ಅಮ್ಮ ನಿನ್ನ ಮಡಿಲಲ್ಲೊಮ್ಮೆ
ಮಗುವಾಗಿ ತಲೆಯನಿಟ್ಟು ತೂಗುವಾಸೆ|
ಆ ನಿನ್ನ ಲಾಲಿಹಾಡ ನೆನೆದು
ಮಗುವಾಗಿ ಮರಳುವಾಸೆ||
ಅಮ್ಮ ನಿನ್ನ ಮಡಿಲಲ್ಲೊಮ್ಮೆ
ನಾನೂ ಅಮ್ಮನಾಗಭರವಸೆಯಲಿ
ಹುಟ್ಟುವ ಮಗುವಿಗಾಗಿ ಕುಲಾಯಿ
ಹೆಣೆಯುತಿರುವಾಗ ನನ್ನಲೇಕಿಂತ ಮುಗ್ದ ಆಸೆ|
ನಿನ್ನ ಹಾಗೆ ನಾನು ನನ್ನ ಮಗುವ
ಜೋಪಾನವಾಗಿ ಪ್ರೀತಿ ಅಕ್ಕರೆಯಿಂದ
ಆರೈಕೆ ಮಾಡುವೆಯಾದರು..||
ಅಪ್ಪ ಬಂದಾಗಲೆಲ್ಲ
ನಿನ್ನಾ ಸೀರೆ ಹಿಡಿದು ಹಿಂದೆ
ಅವಿತುಕೊಂಡಾ ನೆನಪು ನನ್ನ
ಮತ್ತೆ ಮಗುವಾಗಿಸುತಿದೆ|
ಗುಮ್ಮನ ಕಥೆಯ ಕೇಳಿ ರಾತ್ರಿ ಮಲಗಿದಾಗ
ಬೆಚ್ಚಿಬಿದ್ದು ನಿನ್ನ ತಬ್ಬಿದಾ ನೆನಪು
ನನ್ನ ಮತ್ತೆ ಮಗುವಾಗಿ ಮಾಡಿದೆ||
ರಾಮ ಕೃಷ್ಣರ ಕಥೆಯ ಕೇಳಿ
ರಾಧೆ ರುಕ್ಮಿಣಿಯರಂತೆ ಬೆಳೆದ
ನನ್ನ ಬಾಲ್ಯ ನೆನೆಯುವಾಸೆ|
ನಿನ್ನ ಕೈಯಿಂದ ಹಸನಾಗಿ ಹತ್ತಾರು
ಸಲ ಬೆನ್ನ ಮೇಲೆ ತಟ್ಟಿಸಿಕೊಳ್ಳುತ ಮಲಗುವಾಸೆ||
*****