ಬಿಕ್ಕಳು ತಾಯಿ
ಶರಧಿಯಾಳದಿ ಮುಖ ಹುಗಿಸಿ
ಕಣ್ಣೀರ ಕೋಡಿ ಹಗುರ ಹೊರೆ
ಸಾಗರ ಗರ್ಭ ಉಕ್ಕಿ ಸಿಡಿದು
ಈಗ ನೀರನೊರೆ
ಕೆನೆಕೆನೆಯ ಲಾಲಾರಸವಲ್ಲ,
ಅದು ಲಾವಾ
ಉಗುಳುತ್ತಿದೆ ಬೆಂಕಿ ಕೆಂಡ.
ತಾಯ್ತನದ ಹಿರಿಮೆಯೆ ಹಾಗೆ
ತನ್ನ ಇರಿದು, ಮುರಿದು, ಇಂಚು ಇಂಚು
ಭಂಗಿಸಿದರೂ ಕಣ್ಣಂಚ ಕೊನೆ ಒದ್ದೆಯಷ್ಟೇ.
ಮಕ್ಕಳಿಲ್ಲದ ಕಡೆಯಲ್ಲಿ
ಮರಭೂಮಿ ನಾಡಲ್ಲಿ
ಸಾಗರನ ಆಳದಲ್ಲಿ ವಿಷವ ಕಕ್ಕಿ
ತಣ್ಣಗಾಗಲು ಬಯಸಿದಳಷ್ಟೇ,
ಆದರೆ ದಡದ ಬುಡದಲಿ ಕಂಡಿದ್ದು
ವಾರಿಧಿಯ ಧಿಮಿಕಿತ ಕಂಪನ.
ಸೌಮ್ಯ ತೆರೆಗಳ ದೈತ್ಯ ದರ್ಶನ
ಎದ್ದ ಅಲೆಗಳಿಗೆ ಮತ್ತೂ
ಹಗೆಯ ಹೊಗೆ ಎಬ್ಬಿಸುವ ಬಯಕೆ
ಹೆಸರಿಲ್ಲದೇ ಬಂದ
ಅಲೆಯಲ್ಲಿ ಕೊಚ್ಚಿ ಹೋಗುತ್ತ
ಬಿದಿರ ಕಡ್ಡಿಯ ಹಿಡಿದು
ದಡ ಸೇರಲಾದೀತೇ?
ನಿದ್ದೆಯಿಲ್ಲದ ರಾತ್ರಿಯಲ್ಲಿ
ಕಂಡ ಕನಸಂತೆ
ಬಂದರಿನ ಅಲೆಗಳು ಬಂದದ್ದು
ತಿಳಿಯುವ ಮೊದಲೆ
ಸಮುದ್ರರಾಜನ ಬೆಳ್ನೊರೆ
ರಕ್ತರಾಡಿ ಕೆಂಪು
ಹೆಣಗಳ ರಾಶಿ
ಒಟ್ಟು ಮಾಡುವ ಗುತ್ತಿಗೆ ಹಿಡಿದಿದ್ದ
ಅಲೆರಾಯ, ಮೆಲ್ಲನೆ ಕರೆದೊಯ್ದು
ಜೀವ ಹೀರುವ ಕೆಲಸದಲ್ಲಿದ್ದಳು ಜಲಕನ್ಯೆ
ದಡ ಮಾತ್ರ ತೊಳೆದದ್ದಾಯ್ತೋ ಎಂದರೆ
ಇಲ್ಲ, ಬಾಲ್ಕನಿಯ ಎರಡಂತಸ್ತಿನ ಮನೆ
ನೋಡುತ್ತ ನೋಡುತ್ತ ನೆಲಕ್ಕೆ
ದಿನವೊಂದು ಎಡಬಿಡದ ಒತ್ತಡದ ಜಾತ್ರೆ
ಮರುದಿನ ಅದು ತೊಳೆದ ಪಟ್ಟಣ.
ಹೀಗಾಗಿ
ಈಗೀಗ ಸುನಾಮಿ ಹೆಸರು
ಬಹಳ ಪ್ರಸಿದ್ಧ. ಅನ್ವರ್ಥನಾಮಕ್ಕೆ
ಆಟಗಾರರು, ಸಿನೆಮಾತಾರೆಯರು
ಬಿಡದೆ ನೆರೆಮನೆಯಕ್ಕನ ಮಗನೂ
ಸುನಾಮಿ ಸೋಮ.
*****