ರೈಲು ನಿಲ್ದಾಣದ ಒಂದು ಬೆಂಚಿನ ಮೇಲೆ ಗಂಡ ಹೆಂಡತಿ ಕುಳಿತಿದ್ದರು. ಗಾಡಿ ಬರುವುದು ತಡವೆಂದು ಪೋರ್ಟರ್ ಹೇಳಿದ. “ರೀ ಕುಡಿಯಲು ನೀರು ತಗೊಂಡು ಬರ್‍ರಿ. ಇಲ್ಲೇ ಊಟ ಮಾಡೂಣು, ಹ್ಯಾಂಗಿದ್ರೂ ಗಾಡಿ ತಡಾ ಆಗಿ ಬರುವುದು” ಎಂದು ಹೆಂಡತಿಯ ಮಾತಿಗೆ `ಹೂಂ’ ಎಂದು ಬಾಟಲಿ ತೆಗೆದುಕೊಂಡು ಹೋಗಿದ್ದ ಗಂಡ. ಆಕೆ ಚೀಲದಲ್ಲಿದ್ದ ಬುತ್ತಿಯ ಗಂಟನ್ನು ಬಿಚ್ಚಿದ್ದಳು.
ಎದುರು ಬೆಂಚಿನಲ್ಲಿ ಕುಳಿತ ವ್ಯಕ್ತಿಯೊಬ್ಬನ ದೃಷ್ಟಿ ಅವಳತ್ತ ಹರಿದಿತ್ತು. ಆಕೆಯೂ ಆಕಸ್ಮಿವೆನ್ನುವಂತೆ ಅವನನ್ನು ನೋಡಿದ್ದಳು. ಬಡಕಲು ಶರೀರದ, ಕುರುಚಲು ಗಡ್ಡದ ಆ ವ್ಯಕ್ತಿಯ ಕಣ್ಣು ತನ್ನ ಮೇಲೆ ಸುಳಿದಾಡುತ್ತಿವೆ ಅನಿಸಿ ಆಕೆ ಮುಖವನ್ನು ಬೇರೆ ಕಡೆ ಹೊರಳಿಸಿದ್ದಳು. ಪ್ಲಾಟ್‌ಫಾರ್ಮಿನ ಕಂಬಕ್ಕೆ ತೂಗು ಹಾಕಿದ್ದ ಫಲಕ ಕಂಡಿತ್ತು. “ಕಳ್ಳರಿದ್ದರೆ ಎಚ್ಚರಿಕೆ!” ಫಲಕದಲ್ಲಿನ ಅಕ್ಷರಗಳು ದಿಗಿಲು ಹುಟ್ಟಿಸಿದವು. ಮೈತುಂಬ ಸೆರಗು ಹೊದ್ದುಕೊಂಡು ಗಂಡ ಹೋದ ದಾರಿಯತ್ತ ಗಮನ ಹರಿಸಿದಳು. ತನ್ನ ಕೊರಳಿನಲ್ಲಿದ್ದ ನಾಲ್ಕೆಳೆಯ ಬಂಗಾರದ ಸರದ ಮೇಲೆ ಅವನ ಕಣ್ಣು ಬಿತ್ತು? ಅನುಮಾನಿಸಿದಳಾಕೆ. ಮತ್ತೊಮ್ಮೆ ಆ ವ್ಯಕ್ತಿಯತ್ತ ಓರೆ ನೋಟ ಬೀರಿದಳು. ಅವನು ರೆಪ್ಪೆ ಪಿಳುಕಿಸದೆ ನೋಡುತ್ತಲೇ ಇದ್ದ. ಒಂದು ಕ್ಷಣ ಭಯವೆನಿಸಿತು. ಹಾಡು ಹಗಲು, ಜನದಟ್ಟಣೆ ಇದೆ. ಅವನೇನು ಮಾಡಲು ಸಾಧ್ಯ? ಮತ್ತೆ ತಾನೇ ಸಮಾಧಾನ ಮಾಡಿಕೊಂಡಳು.
ಗಂಡ ನೀರು ತಂದ. ಆಕೆ ಅವನ ಕೈಗೆ ರೊಟ್ಟಿ – ಪಲ್ಲೆ ಹಚ್ಚಿಕೊಟ್ಟಳು. ತಾನೂ ರೊಟ್ಟಿ ಹಿಡಿದುಕೊಂಡಳು. ಒಂದು ತುತ್ತು ಬಾಯಲ್ಲಿಡುತ್ತಿದ್ದಂತೆ ಅವಳ ಕಣ್ಣು ಎದುರು ಬೆಂಚನ್ನು ದೃಷ್ಟಿಸಿತ್ತು. ಈಗ ಆಗಂತುಕ ವ್ಯಕ್ತಿ ಆಸೆಗಣ್ಣುಗಳಿಂದ ನೋಡ ತೊಡಗಿದ್ದ. ಅವಳ ಒಡಲಲ್ಲಿ ತುಮುಲವೆದ್ದಿತು. ಅವನು ಒಮ್ಮೆಲೆ ಎದ್ದು ನಿಂತಿದ್ದ. ಆಕ್ರಮಣಕ್ಕೆ ಸಜ್ಜಾಗುತ್ತಿದ್ದಾನೆ ಅನ್ನಿಸಿತು. ದಿಢೀರೆಂದು ಮೇಲೆ ಬಿದ್ದು ಕೊರಳ ಸರ ಕಿತ್ತು ಓಡಿದರೆ ಏನು ಮಾಡುವುದು? ಸರ ಹೋದರೆ ಹೋಗಲಿ ಚೂರಿ, ಬ್ಲೇಡು ಹಾಕಿದರೆ ಗತಿಯೇನು? ಆಕೆ ಆಗಂತುಕನ ಬಗ್ಗೆ ವಿಪರೀತವಾಗಿ ಊಹಿಸಿಕೊಂಡಳು. ಅವನು ನೋಡುವ ರೀತಿಯೇ ಅಪಾಯಕಾರಿ ಎಂಬ ಭಯ ಆವರಿಸಿತು. ಮತ್ತೆ ಆ ಆಗಂತುಕ ಕುಳಿತು ನಾಲಗೆಯಿಂದ ತನ್ನ ತುಟಿ ಸವರಿಕೊಳ್ಳತೊಡಗಿದ. ಭಯವಿಹ್ವಲಳಾದಳಾಕೆ.
“ರಿ, ಆ ಮನುಷ್ಯ ಎಷ್ಟೋ ಹೊತ್ತಾತು ನನ್ನ ಕಡೆಗೆ ನೋಡಾಕ ಹತ್ಯಾನ” ಎಂದಳು.
“ಯಾರವನು?”
“ಅಲ್ಲೆ ಎದುರಿಗೆ ಕುಂತಾನ ನೋಡ್ರಿ” ಕಣ್ಣು ಸಂಜ್ಞೆಯಿಂದಲೇ ತೋರಿಸಿದಳಾಕೆ.
ಗಂಡ ಅತ್ತ ನೋಡಿದ್ದ.
ಆಗಂತುಕನ ದೃಷ್ಟಿ ಬೇರೆ ಕಡೆಗೆ ಹೊರಳಿತ್ತು. “ಇನ್ನೊಂದ್ಸಲ ಈ ಕಡೆಗೆ ನೋಡ್ಲಿ. ಅವನ ಕಣ್ಣಗುಡ್ಡೆ ಕಿತ್ತು ಕೈಗೆ ಹಾಕ್ತಿನಿ” ಎಂದು ಊಟ ಮುಗಿಸಿ ನೀರು ಕುಡಿದ ಗಂಡ. ಆಗಂತುಕನು ಮತ್ತೆ ಮುಖ ಅತ್ತ ತಿರುಗಿಸಿದ್ದ. ಅದನ್ನು ಕಂಡದ್ದೆ ಗಂಡನ ಮೈಯೆಲ್ಲಾ ಬೆಂಕಿಯಾಗಿತ್ತು. ಅವನು ಎದ್ದು ಹೋಗಿ ಮುಸುರಿ ಕೈಯಿಂದಲೇ ಕಪಾಳಕ್ಕೆ ರಪ್ಪೆಂದು ಬಾರಿಸಿದ್ದ. ಆಗಂತುಕ ನೆಲಕ್ಕೆ ಉರುಳಿದ.
ಏಕಾಏಕಿಯಾಗಿ ಸಂಭವಿಸಿದ ಈ ಪ್ರಸಂಗ ಜನರ ಗಮನ ಸೆಳೆಯಿತು. ಗಬೋ ಎಂದರು ಜನ. “ಏನಾಯಿತು? ಏನಾಯಿತು?” ಎಲ್ಲರ ಮುಖದಲ್ಲೂ ಗಾಬರಿ, ಕೌತುಕ.
“ಬದ್ಮಾಶ್, ಅಕ್ಕ-ತಂಗೇರು ಇಲ್ಲೇನು ನಿನ್ಗ?” ಆಕ್ರೋಶದಿಂದ ಕುದಿಯತೊಡಗಿದ್ದ ಗಂಡ. ಅವನ ಧ್ವನಿಯೊಂದಿಗೆ ಧ್ವನಿ ಬೆರೆಸಿ ಹೆಂಡತಿಯೂ ಬೈಯತೊಡಗಿದಳು.
ಆಗಂತುಕ ಕಿಂಚಿತ್ತೂ ಮಿಸುಗಾಡಲಿಲ್ಲ. ಸತ್ತು ಹೋದನೆ ಅವನು? ಜನರ ಗುಂಪಲ್ಲಿ ಗುಸುಗುಸು ಎದ್ದಿತು. ಅಷ್ಟರಲ್ಲಿ ಪೋಲಿಸರು, ಸ್ಟೇಶನ್ ಮಾಸ್ಟರ್ ಬಂದರು. ಗಂಡ ನಡೆದುದನ್ನು ವಿವರಿಸಿದ. ಪೋರ್ಟರನೊಬ್ಬ ಅವಸರದಿಂದ ನೀರು ತಂದು ಆಗಂತುಕನ ಮುಖದ ಮೇಲೆ ಸಿಂಪಡಿಸಿದ. ಪೋಲಿಸ್ ಹೇಳಿದ “ಇವನು ಕಳ್ಳನಲ್ಲ ಇಲ್ಲಿಯ ಖಾಯಂ ಗಿರಾಕಿ”
“ಅವನು ನನ್ನ ಹೆಂಡತಿಯನ್ನು ನೋಡುತ್ತಿದ್ದ” ಆರೋಪಿಸಿದ್ದ ಗಂಡ.
ಸಾವಕಾಶವಾಗಿ ಎದ್ದು ಕುಳಿತ ಆಗಂತುಕನನ್ನು ಸ್ಟೇಶನ್ ಮಾಸ್ಟರ್ ಕೇಳಿದರು.
“ಹೀಗೇಕೆ ಮಾಡಿದಿಯೋ ನೀನು?”
ಆಗಂತುಕ ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದ.
“ಸಾಹೇಬರ… ಎರಡು ದಿನಾ ಆತು ನಾನು ಊಟ ಮಾಡಿಲ್ಲ. ಹಸಿವು ತಡೀಲಾರದ ಆ ತಾಯಿ ಕಡೆ ನೋಡಿದ್ಯೆ ಒಂದು ರೊಟ್ಟಿ ಸಿಕ್ಕೀತು ಅಂತ”.
*****