ನಮ್ಮೂರಲ್ಲಿ
ಹುಡುಕಬೇಕಾಗಿಲ್ಲ
ಕಣ್ಣು ಹೊರಳಿಸಿದಲ್ಲಿ
ನಾನಾ ಗಾತ್ರ, ಗೋತ್ರದ ಹಂದಿಗಳು.
ಅಸಹ್ಯವೆಂಬುದಿಲ್ಲ
ಕಸ ರಸದ ಬೇಧವಿಲ್ಲ
ಹುಡುಕಿ ಹೋಗಿ ತಿನ್ನುತ್ತವೆ.
ಕೊಚ್ಚೆ, ಚರಂಡಿ
ಈಜುಕೊಳ ಮಾಡಿ
ಮನಸ್ವಿ ಉರುಳಾಡಿ, ಹೊರಳಾಡಿ
ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ.
ಕಸ ತಿನ್ನುತ್ತವೆ
ಕೊಚ್ಚೆ ಮೆತ್ತಿಕೊಳ್ಳುತ್ತವೆ
ವಿಸ್ಮಯ!
ಬದುಕಿವೆ; ಆರೋಗ್ಯವಾಗಿವೆ.
ಕರ್ರಗಿನ
ವಿಕೃತ ಗುಡಾಣಾಕಾರದ ಎದೆ, ಹೊಟ್ಟೆಯಿಂದ
ಸೋರುವ ರಾಡಿ
ನಡೆಯಲ್ಲೆಲ್ಲಾ ರಂಗೋಲಿ ಬಿಡಿಸುತ್ವೆ.
ಕಂಪಳ ಕಟ್ಟಿಕೊಂಡು
ಬೀಗುತ್ತಾ
ಗುಟುರು ಹಾಕುತ್ತಾ
ಸಿಕ್ಕಿದ್ದಕ್ಕೆ ಉಜ್ಜಿ ತೀಟೆ ತೀರಿಸಿಕೊಳ್ಳುತ್ತ
ನಿರ್ಭಯವಾಗಿ ಮೆರೆಯುವವು.
ಭ್ರಷ್ಟಾಚಾರಿಗಳಂತೆ
ಪ್ರಜ್ಞೆ ಸ್ವಾಭಿಮಾನ ರಹಿತ ಕ್ಷುದ್ರ ಜಂತುಗಳು
ಗದರಿಸೆ ತಿರುಗಿ ಬೀಳುವವು
ಮಾರಕ ರೋಗ ವಾಹಕಗಳು
ತೊಡರಿ ತೊಡರಿ ಕಾಡುವವು.
ಸ್ವಾಭಾವಿಕ
ಎಡರು ತೊಡರುಗಳು ನೂರಾರು
ಹಂದಿಗಳು, ಅಂತಹವುಗಳ ಜೊತೆ
ಈಚೀಚೆಗೆ
ವನ್ಯ ಮೃಗಗಳ ಅತಿಕ್ರಮಣ ಬೇರೆ ಸೇರಿ
ಬಾಳು ದಿನೇ ದಿನೇ ಸಮಸ್ಯಾತ್ಮಕವಾಗುತ್ತಿದೆ.
ಇವು ಹೆಚ್ಚಿನವು ನಮ್ಮದೇ ತಪ್ಪಿನ ಫಲ!
ಯಾವುದೇ ಇರಲಿ
ನಮಗೆ ಒಳ್ಳೆಯದು ನಾವೇ ಮಾಡಿಕೊಳ್ಳಬೇಕು
ವಿಚಾರಿಸಬೇಕು
ಬದಲಾಗಬೇಕು; ಮುಂದಾಗಬೇಕು.
*****