ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು;
ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ
ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು.
ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ,
ಗತಿಗೆಟ್ಟು ಸರ್‍ವರಲಿ ನೀನಾದೆ ಹಿಂದು;
ಪತಿತರಿಗೆ ಕೈಗೊಟ್ಟು ಭಾರತ ಧ್ವಜ ನೆಟ್ಟು
ಪಥದೋರಿ ಬಂಗಾಲಿ ಕಾಯುತಿರೆ ಮುಂದು.
ನುಗ್ಗು ನುಗ್ಗುತ ಪರರು ನುಗ್ಗುತ್ತೆ ಬರುತಿಹರು;
ಬಗ್ಗಿರದೆ ಬಾಗುವುದೆ ನಿನಗಾದುದಿಂದು?
ಹಗ್ಗವಿಲ್ಲದ ಕಟ್ಟು, ಬೆತ್ತವಿಲ್ಲದ ಪೆಟ್ಟು,
ಒಗ್ಗಿತೇ ಈ ಗತಿಯು ಸವಿವಿಷವ ತಿಂದು?
ಕಿತ್ತು ಬಿಡು ಸಂದೇಹ, ಇತ್ತುಬಿಡು ಧನ ದೇಹ,
ಮಾತೃಭೂಮಿಯ ಪದಾರ್ಚನೆಗೆ ಬಲವಂದು.
ಹೊತ್ತ ಕಳೆಯಲು ಬೇಡ, ಭ್ರಾಂತಿಗೊಳದಿರು ಮೂಢ!
ಸತ್ತಿರುವೆ ಏತಕೀ ಜೀವನದೊಳಿಂದು?
ಚಿತ್ತವ್ಯಸನಾಕುಲೆಯು ಕುತ್ತಿಗೆಯ ಸಂಕಲೆಯ
ಕತ್ತರಿಸಿ ತನ್ನ ಸೆರೆ ಬಿಡಿಸಬೇಕೆಂದು,
ನೆತ್ತಿಯಲಿ ಬೊಟ್ಟಿಡದೆ, ಬಿರುದುಬಾವಲಿ ತೊಡದೆ,
ಅತ್ತತ್ತು ಹಲುಬುತಿರೆ ಭೂಮಾತೆ ನೊಂದು.
ಸತ್ತಿತೇ ಸಾಹಸವು? ಬತ್ತಿತೇ ಧೃತಿರಸವು?
ಮತ್ತೆ ಮಡಿದಾ ಕರ್ಣನಾ ಬೆನ್ನ ಹಿಂದು
ಎತ್ತ ಪೋದುದು ಪರಶುರಾಮನಾ ತೋಳ್ವಿರಿಸು?
ನೆತ್ತರೊಳಗಿಲ್ಲವೇ ವಿಕ್ರಮದ ಬಿಂದು?
ಕಳವಾದ ಮೇಲ್ನೀನು ಕಳವಳಿಸಿ ಫಲವೇನು?
ಕಳೆದಪುದು ನಿನ್ನ ಸ್ವಾತಂತ್ರ್ಯಮಣಿಯೊಂದು.
ಕೆಳಕೋಟೆ ಕೈಸೋಕೆ ಕಹಳೆ ಕೂಗುವುದೇಕೆ?
ಕಳಚಿಬಿಡು ಅಧ್ಯಾತ್ಮನಿದ್ರೆ ಮಮ ಬಂಧು.
ಎದ್ದೇಳು, ಎದ್ದೇಳು! ನಿದ್ದೆಗಣ್ಣನು ಕೀಳು;
ಹೊದ್ದಿರ್ದ ವೇದಗಂಬಳಿ ಮೂಲೆಗ್ಹೊಂದು.
ಎದ್ದು ಬರುತಿಹ ಭಾನು, ಎದ್ದಿತೈ ಜಾಪಾನು?
ಬಿದ್ದುಕೊಂಡಿರುವೇಕೆ ಕತ್ತಲೆಯೊಳಿಂದು?
ತಳರು ಭರತ ಕುಮಾರ, ಕೊಳುಗುಳದಲತಿವೀರ,
ಸೆಳೆ ಮಿಂಚಿನಸಿಯ ತೆಗೆ, ರಣಕೆ ಬಳಿಸಂದು!
ಮಳೆ ರಕುತದಲ್ಲಿ ಬೀಳೆ, ಬೆಳೆ ಕಲಿಗಳಿಂದೇಳೆ,
ಭಳಿರೇ ಭಾರತವರ್ಷ ಸೌಭಾಗ್ಯಮಂದು.
*****