(ಝೆನ್‌ಗುರು ಚುಅಂಗ್‌ತ್ತು ಹೀಗೆ ಹೇಳುತ್ತಾನೆ: ಕನ್ನಡಿಯನ್ನು ನೋಡಿ – ಅದು ಏನನ್ನೂ ಸ್ವೀಕರಿಸುವುದಿಲ್ಲ. ಏನನ್ನೂ ತಿರಸ್ಕರಿಸುವುದಿಲ್ಲ. ಅದು ಏನಿದ್ದರೂ ಗ್ರಹಿಸುತ್ತದೆ)
ಕನ್ನಡಿ ನನ್ನನ್ನು ನೋಡಿತು.
ನನ್ನ ಕಣ್ಣಂಚಿನ ನೀರನ್ನೂ
ತನ್ನ ತುಟಿಯಂಚಿನ ನಗೆಯನ್ನೂ
ನನ್ನ ಕೆನ್ನೆಯಲ್ಲಿನ ಲಜ್ಜೆಯನ್ನೂ
ಕನ್ನಡಿ ನೋಡಿತು.
ನನ್ನ ಗಂಟಲೊಳಗಿನ ಮಾತನ್ನೂ
ನನ್ನ ನಾಲೆಗೆಯೊಳಗಿನ ರುಚಿಯನ್ನೂ
ನನ್ನ ಕಿವಿಯೊಳಗಿನ ಲಜ್ಜೆಯನ್ನೂ
ಕನ್ನಡಿ ನೋಡಿತು.
ನನ್ನ ಚಿಂತೆಹಣೆ ಸುಕ್ಕುಗಳನ್ನೂ
ಮೋಡದಂತಹ ಮುಂಗುರುಳುಗಳನ್ನೂ
ಒಂದೆರೆಡು ಮಿಂಚಿನ ಗೆರೆಗಳನ್ನೂ
ಕನ್ನಡಿ ನೋಡಿತು.
ನನ್ನ ತೋಳುಗಳ ಅಕ್ಕರೆಯನ್ನೂ
ಬೆರಳುಗಳ ಹಠಮಾರಿತನವನ್ನೂ
ಕಾಲುಗಳ ಕ್ರೌರ್‍ಯವನ್ನೂ
ಉಗುರುಗಳ ಜಾಣತನವನ್ನೂ
ಕನ್ನಡಿ ನೋಡಿತು.
ಹರಿವ ನದಿ ರಕ್ತದಂಥ ನನ್ನ ಆಸೆಗಳನ್ನೂ
ಮೂಳೆಯಷ್ಟು ಗಟ್ಟಿಯಾದ ಅಹಂಕಾರವನ್ನೂ
ಮಾಂಸಲ ಮೃದು ಪ್ರೀತಿಯನ್ನೂ
ಕನ್ನಡಿ ನೋಡಿತು.
ನಾನು ಮೊಳಕೆಯೊಡೆದು ಸಸಿಯಾಗಿ
ಮರವಾಗಿ ಮೆರೆದದ್ದನ್ನು
ಕನ್ನಡಿ ನೋಡಿತು.
ಮೊಗ್ಗರಳಿ ಹೂವಾಗಿ
ಹಣ್ಣಾಗಿ ಮಾಡಿ ಮರುಗಿದ
ನನ್ನನ್ನು ಕನ್ನಡಿ ನೋಡಿತು.
ಕನ್ನಡಿ ನನ್ನನ್ನು ಪ್ರೀತಿಸಲಿಲ್ಲ
ಕನ್ನಡಿ ನನ್ನನ್ನು ತಿರಸ್ಕರಿಸಲಿಲ್ಲ
ಅದು ನನ್ನನ್ನು ಸುಮ್ಮನೆ ನೋಡಿತು.
*****