ಬುದ್ಧ ಹೇಳಿದ ಮುಳ್ಳಿನ ಕಿರೀಟ
ಧರಿಸಿದರೆ ನೋವುಗಳು ಎದೆಗಿಳಿದು
ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು
ಎಲ್ಲವೂ ಮೌನವಾಗುತ್ತವೆ.
ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ
ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು
ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತವೆ
ಎಂದೂ ಮತ್ತೆ ಮಾತಿನ ಶಸ್ತ್ರ ಪ್ರಹಾರ
ಮೌನದ ಆಳವನ್ನು ಕಲುಕಿ ರಾಡಿ ಮಾಡುತ್ತದೆಂದು.
ಬುದ್ಧ ಹೇಳಿದ ಅವಮಾನ ಹಿಯ್ಯಾಳಿಸಿದರೆ
ಈ ದೇಹ ಬಂಧನದಿಂದ ಬಿಡುಗಡೆ
ಸಿಗುತ್ತದೆ. ಎಂದೂ ಅಲ್ಲ ಕ್ರೂರ ಮನಸ್ಸಿರುವುದಿಲ್ಲ,
ಎಲ್ಲವೂ ಮಾತಿನಾಚೆಯ ಮೌನವಾಗುತ್ತದೆ.
ಅವನಿಗೆ ಗೊತ್ತಿಲ್ಲ ಉಳಿಯಿಂದ
ಹೊಡೆದು ಶಿಲ್ಪಿ ಮಾಡಿದ ಮಾಟ
ಮೂರ್ತಿ ತಾಳ್ಮೆಯಿಂದ ಎಲ್ಲ ದಾಟಿ ಮೀರಿ
ಪೂಜೆಗೊಳ್ಳುತ್ತದೆ ಕತ್ತಲೆಯಿಂದ ಬೆಳಕಿನ ಅರಮನೆಯಲಿ.
ಬುದ್ಧ ಹೇಳಿದ ಎಲ್ಲ ಬಿಟ್ಟು ಊರಿಗೆ ಬೆನ್ನು ಹಾಕಿ
ನಿರ್ಮೋಹಿಯಾಗಿ ನಡೆದರೆ ದಾರಿಯಲಿ ಏಕಾಂಗಿಯಾಗಿ
ನಿರ್ಲಕ್ಷಿಸಿದ ಸತ್ಯಗಳು ಕಣ್ಣಮುಂದೆ ಕಂಗೊಳಿಸುತ್ತದೆ
ಮತ್ತೆ ಭವ ಬದುಕು ಒಂದಾಗುತ್ತದೆ.
ಅವನಿಗೆ ಗೊತ್ತಿಲ್ಲ ಸಂತೆಯೊಳಗೆ ನಿಂತು
ಸತ್ಯವನ್ನ ಸುಳ್ಳಿನೊಡನೆ ಹೊಡೆದಾಡಿ ನಮ್ಮಿಂದಲೇ
ಕಳಚಿ ಕೊಂಡು ಹೊಸ ನಮೂನೆಯ ಮನಸ್ಸು.
ಬದುಕು ಮತ್ತೆ ನಮ್ಮಲ್ಲೇ ಹುಟ್ಟಿಕೊಳ್ಳುತ್ತದೆ ಎಂದು.
*****