Home / ಲೇಖನ / ವಿಜ್ಞಾನ / ಮಳೆಯ ನೀರು ಪರಿಶುದ್ಧವೆ?

ಮಳೆಯ ನೀರು ಪರಿಶುದ್ಧವೆ?

ಭೂಮಿಯ ಮೇಲೆ ಹಲವು ಮಿಲಿಯ ವರ್‍ಷಗಳಿಂದ ಮಳೆ ಸುರಿಯುತ್ತಿದೆ. ಸೂರ್‍ಯನ ಶಾಖದಿಂದ ಸಮುದ್ರ, ಸರೋವರ, ಹಳ್ಳ-ಕೊಳ್ಳಗಳ ನೀರು ಅಲ್ಲದೇ ಸಸ್ಯ ಮತ್ತು ಪ್ರಾಣಿಗಳ ದೇಹದಿಂದ ನೀರು ಆವಿಯಾಗಿ ವಾತಾವರಣ ಸೇರುತ್ತದೆ. ಆವಿ ಮೇಲೇರಿ ತಂಪಾಗುತ್ತದೆ. ಗಾಳಿಯಲ್ಲಿಯ ಈ ನೀರು ಸಾಂದ್ರೀಕರಿಸಿ ಸಣ್ಣ ಸಣ್ಣ ನೀರ ಹನಿಗಳಾಗುತ್ತವೆ. ಇಂತಹ ಹನಿಗಳು ಒಂದುಗೂಡಿ ಮೋಡವಾಗುತ್ತದೆ. ಮೋಡಗಳು ಭಾರವಾದಾಗ ಮಳೆಯಾಗಿ ಇಳಿಯುತ್ತದೆ.

ಜಲಚಕ್ರ – ಆವಿಕರಣ (ಎವಾಪೊರೇಶನ್), ಸಾಂದ್ರೀಕರಣ (ಕಂಡೆನ್ಸೇಶನ್) ಮತ್ತು ಅಪಾತೀಕರಣ (ಪ್ರೆಸಿಪಿಟೇಶನ್) ಕ್ರಿಯೆಗಳಂತಹ ಸಾಮಾನ್ಯ ನೈಸರ್‍ಗಿಕ ಆಸವನ (ಡಿಸ್ಟೀಲೇಶನ್) ಕ್ರಿಯೆ.

ಭೂಮಿಯ ಮೇಲೆ ಲಭ್ಯವಿರುವ ನೀರಿನಲ್ಲಿ ಮಳೆಯ ನೀರು ಅತ್ಯಂತ ಶುದ್ಧವಾದ ನೀರೆಂದು ತಿಳಿಯಲಾಗಿದೆ. ಅದರೆ ಅದು ನಿಜವಲ್ಲ. ಗಾಳಿಯಲ್ಲಿಯ ನಿಷ್ಕಾಸದ ಅನಿಲಗಳು, ಕಾರ್‍ಖಾನೆಗಳಿಂದ ವಿಸರ್‍ಜಿತ ವಾಯು, ಧೂಳಿನ ಕಣಗಳು, ಮತ್ತಿತರ ಅನಿಲ ರೂಪದ ಮಲಿನಕಾರಕಗಳು ಮಳೆಯ ನೀರಿನೊಂದಿಗೆ ಕಲೆಯಬಲ್ಲವು. ಮಳೆಯ ನೀರಿನಲ್ಲಿ ಸೂಕ್ಷ್ಮಜೀವಿಗಳ ಇರುವಿಕೆಯನ್ನೂ ಅಲ್ಲಗಳೆಯಲಾಗದು.

ವಾತಾವರಣದ ವಾಯುವು ಬ್ಯಾಕ್ಟೀರಿಯಾ, ಪ್ರೋಟೊಜೋವಾ, ಕೆಳವರ್‍ಗದ ಸಸ್ಯಗಳ ಬೀಜಕಗಳು ಮತ್ತು ಪರಾಗರೇಣುಗಳ ವಿಲಂಬಿತ ಸ್ಥಿತಿಯಲ್ಲಿರುವ ಮಿಶ್ರಣ. ಇವೆಲ್ಲ ಗಾಳಿಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಮೋಡದ ರೂಪದಲ್ಲಿರುತ್ತವೆ. ಮಳೆಯ ಹನಿಗಳೂ ಗಾಳಿಯಲ್ಲಿಯ ಸೂಕ್ಷ್ಮಜೀವಿಯೊಂದಿಗೆ ಕಲೆಯುವುದರಿಂದ ನೀರು ಅಶುದ್ಧಗೊಳ್ಳುತ್ತದೆ. ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ವಾತಾವರಣದ ಧೂಳಿನಂತೆ ಹರಡಿರುತ್ತವೆ. ಮಳೆಯ ನೀರು, ಆಲಿಕಲ್ಲು ಅಥವಾ ಹಿಮದ ರೂಪದಲ್ಲಿ ಅದು ನೆಲದ ಮೇಲೆಯೇ ಸುರಿಯಲಿ ಅಥವಾ ಸಾಗರ, ಧ್ರುವಗಳ ಮೇಲೆಯೇ ಬೀಳಲಿ ಅದರಲ್ಲಿ ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳು ಇರುತ್ತವೆ. ಬ್ಯಾಕ್ಟೀರಿಯಾಗಳ ಸಂಖ್ಯೆ ಮೊದಮೊದಲಲ್ಲಿ ಅಧಿಕವಾಗಿದ್ದು ಮಳೆಯು ನಿರಂತರವಾಗಿ ಬೀಳತೊಡಗಿದಂತೆ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅರಣ್ಯಗಳ ಮೇಲೆ ಸುರಿಯುವ ಮಳೆಗಿಂತ ನಗರದಲ್ಲಿ ಬೀಳುವ ಮಳೆಯ ನೀರಿನಲ್ಲಿ ಅತ್ಯಂತ ಹೆಚ್ಚಿನ ಸೂಕ್ಷ್ಮಜೀವಿಗಳಿರುತ್ತವೆ. ಒಂದು ವರದಿಯ ಪ್ರಕಾರ – ಮಹಾನಗರಗಳ ಪ್ರತಿ ಚ.ಮೀ ಜಾಗದಲ್ಲಿ ಬೀಳುವ ಮಳೆಯು ಪ್ರತಿವರ್‍ಷ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳನ್ನು ಹೊತ್ತೊಯ್ಯುತ್ತದೆ. ಈ ಲೆಕ್ಕಾಚಾರವು ಮಳೆಯ ಪ್ರತಿ ಮಿಲೀ. ನೀರಿನಲ್ಲಿ ೧ ರಿಂದ ೨೫ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಸೂಚಿಸುತ್ತದೆ.

ಮಳೆಯು ವಾತಾವರಣದ ಹಲವು ಗೋಲಗಳಲ್ಲಿ ಉತ್ಪತ್ತಿಯಾಗುತ್ತದೆ. ಅದಕ್ಕಿಂಥ ಕೆಳಗಿರುವ ಸೂಕ್ಷ್ಮಜೀವಿಗಳ ಮೋಡವು ಮಳೆಯೊಂದಿಗೆ ಕಲೆತು ನೆಲಕ್ಕಿಳಿಯುತ್ತದೆ. ಆದರೆ ಗೋಲಗಳ ಮೇಲಿನ ಸೂಕ್ಷ್ಮಜೀವಿಗಳು ಹಾಗೆಯೇ ಉಳಿಯುತ್ತವೆ. ಹಿಮದಲ್ಲಿ ಮಳೆಯ ಹನಿಗಿಂತಲೂ ಸೂಕ್ಷ್ಮಜೀವಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಎಕೆಂದರೆ ಅವು ಮಳೆಯ ಹನಿಗಿಂತಲೂ ದೊಡ್ಡದಾಗಿರುವುದರಿಂದ. ಹಿಮದ ಪ್ರತಿ ಗ್ರಾಂ ಒಂದಕ್ಕೆ ೭೦೦ ಸೂಕ್ಷ್ಮ ಜೀವಿಗಳು ಮತ್ತು ಆಲಿಕಲ್ಲಿನ ಪ್ರತಿ ಗ್ರಾಂ ಒಂದಕ್ಕೆ ೨೦,೦೦೦ ಸೂಕ್ಷ್ಮಜೀವಿಗಳು ಇರುವ ಬಗ್ಗೆ ವರದಿಯಾಗಿವೆ.

ಗಿರಿ ಪರ್‍ವತಗಳ ಮೇಲೆ ಬೀಳುವ ಹಿಮ ಮತ್ತು ಹಿಮ ನದಿಯ ನೀರು ಪ್ರಾಯೋಗಿಕವಾಗಿ ಕೃಷಿ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ. ನೈಸರ್‍ಗಿಕವಾಗಿ ಮಳೆಯ ಹನಿಗಳ ಆಕಾರ ವಿಭಿನ್ನವಾಗಿರುತ್ತವೆ. ಅತಿ ಹೆಚ್ಚಿನ ವ್ಯಾಸ ಅಂದರೆ ಐದು ಮಿಲಿಯಮೈಕ್ರಾನ್. ಅದಕ್ಕಿಂತ ಹೆಚ್ಚಿನ ವ್ಯಾಸವುಳ್ಳವು ಅಸ್ಥಿರವಾಗಿದ್ದು, ಬೀಳುವಾಗ ಒಡೆದು ಸಣ್ಣ ಸಣ್ಣ ಹನಿಗಳಾಗುತ್ತವೆ.

ಜಲಪ್ರಿಯ ಕಣಗಳು ಮಳೆ ಹನಿಯೆಡೆಗೆ ಸುಲಭವಾಗಿ ಆಕರ್‍ಷಿತವಾಗುತ್ತವೆ. ಮಳೆಯ ಹನಿಗಳು ಮುಂದೆ ಹೇಳಲಾಗಿರು ಎರಡು ಕಾರಣಗಳಿಂದ ಸ್ಥಾಯೀ ವಿದ್ಯುತ್ ಇರುವ ಕಣಗಳಂತೆ ವರ್‍ತಿಸುತ್ತವೆ. ವಿರುದ್ಧ ಆವೇಶ ಹೊಂದಿರುವ ಬೀಜಕ ಮತ್ತು ಮಳೆಯ ಹನಿಗಳ ನಡುವಿನ ಕೂಲಾಮ್ ಬಂಧ ಮತ್ತು ಪ್ರೇರಿತ ಬಂಧ.

ಮಳೆಯ ಪ್ರಮಾಣದ ಈ ಕ್ರಿಯೆಯು ದ್ರಾವಣದಲ್ಲಿ ಧನ ಮತ್ತು ಋಣ ಆವೇಶ ಪಡೆದುಕೊಂಡ ಕಣಗಳಿಗಿಂತ ಭಿನ್ನವಾಗಿದೆ. ಮಳೆ ಹನಿಗಳು ಅವನ್ನು ಆಕರ್‍ಷಿಸಿ ಜೊತೆಗೆ ಒಯ್ಯುವ ಕ್ರಿಯೆಯು ಸೂಕ್ಷ್ಮ ಬೀಜಕಗಳ ಮೇಲ್ಮೈಯ ತೇವಕಾರಕ ಅಂಶವನ್ನು ಅವಲಂಬಿಸಿದೆ. ಬಹುಬೇಗ ತೇವವಾಗುವ ಬೀಜಕಗಳೆಂದರೆ ಶಿಲೀಂಧ್ರಗಳ ಗುಂಪಿನ ಸೆಫೆಯೋಸ್ಪೋರಿಯಮ್, ಉಸಾರಿಯಮ್, ವರ್‍ಟಿಸಿಲಿಯಂ ಮತ್ತು ಪುಲುಲಾರಿಯಂ. ಇವು ಮಳೆಯ ಹನಿಗಳಲ್ಲಿ ಬೇಗನೇ ಪ್ರವೇಶಿಸಿ ಕೊಂಡೊಯ್ಯಲ್ಪಡುತ್ತವೆ. ತೇವಗೊಳ್ಳದ ಬೀಜಕಗಳು ಅಂದರೆ ಕ್ಲಾಡೋಸ್ಟೋರಿಯಂ, ಆಸ್ಪರಿಜಿಲ್ಲಸ್, ಇತ್ಯಾದಿ ಕಡಿಮೆ ವೇಗದಲ್ಲಿ ಅಣುಜೀವ ಅಸಂಜನ ಕ್ರಿಯೆಯಿಂದ ಮಳೆಯ ಹನಿಯ ಮೇಲ್ಮೈಗೆ ಆಕರ್‍ಷಿತವಾಗುತ್ತವೆ.

ಮೈಸೂರಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮಳೆಯ ನೀರಿನಲ್ಲಿ ಆಸ್ಪರಿಜಿಲ್ಲಸ್ ತರಹದ ಬೀಜಕಗಳು ಹೆಚ್ಚಾಗಿ ಕಂಡುಬಂದಿವೆ.

ಮಳೆ ಸುರಿದ ನಂತರ ಕೆಲವು ತೇವ ಹೊಂದದ ಬೀಜಕಗಳು ಆದ್ರತೆ ಹೊಂದಿದ ಮಣ್ಣಿನ ಮೇಲೆ ಅಥವಾ ನೀರಿನ ಮೇಲೆ ಮೊಳೆತು, ಬೀಜಕಗಳನ್ನು ತಯಾರಿಸಿ ಗಾಳಿಯಲ್ಲಿ ಪ್ರಸಾರಿತವಾಗುತ್ತವೆ. ಸೂಕ್ಷ್ಮ ಮೋಡಗಳ ರೂಪದಲ್ಲಿ ಈ ಬೀಜಕಗಳು ಮಳೆಯನಂತರ ವಾತಾವರಣದಲ್ಲಿ ತೇಲುತ್ತ ಮಳೆಯ ನೀರನ್ನು ಅಶುದ್ಧವಾಗಿಸುತ್ತವೆ.

ಕಾರ್‍ಖಾನೆ ಮತ್ತು ವಾಹನಗಳಿಂದ ಹೊರಹೋಗುವ ಸಲ್ಫರ್‍ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ವಾತಾವರಣದ ತೇವಾಂಶದೊಡನೆ ಕೂಡಿ ಆಮ್ಲ ಉತ್ಪತ್ತಿಯಾಗುತ್ತದೆ. ಈ ಆಮ್ಲವು ಮಳೆಯ ನೀರಿನೊಂದಿಗೆ ಕೂಡಿ ಆಮ್ಲಮಳೆಯಾಗುತ್ತದೆ. ಆಮ್ಲ ಮಳೆ ಸುರಿದಾಗ ಭೂಮಿಯಲ್ಲಿಯ ಸಕಲ ಸಸ್ಯಪ್ರಭೇದಗಳು ಅಪಾಯ ಎದುರಿಸಬೇಕಾಗುತ್ತದೆ.

ದಿನೇ ದಿನೇ ಕಾರ್‍ಖಾನೆಗಳು ಹೆಚ್ಚುತ್ತಿವೆ. ಅವುಗಳಿಂದ ವಿಸರ್‍ಜಿತವಾಗುವ ಕಲುಷಿತ ಹವೆಯ ಪ್ರಮಾಣವೂ ಹೆಚ್ಚುತ್ತಿದೆ. ಇತ್ತ ಗಿಡಮರಗಳನ್ನು ಹಿಂದೆ ಮುಂದೆ ನೋಡದೇ ಕಡಿಯಲಾಗುತ್ತಿದೆ. ಹಾಗಾಗಿ ಕಲುಷಿತ ಹವೆಯು ವಾತಾವರಣದಲ್ಲಿಯೇ ಉಳಿದು, ಮಳೆಯ ಸಂದರ್‍ಭದಲ್ಲಿ ಮಳೆಯ ಹನಿಗಳೊಂದಿಗೆ ಕೂಡಿ, ಮಳೆಯ ನೀರು ಮಲಿನವಾಗುತ್ತಿದೆ.

ಮಳೆಯಿಂದ ಹರಡುವ ರೋಗಗಳು

ಮಳೆಯ ನೀರಿನಲ್ಲಿಯ ಸೂಕ್ಷ್ಮಜೀವಿಗಳು ಭೂಸಂಬಂಧ ಪರಿಸರ ವ್ಯವಸ್ಥೆಯಲ್ಲಿ ಬಹುವಾಗಿ ಪ್ರಭಾವ ಬೀರುತ್ತವೆ. ಅವು ಸಸ್ಯಗಳಲ್ಲಿ ಹಲವು ರೋಗಗಳು ಮತ್ತು ಪ್ರಾಣಿಗಳಲ್ಲಿ ಶ್ವಾಸಕೋಶನಾಳ ಸಂಬಂಧ ರೋಗಗಳು ಹರಡಲು ಕಾರಣವಾಗುತ್ತವೆ. ಮಳೆಯ ಕಾಲದಲ್ಲಿ ಗೋದಿ ತುಕ್ಕುರೋಗವು ಹಿಮಾಲಯದ ಎತ್ತರದ ಬಯಲು ಮೈದಾನಗಳಿಗೆ ಮತ್ತು ದಕ್ಷಿಣದ ನೀಲಗಿರಿ ಮತ್ತು ಪಳನಿ ಬೆಟ್ಟಗಳಿಂದ ಮಧ್ಯ ಭಾರತಕ್ಕೆ ಪ್ರಸಾರಿತವಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಕಂದು ಮತ್ತು ಕಪ್ಪು ತುಕ್ಕು ರೋಗದ ಬೀಜಕಗಳು ದಕ್ಷಿಣದಿಂದ ಮಧ್ಯ ಭಾರತಕ್ಕೆ ಮಳೆಯಿಂದ ಪ್ರಸಾರಿತವಾಗುತ್ತವೆ. ಸುಮಾರು ೬೦೦ ಕಿ.ಮೀ. ಗಳವರೆಗೂ ಬೀಜಕಗಳು ಪ್ರಸಾರಿತವಾದ ಉದಾಹರಣೆಗಳಿವೆ. ಮಳೆಯ ನೀರಿನಲ್ಲಿಯ ಸೂಕ್ಷ್ಮ ಜೀವಿಗಳು ದನ ಮತ್ತು ಕುರಿಗಳಲ್ಲಿ ಕಾಲುಬಾಯಿ ರೋಗ ಹರಡಲೂ ಕಾರಣವಾಗಿವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...