ಜೀವನ ಕೌಶಲಗಳನ್ನು ಕಲಿಯಿರಿ; ನಿಮ್ಮ ನೆಮ್ಮದಿಯನ್ನು ಕಲಕಬಲ್ಲ ಅಂಶಗಳನ್ನು ಸರಿಯಾಗಿ ನಿಭಾಯಿಸಿ

ಜೀವನ ಕೌಶಲಗಳನ್ನು ಕಲಿಯಿರಿ; ನಿಮ್ಮ ನೆಮ್ಮದಿಯನ್ನು ಕಲಕಬಲ್ಲ ಅಂಶಗಳನ್ನು ಸರಿಯಾಗಿ ನಿಭಾಯಿಸಿ

ಅಧ್ಯಾಯ -೭

೧) ಹಣ : ಹಣ ಇದ್ದರೂ ಚಿಂತ, ಇಲ್ಲದಿದ್ದರೂ ಚಿಂತೆ. ನಮ್ಮ ಜನಸಂಖ್ಯೆ ಶೇಕಡಾ ೪೦ ರಷ್ಟು ಜನರಿಗೆ ಹಣ ಇಲ್ಲದೆ, ಬಡತನದ ಬವಣೆ, ಶೇಕಡಾ ೧೦ ರಷ್ಟು ಜನರಿಗೆ, ಅಜೀರ್ಣವಾಗುವಷ್ಟು ಹಣ, ಶ್ರೀಮಂತಿಕೆ, ಉಳಿದ ಶೆಕಡ ೫೦ ಜನ ಮಧ್ಯಮ ವರ್ಗದ ತ್ರಿಶಂಕುಗಳು. ಸದಾ ಶ್ರೀಮಂತಿಕೆಯ ಕನಸು ಕಾಣುತ್ತಾ ನಿತ್ಯ ನಿರಾಶೆಯನ್ನು ಅನುಭವಿಸುವವರು. ಸಮಾಜದಲ್ಲಿರುವ ಹಣ ಸಂಪನ್ಮೂಲ ಸವಲತ್ತುಗಳು ಯೋಗ್ಯ ರೀತಿಯಲ್ಲಿ ಬಟವಾಡೆ ಆಗುವುದಿಲ್ಲ. ಬಡವರದ್ದು ಮಧ್ಯಮ ವರ್ಗದವರದ್ದು ಯಾವಾಗಲೂ ಖೋತಾ ಬಜೆಟ್. ಆದಾಯ ಕಡಿಮೆ, ಖರ್ಚು ಹೆಚ್ಚು, ಮೈ ಎಲ್ಲಾ ಸಾಲ. ಶ್ರೀಮಂತರಿಗೆ ಮತ್ತಷ್ಟು ಹಣ ಸಂಪಾದಿಸುವ ಗೀಳು, ಹೀಗೆ ಹಣ ಯಾರಿಗೂ ನೆಮ್ಮದಿ ಕೊಡುವುದಿಲ್ಲ.

ಆದ್ದರಿಂದ ಹಣವನ್ನು ವಿಚಕ್ಷಣೆಯಿಂದ ಸಂಪಾದಿಸಿ, ಹಣ ಸಂಪಾದನೆಗೆ ಅಡ್ಡಮಾರ್ಗ, ಅಕ್ರಮ ವಿಧಾನಗಳನ್ನು ಬಳಸಬೇಡಿ. ಇನ್ನೊಬ್ಬರಿಗೆ ಸಮಾಜಕ್ಕೆ ಅನ್ಯಾಯ ಮೋಸ ಮಾಡಿ, ಹಣ ಗಳಿಸಬೇಡಿ. ನಿಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ದಾನ ಧರ್ಮ ಪರೋಪಕಾರಕ್ಕೆ ವಿನಿಯೋಗಿಸಿ. ನಿಮ್ಮ ಹಣವನ್ನು ವಿವೇಚನೆಯಿಂದ ಖರ್ಚು ಮಾಡಿ. ಆಡಂಬರ ಅಬ್ಬರಕ್ಕೆ ಅವಕಾಶ ಮಾಡಿಕೊಡಬೇಡಿ. ಪ್ರತಿಷ್ಠೆಯನ್ನು ಮೆರೆಸಲು ವೆಚ್ಚ ಮಾಡಬೇಡಿ. ಕಷ್ಟಕಾಲಕ್ಕೆ ಹಣವನ್ನು ಕೂಡಿಡಿ. ಪ್ರತಿ ತಿಂಗಳು ಪ್ರತಿ ವರ್ಷ ನಿಮ್ಮ ವೆಚ್ಚ ಆದಾಯವನ್ನು ಮೀರದಿರಲಿ. ಸಾಲದ ಶೂಲಕ್ಕೆ ಏರಬೇಡಿ.

೨) ಅಗತ್ಯಗಳು : ಆಹಾರ, ನಿದ್ರೆ, ವಸ್ತ್ರ, ವಸತಿ, ಲೈಂಗಿಕ ಬಯಕೆ, ಪ್ರೀತಿ ವಿಶ್ವಾಸ, ರಕ್ಷಣೆ, ಸ್ಥಾನಮಾನ, ಅಧಿಕಾರಗಳು ಪ್ರತಿಯೊಬ್ಬರ ಅಗತ್ಯಗಳು. ಈ ಅಗತ್ಯಗಳನ್ನು ಹೆಚ್ಚು ಮಾಡಿಕೊಳ್ಳಬೇಡಿ. ನಿಮ್ಮ ಅಗತ್ಯಗಳನ್ನು ತಗ್ಗಿಸಿ. ನಿಮ್ಮ ಸಂಪನ್ಮೂಲಗಳ ಇತಿಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಗತ್ಯಗಳನ್ನು ಪೂರೈಸಿಕೊಳ್ಳಿ, ತೃಪ್ತಿಪಡಿ, ಅಗತ್ಯಗಳನ್ನು ಪೂರೈಸಿಕೊಳ್ಳುವಾಗ, ಇತರರೊಂದಿಗೆ ಸ್ಪರ್ಧೆಗೆ ಇಳಿಯಬೇಡಿ. ಇತರರ ಅನ್ನವನ್ನು ಕಸಿಯಬೇಡಿ. ನಾನೂ ಕ್ಷೇಮ ನೀವು ಕ್ಷೇಮ ನೀತಿಯನ್ನು ಪಾಲಿಸಿ. ಎಲ್ಲವನ್ನೂ ನಾನೇ ಬಾಚಿಕೊಳ್ಳಬೇಕು. ನಾನು ನನ್ನ ಕುಟುಂಬ ಮುಂದಿನ ತಲೆಮಾರು ಎಲ್ಲರಿಗೂ ಕೂಡಿಡಬೇಕು ಎಂಬ ಧೋರಣೆಯನ್ನು ಬಿಡಿ. ಪ್ರತಿದಿನ ಏನು, ಎಷ್ಟು ಲಭ್ಯವೋ ಅಷ್ಟರಲ್ಲಿ ಸಂತೋಷ ತೃಪ್ತಿಪಡುವ ಅಭ್ಯಾಸ ಮಾಡಿಕೊಳ್ಳಿ ಸರಳ ಜೀವನಕ್ಕೆ ಆದ್ಯತೆ ಇರಲಿ.

೩) ಸಂಬಂಧಗಳು : ಪ್ರಪಂಚದಲ್ಲಿ ಯಾರೊಬ್ಬರೂ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ನಾವು ಗುಂಪಿನಲ್ಲಿ ಬದುಕಬೇಕು. ನಿತ್ಯ ಹತ್ತಾರು ಜನರ ಜೊತೆ ವ್ಯವಹರಿಸಬೇಕು. ಯಾರೊಡನೆ ನಾವು ವಾಸಿಸಬೇಕೋ, ಕೆಲಸ ಮಾಡಬೇಕೋ, ವ್ಯವಹರಿಸಬೇಕೋ ಅವರೊಂದಿಗೆ ಸ್ನೇಹ, ವಿಶ್ವಾಸ, ಹೊಂದಾಣಿಕೆಯನ್ನು ಸಾಧಿಸಬೇಕು. ಅನೇಕ ಕುಟುಂಬಗಳಲ್ಲಿ ಅನೇಕ ಉದ್ಯೋಗ ಸಂಸ್ಥೆಗಳಲ್ಲಿ ಜನಗಳ ನಡುವೆ ಮನಸ್ತಾಪ, ಅಪನಂಬಿಕೆ, ವೈಮನಸ್ಯ, ದ್ವೇಷ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣಗಳು, ಸ್ವಾರ್ಥ, ಪ್ರತಿಷ್ಠೆ, ನೇರ ಮಾತುಕತೆ ಇಲ್ಲದಿರುವುದು, ವ್ಯಕ್ತಿಗಳು ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸದಿರುವುದು, ಇತರರಲ್ಲಿ ತಪ್ಪು ಕಂಡು ಹಿಡಿದು, ಅವಮಾನವಾಗುವ ರೀತಿಯಲ್ಲಿ ಟೀಕಿಸುವುದು, ಶಿಕ್ಷಿಸುವುದು, ಪರಸ್ಪರ ಪ್ರೀತಿ ಗೌರವದ ಅಭಾವ, ಸಂಪನ್ಮೂಲಗಳಿಗಾಗಿ ಸ್ಪರ್ಧೆ, ಪಕ್ಷಪಾತ ಇತ್ಯಾದಿ.

ಸಂಬಂಧಗಳನ್ನು ಸುಧಾರಿಸಲು ಹಾಗೂ ಉತ್ತಮಪಡಿಸಲು ಈ ನಡವಳಿಕೆಗಳನ್ನು ಅನುಸರಿಸಿ.

ಅ) ಯಾರ ಜೊತೆಯಲ್ಲಿ ನೀವು ವಾಸಿಸಬೇಕೋ, ಕೆಲಸ ಮಾಡಬೇಕೋ ಅವರ ಸ್ವಭಾವ, ಬೇಕು ಬೇಡಗಳನ್ನು ಗಮನಿಸಿ, ಅವರ ವ್ಯಕ್ತಿತ್ವದ ಸಕಾರಾತ್ಮಕ ನಕಾರಾತ್ಮ ಗುಣಗಳನ್ನು ಗುರುತಿಸಿ, ಯಾರೊಡನೆ ಹೇಗೆ ಮಾತನಾಡಬೇಕು, ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಯೋಚಿಸಿ. ಅದರಂತೆಯೇ ಮಾಡಿ.

ಆ) ನಿಮಗಿಂತ ಹಿರಿಯರಿಗೆ ಗೌರವ ತೋರಿಸಿ, ನಿಮಗಿಂತ ಕಿರಿಯವರಿಗೆ ಪ್ರೀತಿ ತೋರಿಸಿ. ಇದರಲ್ಲಿ ಯಾವುದೇ ಷರತ್ತು ಬೇಡ.

ಇ) ಮನೆಯವರಾಗಲೀ, ನೀವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಳ್ಳೆಯ ಮತ್ತು ಸಕಾರಾತ್ಮಕ ಗುಣಗಳನ್ನು ಗಮನಿಸಿ. ಅದನ್ನು ಮುಕ್ತವಾಗಿ ಶ್ಲಾಘಿಸಿ, ತಪ್ಪು ಮತ್ತು ನಕಾರಾತ್ಮಕ ಗುಣಗಳನ್ನು ಎಂದೂ ಬಹಿರಂಗವಾಗಿ ಟೀಕಿಸಬೇಡಿ. ಇತರರ ಮನಸ್ಸು ನೋಯುವಂತೆ ಎಂದೂ ನಡೆದುಕೊಳ್ಳಬೇಡಿ.

ಈ) ನಿಮ್ಮ ಮನೆಯವರು, ಬಂಧು-ಮಿತ್ರರು ತಪ್ಪು ಮಾಡಿದಾಗ, ಅಹಿತವನ್ನುಂಟು ಮಾಡಿದಾಗ ಸಿಟ್ಟಾಗಬೇಡಿ, ನೊಂದುಕೊಳ್ಳಬೇಡಿ. ಅವರೊಂದಿಗೆ ಮಾತನಾಡಿ, ತಪ್ಪು ಪುನರಾವರ್ತನೆಯಾಗದಂತೆ ಮಾಡಲು ಸಾಧ್ಯವೇ ಎಂದು ಕೇಳಿ. ತಪ್ಪಿಗೆ ಅವರೇನು ಹೇಳುತ್ತಾರೆ ಎಂದು ಸಹನೆಯಿಂದ ಕೇಳಿ. ತಪ್ಪನ್ನು ಕ್ಷಮಿಸುವ ಉದಾರತೆಯನ್ನು ತೋರಿಸಿ.

ಉ) ನೀವು ಇತರರಿಂದ ಏನು ನಿರೀಕ್ಷೆ ಮಾಡುತ್ತೀರಿ, ಎಷ್ಟು ಮತ್ತು ಎಂತಹ ಪ್ರೀತಿ ವಿಶ್ವಾಸವನ್ನು ನಿರೀಕ್ಷೆ ಮಾಡುತ್ತೀರಿ ಎಂಬುದನ್ನು ಅವರಿಗೆ ಹೇಳಿ. ಹಾಗೆಯೇ ಅವರು ನಿಮ್ಮಿಂದ ಏನನ್ನು, ಎಷ್ಟನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುವಂತೆ ಕೇಳಿಕೊಳ್ಳಿ. ನಿರೀಕ್ಷೆಯ ಮಟ್ಟಕ್ಕೆ ನೀವಾಗಲಿ, ಅವರಾಗಲೀ ಬರದಿದ್ದಾಗ ಅಪ್ಸೆಟ್ ಆಗುವುದನ್ನು ತಪ್ಪಿಸಿ.

ಊ) ನಿಮ್ಮ ಪಾತ್ರದ ಹಕ್ಕು ಬಾದ್ಯತೆಗಳನ್ನು, ಇತರರ ಪಾತ್ರಗಳ ಹಕ್ಕು ಬಾದ್ಯತೆಗಳನ್ನು ಸ್ಪಷ್ಟಪಡಿಸಿಕೊಳ್ಳಿ. ಹೊಂದಾಣಿಕೆ ಸಾಧಿಸಿ.

ಋ) ಸ್ನೇಹ ಸಂಬಂಧದಲ್ಲಿ ತೆಗೆದುಕೊಳ್ಳುವುದಕ್ಕಿಂತ, ಕೊಡುವುದಕ್ಕೆ ಹೆಚ್ಚು – ಆದ್ಯತೆ ಕೊಡಿ.

ೠ) ಆಗಾಗ, ಅವಧಿಗೊಂದಾವರ್ತಿ, ಮಾತಿನ ಮೂಲಕ, ಕೊಡುಗೆಗಳ ಮೂಲಕ ನಿಮ್ಮ ಪ್ರೀತಿ ಗೌರವವನ್ನು ಪ್ರಕಟಿಸಿ, ಜೊತೆಯಾಗಿ ಮಾಡುವಂತಹ ಕೆಲಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ.

ಎ) ಸಾವು, ನೋವು, ಕಾಯಿಲೆ, ಅಪಘಾತದಂತಹ ನಕಾರಾತ್ಮಕ ಘಟನೆಗಳಾದಾಗ ತತ್‌ಕ್ಷಣ, ತೊಂದರೆಗೆ ಒಳಗಾದವರನ್ನು ಮತ್ತು ಸಂಬಂಧಪಟ್ಟವರನ್ನು ಹೋಗಿ ಮಾತನಾಡಿ, ನಿಮ್ಮಿಂದಾಗುವ ಸಹಾಯ ಮಾಡಿ, ಸಾಂತ್ವನ ಹೇಳಿ.

ಏ) ಹಬ್ಬಹರಿದಿನ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಬಂಧು ಮಿತ್ರರೊಂದಿಗೆ ನೆರೆಹೊರೆಯವರೊಂದಿಗೆ ಬೆರೆಯಿರಿ.

೪) ಕಾಲ-ಸಮಯ : ದಿನಕ್ಕೆ ೨೪ ತಾಸು. ಒಂದು ತಾಸಿಗೆ ೬೦ ನಿಮಿಷಗಳು. ಯಾರಿಗೂ ಒಂದು ನಿಮಿಷ ಜಾಸ್ತಿಯಾಗಲಿ, ಒಂದು ನಿಮಿಷ ಕಡಿಮೆಯಾಗಲೀ ಸಿಗುವುದಿಲ್ಲ. ಆದರೆ ಇತ್ತೀಚೆಗೆ ಪ್ರತಿಯೊಬ್ಬರೂ ಅರ್ಜೆಂಟ್, ಟೈಮಿಲ್ಲ, ಇರುವ ಸಮಯ ಸಾಲದು, ಎಷ್ಟೊಂದು ಕೆಲಸ ಎಂದು ಹೇಳುತ್ತಿರುತ್ತಾರೆ. ಪ್ರತಿದಿನ ಗಡಿಬಿಡಿ, ಆತುರ, ಅವಸರ ಮಾಡಬೇಕಾದ ಕೆಲಸವನ್ನು ನಿಗದಿತ ಅವಧಿಯಲ್ಲಿ ಮಾಡಲು ಸಾಧ್ಯವೋ ಇಲ್ಲವೋ. ಅತ್ಯಲ್ಪ ಕಾಲದಲ್ಲಿ, ತಾನು ಇಚ್ಚಿಸುವಷ್ಟು ಹಣ, ಸ್ಥಾನಮಾನ ಅಧಿಕಾರಗಳನ್ನು ಸಂಪಾದಿಸಲು ಸಾಧ್ಯವೋ, ಇಲ್ಲವೋ ಎಂಬ ಆತಂಕದಲ್ಲೇ ಇರುತ್ತಾರೆ. ಹೀಗಾಗಿ ಕಾಲ ಅಥವಾ ಸಮಯ ಬಹುಜನರ ಮನಸ್ಸನ್ನು ಒತ್ತಡಕ್ಕೆ ನೂಕುತ್ತಿರುತ್ತದೆ. ಕಾಲದ ಒತ್ತಡ ಯಾರನ್ನೂ ಬಿಟ್ಟಿಲ್ಲ. ಎಲ್.ಕೆ.ಜಿ.ಗೆ ಹೋಗುವ ಮಗುವಿನಿಂದ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಯವರೆಗೆ, ಗೃಹಿಣಿಯಿಂದ ಹಿಡಿದು ಉನ್ನತ ಅಧಿಕಾರದಲ್ಲಿರುವ ಮಹಿಳೆತನಕ, ಹದಿಹರೆಯದವರಿಂದ ಹಿಡಿದು ಇಳಿವಯಸ್ಸಿನವರೆಗೆ.

ಸಮಯದ ಸದುಪಯೋಗವಾಗಬೇಕಾದರೆ, ಸಮಯ ನಮಗೆ ಒತ್ತಡದಾಯಕವಾಗಬಾರದು ಎನ್ನಬೇಕಾದರೆ ಹೀಗೆ ಮಾಡಿ.

* ಆಯಾ ದಿವಸ, ಆಯಾ ವಾರ ನೀವು ಏನೇನು ಮಾಡಬೇಕು, ಏನನ್ನು ಸಾಧಿಸಬೇಕು, ನಿತ್ಯ ಚಟುವಟಿಕೆಗೆ ಎಷ್ಟು ಸಮಯ ಬೇಕು. ವಿಶೇಷ ಚಟುವಟಿಕೆಗೆ ಎಷ್ಟು ಸಮಯ ಬೇಕು ಎಂಬುದನ್ನು ಗಮನಿಸಿ ಹಾಗೂ ಪಾಲಿಸಿ.

* ನಿಮ್ಮ ಪ್ರತಿಯೊಂದು ಕೆಲಸ ಚಟುವಟಿಕೆಯನ್ನು ವ್ಯವಸ್ಥಿತವಾಗಿ, ವೇಳೆಗೆ ಸರಿಯಾಗಿ ಮಾಡಿ. ಕೆಲಸವನ್ನು ಮುಂದೂಡಬೇಡಿ.

* ಪ್ರತಿಯೊಂದು ವಸ್ತುವನ್ನು ಆಯಾ ಜಾಗದಲ್ಲಿ ಇಡಿ. ಇದರಿಂದ ಯಾವುದೇ ವಸ್ತುವಿಗಾಗಿ ಹುಡುಕಾಟ ಮಾಡಿ, ವೇಳೆ ವ್ಯಯವಾಗುವುದು ತಪ್ಪುತ್ತದೆ.

* ಪ್ಲಾನಿಂಗ್ ಮತ್ತು ಶಿಸ್ತಿನಿಂದ ಸಮಯದ ಸದುಪಯೋಗವಾಗುತ್ತದೆ.

* ಯಾವ ಚಟುವಟಿಕೆಗಳಿಂದ ಸಮಯದ ಪೋಲಾಗುತ್ತದೆ ಎಂದು ಗಮನಿಸಿ, ಅದನ್ನು ತಪ್ಪಿಸಿ.

* ಅನಗತ್ಯವಾಗಿ ಮಾತಾಡಿ, ವಾದಿಸಿ, ಸಮಯವನ್ನು ವ್ಯರ್ಥ ಮಾಡುವವರಿಂದ ದೂರವಿರಿ.

* ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದರೆ, ಮನಸ್ಸು ಚುರುಕಾಗಿ ಕೆಲಸ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ.

೫) ಕೆಲಸ-ಉದ್ಯೋಗ: ಯಾವುದೇ ಕೆಲಸ ಉದ್ಯೋಗ ಮನಸ್ಸಿಗೆ ಖುಷಿ ತರಬಲ್ಲದು. ಹಾಗೆಯೇ ದುಃಖ ತೊಂದರೆಯನ್ನು ನೀಡಬಲ್ಲದು. ನಿಮ್ಮ ಓದು ಮುಗಿಸಿ, ಉದ್ಯೋಗಕ್ಕೆ ಸೇರಿದರೆ ಅಥವಾ ಈಗಾಗಲೇ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದರೆ, ಕೆಲಸದ ಜವಾಬ್ದಾರಿಗಳು, ಸಹೋದ್ಯೋಗಿಗಳು, ಮೇಲಧಿಕಾರಿ, ಕೆಳಗಿನ ಕೆಲಸಗಾರರೊಂದಿಗೆ ಸಂಬಂಧಗಳು, ಸಂಬಳ, ಬಡ್ತಿ, ವರ್ಗಾವಣೆಗಳು, ಸ್ಪರ್ಧೆ, ಲಾಭ ನಷ್ಟಗಳು ಸಾಕಷ್ಟು ಒತ್ತಡವನ್ನುಂಟು ಮಾಡುತ್ತವೆ. ಕೆಲವೇ ಜನ ತಾವು ಮಾಡುವ ಉದ್ಯೋಗದಿಂದ ಸುಖ ನೆಮ್ಮದಿಯನ್ನು ಅನುಭವಿಸುತ್ತಾರೆ. ಹಲವರು ತಮ್ಮ ಉದ್ಯೋಗದಲ್ಲಿ ಅತೃಪ್ತಿ, ಅಸಮಾಧಾನ, ನಿರಾಶೆಯನ್ನು ಅನುಭವಿಸುತ್ತಾರೆ. “ಹೊಟ್ಟೆಪಾಡು ಈ ವೃತ್ತಿಯಲ್ಲಿದ್ದೇನೆ. ನನ್ನ ಮಕ್ಕಳು ಈ ವೃತ್ತಿಗೆ ಬರುವುದು ಬೇಡ” ಎನ್ನುತ್ತಾರೆ. ಕೆಲವು ಉದ್ಯೋಗಗಳು ಸ್ವಭಾವತಃ ಅತೀ ಒತ್ತಡಕಾರಿ. ಉದಾ: ಪೊಲೀಸ್, ವಾಹನ ಚಾಲಕ, ಮಾರಾಟಗಾರ, ವ್ಯಾಪಾರಿ, ಕಂಪನಿಯ ನಿರ್ದೇಶಕ, ಸರ್ಜನ್, ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಶೋಧನೆ ನಡೆಸುವ ವಿಜ್ಞಾನಿ, ಇತ್ಯಾದಿ. ಕೆಲಸ, ಉದ್ಯೋಗ ಉಂಟು ಮಾಡುವ ಒತ್ತಡವನ್ನು ತಗ್ಗಿಸುವ ವಿಧಾನಗಳು.

ಅ) ನೀವು ಮಾಡುವ ಕೆಲಸವನ್ನು, ನಿಮ್ಮ ಉದ್ಯೋಗವನ್ನು ಪ್ರೀತಿಸಿ, ಅದರ ಬಗ್ಗೆ ಹೆಮ್ಮೆ ಪಡಿ.

ಆ) ಮಾಡುವ ಕೆಲಸವನ್ನು ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ಮಾಡಿ.

ಇ) ಕಾಲಮಿತಿಯಲ್ಲಿ ಕೆಲಸ ಮಾಡುವಾಗ, ಗುರಿ ಇಟ್ಟುಕೊಂಡು ಕೆಲಸ ಮಾಡುವಾಗ, ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಎಷ್ಟು ಸಾಧ್ಯವಾಗುತ್ತೋ ನೋಡೋಣ ಎಂಬ ಧೋರಣೆ ಇರಲಿ, ಸಹೋದ್ಯೋಗಿಗಳ ನೆರವನ್ನು ಪಡೆಯಿರಿ.

ಈ) ಸಹೋದ್ಯೋಗಿಗಳು ಕೈಕೆಳಗಿನವರೊಂದಿಗೆ ಸ್ನೇಹದಿಂದಿರಿ. ಯಾರು ನಂಬಿಕೆಗೆ ಅರ್ಹರು ಎಂಬುದನ್ನು ಗಮನಿಸಿ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳಬೇಡಿ.

ಉ) ನಿಮ್ಮ ಪ್ರಾಮಾಣಿಕತೆ, ನಿಸ್ಪೃಹತೆ, ಕಾರ್ಯವೈಖರಿ ಬಗ್ಗೆ ನಿಮ್ಮ ಮೇಲಧಿಕಾರಿಗಳಿಗೆ ಮನವರಿಕೆ ಮಾಡಿಕೊಡಿ. ಮೇಲಧಿಕಾರಿಗಳೊಂದಿಗೆ ವ್ಯವಹರಿಸುವಾಗ ವಿನಯವಿರಲಿ, ನಿಮ್ಮ ಮಾತು ವರ್ತನೆ ಅವರಿಗೆ ಹಿತಕರವಾಗಿರುವಂತೆ ನೋಡಿಕೊಳ್ಳಿ.

ಊ) ಬಡ್ತಿ, ವರ್ಗಾವಣೆ, ಬದಲಾವಣೆ ಬಗ್ಗೆ ಹೆಚ್ಚು ಚಿಂತಿಸಬೇಡಿ, ವಾಸ್ತವಿಕತೆಯನ್ನು ಒಪ್ಪಿಕೊಳ್ಳಿ, ಅಗತ್ಯಬಿದ್ದಾಗ ಮಾತ್ರ ಹೋರಾಟ ಮಾಡಿ.

ಋ) ಉದ್ಯೋಗವನ್ನು ಕೇವಲ ಸಂಪಾದನೆಯ ಮಾರ್ಗ ಎಂದಷ್ಟೇ ಭಾವಿಸದೇ ನಿಮ್ಮ ಉದ್ಯೋಗವನ್ನು ಜನರ ಸಮಾಜದ ಸೇವೆಗಾಗಿ ಎಂದು ತಿಳಿಯಿರಿ. ಉದ್ಯೋಗವನ್ನು ಉಚ್ಚ, ನೀಚ ಪ್ರತಿಷ್ಠೆ ಅಪಮಾನಕರ ಎಂದು ವಿಭಾಗಿಸಬೇಡಿ. ಪ್ರತಿಯೊಂದು ಉದ್ಯೋಗಕ್ಕೂ ತನ್ನದೇ ಆದ ಬೆಲೆ ಇದೆ. ಅದರ ಸರಿಯಾದ ನಿರ್ವಹಣೆಯಿಂದ ವ್ಯಕ್ತಿಗೆ ಗೌರವ, ಘನತೆ ಸಿಕ್ಕೇ ಸಿಗುತ್ತದೆ.

೬) ಜೀವನದ ಘಟನೆಗಳಿಗೆ ಸಿದ್ದರಾಗಿರಿ: ಪ್ರತಿಯೊಬ್ಬರ ಜೀವನದಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ಪ್ರಮುಖ ಘಟನೆ ಘಟಿಸುತ್ತದೆ. ಹುಟ್ಟು, ಸಾವು, ಕಾಯಿಲೆ, ಅಪಘಾತ, ದೊಡ್ಡ ನಷ್ಟ ಅಥವಾ ಲಾಭ ಮನೆ ಬದಲಾಯಿಸುವುದು / ಕಟ್ಟುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸುವುದು, ದೀರ್ಘಕಾಲದ ದೂರದ ಪ್ರವಾಸ, ವೃತ್ತಿಯಲ್ಲಿ ಬಡ್ತಿ ವರ್ಗಾವಣೆ, ನಿವೃತ್ತಿ, ವ್ಯಕ್ತಿ ಜೀವಿತಾವಧಿಯಲ್ಲಿ ಸಾಗಬೇಕಾದ ಹರೆಯ, ಪ್ರೌಢತೆ, ಮಧ್ಯಮ ವಯಸ್ಸು, ಇಳಿವಯಸ್ಸು, ಹೀಗೆ ಹಲವಾರು ಘಟನೆಗಳಿಗೆ ನಾವು ಮಾನಸಿಕವಾಗಿ ಸಿದ್ದರಿರದಿದ್ದರೆ ಒತ್ತಡಕ್ಕೆ ಒಳಗಾಗುತ್ತೇವೆ. ಅನಿರೀಕ್ಷಿತ ನಕಾರಾತ್ಮಕ ಘಟನೆಗಳಿಂದ ತತ್ತರಿಸಿ ಹೋಗುತ್ತೇವೆ. ಕಹಿ ಘಟನೆಯ ನೆನಪು ನಮ್ಮನ್ನು ಹಲವಾರು ವರ್ಷಗಳ ಕಾಲ ಅಥವಾ ಜೀವನ ಪೂರ್ತಾ ನಮ್ಮನ್ನು ಕುಟುಕುತ್ತಾ ನೋವನ್ನುಂಟುಮಾಡಬಲ್ಲದು.

ಜೀವನದ ಘಟನೆಗಳಲ್ಲಿ ಕೆಲವನ್ನು ನಾವು ಯಾವಾಗ ಬರುತ್ತವೆ ಎಂಬುದನ್ನು ನಿರೀಕ್ಷಿಸಬಲ್ಲೆವು. ಕೆಲವು ಥಟ್ಟನೆ ಘಟಿಸಿ, ನಮಗೆ ಆಶ್ಚರ್ಯವನ್ನುಂಟುಮಾಡುತ್ತೇವೆ. ದಿಗ್ಭ್ರಮೆಯನ್ನುಂಟು ಮಾಡುತ್ತವೆ.

ಪೂರ್ವಸಿದ್ದತೆ : ಈ ಎರಡೂ ಬಗೆಯ ಘಟನೆಗಳಿಗೆ ನಾವು ಪೂರ್ವ ಸಿದ್ಧತೆ ಮಾಡಿದರೆ, ನಮ್ಮ ಮನಸ್ಸಿನ ನೋವು ಅಥವಾ ಹಿಂಸೆ ಕಡಿಮೆಯಾಗುತ್ತವೆ. ಹಾಗೂ ಅವುಗಳನ್ನು ನಾವು ಯಶಸ್ವಿಯಾಗಿ ನಿಭಾಯಿಸಬಲ್ಲೆವು. ಗಾಯಗೊಳ್ಳದೆ ಘಾಸಿಗೊಳ್ಳದೇ ಎದುರಿಸಬಲ್ಲೆವು. ಈ ಪೂರ್ವ ಸಿದ್ದತೆ ಏನು?

* ಜೀವನದಲ್ಲಿ ಸುಖ ದುಃಖಗಳು, ಲಾಭ ನಷ್ಟಗಳು, ಸೋಲು ಗೆಲುವುಗಳು ಸಹಜ, ಸ್ವಾಭಾವಿಕ ಎಂಬುದನ್ನು ನಾವು ನೀವು ಒಪ್ಪಿಕೊಳ್ಳಬೇಕು. ಸ್ಥಿತ ಪ್ರಜ್ಞತೆಯಿಂದ ಎದುರಿಸಲು ಸಿದ್ದರಾಗಿರೋಣ.

* ಯಾವುದೇ ಘಟನೆಯನ್ನು ಯಶಸ್ವಿಯಾಗಿ ಎದುರಿಸಲು ನಮಗೆ ಆತ್ಮವಿಶ್ವಾಸ ಇರಬೇಕು. ಈ ಆತ್ಮವಿಶ್ವಾಸ ಬರಲು ಜನ ಬಲ ಮತ್ತು ಧನ ಬಲ ನೆರವಾಗುತ್ತದೆ. ನಮ್ಮ ಜೊತೆ ಇರಲು, ನಮಗೆ ಧೈರ್‍ಯ ಹೇಳಲು ನಮಗೆ ಮಾರ್ಗದರ್ಶನ ಮಾಡಲು ಜನರನ್ನು ಸಂಪಾದಿಸಬೇಕು. ನಾವು ಇತರರಿಗೆ ಇಂತಹ ಸಂದರ್ಭದಲ್ಲಿ ನೆರವಾದರೆ, ನಮಗೆ ನೆರವಾಗಲು ಜನ ಮುಂದೆ ಬರುತ್ತಾರೆ. ಬಂಧು ಮಿತ್ರರಲ್ಲಿ ಸ್ನೇಹ ವಿಶ್ವಾಸ ಉಳಿಸಿಕೊಳ್ಳಬೇಕು.

* ಹಾಗೆಯೇ ಆಪತ್ಕಾಲಕ್ಕೆ ನಮಗೆ ಹಣ ಬೇಕು. ಸಂಪಾದಿಸುವ ಹಣವನ್ನು ಖರ್ಚು ಮಾಡದೇ, ಸ್ವಲ್ಪ ಹಣವನ್ನು ಉಳಿಸಬೇಕು. ಚಿನ್ನ ಬೆಳ್ಳಿಯ ರೂಪದಲ್ಲೋ, ಜಮೀನು, ಮನೆ, ಆಸ್ತಿ ರೂಪದಲ್ಲೋ, ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲೋ ಹಣವಿಟ್ಟಿರಬೇಕು.

* ಕಷ್ಟ ನಷ್ಟ ಸೋಲು ನಿರಾಶೆಗಳನ್ನು ಇತರರು ಹೇಗೆ ನಿಭಾಯಿಸುತ್ತಾರೆ; ಯಾರು ಅದರಲ್ಲಿ ಯಶಸ್ವಿಯಾಗುತ್ತಾರೆ. ಯಾರು ಘಾಸಿಗೊಳ್ಳುತ್ತಾರೆ ಎಂಬುದನ್ನು ಗಮನಿಸಿ ಪಾಠ ಕಲಿಯಿರಿ.

೭) ಭಾವೋದ್ವೇಗಗಳು : ನಿತ್ಯ ಒಂದಲ್ಲ ಒಂದು ಕಾರಣದಿಂದ ನಾವೆಲ್ಲ ದುಃಖಕ್ಕೆ, ಕೋಪಕ್ಕೆ, ಭಯಕ್ಕೆ, ನಾಚಿಕೆ, ಅವಮಾನಕ್ಕೆ ಒಳಗಾಗುತ್ತೇವೆ. ವ್ಯಕ್ತಿಯೋ, ಸನ್ನಿವೇಶವೋ, ವಸ್ತುವೋ ಈ ಭಾವನೆಯನ್ನು ಸೃಷ್ಟಿಸುತ್ತದೆ. ಈ ಭಾವನೆಯನ್ನು ನೀವು ಹೇಗೆ ಪ್ರಕಟಿಸುತ್ತೀರ, ಅದಕ್ಕೆ ಇತರರ ಪ್ರತಿಕ್ರಿಯ ಏನು ? ಈ ಭಾವನೆ ಎಷ್ಟು ಕಾಲ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದನ್ನು ಗಮನಿಸಿ. ಭಯವಾಗಲೀ, ದುಃಖವಾಗಲೀ ಕೋಪವಾಗಲೀ ಸ್ವಲ್ಪಕಾಲ ಇದ್ದು ಮರೆಯಾದರೆ, ಮನಸ್ಸಿಗೆ ಹೆಚ್ಚು ಹಿಂಸೆಯಾಗುವುದಿಲ್ಲ. ದೇಹಕ್ಕೆ ಘಾಸಿಯಾಗುವುದಿಲ್ಲ. ನಿಮ್ಮ ಭಾವನೆಗೆ ಇತರರು ಸಹಾನೂಭೂತಿಯ ಪ್ರತಿಕ್ರಿಯೆ ನೀಡಿದರೆ ಮನಸ್ಸಿಗೆ ಹಿತಕರವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಇತರರು ನಿಮ್ಮ ಭಾವಕ್ಕೆ ಸ್ಪಂದಿಸದೇ, ಉದಾಸೀನ ಮಾಡಿದರೆ, ನಿಮ್ಮ ಭಾವನೆ ಬಾಲಿಷ, ಅಸಂಬದ್ಧ ಎಂದು ಜರಿದರೆ, ನಿಮ್ಮನ್ನು ಹೀನಾಯವಾಗಿ ಕಂಡರೆ, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈ ನಕಾರಾತ್ಮಕ ಭಾವನೆಯ ಮೂಲ ನಿಮ್ಮ ಆತ್ಮೀಯರು, ಬಂಧುಮಿತ್ರರೇ ಆಗಿದ್ದರೆ, ನೀವು ತೀವ್ರತರ ಕಷ್ಟ ನಷ್ಟ, ಅವಮಾನಕ್ಕೆ ಒಳಗಾಗಿದ್ದರೆ, ಮಾನಸಿಕ ಗಾಯ ಮಾಡುವುದು ಬಹಳ ನಿಧಾನವಾಗುತ್ತದೆ. ಆದ್ದರಿಂದ ತೀವ್ರವಾಗಿ ಮತ್ತು ದೀರ್ಘಕಾಲ ನಿಮ್ಮನ್ನು ಕಾಡುವ ಭಯ, ಕೋಪ, ದುಃಖಗಳನ್ನು ಯಶಸ್ವಿಯಾಗಿ ನಿಭಾಯಿಸುವ ಕೌಶಲವನ್ನು ಕಲಿಯಿರಿ.

* ಭಯ, ದುಃಖ, ಕೋಪ ಬಂದಾಗ ಒಂಟಿಯಾಗಿರಬೇಡಿ. ನಿಮಗೆ ಸಾಂತ್ವನ ಹೇಳುವ, ಆಸರೆ ನೀಡುವ ಜನರೊಂದಿಗೆ ಇರಿ, ಅವರೊಂದಿಗೆ ನಿಮ್ಮ ಈ ಭಾವನೆಯನ್ನು ಹೇಳಿಕೊಳ್ಳಿ.

* ನಕಾರಾತ್ಮಕ ಭಾವನೆಗೆ ಕಾರಣವಾದ ವ್ಯಕ್ತಿ, ಸಂದರ್ಭ, ಸನ್ನಿವೇಶವನ್ನು ವಾಸ್ತವಿಕ ದೃಷ್ಟಿಯಿಂದ ವಿಶ್ಲೇಷಿಸಿ. ನಿಮ್ಮ ಕೊಡುಗೆ ಎಷ್ಟು, ಇತರರ ಕೊಡುಗೆ ಎಷ್ಟು ಪರಿಸರದ ಕೊಡುಗೆ ಎಷ್ಟು ಎಂಬುದನ್ನು ತಿಳಿದುಕೊಳ್ಳಿ.

* ಅದಕ್ಕೆ ನಿಮ್ಮನ್ನಾಗಲೀ, ಇತರರನ್ನಾಗಲೀ ದೂರಬೇಡಿ. ನೀವೂ ಕೊರಗಬೇಡಿ.

* ಭಾವೋದ್ವೇಗವನ್ನುಂಟು ಮಾಡಿದ ಸನ್ನಿವೇಶ ವ್ಯಕ್ತಿಯೊಂದಿಗೆ ಮುಂದೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಲೆಕ್ಕ ಹಾಕಿ.

* ಮನಸ್ಸಿಗೆ ಹಿತ ಕೊಡುವ, ಮನಸ್ಸನ್ನು ತಮ್ಮೆಡೆಗೆ ಸೆಳೆಯುವ ಚಟುವಟಿಕೆ ಮಾಡಿ, ದೇವಾಲಯ, ಚರ್ಚ್, ಮಸೀದಿಗೆ ಹೋಗಿ ಬನ್ನಿ. ಪುಣ್ಯಕ್ಷೇತ್ರಕ್ಕೆ ಯಾತ್ರೆ ಮಾಡಿ, ಸಂಗೀತ ಕೇಳಿ. ನಿಮಗೆ ಇಷ್ಟವಾಗುವ ಪುಸ್ತಕವನ್ನು ಓದಿ, ಧಾರ್ಮಿಕ ಗ್ರಂಥಗಳ ಪಠಣ ಮಾಡಿ, ಪ್ರಕೃತಿ ಸುಂದರವಾಗಿರುವ ಪಾರ್ಕ್, ಹೊಳೆ, ನದಿ, ಬೆಟ್ಟದ ಬಳಿ ಓಡಾಡಿ.  ಒಳಾಂಗಣ ಅಥವಾ ಹೊರಾಂಗಣದಲ್ಲಿ ಆಟವಾಡಿ. ನಿಮ್ಮ ಬದುಕಿನ ಸುಖಮಯ ಸಂಗತಿ ಘಟನೆಗಳನ್ನು ಮೆಲುಕು ಹಾಕಿ.

೮) ದ್ವಂದ್ವಗಳು / ಗೊಂದಲಗಳು: ಯಾವುದೇ ವಿಷಯ, ವ್ಯಕ್ತಿ, ಗುರಿ ಉದ್ದೇಶದ ಬಗ್ಗೆ ನಮ್ಮ ಮನಸ್ಸಿನೊಳಗೆ, ಅನೇಕ ಸಲ ಗೊಂದಲ, ದ್ವಂದ್ವ ತಾಕಲಾಟವಿರುತ್ತದೆ. ದ್ವಂದ್ವ ಗೊಂದಲ ಹೆಚ್ಚಾದಷ್ಟೂ ಅಥವ ದೀರ್ಘಕಾಲ ಉಳಿದಷ್ಟು ಮನಸ್ಸಿಗೆ ಹಿಂಸೆಯೇ. ವ್ಯಕ್ತಿಯನ್ನು ಪ್ರೀತಿಸಬೇಕೇ, ಪ್ರೀತಿಸಬಾರದೇ, ವ್ಯಕ್ತಿಗೆ ಗೌರವ ನೀಡಬೇಕೇ, ಬೇಡವೇ, ಯಾವುದು ಸರಿ ಯಾವುದು ತಪ್ಪು, ಸರಿದಾರಿಯನ್ನು ತುಳಿಯಬೇಕೇ ಅಥವಾ ಲಾಭಸಿಗುವ ಅಡ್ಡಮಾರ್ಗವನ್ನು ಹಿಡಿಯಬೇಕೇ? ನೇರವಾಗಿ ಪ್ರತಿಭಟಿಸಬೇಕೇ ಅಥವಾ ಬೇಡವೇ, ಗುರಿ ಏನಿರಬೇಕು, ಎಷ್ಟಿರಬೇಕು, ಒಂದು ಕೆಲಸವನ್ನು ಮಾಡಬೇಕೇ ಬೇಡವೇ? ಈಗ ಮಾಡಬೇಕೇ, ಆನಂತರ ಮಾಡಬೇಕೆ. ಹೀಗೆ ದ್ವಂದ್ವಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಯಾವುದೇ ದ್ವಂದ್ವ ಗೊಂದಲ ಉಂಟಾದಾಗ, ಶಾಂತವಾಗಿ ಕುಳಿತು ಯೋಚಿಸಿ, ಸಾಧಕ ಬಾಧಕಗಳನ್ನು ಚಿಂತಿಸಿ. ಎಷ್ಟು ಲಾಭ ಎಷ್ಟು ನಷ್ಟ, ಎಷ್ಟು ಅನುಕೂಲ, ಎಷ್ಟು ಅನಾನುಕೂಲ ಲೆಕ್ಕ ಹಾಕಿ. ನಿಮ್ಮ ಮನೆಯವರು, ಆತ್ಮೀಯರೊಂದಿಗೆ ಚರ್ಚಿಸಿ, ಇದ್ದುದರಲ್ಲಿ ಯಾವುದು ಉತ್ತಮ, ಯಾವುದು ದೀರ್ಘಾವಧಿಯಲ್ಲಿ ಅನುಕೂಲಕಾರಿ. ಅದನ್ನು ಆಯ್ಕೆ ಮಾಡಿಕೊಳ್ಳಿ. ಒಮ್ಮೆ ನಿರ್ಧಾರಕ್ಕೆ ಬಂದ ಮೇಲೆ ಕಷ್ಟವೋ, ಸುಖವೋ ಅನುಭವಿಸಿ, ಸಂಪ್ರದಾಯವನ್ನೋ, ಕಾನೂನನ್ನೋ, ನಿಮ್ಮದೇ ಆದ ಆತ್ಮಸಾಕ್ಷಿಯನ್ನೋ, ನಿಮ್ಮ ಶ್ರೇಯೋಕಾಂಕ್ಷಿಗಳ ಸಲಹೆಯನ್ನೋ ಅನುಸರಿಸಿ ಗೊಂದಲ ದ್ವಂದ್ವವನ್ನು ನಿವಾರಿಸಿಕೊಳ್ಳಿ, ಇದ್ಯಾವುದೂ ಸಮಾಧಾನ ತರದಿದ್ದಾಗ, ಕೆಲವರು ದೇವರ ಮೊರೆ ಹೋಗುತ್ತಾರೆ. ದೇವರ ಮುಂದೆ ಚೀಟಿಗಳನ್ನು ಬರೆದು, ಪ್ರಾರ್ಥಿಸಿ, ಒಂದು ಚೀಟಿಯನ್ನು ತೆಗೆದು, ಅದರಲ್ಲಿ ಏನಿದೆಯೋ ಅದನ್ನು ಶ್ರದ್ಧೆಯಿಂದ ಪಾಲಿಸುತ್ತಾರೆ. ಎಲ್ಲಾ ದೇವರಿಚ್ಛೆ ಎಂದು ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ.

೯) ಆರೋಗ್ಯ / ಅನಾರೋಗ್ಯ : ಮನುಷ್ಯನಾಗಿ ಹುಟ್ಟಿದ ಮೇಲೆ ಕಾಯಿಲೆ ಕಸಾಲೆ ತಪ್ಪಿದ್ದಲ್ಲ ಎಂದು ಜನ ಹೇಳುತ್ತಾರೆ. ಕಾಯಿಲೆ ಬಂದಾಗ, ಅದು ತಮ್ಮ ದುರಾದೃಷ್ಟ, ಪಾಪಕರ್ಮಗಳ ಫಲ, ದೇವರ ಮುನಿಸು, ದೆವ್ವ ಮಾಟ ಮಂತ್ರದ ಪರಿಣಾಮ ಎಂದು ತಿಳಿಯುತ್ತಾರೆ. ಆರೋಗ್ಯ ಭಾಗ್ಯ, ದೇವರ ಕೃಪೆ ಎಂದು ನಂಬುತ್ತಾರೆ. ಆದರೆ ಆರೋಗ್ಯ ಅನಾರೋಗ್ಯಕ್ಕೆ ನಾವೇ ಕಾರಣ. ಆರೋಗ್ಯವಾಗಿರುವುದು ನಮ್ಮ ಕೈಯಲ್ಲೇ ಇದೆ. ಕಾಯಿಲೆ ಬರಿಸಿಕೊಳ್ಳಲು ನಾವೇ ಕಾರಣ. ನಮ್ಮ ಜೀವನ ಶೈಲಿಯೇ ಕಾರಣ. ನಮ್ಮ ಅನಾರೋಗ್ಯಕರ ಪರಿಸರವೇ ಕಾರಣ ಎಂಬುದು ಬಹುಜನರಿಗೆ ಗೊತ್ತೇ ಇಲ್ಲ. ಶೇಕಡಾ ೭೫ ರಷ್ಟು ಕಾಯಿಲೆಗಳು ನಿವಾರಣೀಯ. ನಾವು ಸ್ವಲ್ಪ ಎಚ್ಚರಿಕೆ ವಹಿಸಿದರೆ ನಮ್ಮ ಆಹಾರ ಸೇವನೆ, ನಿದ್ರೆ, ಆಚಾರ ವಿಚಾರ, ವಿಹಾರಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ, ಒತ್ತಡರಹಿತ ಪ್ರಶಾಂತ ನಿಧಾನಗತಿಯ ಜೀವನ ಶೈಲಿಯನ್ನು ಅನುಸರಿಸಿದರೆ, ನಾವು ಆರೋಗ್ಯವಂತರಾಗಿ ಉಳಿಯುತ್ತೇವೆ ಎಂಬುದು ಗಮನಾರ್ಹ, ಆರೋಗ್ಯವೇ ನಮ್ಮ ಸಾಮರ್ಥ್ಯದ ಅಡಿಪಾಯ. ಆರೋಗ್ಯ ಚೆನ್ನಾಗಿದ್ದರೆ ನಮ್ಮ ದೈಹಿಕ, ಮಾನಸಿಕ ಶಕ್ತಿ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಬಹುದು. ನಾವು ಸುಖ ನೆಮ್ಮದಿಯಿಂದ ಬದುಕಬಹುದು, ಆನಾರೋಗ್ಯ ನಮಗೂ ಹಿಂಸೆ, ಇತರರಿಗೂ ಹಿಂಸೆಯನ್ನುಂಟುಮಾಡುತ್ತದೆ. ಸದಾ ಆರೋಗ್ಯವಾಗಿರಲು ಹೀಗೆ ಮಾಡಿ.

ಅ) ಹಣ್ಣು / ಹಸಿ ತರಕಾರಿ / ಬೇಳೆ ಕಾಳುಗಳು / ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಿ.

ಆ) ನೀರಿನಲ್ಲಿ ಬೆಂದ / ಹಬೆಯಲ್ಲಿ ಬೆಂದ ಆಹಾರ ಪದಾರ್ಥಗಳನ್ನು ತಿನ್ನಿ. ಎಣ್ಣೆ ಜಿಡ್ಡಿನಲ್ಲಿ ಕರಿದ ಪದಾರ್ಥಗಳನ್ನು ಕಡಿಮೆ ತಿನ್ನಿ. ಪ್ಲಾಸ್ಟಿಕ್ ಚೀಲ, ಡಬ್ಬ, ಬಾಟಲ್‌ಗಳಲ್ಲಿ ಮೊದಲೇ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ತಿನ್ನಲೇ ಬೇಡಿ.

ಇ) ನಿತ್ಯ ಆರು ಗಂಟೆಗಳ ಕಾಲ ಒಂದು ನಿರ್ದಿಷ್ಟ ಅವಧಿಯಲ್ಲಿ ನಿದ್ರೆ ಮಾಡಿ.

ಈ) ನಡೆಯುವುದು, ಓದುವುದು, ಈಜುವುದು, ಸೈಕಲ್ ತುಳಿಯುವುದು, ಬಯಲಲ್ಲಿ ಆಡುವ ಆಟಗಳನ್ನಾಡುವುದು ಇತ್ಯಾದಿಗಳ ಮೂಲಕ ನಿತ್ಯ ವ್ಯಾಯಾಮ ಮಾಡಿ.

ಉ) ಮೈಮನಸ್ಸು ವಿರಮಿಸುವ ಹವ್ಯಾಸ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಸಂಗೀತ ಸಾಹಿತ್ಯ ಯೋಗ, ಧ್ಯಾನ, ಆಧ್ಯಾತ್ಮಿಕ ಚಟುವಟಿಕೆಗಳು, ಪ್ರವಾಸ, ಸೃಜನ ಶೀಲ ಚಟುವಟಿಕೆಗಳು, ಇದಕ್ಕೆ ಉದಾಹರಣೆ.

ಊ) ಆರೋಗ್ಯಕ್ಕೆ ಮಾರಕವಾದ ಧೂಮಪಾನ, ಹೊಗೆ ಸೊಪ್ಪು ಜಗಿಯುವುದು (ಖೈನಿ, ಗುಟ್ಕಾ, ಪಾನ್ ಮಸಾಲ) ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ.

ಋ) ನೀವು ವಾಸಿಸುವ ಮನೆಯ ಒಳಗೆ, ಹೊರಗೆ, ನೀವು ಕೆಲಸ ಮಾಡುವ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಕಸಕಡ್ಡಿ, ಕೊಳೆ, ತ್ಯಾಜವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಿ. ನಿತ್ಯ ಸ್ನಾನ ಮಾಡಿ. ಕೈತೊಳೆದುಕೊಂಡು ಆಹಾರವನ್ನು ಸೇವಿಸಿ.

ೠ) ನಿಮ್ಮ ಮನೆಯ ಸುತ್ತ ಮುತ್ತ, ಹಿತ್ತಲು, ಕಾಂಪೌಂಡ್ ಅಥವಾ ಮನೆಯೊಳಗೆ ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ.

ಎ) ಒಬ್ಬ ಪರಿಚಯದ ವೈದ್ಯರನ್ನು ಆಗಾಗ ಕಂಡು ನಿಮ್ಮ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.  ನಿಮ್ಮ ಆರೋಗ್ಯವೃದ್ಧಿಗೆ ಮಾರ್ಗದರ್ಶನ ಪಡೆಯಿರಿ. ವೈದ್ಯರನ್ನು ಕೇಳದೇ ಯಾವುದೇ ಔಷಧಿಯನ್ನು ಸೇವಿಸಬೇಡಿ.

ಏ) ನಿಮ್ಮ ದೇಹಕ್ಕೆ ಗಾಯ / ಏಟು / ಹಾನಿಯಾಗದಂತೆ ಎಚ್ಚರ ವಹಿಸಿ. ವಾಹನವನ್ನು ಚಲಿಸುವಾಗ ಸಂಚಾರ ನಿಯಮಗಳನ್ನು ಶ್ರದ್ದೆಯಿಂದ ಪಾಲಿಸಿ, ಮನೆಯೊಳಗೆ ಮತ್ತು ಹೊರಗೆ ಸುರಕ್ಷತಾ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ.

೧೦) ಧರ್ಮ, ಆಧ್ಯಾತ್ಮ : ಬಹುತೇಕ ಜನ ಒಂದು ಧರ್ಮವನ್ನು ನಂಬಿ, ಒಂದು ದೇವರನ್ನು ಆರಾಧಿಸುತ್ತಾರೆ. ಪೂಜಾ ಸ್ಥಳಗಳಿಗೆ ಹೋಗಿ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ದೇವರು ತಮ್ಮ ಕಷ್ಟ ನೋವುಗಳನ್ನು ಪರಿಹರಿಸುತ್ತಾನೆ. ತಮಗೆ ಸುಖ-ನೆಮ್ಮದಿಯನ್ನು ಕರುಣಿಸುತ್ತಾನೆಂದು ನಂಬುತ್ತಾರೆ. ದೇವರು ಧರ್ಮ ನಮ್ಮ ವಿಶ್ವಾಸ ಭರವಸೆಗಳನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ನಂಬಿಕೆ, ಮೂಢ-ಆಚರಣೆಗಳು, ಅಂಧಶ್ರದ್ಧೆಗಳು, ನಮ್ಮ ಕಷ್ಟಗಳನ್ನು ಅಸಹಾಯಕತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಯಾವ ನಂಬಿಕೆ ಸರಿ, ಯಾವುದು ಸರಿ ಅಲ್ಲ ಎಂಬುದನ್ನು ನಾವು ವಿಶ್ಲೇಷಿಸಬೇಕು. ದೇವರು – ಧರ್ಮದ ಅತಿಯಾದ ಅವಲಂಬನೆ ಬೇಡ ಎನ್ನುವುದನ್ನು ತಿಳಿಯಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓಂ
Next post ಇರಬಹುದು ಬದುಕು

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…