ಪೂಜಾರಪನಿಗೆ ತನ್ನ ಬುಡಕಟ್ಟಿನ ಜನರ ಮಾತಿನಿಂದ ಆನಂದವೇನೂ ಆಗಿರಲಿಲ್ಲ. ಆದರೆ ಅವರ ಅಪೇಕ್ಷೆಯನ್ನು ಅಲ್ಲಗಳೆಯುವಂತೆಯೂ ಇರಲಿಲ್ಲ. ಇಷ್ಟಕ್ಕೂ ಅವರು ಕೆಟ್ಟದನ್ನು ಕೇಳಿದ್ದರೆ ಬಿಲ್ಕುಲ್ ಆಗಲ್ಲ ಅನ್ನಬಹುದಿತ್ತು. ಈಗ ಹಾಗಿಲ್ಲ. ಹಾಗಂತ ತನ್ನ ಜನರನ್ನ ಅವರು ಹೋದತ್ತಲೇ ಬಿಡೋದೂ ಸರಿಯಲ್ಲ; ಸಮಯ ಸಂದರ್ಭಕ್ಕನುಗುಣವಾಗಿ ನಡಕೊಳ್ತಾನೇ ನಿಯಂತ್ರಣ ಇಟ್ಟುಕೋಬೇಕು-ಹೀಗೆ ಯೋಚಿಸಿದ ಪೂಜಾರಪ್ಪ.
ನರಸಿಂಹರಾಯಪ್ಪ ಮತ್ತು ರಾಮಜೋಯಿಸರ ಬಳಿಗೆ ಬಂದು ಪೂಜಾರಪ್ಪ ಸಾದ್ಯಂತ ವಿವರಿಸಿದ. ಸೂರ್ಯ, ಚಂದ್ರನ ಸ್ನೇಹಿತ ಎಂದು ತಿಳಿದ ಮೇಲೆ ಇವರಿಬ್ಬರ ಹುಬ್ಬೇರಿತು. ಈತ ಇನ್ನೇನಾದ್ರೂ ಮಾಡೋಕೆ ಬಂದಿರಬಹುದೆ ಅಂತ ಚಿಂತಿಸಿದರು. ಹಾಗಂತ ಅಕ್ಷರ ಕಲಿಕೆಗೆ ಅವಕಾಶ ಕೂಡದೆ ಇರೋದೂ ಸರಿಯಲ್ಲ ಅಂತ ಜೋಯಿಸರು ಅಭಿಪ್ರಾಯಪಟ್ಟರು. ಸರ್ಕಾರವೇ ಇಂಥ ವಿಷಯಗಳಲ್ಲಿ ಯೋಜನೆ ರೂಪಿಸಿರೋವಾಗ ಅಡ್ಡಿ ಬರೋದು ಸಮಂಜಸವಾಗದು; ಅದಕ್ಕೆ ಬೇರೆ ಅರ್ಥವೇ ಬಂದೀತು-ಅನ್ನೋದು ಅವರ ವಾದ. ಆದರೆ ನರಸಿಂಹರಾಯಪ್ಪ- ಸರ್ಕಾರದ ಸಹಾಯದಿಂದ ಸೂರ್ಯ ಸಾಕ್ಷರತೆ ಕೆಲಸ ಮಾಡ್ತಾ ಇಲ್ಲವಾದ್ದರಿಂದ ಅನುಮಾನ-ಎಂದು ತಮ್ಮದೇ ಧಾಟಿಯಲ್ಲಿ ಹೇಳಿದರು. ಇವರು ಅಳೆದು ಸುರಿದು ಚೆಂತಯಲ್ಲೇ ಜಂತೆ ಎಣಿಸುತ್ತಿರುವಾಗ, ಒಳಗಿಂದ ಕಾಫಿ ತಂದ ನರಸಿಂಹರಾಯಪ್ಪನ ಹೆಂಡತಿ ಸಾವಿತ್ರಮ್ಮ ಒಂದು ಮಾತು ಹೇಳಿದಳು-
“ಯೇ ಇದ್ಯಾತ್ರುದು ಇದು? ಅವಾಗ್ನಿಂದ ವಾಡೆ ಬುಡ್ಡನಾಗಿರಾ ರಾಗೀನ ಪಾವು, ಚಟಾಕ್ನಾಗ್ ಅಳದಂಗೆ ಒಂದೇ ಸಮ ಸಿಂತೆ ಮಾಡ್ತಾ ಕುಂತಿವ್ರಿ. ನೀವೀಕಡೆ ನಮ್ಮಂತ ಯಣ್ ಮಕ್ಕಳಿಗೂ ನಮ್ಮಂಗಿರಾಕ್ ಬಿಡಲ್ಲ, ಆ ಕಡೆ ಅವ್ರ್ ಪಾಡಿಗ್ ಅವ್ರ್‌ನ ಬಿಡಲ್ಲ. ಅವ್ರಿಗ್ಯಾವನೊ ಬಂದ್ ಇದ್ದೆ ಬುದ್ದಿ ಕಲ್ಸಿದ್ರೆ ನಿಮ್ದೇನೋದಾತು ಓಬೀರಾಯನ ಗಂಟು. ಸುಮ್ಕೆ ಹ್ಞೂ ಅನ್ರಿ.”
ನರಸಿಂಹರಾಯಪ್ಪ ಕ್ಷಣಕಾಲ ಸ್ಮಂಭಿತರಾದರು. ತನ್ನ ಹಂಡತಿಯೇ ಹೀಗೆ ಮಾತಾಡಿದ್ದು? ಕೇಳಿಯೇ ಬಿಟ್ಟರು- “ಏನೇ ನೀನೇ ಇಂಗ್ ಮಾತಾಡ್ರೀಯ?”
“ಮಾತಾಡ್ದೆ ಇನ್ನೇನು? ದೊಡ್ಡೋರ್ ಮನೆ ಯೆಣ್ ಮಕ್ಕಳಿಗೇ ಸತ್ತೇವ್ ಚಂದಾಗ್ ಗೊತ್ತಿರಾದು.”
ಕ್ಷಣಕಾಲ ಮೌನ. ಕಡಗೆ ಜೋಯಿಸರು ಗಾಢ ಚಿಂತನೆಯಿಂದ ಮಾತನ್ನು ಹೊರತೆಗೆದವರಂತೆ ಹೇಳಿದರು- “ಸಾವಿತ್ರಮ್ಮ ಯೇಳಾದ್ರಲ್ಲೂ ಸತ್ಯ ಇದೆ ಒಡಯರೆ. ಸುಮ್ನೆ ಎಲ್ಲಾದ್ಕು ವಿರೋಧ ಮಾಡ್ತಾ ಇದ್ರೆ ನಮಗೇ ಮುಳುವಾಗ್ಬಹುದು.”
“ಇದೇನ್ ಜೋಯಿಸ್ರೆ, ನಾನ್ ಜೋರಾಗೇಳಿದ್ರೆ ನಂದ್ರಾಗು ಸತ್ತೇವೈತೆ ಅಂಬ್ತೀರ, ಸಾವಿತ್ರಿ ಜೋರಾಗೇಳಿದ್ರೆ ಅದ್ರಾಗೂ ಸತ್ತೇವೈತೆ ಅಂಬ್ತೀರ! ನಿಜವಾಗ್ಲು ಎಲ್ಲೈತೆ ಸತ್ತೇವು?”- ನರಸಿಂಹರಾಯಪ್ಪ ಬೇಸರದ ಧಾಟಿಯಲ್ಲಿ ಕೇಳಿದ.
“ಈ ಬಡ್ಡಿಮಗಂದು ಸತ್ಯ ಅನ್ನೋದೇ ಹೀಗೆ ಒಡಯರೆ. ಕಂಡ್ರೂ ಕಾಣ್ದಂತೆ ಇರುತ್ತೆ. ಸಿಕ್ಕಿದ್ರೂ ಸಿಕ್ಕದಂತೆ ಇರುತ್ತೆ ಇಲ್ಲೂ ಇರುತ್ತೆ. ಅಲ್ಲೂ ಇರುತ್ತೆ.”
“ಇಲ್ಲೂ ಅಲ್ಲೂ ಎಲ್ಲಾ ಕಡೀಕೂ ಇದ್ರೆ ಅದ್ಯಾವ್ ಸೀಮೆ ಸತ್ತೇವೂ ನಂಗಂತೂ ಗೊತ್ತಾಗಕಿಲ್ಲ. ಒಟ್ನಲ್ಲಿ ಅವ್ನು ರಾತ್ರಿಸಾಲೆ ನಡಿಸ್ಕಂಬ್ಲಿ ಬಿಡ್ರಿ ಮತ್ತೆ” ಎಂದ ನರಸಿಂಹರಾಯಪ್ಪ ಪೂಜಾರಪ್ಪನನ್ನು ಕುರಿತು- “ಆ ಮನ್ಸುನ್ನ ಒಂದ್ ಕಿತ ಕರ್‍ಕಂಡ್ ಬಾರ್‍ಲ ನಮ್ತಾವ. ಅವ್ನ್‍ತಾವ್ ಮಾತಾಡಿ ಒಪ್ಗೆ ಕೊಡಾವ” ಎಂದರು.
ಆಗ ರಾಮಾಜೋಯಿಸರು “ನೀನೇ ಒಪ್ಪಿಗೆ ಕೊಟ್‍ಬಿಟ್ಟೀಯ. ಸುಮ್ಕೆ ಇಲ್ಲಿಗ್ ಕರ್‍ಕಂಡ್ ಬಾ, ಅಲ್ಲೀತನಕ ವಿಷ ಮಗುಮ್ಮಾಗೇ ಇರ್‍ಲಿ” ಎಂದು ಸೂಚಿಸಿದರು.
ನರಸಿಂಹರಾಯಪ್ಪ ಜೋಯಿಸರ ಮಾತಿಗೆ ಮೆಚ್ಚುಗೆ ಸೂಚಿಸಿದರು.
ಪೂಜಾರಪ್ಪ ಸೂರ್ಯನ ಬಳಿ ಬಂದು-ತಾನು ಅವರ ಮನಸ್ಸನ್ನು ಸಿದ್ಧಪಡಿಸಿರುವುದಾಗಿಯೂ ಭೇಟಿಯೊಂದೇ ಬಾಕಿ-ಎಂದೂ ಹೇಳಿದ. ಸೂರ್ಯನಿಗೆ ಅವರ ಬಳಿ ಹೋಗಿ ಕೇಳಿಕೊಂಡು ಬುಡಕಟಿನ ಬದಲಾವಣೆಗೆ ಪ್ರಯತ್ನಿಸುವುದು ಇರಿಸು ಮುರಿಸಿನ ವಿಷಯವಾಗಿತ್ತು. ಆದರೇ ಇದು ವೀರಾವೇಶದ ವಿಷಯವಲ್ಲವೆಂದೂ ಆತನಿಗೆ ತಿಳಿದಿತ್ತು. ಮೊದಲು ಇಲ್ಲಿ ನೆಲೆಕಂಡುಕೂಳ್ಳಬೇಕು; ಅದಕ್ಕಾಗಿ ಒಂದೆರಡು ಹಜ್ಜೆ ಹಿಂದಿಟ್ಟಂತೆ ಮಾಡಿ ಹತ್ತಾರು ಹಜ್ಜೆ ಮುನ್ನಡೆಯಬೇಕು- ಎಂದು ಚಿಂತಿಸಿದ ಸೂರ್ಯ ಒಡೆಯರ ಬಳಿಗೆ ಬರುವುದಾಗಿ ಹೇಳಿದ.
ಮಾರನೆ ದಿನವೇ ಪೂಜಾರಪ್ಪ, ಹುಚ್ಚೀರ, ಸಣ್ಣೀರ, ತಿಮ್ಮರಾಯಿ ಜೊತೆ ಸೂರ್ಯ ಉಗರೊಳಗೆ ಬಂದ.
ಈ ಊರು ತುಂಬಾ ಮುಂದುವರೆದ ಊರೇನು ಅಲ್ಲ. ಸಣ್ಣ ಪುಟ್ಟ ಓಣಿಗಳು. ಮಣ್ಣಿನ ಮನೆಗಳು. ಎತ್ತು ಹೊಡೆದುಕೊಂಡು ಹೊಲದ ಕಡೆ ಹೊರಟ ರೈತರು; ಬುತ್ತಿ ಕಟ್ಟಿಕೊಂಡು ಕೂಲಿಗೆ ಹೂರಟ ಜನರು. ಇದೊಂದು ಬಡವರ ತಾಣವೇ ಆಗಿತ್ತು. ಆದರೆ ಬುಡಕಟ್ಟಿನ ಜನರಿಗೆ ಹೋಲಿಸಿದರೆ ವಾಸಿ. ಒಂದು ಏಕೋಪಾಧ್ಯಾಯ ಪ್ರಾಥಮಿಕ ಶಾಲೆ ಬೇರೆ ಇದೆ. ಐದಾರು ದೊಡ್ಡ ಮನೆಗಳಿವೆ. ಅದರಲ್ಲಿ ಭೂ ಒಡೆಯರ ವಾಸ. ಕೆಲವು ಮಧ್ಯಮ ದರ್ಜೆಯ ಮನೆಗಳೂ ಇವೆ. ಊರಂಚಿನಲ್ಲ ಗುಡಿಸಲುಗಳೂ ಇವೆ. ಮಿಶ್ರ ಸ್ವರೂಪದ ಊರು. ಸೂರ್ಯ, ಎಲ್ಲವನ್ನೂ ಗಮನಿಸುತ್ತ ಬಂದ.
ಪೂಜಾರಪ್ಪ “ಅಗಾ ನೋಡಪ್ಪ ಅಲ್ಲೈತೆ ಒಡೇರ್ ಮನೆ” ಎಂದಾಗ ಆ ಕಡೆ ನೋಡಿದ. ದೊಡ್ಡಮನೆ; ದೊಡ್ಡ ಹಜಾರದಲ್ಲಿ ಎದ್ದು ಕಾಣೋ ಕಂಬಗಳು. ಅಲ್ಲಿ ನರಸಿಂಹರಾಯಪ್ಪ ಮತ್ತು ಜೋಯಿಸರು ಇದ್ದಾರೆ. ಜೊತೆಗೆ ಇಬ್ಬರು ಪೋಲಿಸರು, ಒಬ್ಬ ಸಬ್‍ಇನ್ಸ್ಪಕ್ಟರ್ ಕಾಣಿಸಿದರು.
ಸೂರ್ಯ ಥಟನೆ ನಿಂತ.
ಪೂಜಾರಪ್ಪ “ಯಾಕಪ್ಪ ಅಂಗ್ ನಿಂತ್ಕಂಡೆ?” ಎಂದು ಕೇಳಿದ.
“ನಾನು ರೀಸಸ್ಗೆ ಹೋಗ್ಬೇಕಲ್ಲ?”-ಸೂರ್ಯ ಏನೋ ಒಂದು ಕಾರಣ ಹೇಳಿದೆ.
“ಅಂಗಂದ್ರೆ?”- ಪೂಜಾರಪನಿಗೆ ಅರ್ಥವಾಗದೆ ಕೇಳಿದ.
ಆಗ ಸೂರ್ಯ ತೋರು ಬೆರಳೊಂದನ್ನು ತೋರಿಸಿ “ವಂದ. ವಂದ ಮಾಡ್ಬೇಕಪ್ಪ” ಎಂದ.
“ಓ ಉಚ್ಚೆ ವೊಯ್ಬೇಕಾ? ಎಂದು ರಾಗ ಎಳೆದ ಪೂಜಾರಪ್ಪ “ನಮ್ ಓಡೇರ್ ಮನೇತಾವ್ ಬಂದ್ ಕಿತಾನೆ ನಿಂಗೆ ಉಚ್ಚೆ ಕಿತ್ಕಂಡ್ ಬಂತು ನೋಡು?” ಎಂದು ನಕ್ಕ.
ಸೂರ್ಯನಿಗೆ ಮುಜುಗರ; ಮಾತಾಡಲಿಲ್ಲ.
“ಉಚ್ಚೆ ವೊಯ್ಯಾಕ್ ಯಾಕ್ ಸಿಂತೆ ಮಾಡ್ತೀಯ. ಇಲ್ಲೇ ಯಾವ್ದಾನ ಮೋಟ್ಗೋಡ ತಾವ್ ವೊಡ್ಯಪ್ಪ ಯಾರ್ ನೋಡ್ತಾರೆ” ಎಂದ ಪೂಜಾರಪ್ಪ.
“ಈಗ ಬಂದೆ” ಎಂದು ಸೂರ್ಯ ಅಲ್ಲೇ ಸ್ವಲ್ಪ ದೂರ ಹೋದ. ಪೋಲಿಸ್ ಜೀಪು ಹೋದ ನಂತರ ಬಂದ. “ನಡೀರಿ ಹೋಗೋಣ” ಎಂದ.
ಸೂರ್ಯನನ್ನು ನರಸಿಂಹರಾಯಪ್ಪ ಮತ್ತು ಜೋಯಿಸರು ಆದರದಿಂದಲೇ ಮಾತಾಡಿಸಿದರು. ಯಾರು, ಏನು, ಎತ್ತ-ಎಂದೆಲ್ಲ ವಿಚಾರಿಸಿಕೊಂಡರು. ಸೂರ್ಯ ಅವರು ನಂಬುವಂತಹ ಮಾಹಿತಿ ನೀಡಿ ಜನಸೇವೆಗಾಗಿ ತಾನು ಮುಡಿಪು ಎಂದು ಸ್ಪಷ್ಟಪಡಿಸಿದ. “ಮಾಡಪ್ಪ ಮಾಡು. ಇವಾಗ್ ನಾವೂ ಸೇವೆ ಮಾಡ್ತಿಲ್ವ? ಅಂಗೇ ನೀನೂ ಮಾಡು. ಆದ್ರೆ ಏನೂ ತರ್‍ಲೆ ತಕರಾರು ಆಗ್ಬಾರ್‍ದು ನೋಡು ಮತ್ತೆ” ಎಂದು ಹೇಳಿದ ನರಸಿಂಹರಾಯಪ್ಪ ತನ್ನ ವಂಶದ ಪ್ರಶಿಷ್ಠೆ ಕುರಿತು ಮಾತನಾಡಿದ. ತನ್ನ ಅಪ್ಪಣೆ ಇಲ್ಲದೆ ಒಂದು ಹುಲ್ಲುಕಡ್ಡೀನೂ ಅಲುಗಾಡೊಲ್ಲ; ಅದಕ್ಕೆ ಪೋಲಿಸ್ ಗೀಲಿಸ್ ಎಲ್ಲಾ ತನ್ನ ಸುತ್ತ ತಿರುಗ್ತಾ ಇರ್‍ತಾರೆ- ಎಂದೆಲ್ಲ ಹೇಳಿದ. ಕಡಗೆ “ಒಸಿ ಉಸಾರಾಗಿರಪ್ಪ” ಎಂದು ಎಚ್ಚರಿಸಲು ಮರೆಯಲಿಲ್ಲ.
ಅಷ್ಟರಲ್ಲಿ ಸಾವಿತ್ರಮ್ಮ ಕಾಫಿ ತಂದರು. “ವೋಸದಾಗ್ ಬಂದಿರಾರ್‍ಗೆ ಯಾಕಂಗ್ ಬೈರಿಗೆ ಇಡೀತೀರ?” ಎಂದು ಛೇಡಿಸಿದಳು. ನರಸಿಂಹರಾಯಪ್ಪ “ನನ್ ಯೆಂಡ್ರು, ಇವ್ಳ್ ಯಾವಾಗ್ಲೂ ಇಂಗೇನೇ ಮಾತಾಡಾದು” ಎಂದು ಸೂರ್ಯನಿಗೆ ಪರಿಚಯಿಸಿದ. ಸೂರ್ಯ “ನಮಸ್ಕಾರನಮ್ಮ” ಎಂದು ಕೈಮುಗಿದ. ಸಾವಿತ್ರಮ್ಮ “ನಮ್ಗೆಲ್ಲ ಯಾಕಪ್ಪ ಕೈ ಮುಗೀತೀಯ. ಬೂಮ್ ತಾಯೀಗ್ ಮುಗುದ್ರೆ ಸಾಕಪ್ಪ ಬೂಮ್ತಾಯಿ ಇಲ್ದೆ ನಾವ್ ಬದ್ಕಕಾಯ್ತದ ಯೇಳು ಮತ್ತೆ? ಏನೋ ಒಳ್ಳೆ ಕೆಲ್ಸ ಮಾಡಾಕ್ ಬಂದಿದ್ದೀಯ. ಆ ಬೂಮ್ತಾಯಿ ನಿಂಗೊಳ್ಳೇದ್ ಮಾಡ್ಲಪ್ಪ” ಎಂದಳು.
ಸೂರ್ಯನಿಗೆ ಆಕೆ ಇವರೆಲ್ಲರಿಗಿಂತ ಎತ್ತರವಾಗಿ ಕಾಣಿಸಿದಳು.
“ಒಳ್ಳೆ ಕೆಲ್ಸಕ್ಕೆ ನಿಮ್ಮಂಥ ಒಳ್ಳೇರ್ ಬೆಂಬಲ ಬೇಕು ತಾಯಿ” ಎಂದು ಕೇಳಿದ.
“ಎಂಥಾ ಮಾತಾಡ್ದೆ ಮಗ! ಒಳ್ಳೆ ಕೆಲ್ಸಕ್ ನಾವಾಗ್ದೇ ಇದ್ರೆ ಬಾಳ್ಳೇವ್ ಮಾಡೇನ್ ಬಂತು, ಯೇಳು ಮತ್ತೆ?” ಎಂದು ಸಾವಿತ್ರಮ್ಮ ಹೇಳಿದಾಗ ನರಸಿಂಹರಾಯಪ್ಪ “ವೋಗೋಗು ಒಳಗ್ ಕೆಲ್ಸ ನೋಡ್ಕ” ಎಂದು ಸ್ವಲ್ಪ ಗಡಸು ದನಿಯಲ್ಲಿ ಹೇಳಿದ. ಸಾವಿತ್ರಮ್ಮ “ಒಸಿ ಇಲ್ ನಿಂತಿದ್ರೆ ಒಳ್ಗೇನು ಅಡುಗೆ ಮನೆ ಅಳ್ತಾ ಕುಂತ್ಕಮಲ್ಲ” ಎಂದು ಗೊಣಗುತ್ತ ಒಳಹೋದಳು.
ರಾಮಾಜೋಯಿಸರು ಸುಮ್ಮನೆ ಕೂತಿರಲಿಲ್ಲ. ಸೂರ್ಯ ಈ ಊರಿನ ಬಳಿಯೇ ಬಂದದ್ದು ಯಾಕೆ; ಇಂತಹ ಕೆಲಸ ಎಷ್ಟು ದಿನದಿಂದ ಮಾಡ್ತಿದಾನೆ; ಏನು ಓದಿದಾನೆ- ಇತ್ಯಾದಿ ತನಿಖಾ ರೂಪದ ಪ್ರಶ್ನೆಗಳನ್ನು ಕೇಳಿದರು. ಸೂರ್ಯನಿಗೆ ಸಿಟ್ಟು ಬಂದರೂ ತೋರಗೊಡದೆ ಮಾತಾಡಿದ. ಕಡೆಗೆ ಜೋಯಿಸರು ಒಂದು ಮಾತು ಹೇಳಿದರು. “ಇಷ್ಟೆಲ್ಲ ಕೇಳ್ದೆ ಅಂತ ಬೇಸರ ಪಟ್ಕೋಬೇಡಪ್ಪ. ಇದೇತಾನೆ ಪೋಲಿಸ್ ಇನ್ಸ್‍ಪೆಕ್ಟರು ಬಂದಿದ್ರು. ಯುವಕ್ರು ಬುಡಮೇಲು ಕೃತ್ಯಗಳಲ್ಲಿ ತೊಡಗಿರೊ ಬಗ್ಗೆ ಹೇಳ್ತಾ ಇದ್ರು. ಅದಕ್ಕೆ ಕೇಳ್ದೆ ಈಗ ನಿನ್ನಂಥ ಯುವಕ್ರು ಅಪರೂಪ ಅನ್ನುಸ್ತಾ ಇದೆ.”
ಅಪರೂಪಾನೊ ನಿಜರೂಪಾನೊ ಬೇಗ ಮಾತು ಮುಗಿಸಿದರೆ ಸಾಕು- ಎಂದು ಒಳಗೆ ಅಂದುಕೊಂಡ ಸೂರ್ಯ “ನಾನಿನ್ ಬರ್‍ತೀನಿ” ಎಂದು ಎದ್ದು ನಿಂತ. ನರಸಿಂಹರಾಯಪ್ಪ “ಆಯ್ತು ವೋಗ್ಬಾ; ಉಸಾರು” ಎಂದ.
ದಾರಿಯಲ್ಲಿ ಬರುವಾಗ ಪೂಜಾರಪ್ಪ “ನಾನ್ ಯೇಳ್ತಾ ಇರ್‍ಲಿಲ್ವ; ಇವ್ರು ಬಲೇ ಕೂಚ್ಚನ್ ಮಾಡ್ತಾರೆ ಅಂಬ್ತ” ಎಂದು ಹೆಮ್ಮೆಯಿಂದ ನುಡಿದಾಗ ಸೂರ್ಯ “ಬರೀ ಅವರು ಕೊಶ್ಚನ್ ಮಾಡಿದ್ರೆ ಸಾಲ್ದು. ಬಡವರು, ಬುಡಕಟ್ನೋರು ಅವರ್‍ನ ಕೊಶ್ಚನ್ ಮಾಡ್ಬೇಕು” ಎಂದು ದೃಢವಾಗಿ ಹೇಳಿದ.
ಪೂಜಾರಪ್ಪ “ಯೇ ಅದೆಲ್ಲಾನ ಉಂಟಾ? ಅದಾಗಕಿಲ್ಲ ವೋಗಾಕಿಲ್ಲ ಬಿಡು” ಎಂದು ನಕ್ಕ.
ಸೂರ್ಯ ಪ್ರತಿಕ್ರಿಯಿಸಲಿಲ್ಲ. ಅಂತಹ ದಿನಗಳಿಗಾಗಿ ಕಾಯಬೇಕು; ಅದಕ್ಕಾಗಿ ಜನರು ಸಜ್ಜಾಗಬೇಕು-ಎಂದು ತನ್ನೊಳಗೆ ತಾನು ಚಿಂತನೆ ನಡೆಸಿದ.
ಇದು ಹೊರಗಿನ ಮಾತಲ್ಲ. ಒಳಗಿನ ಮಾತು.
ಹೂರಗಿನ ಮಾತು ಮಳಗಾಳಿಗಳಿಗೆ ಸಿಗುತ್ತದೆ. ಒಮ್ಮೊಮ್ಮೆ ತತ್ತರಿಸುತ್ತದೆ. ಒಳಗಿನ ಮಾತು ಮೌನದಲ್ಲೇ ಗಟ್ಟಿಯಾಗುತ್ತದೆ. ಕಾಲ ಬಂದಾಗ ಉತರಿಸುತ್ತದೆ.
ಸೂರ್ಯನಿಂದ ವಿವರಗಳನ್ನು ಕೇಳಿದ ಶಬರಿ ಸಂಭ್ರಮಗೊಂಡಳು.
ಹಾಗೆ ನೋಡಿದರೆ, ಹುಚ್ಚೀರ ಮತ್ತು ಸಣ್ಣೀರ ಮತ್ತಷ್ಟು ಸಂಭ್ರಮದಲ್ಲಿದ್ದರು. ಸಣ್ಣೀರನಿಗೆ ಸೂರ್ಯ ಹೇಳಿದ- “ನೀನು ಪೂಜಾರಪ್ಪನ ಜತೆ ನೇರವಾಗಿ ಮಾತಾಡಿದ್ದು ಎಷ್ಟು ಒಳ್ಳೇದಾಯ್ತು ನೋಡು.”
ಅದಕ್ಕೆ ಸಣ್ಣೀರ ಹೇಳಿದ- “ನೀನು ವಿಸ್ಯ ಯೇಳ್ತಾ ಯೇಳ್ತಾ ನಮ್ಗೇ ನಿಜ ಅನ್ಸಾಕ್ ಸುರುವಾಯ್ತು. ಅದ್ಕೇ ಮಾತಾಡ್ದೆ”
“ಹೌದು; ನಾವು ಯಾವಾಗ್ಲೂ ನಿಜಕ್ಕೆ ನಾಲಗೆಯಾಗ್ಬೇಕು” ಎಂದು ಸೂರ್ಯ ನಿರ್ಧಾರಕವಾಗಿ ನುಡಿದ.
ಅಷ್ಟು ಹೊತ್ತು ಸುಮ್ಮನೆ ಇದ್ದ ತಿಮ್ಮರಾಯಿ “ನಾವು ನಾಲ್ಗೆ ನಂಬೋ ಜನ ಅಂಬ್ತ ಯೇಳ್ತಾನೆ ಬಂದಿವ್ನಿ. ನಿಂಗೊತ್ತೇನಪ್ಪ” ಎಂದ.
ಸೂರ್ಯ ನಗುತ್ತಾ “ಬಡವರೆಲ್ಲ ನಾಲ್ಗೆ ನಂಬೊ ಜನ. ಉಳಿದೋರೆಲ್ಲ ನಾಲ್ಗೆನುಂಗೊ ಜನ. ಅದುಕ್ಕೆ ನಮ್ ನಾಲ್ಗೆನಮ್ ಹತ್ರಾನೇ ಇರ್‍ಬೇಕು. ನಿಜಾನೇ ನುಡೀತಾ ಇರ್‍ಬೇಕು” ಎಂದು ಸ್ಪಷ್ಟಪಡಿಸಿದ.
ಅದೂ ಇದೂ ಲೋಕಾಭಿರಾಮದ ಮಾತನಾಡಿದ ಮೇಲೆ ಸೂರ್ಯ “ಈಗ ರಾತ್ರಿ ಶಾಲೇಗೆ ಒಂದು ಗುಡಿಸಲು ಕಟ್ಬೇಕು. ಅದಕ್ಕೆ ಯಾವ ಜಾಗ ಅಂತ ಎಲ್ರೂ ಹೇಳ್ಬೇಕು” ಎಂದು ಕೇಳಿದ.
ಸಣ್ಣೀರ “ಯೇ ಕೋಳಿ ಕೇಳಿ ಕಾರ ಅರ್‍ಯಾಕಾಯ್ತದ? ನೀನೇ ಒಂದು ಜಾಗ ಯೇಳಿದ್ರೆ ವೊತ್ತು ಮುಳ್ಗಾದ್ರಾಗೆ ವೂದಿಕೆ ಆಕ್‍ಬಿಡ್ತೀವಿ” ಎಂದ. ಹುಚ್ಚೀರ ಹೌದೆಂದು ತಲೆಯಾಡಿಸಿದ.
ಆಗ ಸೂರ್ಯ ಹೇಳಿದ. “ತಪ್ಪು, ನಮಿಗ್ ನಾವೇ ತೀರ್ಮಾನ ತಗಳ್ಳೋ ಬದ್ಲು, ನೀವ್ ನಾಲ್ಕುಜನ ಕೂತು ತೀರ್ಮಾನ ಮಾಡಿ. ಎಲ್ಲಾ ಸೇರ್‍ಕೊಂಡು ಒಂದ್ ನಿರ್ಧಾರ ತಗೋಬೇಕು. ಯಾಕೇಂದ್ರ ಎಲ್ರೂ ಸೇರೇ ಗುಡಿಸ್ಲು ಕಟ್ಬೇಕು. ಅಲ್ವಾ?”
“ನೀನಂಗಂದ್ ಮ್ಯಾಗೆ ಅಂಗೇ ಆಗ್ಲಿ ಬಿಡು” ಎಂದು ಸಣ್ಣೀರ ಹೇಳುವಾಗ ಆತನಲ್ಲಿ ಹೂಸ ಹುರುಪು ಇತ್ತು. ತನ್ನಂಥವರ ಮಾತಿಗೆ ಮಹತ್ವ ಇದೆ ಎಂಬ ಭಾವನೆ ಅದೇ ತಾನೆ ಹುಟ್ಟತೊಡಗಿತ್ತು.
ಸೂರ್ಯನ ಅಪೇಕ್ಷೆಯಂತೆ ರಾತ್ರಿ ಎಲ್ಲರೂ ಸೇರಿ ಮಾತಾಡಿದರು. ಸ್ವಲ್ಪ ಹತ್ತಿರದ ಜಾಗವೊಂದನ್ನು ಗುರುತಿಸಿದರು. ಸೂರ್ಯ ಕಡೇವರೆಗೂ ಎಲ್ಲರ ಮಾತನ್ನೂ ಕೇಳಿದ. ಅವರಲ್ಲೇ ಒಮ್ಮತ ಮೂಡುವಂತೆ ಮಾಡಿದ. ಹಾಗೆ ನೋಡಿದರೆ ಇದೇನು ಅಗಾಧ ಚರ್ಚೆಯ ವಿಷಯವಲ್ಲ. ಅದ್ರೆ ಅವರವರ ಭಾವನೆಗಳನ್ನು ಹೇಳತೊಡಗಲಿ ಅನ್ನೂ ಉದ್ದೇಶವಿತ್ತು. ಹೆಣ್ಣುಮಕ್ಕಳು “ಈ ಹಟ್ಟಿಗೆ ಹತ್ತಿರವಾಗಿರ್‍ಲಿ. ಒಳ್ಳೆ ಜಾಗಾನೂ ಆಗಿರ್‍ಲಿ” ಎಂದು ಅಭಿಪ್ರಾಯಪಟ್ಟಾಗ ಅದಕ್ಕೇ ಮನ್ನಣ ಸಿಕ್ಕಿತು.
ಮಾರನೇ ದಿನವೇ ರಾತ್ರಿಶಾಲೆಯನ್ನು ಕಟ್ಟುವ ಕೆಲಸ ಶುರುವಾಯಿತು. ಬುಡಕಟ್ಟಿನವರೆಲ್ಲ ಒಟ್ಟಾಗಿ ಬಂದರು. ತಂತಮಲ್ಲಿ ಇದ್ದ ಸಾಮಗ್ರಿ ತಂದರು. ಶಬರಿ ಹೆಣ್ಣು ಮಕ್ಕಳನ್ನು ಹುರಿದುಂಬಿಸಿ ಕರೆತಂದಿದ್ದಳು. ಸೂರ್ಯ ಇವರೊಳಗೊಬ್ಬನಾಗಿ ಕೆಲಸಕ್ಕೆ ನಿಂತ.
ಹುಚ್ಚೀರ ಸೂರ್ಯನ ಕೈ ಹಿಡಿದು ಎಳೆದೊಯ್ದು ಕೂಡಿಸಿ ಕಲಸ ಮಾಡದೆ ಕೂತಿರಲು ತಿಳಿಸಿದ. ಸಣ್ಣೀರನೂ ಒತ್ತಾಯಿಸಿದ. ಆದರೆ ಸೂರ್ಯ ಕೇಳಲಿಲ್ಲ. “ನಾನೂ ನಿಮ್ಮವನೇ. ನೀವು ನನ್ನನ್ನ ದೂರ ಮಾಡ್ಬೇಡಿ” ಎಂದ. ಎಲ್ಲರಂತೆ ಗುದ್ದಲಿ, ಸಲಿಕೆ ಹಿಡಿದ; ಅಗೆದ. ಹೆಣ್ಣು ಮಕ್ಕಳಿಗೆ ಮಣ್ಣು ಹೊರಿಸಿದ.
ಸೂರ್ಯನ ಸರಳತೆಗೆ ಶಬರಿಯಾದಿಯಾಗಿ ಎಲ್ಲರ ಕಣ್ಣು ತೇವಗೊಂಡವು.
ಸಂಜೆ ಎಲ್ಲರೂ ಹಟ್ಟಿಗೆ ಮರಳಿದಾಗ ಆಯಾಸಕ್ಕಿಂತ ಆನಂದ ಹೆಚ್ಚಾಗಿತ್ತು.
“ಇವತ್ತು ಒಂದು ಕೆಲ್ಸ ಮಾಡೋಣ”- ಸೂರ್ಯ ಮಾತು ಶುರುಮಾಡಿದ- “ಯಾರ್‍ಯಾರ್ ಮನೇಲ್ ಏನೇನ್ ಅಡುಗೆ ಮಾಡ್ತೀರೊ ಮಾಡಿ. ಅದನ್ನೆಲ್ಲ ತಂದು ಈ ಕಟ್ಟೆ ಹತ್ರ ಎಲ್ರೂ ಕೂತ್ಕೊಂಡು ಹಂಚ್ಕೊಂಡ್ ತಿನ್ನೋಣ.” ಕೆಲವರು ‘ಆಗಲಿ’ ಎಂದರು. ಇನ್ನು ಕೆಲವರು ಮೌನವಾಗಿದ್ದರು. ಸೂರ್ಯ. ಮೌನವಾಗಿದ್ದವರ ಬಳಿ ಬಂದು ಮೆದುವಾಗಿ ಮೆಲುದನಿಯಲ್ಲ ಕೇಳಿದ. “ಯಾಕ್ರವ್ವ ಸುಮ್ಕೆ ಇದ್ದೀರ, ನಿಮ್ಗಿಷ್ಟ ಇಲ್ವಾ?”
“ಒಟ್ಟಿಗೇ ಉಂಬಾಕೆ ಯಾಕಿಷ್ಟ ಇರಲ್ಲ ಸೂರ್ಯಪ್ಪ.” ಅವರಲ್ಲಿ ಒಬ್ಬಾಕೆ ಹೇಳಿದಳು- “ಆದ್ರೆ ಅಡುಗೆ ಮಾಡಾಕೆ ಏನೂ ಇಲ್ಲ. ಇವತ್ತು ಕೂಲೀಗ್ ವೋಗ್ಲಿಲ್ವಲ್ಲ. ಅದ್ಕೆ ಕಾಳುಕಡಿ ಏನೂ ತಂದಿಲ್ಲ.”
ಆಕಿಯ ಕಣ್ಣಲ್ಲಿ ನೀರು ಬಂತು.
ಸೂರ್ಯನ ಮನಸ್ಸು ಕಲಕಿತು. “ಅಂಗೆಲ್ಲ ಸಂಕಟ ಪಡ್ಬೇಡ ಕಣವ್ವ. ಇರೋರು ಇಲ್ದೆ ಇರೋರ್ ಜತೆ ಹಂಚ್ಕೊಂಡ್ ತಿನ್ನಬೇಕು. ನೀವೆಲ್ಲ ಸುಮ್ನೆಬನ್ನಿ. ಎಲ್ರೂ ಒಟ್ಟಿಗೆ ಊಟ ಮಾಡೋಣ” ಎಂದು ಹೇಳುವಾಗ ಆತನ ಗಂಟಲು ಗದ್ಗದಿತವಾಗಿತ್ತು. ಆಮೇಲೆ ಸಾವರಿಸಿಕೊಂಡು ಎಲ್ಲರಿಗೂ ಹೇಳಿದ- “ನೋಡಿ. ಇವತ್ತು ಕೂಲಿನಾಲಿ ಬಿಟ್ಟು ಶಾಲೆ ಕೆಲ್ಸಕ್ ಬಂದಿದ್ರಿಂದ ಕೆಲವರಿಗೆ ಅಡುಗೆ ಮಾಡೋಕ್ ಆಗ್ತಿಲ್ಲ. ಅದುಕ್ಕೆ ಯಾರೂ ಚಿಂತೆ ಮಾಡ್ಬೇಡಿ. ಇರೋದನ್ನೇ ಎಲ್ರೂ ಹಂಚ್ಕೊಂಡ್ ತಿನ್ನೋಣ.”
ಎಲ್ಲವನ್ನೂ ಗಮನಿಸುತ್ತಿದ್ದ ಶಬರಿ “ನಾನು ಯೆಚ್ಗೆ ಅಡುಗೆ ಮಾಡ್ತೀನಿ. ಇವತ್ತು ನಮ್ ಅಟ್ಟೀನಾಗ್ಯಾರೂ ಉಪಾಸ ಇರಂಗಿಲ್ಲ. ಅಡುಗೆ ಮಾಡಾಕೇನೂ ಇಲ್ಲ ಅಂಬ್ತ ಅಳಾದ್ ಬ್ಯಾಡ” ಎಂದು ಹೇಳಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ಹೆಂಗಸರ ಬಳಿ ಹೋಗಿ “ಯೇ ಯಾಕಂಗಳ್ತೀರ, ಬರ್ರಿ ನಮ್ಮನ್ಯಾಗೆ ಒಟ್ಟಿಗೇ ಅಡುಗೆ ಮಾಡಾನ” ಎಂದು ಕೈಹಿಡಿದು ಕರೆದೊಯ್ದಳು.
ಸೂರ್ಯ ಸಾರ್ಥಕ ಭಾವದಲ್ಲಿ ನಿಂತಿದ್ದ.
ಅನೇಕರ ಮನೆಗಳ ಒಲೆಗಳು ಹತ್ತಿದವು.
ಅಡುಗೆಯಾಗುತ್ತಿರುವಂತಯೇ ಭಾವನೆಗಳು ಬೆಸೆದವು.
ಎಲ್ಲರೂ ಒಟ್ಟಿಗೆ ಊಟಕ್ಕೆ ಕೂತರು.
ಹಬ್ಬ, ಮದುವೆ, ಬಿಟ್ಟರೆ ಹೀಗೆ ಒಟ್ಟಿಗೆ ಕೂತು ಊಟ ಮಾಡಿದ್ದಿಲ್ಲ. ಆದರೆ ಇಂದಿನ ವಿಶೇಷವೆಂದರೆ ಹಿಟ್ಟು ರೊಟ್ಟಿಗಳ ಹಬ್ಬ!
ಶಬರಿ ಅದನ್ನೇ ಹೇಳಿದಳು- “ಇಟ್ಟುರೊಟ್ಟಿ ತಿನ್ನಾದೇ ಒಂದು ಅಬ್ಬ ಅಗೈತೆ. ಯಾವಾಗ್ಲೂ ಇಂಗೇ ಇದ್ರೆ ಏಟ್ ಚಂದ!”
ಸೂರ್ಯ ಹೇಳಿದ- “ಯಾವಾಗ್ಲೂ ಹೀಗೇ ಇರೋದ್ನ ನಾವ್ ಕಲೀಬೇಕು. ಒಬ್ಬರ ಕಷ್ಟಕ್ಕೆ ಇನ್ನೊಬ್ರು ಆಗಬೇಕು. ಒಟ್ಟಿಗೆ ಬಾಳ್ವೆ ಮಾಡ್ಬೇಕು. ಆಗ ಕತ್ತಲಲ್ಲೂ ಬೆಳಕು ಬರುತ್ತೆ.”
ಹೂಸಭಾವದಲ್ಲಿ ಕೂತವರನ್ನು ನೋಡ ನೋಡುತ್ತ ಸೂರ್ಯ ಹಾಡೊಂದನ್ನು ಹೇಳತೂಡಗಿದ. ಹೂಸ ಬದುಕಿನ ಹೂಸಬಳಕನ್ನು ಬಯಸುವ ವಸ್ತುವುಳ್ಳ ಹಾಡು. ಹಾಡಿಗೆ ಎಲ್ಲರೂ ಹೆಜ್ಜೆ ಹಾಕತೊಡಗಿದರು. ಕೆಲವು ಸಾಲುಗಳನ್ನು ತಾವೇ ಹೇಳತೊಡಗಿದರು.
ಕತ್ತಲ ಬಂಡೆ ಬಿರಿದು ಬೆಳಕಿನ ಬೀದಿ.
ನಾಲಗೆಯ ಮೇಲೆ ನಿಜದ ನದಿ.
ಸೂರ್ಯನಿಗೆ ಸಂತೋಷವಾಗಿತ್ತು. ಗುಡಿಸಲಿಗೆ ಬಂದು ಮಲಗಿದ ಮೇಲೂ ಈ ಸಂತೋಷ ಕಾಡಿಸುತ್ತಿತ್ತು. ಹೀಗಾಗಿ ನಿದ್ದೆ ಬರಲಿಲ್ಲ.
ಎಲ್ಲ ಕಡೆ ಮೌನ- ಸುಳಿಗಾಳಿಯನ್ನು ಹೂರತುಪಡಿಸಿ.
ಆಗ ಸೂರ್ಯ ‘ಅಯ್ಯಪ್ಪ’ ಎಂದು ನರಳಿದ. ಅಂಗೈ ಪಕ್ಕದ ಗೋಡಗೆ ತಗುಲಿ ನೋವಾಗಿತ್ತು. ಗುದ್ದಲಿ, ಸಲಿಕೆ ಹಿಡಿದ ಕಾರಣದಿಂದ ಎದ್ದ ಬೊಬ್ಬಗಳು ಒಡದು ಗಾಯವಾಗಿದ್ದವು.
ಸೂರ್ಯನಂತೆಯೇ ನಿದ್ದೆ ಮಾಡದೆ ಮಲುಕು ಹಾಕುತ್ತಿದ್ದ ಶಬರಿಗೆ ಸೂರ್ಯ ಸಂಕಟಪಟ್ಟದ್ದು ಕೇಳಿಸಿತು. ಮತ್ತೆ ಆತನ ಸಣ್ಣ ನರಳುವಿಕೆಯನ್ನು ಕೇಳಿಸಿಕೊಂಡು ಎದ್ದು ಬಂದಳು, ನೋಡಿದಳು. ಸೂರ್ಯ ಅಂಗೈ ಚಾಚಿ ಕಣ್ಣು ಮುಚ್ಚಿಕೊಂಡು ಮಲಗಿದ್ದ.
ಮುಖದಲ್ಲ ನೋವಿನ ಛಾಯೆಯಿತ್ತು.
ಶಬರಿ, ಸೂರ್ಯನ ಸಮೀಪ ಬಂದು ಕೂತು ಅಂಗೈಯನ್ನು ನೋಡಿದಳು. ಬೊಬ್ಬೆ ಒಡೆದ ಸ್ಥಿತಿಯಿಂದ ಸಂಕಟಿತಳಾದಳು. ಮೆಲ್ಲಗೆ ಆತನ ಅಂಗೈಯನ್ನು ಸವರಿದಳು.
ಸೂರ್ಯ ಥಟ್ಟನೆ ಕಣ್ಣುಬಿಟ್ಟ. ಎದುರಿಗೆ ಶಬರಿ! ಅಚ್ಚರಿ!
“ಶಬರಿ” ಎನ್ನುತ್ತ ಎದ್ದು ಕೂತ.
“ಇದೇನ್ ಸೂರ್ಯ? ಈಟೆಲ್ಲ ಆಗಿದ್ರು ನಂಗೇಳೇ ಇಲ್ಲ”- ತೀರಾ ಸಹಜವಾಗಿ ಸಂಕಟದಿಂದ ಕೇಳಿದಳು.
“ನಂಗ್ ಇಲ್ಲೀವರ್‍ಗೂ ಇದ್ರ ನೋವೇ ಗೊತ್ತಾಗ್ಲಿಲ್ಲ ಶಬರಿ. ಈಗಷ್ಟೇ ನೋವು ಕಾಣುಸ್ತಾ ಇದೆ?”
“ಇಂಗಾದ್ರೆಂಗಪ್ಪ ನೀನು”- ತನಗರಿವಿಲ್ಲದಂತೆ ನೀನು ತಾನೆಂದು ಕರೆದು ಹಾಗೇ ಅವಡುಗಚ್ಚಿಕೊಂಡಳು. ಆನಂತರ “ತಡಿ, ಮುಲಾಮ್ ತಂದು ಅಚ್ತೀನಿ” ಎಂದು ಎದ್ದು ಹೋದಳು.
ಸೂರ್ಯ ಆಕೆ ಹೋದ ಕಡೆ ನೋಡುತ್ತಿರುವಂತಯೇ ಶಬರಿ ತಿರುಗಿ ಬಂದಳು. ಸಣ್ಣ ಕುಡಿಕೆಯೊಂದರಲ್ಲಿದ್ದ ಮುಲಾಮನ್ನು ಬೆರಳಿಂದ ತೆಗೆದು “ಇದನ್ನ ಅಪ್ಪಯ್ಯ ತಂದಿಟ್ಟೈತೆ. ಗಾಯಗೀಯ ಆದಾಗ ನಾವಿದನ್ನೇ ಅಚ್ಕಮಾದು. ಎಲ್ಲಿ ಇಂಗ್ ಕೊಡು ಕೈನ” ಎಂದು ಸೂರ್ಯನ ಕೈ ಹಿಡಿದು ಅಂಗೈಗೆ ಮುಲಾಮು ಹಚ್ಚಿದಳು. ಆಕೆ ಹಚ್ಚುವಾಗ ಅಂಗೈಯನ್ನೇ ನೋಡುತ್ತಿದ್ದರೆ, ಸೂರ್ಯ ಅವಳ ಮುಖವನ್ನೇ ನೋಡುತ್ತಿದ್ದ. ಮುಲಾಮು ಹಚ್ಚಿದ್ದಾದ ಮೇಲೆ ಶಬರಿ “ಇನ್ ಮಲೀಕ. ವೊತ್ತಾರೆ ಏಳದ್ರಾಗೆ ಎಲ್ಲಾ ಸರ್‍ಯಾಗ್ತೈತೆ. ತಿರ್‍ಗಾ ನಾಳೀಕು ಗುದ್ಲಿ ಸಲಿಕೆ ಅಂಬ್ತ ಇಡ್ಕಬ್ಯಾಡ” ಎಂದು ಸೂಚನೆ ನೀಡಿದಳು.
ಸೂರ್ಯನಿಗೆ ಮಾತು ಹೊರಬರಲಿಲ್ಲ. ಸುಮ್ಮನೆ ನೋಡುತ್ತಿದ್ದ.
ಆಗ ಶಬರಿಗೆ ಸಂಕೋಚ ಶುರುವಾಯಿತು.
“ಯಾಕೆ, ನಾನಿಂಗೆಲ್ಲ ಮಾತಾಡ್ಬಾರ್‍ದ್?- ಕೇಳಿದಳು.
“ಛೆ! ಛೆ! ಅಂಗೇನಿಲ್ಲ” ಸೂರ್ಯ ಹೇಳಿದ- “ನಿಂಗೆ ಹೇಗ್ ಸರಿ ಬರುತ್ತೊ ಹಾಗೇ ಮಾತಾಡು. ನನಗೆ ಅದ್ರಲ್ಲೇ ಸಂತೋಷ.”
“ಅಂಗಾರ್ ಗಾಯ ಎಲ್ಲ ಮಾಯ ಆಗೈತೆ ಮಲೀಕ” ಎಂದು ಹೇಳಿದ ಶಬರಿ ಅಲ್ಲಿಂದ ಹೋದಳು.
ಸೂರ್ಯ ಮಲಗಲು ಪ್ರಯತ್ನಿಸಿದ. ಯಾಕೊ ನಿದ್ದೆ ಹತ್ತಲಿಲ್ಲ. ಸ್ವಲ್ಪ ಹೊತ್ತಿನ ನಂತರ ಶಬರಿ ಮತ್ತ ಬಂದಳು. ಸೂರ್ಯ ಎದ್ದು ಕೂತ-
“ಮಲೀಕ ಅಂದ್ರೆ ಎದ್ದೇ ಇದ್ದೀಯಲ್ಲ. ಇದೇನ್ ಅಗಲೊತ್ತ? ರಾತ್ರಿ… ರಾತ್ರಿ ಆಗೈತೆ” ಎಂದು ಬೇಸರದಿಂದ ಹೇಳಿದಳು.
“ಸೂರ್ಯಂಗೆ ಎಲ್ಲಾ ಹಗಲೇ ಅಲ್ವಾ?”- ಸೂರ್ಯ ನಗುತ್ತ ನುಡಿದ.
“ಸೂರ್ಯನೇ ಚಂದ್ರ ಆದ್ರೆ ಎಲ್ಲ ಮುಗೀತಪ್ಪ”- ಶಬರಿ ಸಹಜವಾಗಿ, ಸರಾಗವಾಗಿ, ಹೇಳಿದ ಈ ಮಾತಿಗೆ ಸೂರ್ಯ ಅಚ್ಚರಿಯಿಂದ ನೋಡಿದ.
ಸೂರ್ಯನೇ ಚಂದನಾಗುವುದು? ಅಂದರೆ?…
“ಯಾಕಂಗ್ ನೋಡ್ತೀಯ? ಸೂರ್ಯನೇ ಚಂದ್ರ ಆಗಾಕಾಗಲ್ವ? ನಂಗೇನೊ ಅನ್ನುಸ್ತೈತೆ. ಸೂರ್ಯ ಮುಳುಗ್ದಂಗ್ ಮಾಡಿ ಚಂದ್ರ ಆಗ್ಬತ್ತಾನೆ. ಆಮ್ಯಾಕ್ ಆ ಚಂದ್ರ ವೋದಂಗ್ ಮಾಡಿ ಸೂರ್ಯ ಆಗ ಬತ್ತಾನೆ. ಅಗಲೂ ಅವ್ನೆ, ಕತ್ತಲೂ ಅವ್ನೇ. ಎಲ್ಲಾ ಆಟ! ನಿಜ ಅಂಬ್ತೀಯೊ ಇಲ್ವೊ ಯೇಳು” ಎಂದು ಶಬರಿ ತನ್ನದೇ ರೀತಿಯಲ್ಲಿ ಬಾಳಿನ ತಿಳುವಳಿಕೇನ ತೆರಿದಿಟ್ಟಾಗ ಸೂರ್ಯ ಮತ್ತಷ್ಟು ಮೌನವಾದ.
“ಅಂಗೈನಾಗ್ ಬೊಬ್ಬೆ ವೊಡುದ್ರೆ ಇಂಗೇ ಆಗಾದು. ನೋವ್ ತಿಂದೂ ತಿಂದೂ ಮಾತೇ ನಿಂತೋಗ್ತೈತೆ. ಅದ್ಕೆ ನಾನ್ ಯೇಳಾದು, ಸುಮ್ಕೆ ಮಲೀಕ” ಎಂದು ಆತನ ತೋಳು ಹಿಡಿದು, ಶಬರಿ, ಒತ್ತಾಯಪೂರ್ವಕವಾಗಿ ಮಲಗಿಸಿದಳು.
ಅನಂತರ ತಲೆಯ ಬಳಿಯಿದ್ದ ಬಗಲು ಚೀಲವನ್ನು ತೆಗೆದುಕೊಳ್ಳಲು ಕೈ ಹಾಕಿದಳು- “ಇದನ್ನ ನಾನೇ ಜ್ವಾಪಾನ ಮಾಡಿರ್‍ತೀನಿ. ಅದ್ರಾಗಿರಾ ಬಟ್ಟೆ ಬರೆ ತಗ್ದು ವೋಗುದ್ ಕೊಡ್ತೀನಿ.”
ಸೂರ್ಯ ತಕ್ಷಣ ಆಕೆಯ ಕೈ ಹಿಡಿದು “ಬೇಡ. ಬೇಡ ಅದನ್ ಮುಟ್ ಬೇಡ” ಎಂದ.
“ಅದ್ಯಾಕಂಗ್ ಮುಟ್ಬ್ಯಾಡ ಅಂಬ್ತೀಯ? ಅದೇನ್ ಮುಟ್ಟಾಗೈತಾ?”- ಶಬರಿ ಜಗ್ಗಿಸಿದಳು.
ಅರೆ! ಇದೆಂಥ ಮಾತು? ಸೂರ್ಯ ತಬ್ಬಿಬ್ಬಾದ.
“ಹಾಗಲ್ಲ ಶಬರಿ. ಬಟ್ಟೆ ಬರೆ ನಾನೇ ಒಗ್ದು ನಾನೇ ಒಣಗುಸ್ತೀನಿ. ಇಷ್ಟಕ್ಕೂ ಅದ್ರಲ್ಲಿರೋದು ಒಂದೇ ಜೊತೆ. ನಾನು ನಾಳೆ ನಾಡಿದ್ದು ಊರಿಗೆ ಹೋಗಿ ನನ್ ಗಳೆಯನ್ನೂ ಕರ್‍ಕೊಂಡು ಎಲ್ಲಾ ಬಟ್ಟೆ ಬರೆ ತಗೊಂಡ್ ಬರ್‍ತೀನಿ. ಈಗ ಇವನ್ ಒಗೆಯೋದೂ ಬೇಡ. ಜೋಪಾನ ಮಾಡೋದೂ ಬೇಡ. ಈ ಚೀಲ ನನ್ ಹತ್ರಾನೇ ಇರ್‍ಬೇಕು” ಎಂದು ಸೂರ್ಯ ಹೇಳಿದಾಗ ಶಬರಿ “ನಿನ್ ಚೀಲ ನೀನೇ ಇಟ್ಕಳಪ್ಪ, ಇವಾಗ ಎಂಗಾನ ಮಾಡಿ ಮಲೀಕ ಆಟೇಯ” ಎಂದು ಹೇಳಿ ಹೂರಟುಹೋದಳು.
ಆದರೆ ಬಗಲು ಚೀಲ ಮುಟ್ಟಲು ಹೋದಾಗ ಸೂರ್ಯ ವರ್ತಿಸಿದ ರೀತಿ, ಅವನ ಮುಖಭಾವ ಶಬರಿಗೆ ಅರ್ಥವಾಗಲಿಲ್ಲ. ಯಾಕೆ ಹಾಗೆ ಹೇಳಿದ? ತಾನು ಸಲೀಸಾಗಿ ಮನೆ ಮನುಷ್ಯನ ರೀತಿ ಮಾತಾಡಿಸಿದರೂ ಹೀಗೆಲ್ಲ ಹೇಳಬಹುದೆ? ಕಲಿತ ಮನುಷ್ಯ; ಏನ್ ಗುಟ್ಟೊ ಏನ್ ಕತೆಯೊ!- ಯೋಚಿಸುತ್ತ ಶಬರಿ ನಿದ್ದೆ ಹೋದಳು.
ಎರಡು ದಿನಗಳ ನಂತರ ಸೂರ್ಯ ಊರಿಗೆ ಹೋಗಿ ಬರುತ್ತೇನೆಂದು ಹೊರಟು ನಿಂತ. ಜೊತೆಗೆ ಗೆಳಯನೊಬ್ಬನನ್ನು ಕರೆತರುವ ವಿಷಯವನ್ನೂ ಹೇಳಿದ. ಆತ ಹುಚ್ಚೀರನ ಗುಡಿಸಲಲ್ಲಿ ಇರಬಹುದೆಂದು ಸಲಹೆ ಬಂತು. ಆಗ ಸೂರ್ಯ ತನ್ನ ಗೆಳೆಯನ ಜೊತೆ ರಾತ್ರಿ ಶಾಲೇಲೇ ವಾಸ ಮಾಡಿದರೆ ಹೇಗೆಂದು ಕೇಳಿದ. ಯಾರೂ ಒಪ್ಪಲಿಲ್ಲ. ಇಲ್ಲೇ ತಮ್ಮ ಜೊತೇಲೆ ಇರಬೇಕು ಎಂದರು. ಸೂರ್ಯ ಹೊರಟು ನಿಂತಾಗ “ಯಾಕೆ ಏನಾರ ಬ್ಯಾಸ್ರ ಮಾಡಿದ್ನ? ನಮ್ಮನೆ ಬಿಡಾ ವಿಸ್ಯ ಮಾತಾಡ್ತೀಯಲ್ಲ?ಎಂದು ಕೇಳಿಯೇಬಿಟ್ಟಳು. “ಹಾಗೇನಿಲ್ಲ ಶಬರಿ; ಹೇಗಿದ್ರೂ ರಾತ್ರಿ ಶಾಲೆ ಇದ್ಯಲ್ಲ. ಅದಕ್ಕೇ ಹಾಗಂದೆ. ನೋಡೋಣ ಮುಂದೆ” ಎಂದು ಸಮಾಧಾನಿಸಿ ಹೊರಟ.
ಬಸನ್ನು ಹಿಡಿಯಲು ಮೂರು ಕಿಲೋಮೀಟರ್ ದೂರ ಹೋಗಬೇಕಿತ್ತು. ಬಂಡಿಜಾಡಿನ ಹಾದಿ ಜೊತಗೆ ಹುಚ್ಚೀರ ಮತ್ತು ಸಣ್ಣೀರ. ಅವರ ಜೊತೆ ಮಾತನಾಡ್ತ ಬಸ್ಸಿನ ರಸ್ತೆಗೆ ಬಂದ ಸೂರ್ಯ.
“ನೀವಿನ್ ಹೋಗ್ರಪ್ಪ”- ಇಬ್ಬರಿಗೂ ಸೂರ್ಯ ಹೇಳಿದ.
“ಇಲ್ಲ. ಬಸ್ ಬರಾಗಂಟ ನಾವಿಲ್ಲೇ ಇರ್‍ತೀವಿ” ಎಂದ ಸಣ್ಣೀರ.
ಸೂರ್ಯ ಸುಮ್ಮನಾಗಲಿಲ್ಲ. ಒತ್ತಾಯಿಸಿದ. ಅವರು ‘ಸರಿ’ ಅಂತ ಒಪ್ಪಿಕೊಂಡು ಹಟ್ಟಿ ಕಡಗೆ ಹೊರಟರು. ಸ್ವಲ್ಪ ದೂರ ಹೋಗಿ ತಿರುಗಿ ನೋಡಿದರು.
ಒಂದು ಮೋಟಾರು ಬೈಕು ಬಂದು ಸೂರ್ಯನ ಹತ್ತಿರ ನಿಂತಿತು.
ಸೂರ್ಯ ಮರುಮಾತಾಡದೆ ಹಿಂದೆ ಕೂತುಕೊಂಡ.
ಮೋಟಾರ್‌ಬೈಕನ್ನು ಒಬ್ಬ ಗಡ್ಡಧಾರಿ ಯುವಕ ಓಡಿಸುತ್ತಿದ್ದ.
ಬೈಕ್ ವೇಗವಾಗಿ ಹೋಯಿತು.
ನೋಡು ನೋಡುತ್ತಿದ್ದಂತೆ ರಸ್ತೆಯನ್ನು ಬಿಟ್ಟು ಬೇರೆ ಹಾದಿ ಹಿಡಿಯಿತು.
ಅದು ಕಲ್ಲು ಮಣ್ಣುಗಳ ಹಾದಿ; ಮುಳ್ಳು ಬೇಲಿಗಳ ಹಾದಿ.
ಸಣ್ಣೀರ ಮತ್ತು ಹುಚ್ಚೀರ ಇಬ್ಬರೂ ಆಶ್ಚರ್ಯದಿಂದ ನೋಡಿದರು. ಕುತೂಹಲ ಕೆರಳಿತ್ತು.
ಸೂರ್ಯ ವಾಪಸ್ ಬಂದಾಗ ಜೊತೆಗೆ ಇನ್ನೊಬ್ಬ ಯುವಕನಿದ್ದ. ಸಣ್ಣೀರ ಮತ್ತು ಹುಚ್ಚೀರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಈತ ಆ ಮೋಟಾರ್‌ಬೈಕಿನ ಆಸಾಮಿಯಲ್ಲ. ಆತನಿಗೆ ಗಡ್ಡವಿತ್ತು. ಈತನಿಗೆ ಇಲ್ಲ. “ಈತ ನನ್ನ ಗೆಳಯ; ನವಾಬ್ ಅಂತ” ಎಂದು ಸೂರ್ಯ ಪರಿಚಯಿಸಿದ. ಅರೆ! ಮುಸಲ್ಮಾನ! ಆದರೆ ಗಡ್ಡ ಇಲ್ಲ!- ಎಂದುಕೂಂಡ ಸಣ್ಣೀರ.
ಹಾಗಾದರೆ ಅವತ್ತು ಮೋಟಾರ್‌ಬೈಕಿನಲ್ಲಿ ಕರೆದೊಯ್ದವರು ಯಾರು? ಸಣ್ಣೀರನ ಕುತೂಹಲ ತಣಿಯಲಿಲ್ಲ; ಆತ ತಡೆಯಲೂ ಇಲ್ಲ.
“ನವಾಬಣ್ಣ, ನಿಂಗ್ ಮದ್ಲು ಗಡ್ಡ ಇತ್ತ?” ಎಂದು ಕೇಳಿಯೇ ಬಿಟ್ಟ.
“ಇಲ್ಲ. ಯಾಕೆ?”-ನವಾಬ್ ಕೇಳಿದ.
“ಯಾಕೂ ಇಲ್ಲ. ನವಾಬ್ರು ಗಡ್ಡ ಬಿಡ್ತಾರೆ ಅಂಬ್ತ ಯಾರೊ ಯೇಳಿದ್ ಕೇಳಿದ್ದೆ. ಅದುಕ್ಕೆ ಸುಮ್ಮೆ ಅಂಗಂದೆ.”
ಸೂರ್ಯನಿಗೆ ಸಣ್ಣೀರ ‘ಜಾಣ’ ಎನ್ನಿಸಿತು. ತಾನು ಉತ್ತರ ಕೊಡಬೇಕೆನ್ನುವಷ್ಟರಲ್ಲೇ ನವಾಬ್ ನಗುತ್ತಾ ಹೇಳಿದ- “ಅವ್ರು ಅರಮನೇಲಿರೊ ನವಾಬ್ರು. ನಾನು ನಿಮ್ಮನೇಲಿರೊ ನವಾಬ. ಹೆಸ್ರಷ್ಟೇ ನವಾಬ. ನಿಜವಾಗಿ ನಾನ್ ಗರೀಬ.” ಶಬರಿಯಾದಿಯಾಗಿ ಅನೇಕರ ಮುಖ ಅರಳಿತು.
“ಎಷ್ಟು ಚನ್ನಾಗ್ ಯೇಳ್ದ ಅಯಪ್ಪ ಅಲ್ವೇನೆ ಗೌರಿ?” ಎಂದಳು.
“ಈ ಸಣ್ಣೀರ ಯಾಕ್ ಇಂಗ್ ಕೇಳ್ತಾನೆ” ಎಂದು ಗೊಣಗಿದಳು ಗೌರಿ.
ಅಷ್ಟರಲ್ಲಿ ಸಣ್ಣೀರ “ಏನೊ ಸುಮ್ಕೆ ಇಂಗ್ ಕೇಳ್ದೆ, ತಪ್ ತಿಳ್ಕಾಬ್ಯಾಡ್ರಿ ನವಾಬ್ರ” ಎಂದ. ನವಾಬ “ಹಂಗೇನಿಲ್ಲ ಬಿಡಪ್ಪ” ಎಂದರೂ ಸೂರ್ಯ ಸುಮ್ಮನಿರಲಿಲ್ಲ. ಗಡ್ಡದ ವಿಷಯವನ್ನೇ ಯಾಕೆ ಕೇಳಿರಬಹುದು ಅನ್ನೊ ಕುತೂಹಲದಿಂದ ಸಣ್ಣೀರನನ್ನು ಪ್ರಶ್ನೆ ಮಾಡಿದ. ಆಗ ಸಣ್ಣೀರ, ಸೂರ್ಯನನ್ನು ಗಡ್ಡಧಾರಿಯೊಬ್ಬ ಮೋಟರು ಬೈಕಿನಲ್ಲಿ ಕರೆದೊಯ್ದ ವಿಷಯ ತಿಳಿಸಿದ.
“ಓ ಅದಾ ಸಣ್ಣೀರ, ಅಲ್ ನಿಂತಿದ್ದ ನೋಡು; ಒಬ್ಬ ಮೋಟರ್ ಬೈಕ್ನಲ್ಲಿ ಬಂದ. ನೋಡಿದ್ರೆ ಆತ ಪರಿಚಯ್ದೋನು. ಬಿಡ್ತೀನ್ ಬಾ ಅಂತ ಕರ್‍ಕೊಂಡ್ ಹೋದ” ಎಂದು ಸೂರ್ಯ ವಿವರಿಸಿದಾಗ ಸಣ್ಣೀರ “ರಸ್ತೆ ಬಿಟ್ಟು ಬ್ಯಾರೆ ದಾರಿ ಇಡುದ್ರಲ್ಲ, ನಂಗೊಂದ್ ಕಿತ ಯೋಚ್ನೆ ಅತ್ಕಂಡ್ತು. ಅವ್ನ್ ಯಾವ್ದಾನ ಬ್ಯಾರೆ ಹಾದಿ ಬೀಳ್ಸಿದ್ನೊ ಏನೋ ಅಂಬ್ತ” ಎಂದು ಮತ್ತೆ ಮುಗ್ಧನಂತೆ ವಿವರಿಸಿದ. ಸೂರ್ಯ “ಅದೇನೂ ಹತ್ತಿರದ ದಾರಿ ಅಂತ ಕರ್‍ಕೊಂಡ್ ಹೋದ. ಅದೆನ್ ದೂಡ್ಡ ವಿಷಯಾನ? ಈಗ ಶಾಲೆ ಆರಂಭ ಮಾಡೋದ್ರ ಬಗ್ಗೆ ಮಾತಾಡೋಣ” ಎಂದು ಮಾತು ಬದಲಾಯಿಸಿದ.
“ನಮ್ದೇನೈತಪ್ಪ, ಎಲ್ಲಾ ನೀನ್ ಯೇಳ್ದಂಗೆ” ಎಂದು ಸಣ್ಣಿರ ಸಟ್ಟನೆ ಹೇಳಿದ.
ಶಬರಿಯೂ ಅದನ್ನೆ ಹೇಳಿದಳು. ಆದರೆ ತಿಮ್ಮರಾಯಿ “ಆ ಪೂಜಾರಪ್ಪನ್ ಮರೀಬ್ಯಾಡ್ರಿ ಮಕ್ಕಳ. ಒಂದ್ ವೋಗಿ ಇನ್ನೊಂದಾದಾತು” ಎಂದು ಎಚ್ಚರದ ಮಾತು ನುಡಿದ.
ಸೂರ್ಯ ಈ ಮಾತು ಒಪ್ಪಿಕೊಂಡೇ ಒಂದು ಸಲಹೆ ಮುಂದಿಟ್ಟ-
“ತಿಮ್ಮರಾಯಿ ಹೇಳೋದು ಸರಿ -ಆ ಪೂಜಾರಪ್ಪಂಗೆ ಎಲ್ಲಾ ಹೇಳೋಣ. ಆದ್ರೆ ನನ್ನದು ಒಂದ್ ಸಲಹ ಇದೆ. ನರಸಿಂಹರಾಯಪ್ಪನೋರ ಹಂಡ್ತಿ ಇದಾರಲ್ಲ, ಅವ್ರಿಗೆ ನೀವೆಲ್ಲ ಓದು ಬರಹ ಕಲೀಬೇಕು ಅಂತ ಆಸೆ ಇದ್ದಂತಿದೆ. ಅವ್ರನ್ನ ಮೊದಲ್ನೇ ದಿನ ಕರ್‍ಯೋಣ. ಅವ್ರೇ ಆರಂಭ ಮಾಡ್ಲಿ.”
“ನಂಗೇನೊ ಇದು ಸರಿ ಅನ್ನುಸ್ತೈತೆ”- ಶಬರಿ ತಕ್ಷಣ ಹೇಳಿದಳು.
“ಎಲ್ರೂ ಒಪ್ಪೋದಾದ್ರೆ ಹಟ್ಟಿ ಹೆಂಗುಸ್ರೆಲ್ಲ ಹೋಗಿ ಅವನ್ನ ಕರೀಬೇಕು.”- ಸೂರ್ಯ ಮತ್ತೊಂದು ಸಲಹೆ ನೀಡಿದ.
“ಯಾಕೆ ನಾವ್ ಗಂಡಸ್ರು ವೋಗಾದ್ ಬ್ಯಾಡ್ವ?”- ಸಣ್ಣೀರ ಸಣ್ಣಗೆ ದನಿ ಮಾಡಿದ. ಸೂರ್ಯ ಕೂಡಲೇ ಸ್ಪಷ್ಟಪಡಿಸಿದ- “ನೀವೂ ಹೋಗಿ, ಆದ್ರೆ ಹಣ್ ಮಕ್ಕಳು ಮುಂದಾಳತ್ವ ತಗೊಳ್ಳಲಿ. ತಪ್ಪೇನು?”
“ಇದ್ರಾಗ್ ತಪ್ಪು ಗೆಪ್ಪು ಏನ್ಬಂತು? ಅಂಗ್ ಬಂದ್ ಮಾತ್ನ ಇಂಗ್ ಒಗದೆ. ಆಟೇ?”- ಸಣೀರ ಮುಚ್ಚುಮರೆಯಿಲ್ಲದೆ ಮಾತನಾಡಿದ.
ಶಬರಿಗೆ ಸುಮ್ಮನಿರಲಾಗಲಿಲ್ಲ. “ಯಾಕೊ ಒಸಿ ಜಾಸ್ತಿ ಮಾತಾಡ್ತೀಯಪ ನೀನು” ಎಂದು ಸಣ್ಣೀರನನ್ನು ಛೇಡಿಸಿದಳು. ಸೂರ್ಯ ಇದು ಮುಂದುವರೆಯಲು ಅವಕಾಶ ಕೊಡದೆ “ಸಣೇರಂಗೆ ಕುತೂಹಲ ಸ್ವಲ್ಪ ಜಾಸಿ ಇದೆ. ಜೊತೆಗೆ ಮಾತಡೊ ಅವಕಾಶ ಸಿಕ್ಕಿದಾಗ ಅನ್ಸಿದ್ದನ್ನ ಹೇಳ್ಬೇಕು ಅನ್ನೋ ಧೈರ್‍ಯ ಬರುತ್ತೆ. ಮುಚ್ಚಿಟ್ಕೊಳ್ದೆ ಮಾತಾಡೋದು ಯಾವಾಗ್ಲೂ ಒಳ್ಳೇದು ಶಬರಿ” ಎಂದು ಸಣ್ಣೀರನನ್ನು ಸಮರ್‍ಥಿಸಿದ. ಸಣ್ಣೀರ ಸಂತೋಷಗೊಂಡು ಸುಮ್ಮನಾದ.
ಕಡಗೆ ಶಬರಿ ನೇತೃತ್ವದಲ್ಲಿ ಹೆಂಗಸರು ಸಾವಿತ್ರಮ್ಮನವರನ್ನ ಕೇಳೋದೆಂದು ತೀರ್ಮಾನವಾಯ್ತು.
ಮಾರನೇ ದಿನ ಒಡೆಯರ ಜಮೀನಿಗೆ ಕೂಲಿಗೆ ಹೋದ ಹೆಂಗಸರು, ಅಲ್ಲಿಗೆ ಸಾವಿತ್ರಮ್ಮ ಬರೋದನ್ನೆ ಕಾಯ್ತಾ ಇದ್ದರು. ಸಾವಿತ್ರಮ್ಮ ಹೊಲದ ಕಡೆ ಬಂದರು. “ಎಲ್ಲಾ ಕೆಲ್ಸ ಚಂದಾಗ್ ನಡೀತ ಐತಾ?” ಎಂದು ಶಬರಿಯನ್ನು ಕೇಳಿದರು.
“ನೋಡ್ರವ್ವ, ಮಾಡ್ತಾ ಇದ್ದೀವಿ. ಈವಾಗಿನ್ನ ಕಳೆ ತಗ್ಯಾಕ್ ಸುರು ಮಾಡಿದ್ದೀವಿ”- ಶಬರಿ ಉತ್ತರಿಸಿದಳು.
“ಕಳೆ ಚಂದಾಗ್ ತೆಗೀಬೇಕು. ಇಲ್ದಿದ್ರೆ ಪೈರ್ ಚಂದಾಗ್ ಬೆಳ್ಳಾಕಿಲ್ಲ”
“ಹೂಂಕಣ್ರವ್ವ ಕಳೆ ತಗದ್ ಮ್ಯಾಲೇನೆ ಬೆಳೇಗ್ ಒಂದ್ ಕಳೆ ಬರಾದು.”
-ಶಬರಿಯ ಈ ಮಾತು ಸಾವಿತ್ರಮನಿಗೆ ಇಷ್ಟವಾಯಿತು.
“ಬೋಲ್ ಚಂದಾಗ್ ಮಾತಾಡ್ತೀಯ ಕಣೇ” ಎಂದರು.
“ಇನ್ನೂ ಒಂದ್ ಮಾತಾಡಾದೈತ ಕಣ್ರವ್ವ ನಿಮ್ತಾವ. ಈಗ್ಲೇ ಬರ್‍ಲಾ?” ಎಂದು ಶಬರಿ ಕೇಳಿದಳು.
“ಬದುವಿನ್ ಮ್ಯಾಕ್ ಬಾ ಅದೇನ್ ಯೇಳು” ಎಂದು ಸಾವಿತ್ರಮ್ಮ ಹೇಳಿದ್ದೇ ತಡ ಶಬರಿ ಸಮೇತ ಎಲ್ಲರೂ ಬಂದರು.
ಶಬರಿ ರಾತ್ರಿ ಶಾಲೆಯ ವಿಷಯ ತಿಳಿಸಿ “ನೀವೇ ಬಂದು ಒಂದಕ್ಸರಾನ ಬೋಲ್ಡ್ ಮ್ಯಾಲ್ ಬರ್‍ದು ಸುರು ಮಾಡ್ಬೇಕಂತೆ ಕಣ್ರವ್ವ. ನೀವ್ ಬಂದ್ರೆ ನಮ್ಗೆಲ್ಲ ಒಳ್ಳೇದಾಗ್ತೈತೆ ಕಣ್ರವ್ವ ಇಲ್ಲ ಅನ್‍ಬ್ಯಾಡ್ರಿ” ಎಂದು ಬೇಡುವ ದನಿಯಲ್ಲಿ ಕೇಳಿದಳು.
ಸಾವಿತ್ರಮ್ಮ ಫಕ್ಕನೆ ನಕ್ಕರು. “ನಂಗೇ ಒಂದಕ್ಸರ ಓದುಬರ ಬರಾಕಿಲ್ಲ ನನೇನ್ ಬರ್‍ಯಾನ ಬಂದು” ಎಂದರು.
“ಅಂಗಾರೆ ಸೂರ್ಯಪ್ಪಂತಾವ ಒಂದಕ್ಸರ ಬರಿಸ್ಕಂಡ್ ಬತ್ತೀನಿ; ಅದನ್ ನೋಡ್ಕೊಂಡು ಅಲ್ ಬಂದ್ ಬರುದ್ ಬಿಡ್ರವ್ವ”- ಶಬರಿ ಪರಿಹಾರವನ್ನು ಸೂಚಿಸಿದಳು. ಇವರ ಒತ್ತಾಯಕ್ಕೆ ಸಾವಿತ್ರಮ್ಮ ಆಗಲಿ ಎಂದು ಒಪ್ಪಿದ್ದಾಯಿತು.
ಆದರೆ ನರಸಿಂಹರಾಯಪ್ಪನಿಗೆ ಇದನ್ನು ತಕ್ಷಣ ಅರಗಿಸಿಕೊಳ್ಳಲು ಆಗಲಿಲ್ಲ. ಸೂರ್ಯನ ಉದ್ದೇಶವೂ ಇದೇ ಆಗಿತ್ತು. ವ್ಯವಸ್ಥೆಯ ಒಳಗೇ ಒಂದು ಕಿಡಿ ಹುಟ್ಟು ಹಾಕಬೇಕು. ಅದು ಬರುಬರ್‍ತಾ ವ್ಯವಸ್ಥೇನ ಸುಡುತ್ತೆ. ಹೊರಗಿಂದ ನಡ್ಸೊ ಕ್ರಿಯೆ ಕೆಂಡವಾಗಿ ಕಾಡುಸ್ಬೇಕು. ಒಳಗೆ-ಹೂರಗೆ ಎರಡೂ ಕಡೆ ಸಂಘರ್ಷದ ಸ್ಫೋಟ ಆಗಬೇಕು; ಬೇರೆ ಬೇರೆ ಸ್ತರ; ಬೇರೆ ಬೇರೆ ವಿಧಾನ. ತನ್ನೊಳಗಿನ ದೌರ್ಬಲ್ಯಗಳಿಂದ ಕುಸಿಯೋ ವ್ಯವಸ್ಥೆಗೆ ಕ್ರಿಯೆ ಚಾಲಕ ಶಕ್ತಿ – ಹೀಗೆಲ್ಲ ನವಾಬನ ಜೊತ ತನ್ನ ವಿಚಾರ ಹಂಚಿಕೂಂಡಿದ್ದ- ಸೂರ್ಯ. ನವಾಬನಿಗೇನು ಇದು ಹೊಸ ವಿಚಾರವಲ್ಲ. ಆಲೋಚನೆಗಳನ್ನು ಹಂಚಿಕೊಳ್ಳೋ ಮೂಲಕ ಮತ್ತಷ್ಟು ನಿಖರವಾಗೊ ಪ್ರಕ್ರಿಯೆಯಲ್ಲಿ ಇವರಿಗೆ ನಂಬಿಕೆ.
ಇವರು ಯೋಚಿಸಿದಂತೆ ನರಸಿಂಹರಾಯಪ್ಪ ಮತ್ತು ಸಾವಿತ್ರಮ್ಮನ ನಡುವ್ರ್ ಸಣ್ಣ ಜಗಳಾನೇ ಆಯ್ತು.
“ಆ ಬಡ್ಡೆತ್ಗಳು ನನ್ನನ್ನ ಕೇಳ್ದೆ ನಿನ್ ಕೇಳವ್ರಲ್ಲ. ಈಗ್ಲೇ ಈಟಂದ್ ನಿಗರು ಬಂದ್ರೆ ಮುಂದ್ ಎಂಗೆ ಅಂಬ್ತ?” ಒಡೆಯರು ಜೋರು ಮಾಡಿದರು.
“ಹಣ್ಣೆಂಗ್ಸು ಅಂದ್ರೆ ಎಲ್ರಿಗೂ ತಾತ್ಸಾರ. ಒಳಗೇ ಇಟ್ ಪೂಜೆ ಮಾಡ್ತೀರ. ವೋರೀಕ್ ವೂಗ್ತೀನಿ ಅಂದ್ರೆ ಇಂಗ್ ವೊಟ್ಟೆ ಉರ್‍ಕಂಡ್ ಸಾಯ್ತೀರ”- ಸಾವಿತ್ರಮ್ಮ ಝಾಡಿಸಿದಳು.
“ನಂಗ್ಯಾಕೆ ವೊಟ್ಟೆ ಉರಿ. ಅವ್ರ್ ಪೊಗ್ರು ಎಷ್ಟು ಬೆಳದೈತೆ ಅಂಬ್ತ ಯೇಳ್ತಾ ಇವ್ನಿ.”
“ನಿಮ್ಮನ್ನ ಮದ್ಲೆ ಕೇಳಿದ್ರಲ್ಲ ಅವ್ರು. ಇವಾಗೇನೊ ನನ್ ಕರೀತಾ ಅವ್ರೆ ಮುತ್ತೈದೆ ಮುಂದಿಟ್ಕಂಡ್ ಒಳ್ಳೆ ಕೆಲ್ಸ ಮಾಡಾನ ಅಂಬ್ತ. ಇವಾಗೇನ್ ನೀವು ಸುಮ್ಕೆ ಇರ್‍ತೀರೂ ಇಲ್ಲ ನಾನೆ ಊರಾಗೆಲ್ಲ ಡಂಗೂರ ವೊಡ್ಕಂಡ್ ಬರ್‍ಲೊ”.
-ಎಂದು ಸಾವಿತ್ರಮ್ಮ ಹೇಳಿದಾಗ ನರಸಿಂಹರಾಯಪ್ಪ “ಎಲ್ಲಾನ ಆಳಾಗೋಗು. ಒಸಿ ಉಸಾರು; ನಮ್ ಬುಡಕ್ಕೇ ತಂದ್ ಬಿಟ್ಟೀಯ. ಆಟೇ” ಎಂದು ಚಡಪಡಿಸುತ್ತ ಎದ್ದು ಹೋದ.
ರಾಮಾಜೋಯಿಸರ ಮನೆಗೆ ಬಂದ- ನರಸಿಂಹರಾಯಪ್ಪ, ಜೋಯಿಸರು ಆತನಿಗೆ ಸಮಾಧಾನ ಮಾಡಿದರು. ಕಾಲಕ್ಕೆ ತಕ್ಕಂತೆ ಅಷ್ಟೂ ಇಷ್ಟೂ ಹೂಂದಾಣಿಕೆ ಮಾಡಿಕೊಳ್ಳದೇ ಇದ್ರೆ ಸಂಪೂರ್ಣ ಪಲ್ಲಟ ಆಗಿ ನಾಶ ಆಗ್ ಬಿಡ್ತೀವಿ- ಎಂದು ಕಿವಿ ಮಾತು ಹೇಳಿದರು. ಆದರೂ ನಮ್ ಎಚ್ಚರ ನಮಗಿರಲಿ- ಎಂಬ ಮಾತನ್ನೂ ಸೇರಿಸಿದರು.
ಇತ್ತ ಶಬರಿ ಒಂದು ಸ್ಲೇಟಿನಲ್ಲಿ “ಅ, ಆ” ಎಂದು ಸೂರ್ಯನಿಂದ ಬರೆಸಿಕೊಂಡು ಬಂದಳು. ಅದರ ಜೊತೆಗೆ ಇನ್ನೊಂದು ಖಾಲಿ ಸ್ಲೇಟನ್ನು ಸಾವಿತ್ರಮ್ಮನಿಗೆ ಕೊಟ್ಟಳು. ಸಾವಿತ್ರಮ್ಮ ಹೊಲದ ಬದುವಿನ ಮೇಲಿದ್ದ ಮರದ ಕೆಳಗೆ ಕೂತು ನೋಡಿಕೊಂಡು ಬರೆಯತೂಡಗಿದಳು. ಆಗದೆ ಶಬರಿಯನ್ನು ಕರೆದಳು. ಮೊದಲು ಶಬರಿ ನೋಡಿಕೊಂಡು ಬರೆದಳು. “ಬಂತು ಬಂತು” ಎಂದು ಕಿರುಚಿದಳು.
ರೆಕ್ಕೆ ಬಿಚ್ಚಿದ ನವಿಲು.
ಅವುಗಳಲ್ಲಿ ಹೊಳೆಯುವ ಕಣ್ಣುಗಳು.
ಬಣ್ಣ ಬಣ್ಣಗಳಲ್ಲಿ ನೆರೆದ ನೋಟ.
ಶಬರಿಯ ಕೂಗಿಗೆ ಹಂಗಸರೆಲ್ಲ ಓಡಿ ಬಂದರು. ಆಕೆ ಬರೆದ ಅಕ್ಷರಗಳನ್ನು ನೋಡಿ ಆನಂದಿಸಿದರು. ಶಬರಿಯಂತೂ ಕುಣಿದು ಕುಪ್ಪಳಿಸಿದಳು. ಸಡಗರ ಮುಗಿದ ಮೇಲೆ “ಕುತ್ಕಳ್ರವ್ವ ಕಲುಸ್ತೀನಿ” ಎಂದು ಸಾವಿತ್ರಮ್ಮನ ಕೈ ಹಿಡಿದು ಬರೆಸತೂಡಗಿದಳು. ಸ್ವಲ್ಪ ಹೂತ್ತಿನಲ್ಲೇ ಸಾವಿತ್ರಮ್ಮ ಕಲಿತುಬಿಟ್ಟರು. ಮತ್ತೆ ಹೆಂಗಸರೆಲ್ಲ ಕೇಕೆ ಹಾಕಿದರು.
ಅಷ್ಟರಲ್ಲಿ ಅಲ್ಲಿಗೆ ಬಂದ ನರಸಿಂಹರಾಯಪ್ಪ ಗದರಿಕೊಂಡ. “ಕೂಲಿ ಮಾಡಾಕ್ ಬಂದಿದ್ದೀರೂ, ಓದು ಬರಾ ಕಲ್ಯಾಕ್ ಬಂದಿದ್ದೀರೊ” ಎಂದು ಸಿಡುಕಿದ. ಸಾವಿತ್ರಮ್ಮ “ಒಂದೀಟೊತ್ ಕೆಲ್ಸ ನಿಂತೂದ್ರೆ ಆಕಾಸ ಕಳಚ್ಕಂಡ್ ಬೀಳಾಕಿಲ್ಲ. ನಮ್ ಬೂಮಿತಾಯಿ ನಮ್ ಮ್ಯಾಕ್ ಸಿಟ್ಟಾಗಕಿಲ್ಲ. ಸುಮ್ಕಿರ್ರಿ ಸಾಕು” ಎಂದು ಅಷ್ಟೇ ಸಿಡುಕಿನಿಂದ ಹೇಳಿದಾಗ ಆತ ಮರುಮಾತಾಡದೆ ಚಡಪಡಿಸುತ್ತ ಹೋದ.
*****