರಜ್ ಕೂಡ ಬಂದು ಕುಳಿತುಕೊಂಡ.
“ವಾಸು ಏನೋ ಹೇಳ್ತಾ ಇದ್ದ. ಅದೇ ಆಶ್ರಮದವರ ಇವರು” ಎಂದು ಕೇಳಿದ.
“ಹೌದು ಸೂರಜ್, ತುಂಬಾ ಸಮಸ್ಯೆಗಳಿವೆ. ಅಲ್ಲಿ ಅನ್ನಿಸುತ್ತ ನೋಡೋಣ ಏನು ಹೇಳುತ್ತಾರೆ ಅಂತ” ಎಂದು ಉತ್ತರಿಸಿ “ಈಗ ನೀವು ಹೇಳೀಮ್ಮ” ಅವರತ್ತ ತಿರುಗಿ ಕೇಳಿದಳು.
“ಹೇಗೆ ಹೇಳಬೇಕೋ ಅಂತಾನೇ ತಿಳೀತ ಇಲ್ಲಾ ಸಾರ್. ಒಂದೇ, ಎರಡೇ, ನೂರಾರು ತೊಂದರೆ ಕಷ್ಟಗಳು. ಅನುಭವಿಸಿ ಅನುಭವಿಸಿ ಸಾಕಾಗಿ ಹೋಗಿಬಿಟ್ಟಿದೆ. ಬಾಣಲೆಯಿಂದ ಬೆಂಕಿಗೆ ಅನ್ನೋ ಸ್ಥಿತಿ ಬಂದುಬಿಟ್ಟಿದೆ. ಮೊದಲೇ ನಾವು ನಿರ್ಗತಿಕರು, ನಮ್ಮವರು ಅನ್ನೋರು ಯಾರೂ ಇಲ್ಲಾ, ಎಲ್ಲೋ ಭಿಕ್ಷೆ ಬೇಡಿಕೊಂಡು ಜೀವನ ಮಾಡ್ತಾ ಇದ್ವಿ. ಅದನ್ನೂ ತಪ್ಪಿಸಿ ಸುಖದ ಸುಪ್ಪತ್ತಿಗೇಲಿ ಮಲಗಿಸುತ್ತಿವಿ ಅಂತ ನಮ್ಮನ್ನೆಲ್ಲ ಕರ್ಕೊಂಡು ಹೋಗಿ, ಜೈಲಿನಲ್ಲಿಟ್ಟು ಹಿಂಸೆ ಕೊಡುತ್ತಿದ್ದಾರೆ. ಅಲ್ಲಿಂದ ಬಿಡುಗಡೆನೇ ಇಲ್ಲವೇನೋ ಅಂತ ಭಯವಾಗುತ್ತ ಇದೆ” ಆವರಲ್ಲಿ ಒಬ್ಬಾಕೆ ನುಡಿದರು. ಅನುಭವ ಅವರನ್ನು ಮಾಗಿಸಿತ್ತು.
ಮತ್ತೊಬ್ಬಾಕೆ ಮುಂದುವರಿಸುತ್ತಾ “ಜಾನಕಿ ಅಮ್ಮೋರು ಈ ಆಶ್ರಮ ಶುರು ಮಾಡ್ತೀವಿ ಅಂತ ನಮ್ಮನ್ನೆಲ್ಲ ಕರ್ಕೊಂಡು ಬಂದ್ರು ಮೊದಮೊದಲು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಸರ್ಕಾರದ ಹಣಾನಾ ಆಶ್ರಮಕ್ಕೆ ಬರೋ ಹಾಗೆ ಮಾಡಿಕೊಂಡರು. ಜೊತೆಗೆ ಬೇಕಾದಷ್ಟು ಜನ ದಾನನೂ ಕೊಡ್ತಾ ಇದ್ದಾರೆ. ಅಲ್ಲಿ ಯಾವುದಕ್ಕೆ ಕೊರತೆ ಆಗದಂತೆ ಬೇಕಾದಷ್ಟು ಹಣ, ಬಟ್ಟೆ, ದವಸ ಎಲ್ಲಾ ಬರುತ್ತೆ! ಜಾನಕಿಯಮ್ಮನಿಗೆ ಬರಿ ದುರಾಸೆ, ಹೆಸರು ಮಾಡಿ ಪೇಪರಲ್ಲಿ ಫೋಟೋ ಹಾಕಿಸಿಕೊಳ್ಳುವ ಹುಚ್ಚು. ಹಾಗಾಗಿ ಈ ಆಶ್ರಮ ಶುರು ಮಾಡಿದ್ರು. ಒಳ್ಳೆ ಆದಾಯ ಬರೋಕೆ ಶುರುವಾದ ಮೇಲೆ ಅದನ್ನೆಲ್ಲ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತ ಇದ್ದಾರೆ. ಹೊಟ್ಟೆ ತುಂಬಾ ಊಟ ಹಾಕಲ್ಲ. ಬೆಳಗ್ಗೆ ಅಂತೂ ತಿಂಡಿನೇ ಇಲ್ಲ. ಎರಡು ಹೊತ್ತು ಊಟ ಮಾತ್ರ. ಅದೂ ಉಪ್ಪಿದ್ರೆ ಖಾರ ಇರಲ್ಲ, ಖಾರ ಇದ್ರೆ ರುಚಿ ಇರಲ್ಲ. ನೀರು ನೀರಾದ ಸಾರು, ಮುದ್ದೆಯಾದ ಅನ್ನ, ತರಕಾರಿ ಅಂತೂ ಕಾಣಿಸುವುದೇ ಇಲ್ಲಾ, ಇಂಥ ಅರೆಹೊಟ್ಟೆ, ರುಚಿಗೆಟ್ಟ ಊಟ ಮಾಡಿ ಎಲ್ಲರಿಗೂ ನಿಶ್ಯಕ್ತಿ, ಖಾಯಿಲೆ, ಆಸ್ಪತ್ರೆಗೂ ಕರ್ಕೊಂಡು ಹೋಗಲ್ಲ. ಡಾಕ್ಟರನ್ನೂ ಬರೋಕೆ ಬಿಡೋಲ್ಲ. ಒಬ್ಬೊಬ್ಬರಾಗಿ ಸಾಯ್ತಿವಿ ಅಷ್ಟೆ. ಇಲ್ಲಿರೋರಿಗೆಲ್ಲ ಬಟ್ಟೆ ಅಂಗಡಿಯವರು ಸೀರೆ, ಪಂಚೆ ಕೊಡ್ತಾರೆ. ಅದನ್ನೆಲ್ಲ ನಮ್ಗೆ ಕೊಡೋದೇ ಇಲ್ಲಾ, ಮಾರ್ಕೊತಾರೆ ಅನ್ಸುತ್ತೆ. ಒಂದು ಜೊತೆ ಒಳ್ಳೆ ಸೀರೆ ತಾವೇ ಇಟ್ಕೊಂಡು ಯಾರಾದರೂ ಆಶ್ರಮ ನೋಡೋಕೆ ಬರೋ ದಿನ ನಮಗೆ ಹಾಕಿಸಿ, ಅವರ ಮುಂದೆ ಪ್ರದರ್ಶಿಸುತ್ತಾರೆ. ಬಂದ ದೊಡ್ಡ ಮನುಷ್ಯರ ಮುಂದೆ ಏನೂ ಬಾಯಿ ಬಿಡೋಹಾಗಿಲ್ಲ. ಹಾಗೇನಾದ್ರೂ ಬಾಯಿಬಿಟ್ರೆ ಅವರು ಹೋದ ಮೇಲೆ ಸಾಯೋ ಹಂಗೆ ಹೊಡೀತಾರೆ, ಚೆನ್ನಾಗಿ ಕೆಲಸ ಮಾಡಸ್ತರೇ, ತರಕಾರಿ ಬೇಳಿತೀವಿ, ಬುಟ್ಟಿ ಹಾಕ್ತಿವಿ, ಎಲ್ಲಾ ಕೆಲಸ ಮಾಡಿಸ್ಕೊಂಡು ಮಾರ್ಕೋತಾರೆ, ಮಾಡದೆ ಇದ್ರ ಹೊಡೆಯುತ್ತಾರೆ. ಈ ವಯಸ್ಸಿನಲ್ಲಿ ನಾವು ದುಡಿಯೋಕೆ ಆಗುತ್ತಾ ತಾಯಿ ನಮಗಂತು ಸಾಕಾಗಿಬಿಟ್ಟಿದೆ. ಸತ್ರೆ ಸಾಕು ಅಂತ ಕಾಯ್ತ ಇದ್ದೀವಿ” ಅಳುತ್ತಲೇ ನುಡಿದಳು.
ಕೇಳಿಸಿಕೊಳ್ಳುತ್ತಿದ್ದ ರಿತುವಿಗೆ ಮೈಯೆಲ್ಲಾ ಬಿಸಿಯಾಯಿತು. ಕೋಪದಿಂದ ಮುಖ ಕೆಂಪಾಯಿತು. ಹೀಗೂ ನಡೆಯುತ್ತದೆಯೇ ಎಂದು ನಂಬಲಾರದೆ ಹೋದಳು. ಆದರೆ ಪ್ರತ್ಯಕ್ಷ ಸಾಕ್ಷಿಗಳಾಗಿ ಅವರಿಬ್ಬರೂ ಮುಂದೆಯೇ ಕುಳಿತಿದ್ದಾರೆ. ಅವರು ಹರಕುಬಟ್ಟೆ, ಕೃಶವಾದ ಶರೀರ, ಕಳೆಗುಂದಿದ ಮುಖ, ಊಟವನ್ನು ಕಂಡಿಲ್ಲ ಎಂಬಂತೆ ಊಟ ಮಾಡಿದ ರೀತಿ ಇವೆಲ್ಲ ನಿಜ ಎಂದು ಎತ್ತಿ ತೋರಿಸುತ್ತಿದೆ.
“ನೀವು ಹೇಗೆ ಇಲ್ಲಿವರೆಗೆ ಬಂದ್ರಿ” ಸೂರಜ್ ಗಂಭೀರವಾಗಿ ಪ್ರಶ್ನಿಸಿದ.
“ಇಲ್ಲಿಗೇನಾದರೂ ಬಂದಿದ್ದೀವಿ, ಎಲ್ಲಾನೂ ಹೇಳಿದ್ದೀವಿ ಅಂತ ಗೊತ್ತಾದ್ರೆ ನಮ್ಮನ್ನ ಕೊಂದೇಬಿಡ್ತಾರೆ. ನಾವು ಸತ್ರು ಪರವಾಗಿಲ್ಲ, ಇನ್ನುಳಿದವರಿಗಾದ್ರೂ ಒಳ್ಳೆಯದಾಗಲಿ ಅಂತ ಧೈರ್ಯ ಮಾಡಿ ಕದ್ದು ತಪ್ಪಿಸಿಕೊಂಡು ಬಂದಿದ್ದೀವಿ. ಈಗಾಗಲೇ ನಮ್ಮನ್ನ ಹುಡುಕ್ತಾ ಇರಬಹುದು. ನಾವು ಎಲ್ಲಿದ್ರೂ ಬಿಡಲ್ಲ ಒದ್ದು ಎಳ್ಕೊಂಡು ಹೋಗ್ತಾರೆ. ಅಲ್ಲಿಗೆ ಒಂದು ಸಲ ಹೋಗಿ ಸೇರ್ಕೊಂಡುಬಿಟ್ರೆ ಇನ್ನೂ ಸತ್ತ ಮೇಲೆ ಬಿಡುಗಡೆ, ಒಂದು ಚಾವಟಿ ಹಿಡ್ಕೊಂಡಿದ್ದಾಳೆ ಆ ರಾಕ್ಷಸಿ, ವಯಸ್ಸಾದವರು ಅನ್ನೋ ಕನಿಕರಾನೂ ಇಲ್ಲದೆ ದನ ಚಚ್ಚಿದ ಹಂಗೆ ಚಚ್ಚುತ್ತಾಳೆ. ಅವಳ ಜೊತೆಗೆ ಇಬ್ರು ದಾಂಡಿಗರಿದ್ದಾರೆ. ಯಮ ಕಿಂಕರರಂತೆ ನಮ್ಮ ನೂಕಾಡ್ತಾರೇ. ಗಟ್ಟಿಯಾಗಿ ಉಸಿರು ಕೂಡ ಬಿಡೋ ಬಿಡೋ ಹಾಗಿಲ್ಲ. ಯಾಕೆ ಹೀಗೆ ಅಂತ ಕೇಳಬಾರದು. ಹೊಟ್ಟೆತುಂಬ ಊಟ ಹಾಕಿ ಅಂತನೂ ಕೇಳಬಾರದು. ಅವರು ಹೇಗೆ ಹೇಳ್ತಾರೋ ಹಾಗೆ ಕೇಳಿ, ಅವರು ಕೊಟ್ಟಿದ್ದನ್ನ ತಿಂದು ನಾಯಿಗಳಂತೆ
ಇರಬೇಕು. ಹೋದ ವಾರ ಯಾರೋ ಪುಣ್ಯಾತರು ಬಂದು ಚಳಿಯಲ್ಲಿ ನಡುಗ್ತಾರೆ ಅಂತ ಒಂದೊಂದು ಉಲ್ಲನ್ ರಗ್ಗು ಕೊಟ್ಟರು. ಅವರ ಮುಂದೆ ಕೊಡಿಸಿ, ಅವರು ಹೋದ ಕೂಡಲೇ ಎಲ್ಲರೂ ಕಿತ್ಕೊಂಡು ತಗೊಂಡು ಹೋಗಿಬಿಟ್ರು. ಯಾಕೆ ಅಂತ ಕೇಳಿದ್ರೆ ಹೊಡೆತ” ಸಾಕಾಗಿ ಮಾತು ನಿಲ್ಲಿಸಿದಳು.
“ಈಗ ನೀವಿಬ್ರೂ ಏನ್ ಮಾಡ್ತಿರಿ. ಇಷ್ಟು ಹೊತ್ತಿಗೆ ನೀವಿಲ್ಲ ಅಂತ ಗೊತ್ತಾಗಿರುತ್ತೆ. ಮತ್ತೆ! ಅಲ್ಲಿಗೇ ಹೋಗ್ತಿರಾ” ಪ್ರಶ್ನಿಸಿದಳು ರಿತು. “ಇಲ್ಲಾ ಖಂಡಿತಾ ಅಲ್ಲಿಗೆ ಹೋಗಲ್ಲ. ಹೋಗಬಾರದು ಅನ್ನೋ ತೀರ್ಮಾನ ತಗೊಂಡೇ ಹೊರಗೆ ಬಂದಿದ್ದೀವಿ. ಮುಂದೆ ಹೇಗೋ ಏನೋ ತಿಳಿತಿಲ್ಲ.”
“ಸೂರಜ್ ಏನು ಮಾಡೋಣ. ಇವ್ರು ಒಂದಷ್ಟು ದಿನ ಇಲ್ಲೇ ಇರ್ಲಿ ಅಲ್ವಾ” ಕೇಳಿದಳು.
“ಸರಿ, ನೀವು ಒಳಗೆ ಹೋಗ್ರಮ್ಮ. ವಾಸು ಇವರಿಗೆ ಇರೋಕೆ ಜಾಗ ತೋರ್ಸು. ಶಾರದಮ್ಮನ ಬಟ್ಟೆ ಇತ್ತಲ್ಲ ಅದನ್ನ ಇವರಿಗೆ ಕೊಡು” ಎಂದು ತಿಳಿಸಿದ ಸೂರಜ್. ಅವರಿಬ್ಬರೂ ಸೂರಜ್ ಹೇಳಿದಂತೆ ವಾಸು ಹಿಂದೆ ಹೋದರು.
ಒಂದಿಷ್ಟು ಹೊತ್ತು ಮೌನ ಆವರಿಸಿತ್ತು. ಇಬ್ಬರೂ ಚಿಂತಾಕ್ರಾಂತರಾಗಿ ಕುಳಿತಿದ್ದರು. ಅಲ್ಲಿನ ಕಥೆ ಕೇಳಿ ಹೃದಯ ದ್ರವಿಸಿತ್ತು. ಆ ಅಭಾಗ್ಯ ವೃದ್ದರ ಕರುಣಾಜನಕ ಸ್ಥಿತಿ ಕಣ್ಣಿಗೆ ಕಟ್ಟಿದಂತಾಗಿ ಚಡಪಡಿಸಿದರು.
ಸೂರಜ್ ಮೊದಲು ಮಾತು ಪ್ರಾರಂಭಿಸಿದ. “ರಿತು, ಈ ಸಮಸ್ಯೆ ಬಹಳ ಕಠಿಣವಾಗಿದೆ. ಆಕೆ ತುಂಬಾ ಪ್ರಭಾವಶಾಲಿ ಅಂತ ಕಾಣುತ್ತೆ. ಅದಕ್ಕೆ ಈ ಧೈರ್ಯ. ನಾವು ತುಂಬಾ ಯೋಚನೆ ಮಾಡಿ ಹೆಜ್ಜೆ ಇಡಬೇಕು.”
“ಹೌದು ಸೂರಜ್, ಆಕೆ ರಾಜಕೀಯ ಹಿನ್ನೆಲೆ ಇರುವಂಥ ಹೆಣ್ಣು. ಈಗಲೇ ಹೆಸರು, ಕೀರ್ತಿ ಎಲ್ಲಾ ತಗೊಂಡುಬಿಟ್ಟಿದ್ದಾರೆ. ಸ್ಟೇಟ್ ಅವಾರ್ಡ್ ಕೂಡ ಬಂದುಬಿಟ್ಟಿದೆ. ಜನ ಅವಳನ್ನು ದೊಡ್ಡ ಸಮಾಜ ಸೇವಕಿ, ಅನಾಥ ರಕ್ಷಕಿ ಅಂತ ನಂಬಿದ್ದಾರೆ. ಈ ಕತೆನಾ ಕೇಳಿದ್ರೆ ಯಾರಲ್ಲಿಯೂ ವಿಶ್ವಾಸ ಮೂಡದು. ಹಾಗೆ ಮೋಡಿ
ಮಾಡಿದ್ದಾಳೆ. ಇವರು ಹೇಳೋವರೆಗೂ ನನಗೂ ಅದೇ ಅಭಿಪ್ರಾಯ ಇತ್ತು.”
“ಹಾಗಾದರೆ ಅಲ್ಲಿನ ಸಮಸ್ಯೆ ಪರಿಹರಿಸೋಕೆ ಏನು ಮಾಡಬಹುದು. ಎಲ್ಲಾಟ್ರಿಕ್ಸ್ ಅವಳಿಗೆ ಗೊತ್ತಿದೆ. ಜನಕ್ಕೆ ಕಾಣುವ ಹಾಗೆ ಉತ್ತಮವಾಗಿ ನಡೆಸುತ್ತಿರುವ ಸೋಗು ಹಾಕುತ್ತಾಳೆ. ಅವಳ ಬಣ್ಣವನ್ನು ಬಯಲಿಗೆಳೆಯುವುದು ಹೇಗೆ? ಎಲ್ಲರೂ ನಂಬುವಂತೆ ಅಲ್ಲಿನ ನೈಜಚಿತ್ರಣ ತೋರಿಸಿ, ನ್ಯಾಯ ದೊರಕಿಸುವುದು ಹೇಗೆ? ಇಷ್ಟೆಲ್ಲಾ ಗೊತ್ತಾದ ಮೇಲೂ ಸುಮ್ಮನಿರುವುದು ಮಾನವೀಯತೆ ಅಲ್ಲಾ, ಮನುಷ್ಯತ್ವ ಅಲ್ಲಾ, ಏನಾದರೂ ಪ್ಲಾನ್ ಮಾಡಲೇಬೇಕು.”
“ಅಲ್ಲಿದ್ದವರನ್ನೆಲ್ಲ ಇಲ್ಲಿಗೆ ಕರೆತಂದುಬಿಟ್ಟರೆ, ಅಲ್ಲಿ ವೃದ್ದರೇ ಇಲ್ಲಾ ಎಂದ ಮೇಲೆ ಹೇಗೆ ಆಶ್ರಮ ನಡೆಸುತ್ತಾಳೆ ಆ ಜಾನಕಿ.”
“ಅದು ಹೇಗೆ ಸಾಧ್ಯ ರಿತು. ಅಲ್ಲಿದ್ದವರನ್ನೆಲ್ಲ ಇಲ್ಲಿಗೆ ಕರೆತಂದರೆ ಇಲ್ಲಿ ಜಾಗ ಸಾಕಾಗುತ್ತದೆಯೋ, ಅವರ ನಿರ್ವಹಣೆಯ ಖರ್ಚಿಗೇನು ಮಾಡುವುದು. ಅದೂ ಅಲ್ಲದೇ ಇವರಂತ ಅಮಾಯಕರು ಮತ್ತಷ್ಟು ಜನ ಸಿಕ್ಕೆ ಸಿಗುತ್ತಾರೆ, ಸಿಗದಿದ್ದರೆ ಹುಡುಕುತ್ತಾಳೆ ಅವಳು. ಅಲ್ಲಿ ಸರ್ಕಾರ ಕಟ್ಟಿಸಿರುವ ಕಟ್ಟಡ ಇದೆ. ಸರ್ಕಾರ ಕೊಡುತ್ತಿರುವ ಗ್ರಾಂಟ್ ಇದೆ ಜೊತೆಗೆ ದಾನಿಗಳಿದ್ದಾರೆ. ಈ ಎಲ್ಲಾ ಸದುಪಯೋಗ ಆಗಬೇಕು ತಾನೇ ಅಲ್ಲಿನ ಅನ್ಯಾಯ ಆಕ್ರಮಗಳನ್ನೆಲ್ಲ ಬಯಲಿಗಿಟ್ಟು, ಸರ್ಕಾರವೇ ಆಕೆಗೆ ಶಿಕ್ಷೆಯಾಗುವಂತೆ ನೋಡಿಕೊಂಡು, ಅಪಾತ್ರರ ಕೈಯಿಂದ ಆ ಆಶ್ರಮವನ್ನು ಬಿಡಿಸಿಕೊಂಡು ಯೋಗ್ಯರಾದವರ ಕೈಗಿಡುವ ಕೆಲಸ ಮಾಡಬೇಕಾಗಿದೆ. ಅದು ನಮ್ಮಿಂದಲೇ ಆಗಬೇಕು. ಇವ್ಯಾರೂ ಈ ಧೈರ್ಯ ಮಾಡಬಾರದು. ನಮಗೆ ತಾನೇ ವಸ್ತುಸ್ಥಿತಿಯ ಅರಿವಿರುವುದು.”
“ನೀವು ಹೇಳೋದು ಸರೀನೇ. ಮೊದಲು ಇಲ್ಲಿ ಬಂದಿದ್ದಾರಲ್ಲ ಅವರಿಂದ ಕಂಪ್ಲೇಂಟ್ ಕೊಡಿಸಿ ರೈಡ್ ಮಾಡುವ ಹಾಗೆ ಮಾಡಿದರೆ ಹೇಗೆ” ಸಲಹೆ ನೀಡಿದಳು.
“ಒಳ್ಳೆ ಸಲಹೆನೆ. ಆದ್ರೆ ಕಂಪ್ಲೇಂಟ್ ಕೊಟ್ಟ ಕೂಡಲೇ ಅದು ಅವಳಿಗೆ ತಿಳಿಯದೆ ಇರುತ್ತಾ, ಆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರುತ್ತಾಳೆ, ರೈಡ್ ಮಾಡುವ ವೇಳೆಗೆ ತಪ್ಪು ಸಿಗದಂತೆ ಮಾಡುತ್ತಾಳೆ. ಆಗ ಸೋಲು ನಮಗೆ, ಆಶ್ರಮ ಯಥಾಸ್ಥಿತಿಯಲ್ಲಿಯೇ ಮುಂದುವರಿಯುತ್ತದೆ. ಅಲ್ಲದೆ ಇವರಿಬ್ಬರೂ ಬೇರೆ ಹೊರಗೆ ಬಂದುಬಿಟ್ಟಿದ್ದಾರೆ. ಈಗ ಅವಳು ಹುಶಾರಾಗಿಯೇ ಮ್ಯಾನೆಜ್ ಮಾಡ್ತಾಳೆ.”
“ಹಾಗಾದ್ರೆ ಒಂದು ಕೆಲಸ ಮಾಡೋಣ ಸೂರಜ್, ಇಲ್ಲಿಗೆ ಬಂದಿರುವವರನ್ನು ಯಾರಿಗೂ ಸಂಶಯ ಬರದಂತೆ ಕಳುಹಿಸಿಬಿಡೋಣ. ಮೊದಲು ಅವರಿಂದ ಒಂದು ಕಂಪ್ಲೆಂಟ್ ಮತ್ತು ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿಟ್ಟುಕೊಳ್ಳೋಣ. ನಾವು ಏನು ಗೊತ್ತಿಲ್ಲದವರಂತೆ ದಾರಿಯಲ್ಲಿ ಸಿಕ್ಕರು ಕರೆದುಕೊಂಡು ಬಂದಿದ್ದೇವೆ ಅಂತ ಬಿಟ್ಟು ಬರೋಣ. ಅವರು ಏನಾದರೂ ಸುಳ್ಳು ಹೇಳಿ, ಅವಳಿಂದ ಬಚಾವ್ ಆಗಲಿ, ಒಂದು ವೇಳೆ ದಂಡಿಸಿದರೂ ದಂಡಿಸಲಿ ಅಲ್ಲಿನ ವಾತಾವರಣ ತಿಳಿಯಾಗಿ ಮೊದಲಿನ ಸ್ಥಿತಿಗೆ ಮರಳಿದಾಗ, ಇಲ್ಲಿನ ಸುಳಿವು ಹೊರಗೆ ಹೋಗಿಲ್ಲ ಅನ್ನೋ ಧೈರ್ಯ ಅವಳಿಗೆ ಬಂದಿರುತ್ತದೆ. ಆಗ ನಾವು ಇದ್ದಕ್ಕಿದ್ದಂತೆ ಪತ್ರಿಕೆಯವರು, ಟಿ.ವಿ.ಯವರು ಜನನಾಯಕರು, ಪೊಲೀಸರು ಹೀಗೆ ಸಾಧ್ಯವಾದವರನ್ನೆಲ್ಲ ಸೇರಿಸಿ ದಿಢೀರನೆ ಭೇಟಿಕೊಡುವ ಹಾಗೆ ಮಾಡೋಣ. ಅಷ್ಟರೊಳಗೆ ಇಲ್ಲಿಂದ ಹೋದವರು ಅಲ್ಲಿರುವವರನ್ನು ಮಾನಸಿಕವಾಗಿ ಸಿದ್ಧತೆ ಮಾಡಿರಲಿ, ಎಲ್ಲರಿದಿರು ಧೈರ್ಯವಾಗಿ ತಮ್ಮ ನೋವು ಕಷ್ಟಗಳನ್ನು ತೋಡಿಕೊಳ್ಳಲಿ. ಟಿ.ವಿ. ಪತ್ರಿಕೆಯ ಮಾಧ್ಯಮದವರು ಆದನ್ನೆಲ್ಲ ದಾಖಲಿಸಿಕೊಂಡುಬಿಡುತ್ತಾರೆ, ಆದೇ ನಮಗೆ ಮುಖ್ಯ ಸಾಕ್ಷಿಯಾಗುತ್ತದೆ. ಆ ಹಿನ್ನೆಲೆ, ಹಾಗು ತನಿಖೆಯಿಂದ ನಿಜಾಂಶ ತಿಳಿದು ತಪ್ಪಿತಸ್ಥರಿಗೆ ಶಿಕ್ಷೆ ಆಗಬಹುದು” ದೀರ್ಘವಾಗಿ ಹೇಳುತ್ತಾಹೋದಳು ರಿತು.
ಸೂರಜ್‌ಗೂ ಸರಿ ಎನಿಸಿತು. ಇದೂ ಒಂದು ಪ್ರಯತ್ನ ನಡೆದುಹೋಗಲಿ ಎಂದು ರಿತುವಿನ ಪ್ಲಾನ್‌ಗೆ ಒಪ್ಪಿಗೆ ಸೂಚಿಸಿದ. ತಕ್ಷಣವೇ ಅವರಿಬ್ಬರನ್ನು ಕರೆಸಿ ಮುಂದಿನ ಕಾರ್ಯಕ್ರಮ ತಿಳಿಸಿದರು. ಅಲ್ಲಿಗೆ ಪುನಃ ಹೋಗಲು ಅವರಿಗೆ ಧೈರ್ಯವೇ ಇಲ್ಲವಾಗಿತ್ತು. ಸೂರಜ್ ಮತ್ತು ರಿತು ಧೈರ್ಯ ತುಂಬಿದ ಮೇಲೆ ಆತಂಕದಿಂದಲೇ ಒಪ್ಪಿಕೊಂಡರು. ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ. ನಿಮಗೇನು ಆಗದಂತೆ ಕಾಪಾಡುವ ಭರವಸೆ ನೀಡಿ, ಅಲ್ಲಿನ ಅವ್ಯವಸ್ಥೆ ಸರಿಪಡಿಸುವ ಭರವಸೆ ಕಳುಹಿಸಿಕೊಟ್ಟರು. ಹೇಳಿಕೊಟ್ಟಿದ್ದನ್ನು ಮರೆಯದಂತೆ ತಾಕೀತು ಮಾಡಿದರು. ಅಲ್ಲಿರುವವರಿಗೆಲ್ಲ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿ ಸಿದ್ಧವಾಗಿರುವಂತೆ ತಿಳಿಸಿಕೊಟ್ಟರು.
ಕಾರ್ಯಾಚರಣೆ ಸಿದ್ಧವಾಯಿತು. ಇಲ್ಲಿನವರಿಗೂ ತಿಳಿಯದಂತೆ ವಾಸು ಸೂರಜ್, ರಿತು ಯೋಜನೆ ರೂಪಿಸಿದರು. ಕಂಪ್ಲೇಂಟ್ ಬರೆಸಿಕೊಂಡಾಗಿತ್ತು. ಅವರು ಹೇಳಿದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ತಮಗೆ ತುಂಬಾ ಬೇಕಾಗಿರುವ ಪೊಲೀಸ್ ಇಲಾಖೆಯ ಮುಖ್ಯಸ್ಥರೊಂದಿಗೆ ಎಲ್ಲವನ್ನು ತಿಳಿಸಿ ಪ್ರತ್ಯಕ್ಷ ನೋಡಲು ಬರುವಂತೆ ಮನವಿ ಮಾಡಿಕೊಂಡರು. ವಿವಿಧ ಟಿ.ವಿ. ಚಾನಲ್, ಪತ್ರಿಕೆಯವರನ್ನು ನೇರವಾಗಿಯೇ ಭೇಟಿ ಮಾಡಿ ದಿಢೀರನೆ ಆಶ್ರಮಕ್ಕೆ ಬಂದು ಅಲ್ಲಿನವರನ್ನು ಸಂದರ್ಶಿಸಬೇಕೆಂದು ಒಪ್ಪಿಗೆ ಪಡೆದುಕೊಂಡರು. ಅಲ್ಲಿನ ಜನನಾಯಕರನ್ನು ಸೇರಿಸಿಕೊಂಡರು.
ಒಂದು ಒಳ್ಳೆ ಮುಹೂರ್ತದಲ್ಲಿ ಎಲ್ಲವನ್ನು ಸಿದ್ಧಪಡಿಸಿಕೊಂಡು ಎಲ್ಲರನ್ನು ಕರೆದುಕೊಂಡು ಆಶ್ರಮಕ್ಕೆ ಧಾಳಿ ಇಟ್ಟರು. ಇಡೀ ಒಂದು ವ್ಯಾನಿನ ಭರ್ತಿ ಮಾಧ್ಯಮದವರು, ಪೊಲೀಸಿನವರು, ರಾಜಕೀಯ ಮುಖಂಡರು ಇದ್ದರು. ಇದಕ್ಕೆ ಹಿನ್ನೆಲೆಯಾಗಿ ಸೂರಜ್ ತನ್ನ ಅಜ್ಜಿಯ ನೆನಪಿಗಾಗಿ ಆ ಆಶ್ರಮದವರಿಗೆ ಬಟ್ಟೆ ಹಂಚುವ ಕಾರ್ಯಕ್ರಮ ಇಟ್ಟುಕೊಂಡು ಇರುವ ವಿಷಯವನ್ನು ಗೌಪ್ಯವಾಗಿರಿಸಿಕೊಂಡು ಬಟ್ಟೆಯ ಸಮೇತ ದಿಢೀರನೇ ಆಶ್ರಮದೊಳಗೆ ನುಗ್ಗಿದ. ಪೊಲಿಸ್ ಅಧಿಕಾರಿಗೆ ಮಾತ್ರ ನೈಜ ವಿಷಯದ ಅರಿವಿತ್ತು. ಆಶ್ರಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಜಾನಕಿ ಇರಲಿಲ್ಲ. ಆಕೆಯ ದಾಂಡಿಗರು ಒಳಗೆ ಬಿಡದಂತೆ ತಡೆಯಲು ಪ್ರಯತ್ನ ನಡೆಸಿದರು. ಆದರೆ ಪೊಲಿಸ್ ಅಧಿಕಾರಿ, ಟಿ.ವಿ. ಚಾನಲ್‌ರವರನ್ನು ರಾಜಕೀಯ ಮುಖಂಡರನ್ನು ಕಂಡು ತಮ್ಮ ಪ್ರಯತ್ನ ನಿಲ್ಲಿಸಿ ತಮ್ಮ ನಾಯಕಿಗೆ ಮಾಹಿತಿ ಮುಟ್ಟಿಸಿದರು.
ದಡದಡನೇ ಒಳನುಗ್ಗಿದವರೇ ಸೂರಜ್‌ನ ಸಲಹೆಯಂತೆ ಟಿ.ವಿ.ಯವರು ಅಲ್ಲಿರುವುದನ್ನು ಚಿತ್ರಿಕರಿಸಲು ಶುರುವಿಟ್ಟರು. ಹರಕಲು ಬಟ್ಟೆಯಲ್ಲಿ ಬೆಳಿಗ್ಗೆಯಿಂದ ತಿನ್ನಲು ಏನೂ ಇಲ್ಲದೆ ಹಸಿವಿನಿಂದ ಕಂಗಾಲಾಗಿದ್ದ ಅಲ್ಲಿನ ಜನರ ನೈಜ ಚಿತ್ರಣ ಅಲ್ಲಿದ್ದವರಿಗೆಲ್ಲ ದೊರೆಯಿತು. ಮಾಧ್ಯಮದವರು ಒಬ್ಬರದೇ ಸಂದರ್ಶನ ಮಾಡಿಕೊಂಡರು.
ಮೊದಲೇ ತಯಾರಿದ್ದ ಜನ ತಮ್ಮೆಲ್ಲ ಕಷ್ಟ, ನೋವುಗಳನ್ನು ಮುಚ್ಚಿಡದೆ ಹೇಳಿಕೊಳ್ಳುತ್ತ ಕಣ್ಣೀರಿಟ್ಟರು. ಆ ಕೊಳಕು ಪರಿಸರ, ಹಿಂದಿನ ದಿನವಷ್ಟೆ ಕೆಲಸ ಮಾಡಿಲ್ಲವೆಂದು ಹೊಡೆದು ಬಾಸುಂಡೆ ಬಂದ ವ್ಯಕ್ತಿಗಳನ್ನು, ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡರು. ಅಡುಗೆ ಮನೆಯಲ್ಲಿ ತರಕಾರಿ ಇಲ್ಲದೆ ರುಚಿ ಶುಚಿ ಇಲ್ಲದ ಅಡುಗೆಯನ್ನು ಚಿತ್ರಿಸಿಕೊಂಡರು.
ಜಾನಕಿ ಬರುವ ವೇಳೆಗೆ ಎಲ್ಲರ ಸಂದರ್ಶನ ಮಾಡಿ ಮುಗಿಸಿ, ಅವರ ಹೇಳಿಕೆಗಳನ್ನೆಲ್ಲ ದಾಖಲಿಸಿಕೊಂಡು ಆಶ್ರಮದ ವಾಸ್ತವವನ್ನು ಕಂಡು ಬಂದಿದ್ದವರೆಲ್ಲ ಕೆರಳಿ ನಿಂತಿದ್ದರು. ಗಾಬರಿಯಾಗಿ ಬಂದಿದ್ದ ಜಾನಕಿಯ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಅವರ್ಯಾರೂ ಇರಲಿಲ್ಲ.
ವೃದ್ದರನ್ನು ದೈಹಿಕ ದಂಡನೆ ಮಾಡಿ, ಅವರನ್ನು ಬಂಧಿಸಿಟ್ಟ ಅಪರಾಧದ ಮೇಲೆ ಜಾನಕಿಯನ್ನು ಪೊಲೀಸರು ಅರೆಸ್ಟ್ ಮಾಡಿದರು. ಕೇಸು ಕೋರ್ಟಿನಲ್ಲಿ ನಡೆಯುವುದೆಂದು ತಿಳಿಸಿ ಆಕೆಯನ್ನು ತಮ್ಮ ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.
ತಾತ್ಕಾಲಿಕವಾಗಿ ಅಲ್ಲಿನ ನಿರ್ವಹಣೆಯನ್ನು ವಹಿಸಲು ಸೂರಜ್‌ಗೆ ತಿಳಿಸಿ ಮುಂದಿನ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡುವ ಭರವಸೆ ನೀಡಿದರು.
ಕೋರ್ಟಿನಲ್ಲಿ ಜಾನಕಿಯ ಎಲ್ಲಾ ಅಪರಾಧವೂ ಸಾಬೀತಾಗಿ ಜೈಲು ಶಿಕ್ಷೆಯಾಯಿತು. ಮಾಡಿದ ಪಾಪಕ್ಕೆ ಜಾನಕಿ ನಾಲ್ಕು ವರ್ಷ ಜೈಲಿನಲ್ಲಿ ಕೊಳೆಯುವಂತಾಯಿತು. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ತನ್ನ ಅಪರಾಧ ಸಾಬೀತಾಗದಂತೆ ಮಾಡಿದ ಆಕೆಯ ಯಾವ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ದುಡ್ಡು ಇಲ್ಲಿ ಕೆಲಸ ಮಾಡಲೇ ಇಲ್ಲ. ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮದವರ ಸಹಕಾರ ಕೂಡ ಇಲ್ಲಿ ಅಪಾರವಾಗಿತ್ತು. ಅಂತೂ ನ್ಯಾಯಕ್ಕೆ ಜಯ ಸಿಕ್ಕಿತ್ತು.
ಜಾನಕಿ ಟ್ರಸ್ಟ್ ವಜಾ ಆಗಿ ಅಲ್ಲಿ ಸೂರಜ್‌ನ ಸಲಹೆಯಂತೆ, ಡಾ|| ರಾಮದಾಸರು ಸಹಕಾರ ತತ್ವದಡೀ ಒಂದು ಟ್ರಸ್ಟನ್ನು ಶುರು ಮಾಡಿ ಅಲ್ಲಿನ ಅವ್ಯವಸ್ಥೆಗಳನ್ನೆಲ್ಲ ಸರಿಪಡಿಸಿ ನಮ್ಮ ಮನೆಯಲ್ಲಿ ನಡೆಯುವಂತೆ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟರು. ಆ ನಗರದ ಅನೇಕ ಶ್ರೀಮಂತರು, ಸಮಾಜ ಸೇವಕರು ಆ ಟಸ್‌ನಲ್ಲಿದರು. ಆ ಆಶ್ರಮದ ಆಡಳಿತ ಯಾರೊಬ್ಬರ ಕೈಯಲ್ಲಿಯೂ ಇರದೇ ಇಡೀ ಸದಸ್ಯರ ಕೈಯಲ್ಲಿತ್ತು. ಆಸಹಾಯಕ ವೃದ್ದರ ಬಗ್ಗೆ ಖಾಳಜಿ, ವಾತ್ಸಲ್ಯ ಇದ್ದಂತಹ ಆ ಸದಸ್ಯರು ತುಂಬು ಹೃದಯದಿಂದ ಅಲ್ಲಿನ ಆಡಳಿತ ನಡೆಸಲು ಮುಂದಾಗಿದ್ದರು. ಈಗ ಆಶ್ರಮ ಮಾದರಿ ಆಶ್ರಯವಾಗಿತ್ತು.
ನಿರಾಶ್ರಿತ ವೃದ್ದರನ್ನು ಕೈಬೀಸಿ ಕರೆಯುತ್ತ ಬಂದಂತಹ ವೃದ್ದರಿಗೆ ತನ್ನ ಬೆಚ್ಚನೆಯ ಮಡಿಲಿನ ಆಶ್ರಯ ನೀಡಿ ಸುಕ್ಕುಗಟ್ಟಿದ ಮೊಗಗಳಲ್ಲಿ ಮುಗುಳ್ನಗೆ ಬೀರುತ್ತಿದೆ. ಹೊತ್ತುಹೊತ್ತಿಗೆ ರುಚಿ, ಶುಚಿ, ಆರೋಗ್ಯಪೂರ್ಣವಾದ ತಿಂಡಿ, ಊಟ, ಅಡುಗೆ ಮಾಡಲು ಯೋಗ್ಯರಾದ ಅಡುಗೆಯವರು, ಕಾಳಜಿಯಿಂದ ನೋಡಿಕೊಳ್ಳುವ ಸಿಬ್ಬಂದಿ ವರ್ಗದವರು, ಮಲಗಲು ಮೆತ್ತನೆಯ ಹಾಸಿಗೆ ಹಾಸಿರುವ ಮಂಚ, ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು, ಜೋಪಾನ ಮಾಡಲು ಕಬ್ಬಿಣದ ಬೀರು ಬೇಸರ ಕಳೆಯಲು ದೊಡ್ಡದಾದ ಟಿ.ವಿ., ಕಣ್ಣಮುಂದಿನ ಹಚ್ಚ ಹಸುರಿನ ನೋಟ, ಇಲ್ಲಿನವರ ನೆಮ್ಮದಿಗೆ ಈಗ ಕೊರತೆಯೇ ಇಲ್ಲ. ಸ್ವರ್ಗ ಸಮಾನವಾಗಿರುವ ಆಶ್ರಮ ಮತ್ತಷ್ಟು ನಿರಾಶ್ರಿತರನ್ನು ಕೈಬೀಸಿ ಕರೆಯುತ್ತದೆ. ಇಷ್ಟೆಲ್ಲ ಅದ್ಭುತವನ್ನು ಕಂಡ ಆಶ್ರಮವಾಸಿಗಳು ಸೂರಜ್‌ನನ್ನು ದೇವರಂತೆ ಕೈ ಎತ್ತಿ ಮುಗಿಯುತ್ತಾರೆ. ಅವರೆಲ್ಲರ ಪಾಲಿಗೆ ಸೂರಜ್ ದೈವಾಂಶ ಸಂಭೂತವೇ ಆಗಿಬಿಟ್ಟಿದ್ದಾನೆ. ಇದೆಲ್ಲ ಕ್ರೆಡಿಟ್ ನಿನ್ನದು ಎಂದು ರಿತುವಿನೆಡೆ ಸೂರಜ್ ಕೈತೋರುತ್ತಾನೆ. ಇದಕ್ಕೆಲ್ಲ ಕಾರಣ ವಾಸು ಎಂದು ರಿತು ಜಾರಿಕೊಳ್ಳುತ್ತಾಳೆ.
*****