ಯಾರೊ ಕಟ್ಟಿದ ಮನೆಯ ನಾನು ಮುರಿಯುವುದೀಗ
ನನ್ನ ಕರ್‍ಮ,
ಜಳ್ಳು ಕಾಳೆಲ್ಲ ಕಣ್ಮುಚ್ಚಿ ಬಾಚಿದೆನೇಕೆ?
ಕೇರುತಿದೆ ಈಗ ಕೆರಳಿದ ಮನೋಧರ್‍ಮ.
ಸುಬ್ಬಮ್ಮ, ನಾಣು, ಪಟಗುಪ್ಪೆ ರಾಮಾಜೋಯ್ಸ
ಹರಿಕಥಾಂಬುಧಿ ಚಂದ್ರ ನರಸಿಂಹದಾಸ
ಚಿಕ್ಕಂದಿನಿಂದ ನನಗೆಂದೆ ಕನಿಕರಿಸಿ
ಕಟ್ಟಿಕೊಟ್ಟಿರುವ ಈ ಭಾವಭವನ
ಬಿರುಕು ಬಿಟ್ಟಿದ್ದರೂ ಸಹಿಸಿ ಕೂರುವುದೆಂತು?
ನಾತ ಬಡಿಯುತ್ತಲಿದೆ ಕೊಳೆತು ದವನ.
ಇಷ್ಟು ದಿನಗಳ ಮೇಲೆ ಬೆಳಗಾಗಿ ತಲೆಯಲ್ಲಿ
ಬೆರಗು ಈಗ!
ಹಿಂದೆ ಇದರಂದ ಚಂದಕ್ಕೆ ಬೆರಗಾಗಿ,
ಕಂಡಕಂಡಲ್ಲೆಲ್ಲ ಇದನೆ ಹಾಡಿದೆ ಹೊಗಳಿ,
ಇದನು ಕಾಣದ ಕುರುಡುಜನಗಳಿಗೆ ಮರುಗಿ.
ಕಣ್ತೆರೆದು ನೋಡಿದರೆ ಈಗ ಸರಿಯಾಗಿ
ಅರಗು ನಾರು ಕೊಬ್ಬು ಸಜ್ಜರಸ ಕಲಸಿ
ಕಟ್ಟಿದರಗಿನ ಮನೆ ಈ ನನ್ನ ಅರಮನೆ!
ವೈರೋಚನೀತಂತ್ರ ಮಾಯೆಯಲಿ ನಿಲಿಸಿರುವ
ಕ್ರೂರ ಕೌರವಮಾರಿ ಮುಂದಿರುವ ಬಲಿಮಣೆ.
ಇನ್ನು ನಿಂತರೆ ಇಲ್ಲಿ ಸದ್ಯದಲಿ ಇಲ್ಲೆ ಕೊನೆ!
ಇದು ಉರಿವ ಮುಂಚೆಯೇ,
ಒಳಧರ್ಮ ಕಲಿತಿರುವ ವಿದುರಮಂತ್ರದಲೀಗ
ಉರಿಸಬೇಕಿದೆ ಇದನು ನಾನೆ.
ಹೊಕ್ಕ ತಪ್ಪಿಗೆ ಸಹಿಸಿ ಕೂತೆ ತೆಪ್ಪಗೆ,
ಈಗ ಬಿಕ್ಕುತಿದೆ ಜೀವ.
ಬಿದ್ದಿರುವೆಲ್ಲ ಕಗ್ಗಂಟುಗಳ
ಬಿಚ್ಚಿ, ಹಗ್ಗವ ಹಗ್ಗವಾಗಿ ತೆಗೆಯಲೆಬೇಕು
ಯಾವ ಮಗ್ಗಕ್ಕು ಇದು ಉಣಿಸಾಗುವುದು ಸಾಕು.
*****