ಪ್ರತಿ ಸಂಜೆ ಆಕಾಶದ ಒಂದು
ನಕ್ಷತ್ರ ಚಿಮಣಿ ಮಿನುಗಾಗಿ
ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ
ಬೆಳಕು ಹರಡಿ ಮನೆ ತುಂಬ
ಘನಿಕರಿಸಿಕೊಳ್ಳುತ್ತದೆ, ಮುಗಿಲು.
ಅವಳ ಬೆರಳ ಸ್ಪರ್ಶದಲಿ
ಬಳೆಗಳ ಸ್ವರದಲಿ ನೀಲಿ ಹರಡಿ
ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ.
ಏನೂ ಹೇಳಲಾಗದ ಮಾತು ಕಂದನ
ಎಳೆತುಟಿಗಳಲಿ ಅರಳಿ ಜಗದ ಗಂಧ ಸೂಸಿದೆ ಗಾಳಿ.
ಹೂ ಮನಸ್ಸಿನ ಬೆಳಕು ನೀಲಿ ಮುಗಿಲಿಂದ
ಪಡಸಾಲೆ ದಾಟಿ ಬಂದ ಘಳಿಗೆ
ಮೆದುಗಲ್ಲಕೆ ಮುತ್ತುಗಳನ್ನಿತ್ತ ತಾಯಿ
ಚಿರಂತನ ಬೆಳಕು ಕಂಡಳು ಕಂದನ ಕಣ್ಣುಗಳಲಿ
ಭೂಮಿಯೊಳಗೆ ದೇವರು ಇಳಿದ ಕ್ಷಣ ಜೀಕು.
ಸುಮ್ಮನೆ ಎತ್ತಿಕೊಂಡ ಕ್ಷಣ ಬೆಳಕು
ನಕ್ಷತ್ರಗಳು ಕಚಗುಳಿ ಇರಿಸಿದ ಸಮಯ
ಝಲ್ಲೆಂದು ಎದೆ ಕಂಪಿಸಿ ತುಂಬ ಸೊನೆ ಹಾಲು
ಅಪ್ಪಿ ಒಡಲಿಗೇರಿಸಿಕೊಂಡ ಬೆಳಕು ತುಟಿ ಇಟ್ಟು
ಹೀರಿದ ಆಕಾಶ ಭೂಮಿ ಒಂದಾದ ಸುಖದ ಕ್ಷಣ.
*****