ಪ್ರತಿ ಸಂಜೆ ತಲೆಯ ಮೇಲೆ
ಹಾಯ್ದು ಹೋಗುವ ರೆಕ್ಕೆಗಳ
ತಂಪಿನಲಿ ನಿನ್ನ ಪ್ರೀತಿ ತೇಲಿ
ಯಾವುದೋ ಪರಿಮಳ ಹೊತ್ತ
ಸೂರ್‍ಯ ಮುಳುಗುತ್ತಾನೆ
ಆತ್ಮದ ಬೇರುಗಳಲ್ಲಿ ಶಬ್ದಗಳು ಇಳಿಯುತ್ತವೆ.
ನಕ್ಷತ್ರ ತುಂಬಿದ ನೀಲಿಯಲ್ಲಿ
ಮಹಾ ಮೌನ ಅಗಾಧವಾಗಿ
ಕೈ ಬೆರಳುಗಳಿಗೆ ಸ್ಪರ್ಶ ನೀಡಿ
ಎಲ್ಲಾ ಎಳೆಗಳು ತೀಡುತ್ತವೆ
ಏಕಾಏಕಿ ಬಂದ ನೆನಪು ಸಪ್ನ
ನಿದ್ರಿಸುವ ಕಣ್ಣುಗಳ ತುಂಬ ಕವಿತೆ
ವಿರಮಿಸಿಕೊಳ್ಳುತ್ತವೆ.
ಕೆಂಪು ಕಿರಣಗಳ ರಕ್ತದೋಕುಳಿ
ಓಣಿಯ ಎಲೆ ಎಲೆಗೂ ಬೆಳಕು
ಹರಡಿ ಹಾಸಿ ಒಳಮನೆಯಲಿ
ಸ್ನಾನ ಆಚೆದಡ ಮುಟ್ಟುವ ನೀರು
ಈಚೆ ಸುಳಿದಾಡುವ ಬೆಳಕು
ಚಲಿಸುವ ಮೌನ ಗಾಳಿ ಬಿಳಿ ಹೊಲ
ಬದುವಿನ ತುಂಬ ನೀಲಿ ಹೂಗಳು
ಅರಳುತ್ತವೆ.
*****