ನಮ್ಮೆಲ್ಲರ ಪಯಣದ ದಾರಿ
ತುಂಬ ಗಿಡಮರ ಹಕ್ಕಿ ಚಕ್ಕಿ
ವಿಸ್ಮಯಗಳ ನೋಟ ಕೂಟದಲ್ಲಿ
ನಾನೀನಾಗಿ ನೀನಾನಾಗಿ ಬಿಟ್ಟು
ಬಂದ ನಡೆದ ದಾರಿ ಹಸಿಬಿಸಿ
ಎಲ್ಲವೂ ಇದ್ದು ಒಮ್ಮೆ ತಿರುಗಿ
ನೋಡಿ ನರಳೋಣ ಇದು ಇರಬಹುದು ಬದುಕು
ಏನೇನೋ ಹುಡುಕಾಟ ತಲ್ಲಣ
ಶೃತಿ ಅಪಶೃತಿಗಳ ನಡುವೆ ಎಲ್ಲರೂ
ಎಲ್ಲವೂ ಸಹಜ ಮತ್ತೆ ಬೇರೆ ಏನೋ
ಹರಿದು ಹರಡಿ ವಿಸ್ತರಿಸಿದ ಹಮ್ಮುಬಿಮ್ಮು
ಯಾವುದೋ ಬೇಟೆ, ಎಲ್ಲಿಯದೋ ನೋಟ
ಓಣಿದಾಟಿ ಬಂದವರೆಲ್ಲಾ ಕುಣಿದು ಹಾಡಿದರು
ಇದು ಇರಬಹುದು ಅಸ್ತಿತ್ವದ ಬದುಕು.
ಎಲ್ಲ ಪಯಣವೂ ಆರಂಭವಾಗಿ
ನನ್ನನ್ನಿನ್ನಲಿ ಅಂತ್ಯಗೊಳ್ಳುವುದು ಅದೇ
ದಾರಿಯಲಿ ಕೌನೆರಳು ಬಸಿಲುಗಳಾಟದಲಿ
ಮುಟ್ಟಿತಟ್ಟಿ ವಟಗುಟ್ಟಿದ ರಾಮಾಯಣ
ಮಹಾಭರತದ ಪಾತ್ರಗಳು ಸಂತೈಸಿ
ಸಮಾಧಾನಿಸಿ ಮತ್ತೆ ಕೆರಳಿಸಿದ ಕನವರಿಕೆ
ಇದು ಇರಬಹುದು ಅಹಮಿಕೆಯ ಬದುಕು.
ನಡೆವದಾರಿಗುಂಟ ಬಂಡಾಯ ಸಾವಿರ
ನೋವುಗಳ ನರಳಾಟ ಸುಮ್ಮನೆ ರಾತ್ರಿಗಳು
ಮಲಗಿದೆ ಮೌನದ ಕತ್ತಲೆಯಲ್ಲಿ ಎಲ್ಲೋ
ಹೊಳೆದ ತಾರೆಗಳು ತಿಂಗಳ ಬೆಳಕಿನ
ನೆರಳಲಿ ಅವನ ಅವಳ ಹುಡುಕಾಟ
ಉರಿವಗ್ನಿಕುಂಡಸುತ್ತ ಕರುಳ ಹಾಡು
ಹುಡಿಮಣ್ಣಿನ ವಾಸನೆಯ ತಾಕಲಾಟ
ಇದು ಇರಬಹುದು ನಿಜದ ಬದುಕು.
*****