ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ,
ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ…
ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು.
ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು.
ಅಳುವುದಕ್ಕೂ ನಗುವುದಕ್ಕೂ ಅವೇ ಎರಡೇ ಕಣ್ಣು.
ಕಲ್ಲು ಎತ್ತಿಕೊಳ್ಳುವುದಕ್ಕೂ ಮತ್ತೆ ಎಸೆಯುವುದಕ್ಕೂ ಅವೇ ಎರಡೇ ಕೈ,
ಮನುಷ್ಯ ಪ್ರೀತಿಯಲ್ಲಿ ಯುದ್ಧ, ಮತ್ತೆ ಯುದ್ದದಲ್ಲೇ ಪ್ರೀತಿ ಮಾಡಬೇಕು.
ಚರಿತ್ರೆಗೆ ಎಷ್ಟೋ ಶತಮಾನದ ಹಿಡಿದದ್ದನ್ನು
ತನ್ನ ಆಯುಷ್ಯದಲ್ಲೆ ದ್ವೇಷಿಸಬೇಕು ಕ್ಷಮಿಸಬೇಕು,
ನೆನೆಯಬೇಕು ಮತ್ತೆ ಮರೆಯಬೇಕು,
ವ್ಯವಸ್ಥೆಗೊಳಿಸಿ ಅವ್ಯವಸ್ಥೆಗೊಳಿಸಿ, ತಿನ್ನಬೇಕು ಮತ್ತೆ ಅರಗಿಸಿಕೊಳ್ಳಬೇಕು.
ಹುಡುಕಿದ್ದನ್ನು ಕಳೆದುಕೊಳ್ಳುತ್ತಾ
ಸಿಕ್ಕಿದಾಗ ಮರೆಯುತ್ತಾ
ಮರೆತಾಗ ಪ್ರೀತಿಸುತ್ತಾ
ಪ್ರೀತಿಸಿದಾಗ ಮರೆಯುತ್ತಾ ಇರುವಾಗ
ಮನುಷ್ಯನ ಬದುಕಿನಲ್ಲಿ ಯಾವುದಕ್ಕೂ ಸಮಯವೇ ಇಲ್ಲ
ಆತ್ಮಸದಾ ಜ್ಞಾನಿ, ಸದಾ ಪರಿಣತ,
ಆದರೆ ದೇಹ ಮಾತ್ರ ಸದಾಕಾಲಕ್ಕೂ ಹವ್ಯಾಸಿ :
ಪ್ರಯತ್ನ ಪಡುತ್ತದೆ, ತಡಕಾಡುತ್ತದೆ, ಎಡವುತ್ತದೆ.
ಏನೂ ಕಲಿಯದೆ ಎಲ್ಲ ಗೊಂದಲ,
ನೋವಿನಲ್ಲೂ ನಲಿವಿನಲ್ಲೂ ಕುಡಿದು ಮತ್ತ, ಕುರುಡ.
ಶರತ್ ಕಾಲದ ಅಂಜೂರದಂತೆ ಸಾಯುತ್ತಾನೆ ಮನುಷ್ಯ.
ಒಣಗಿ, ಕುಗ್ಗಿ ಸಿಹಿಯಾಗಿ, ತನ್ನೊಳಗೆ ತಾನೇ ತುಂಬಿ.
ಉದುರಿದ ಎಲೆಗಳು ಒಣಗುತ್ತವೆ;
ಒಣ ಬತ್ತಲೆ ರೆಂಬೆಗಳು
ಎಲ್ಲಕ್ಕೂ ಯಾವಾಗಲೂ ಸಮಯವೇ ಸಮಯವಿರುವ
ತಾಣದತ್ತ ಬೆರಳು ಮಾಡಿತೋರುತ್ತವೆ.
*****
ಮೂಲ: ಯೆಹೂದಾ ಅಮಿಛಾಯ್