ಎಲರು ತೀಡಿದಷ್ಟು
ಕುಣಿವ ಎಲೆಗಳ ಭಂಗಿ
ಪಟಪಟನೇ ಆಡುವ ಮಾತು
ಗಾಳಿಹಾದಿಯ ತುಂಬೆಲ್ಲಾ ಸಿಗುವ ಹೂಗಳು
ಬದುಕೆಂಬ ಚೈತ್ರಕ್ಕೆ ಎಂತಹ ಸೊಗಸು.
ಅವನ ಕಣ್ಣುಗಳು ಸಿಡಿಯುವಾಗ
ಹನಿಗೂಡಿದ ನದಿ ಶಾಂತವಾಗುತ್ತದೆ.
ಆ ಗುಡ್ಡದಾಚೆಗಿನ ಸರಹದ್ದು
ದಾಟಿ ಬಂದು ಎಷ್ಟೋ ದಿನಗಳಾಗಿವೆ.
ಸದ್ದು ಮಾಡುವ ತಮಟೆ ಮಹಾಮೌನಿ.
ನೋವು ಬದಲಿಸುತ್ತದೆ.
ಬದಲಾಗುವುದು ಕೆಂಡದ ಬಣ್ಣವೂ
ಆಗಾಗ ಎಲರ ಸುಳಿಗೆ ಅಂತರ್‍ಲಾಗ ಹಾಕುವ
ಧೌತ ವಸನಗಳು ತಿಪ್ಪೆ ಮೇಲೆ ಬೀಳದಂತೆ
ಗಟ್ಟಿಯಾಗಿ ಕಟ್ಟಬೇಕು ಸರಿಗೆತಂತಿಗೆ
ಸಾಗರನ ದಡದಲ್ಲಿ ಮುತ್ತುವ
ಎಲರ ಮುತ್ತಿನ ಕಚಗುಳಿ
ಗಾಳಿನೀರಿನ ಆಳ ಅಗಲಕ್ಕೆ
ಪ್ರಚಂಡ ಪ್ರತಾಪಕ್ಕೆ ಮರುಕ್ಷಣದ
ಕಿನ್ನತೆ-ನಾನೆಂಬ ಶೂನ್ಯತೆ
ಸಡಗರದ ಎಳೆತ ಸೆಳೆತಗಳ ಕೂಡು ಕೂಟ
ಕ್ಷಣದ ಆಟ ನೋಟ
ನೆನಪ ಹಾಳೆಗಳು ತೆರೆದುಕೊಳ್ಳುವವು
ಗೋಡೆಯ ತುಂಬೆಲ್ಲಾ ಚಿತ್ರಗಳು ರೀಲಿನಂತೆ
ಚಲಿಸಿ ಹೋಗುವವು.
ಮಗುಚಿ ಬೀಳುವುದು ದಪ್ಪಂಚಿನ ಮೇಲ್ಪುಟ
ಮತ್ತೇ ಅದೇ ಸಬ್ಬಕ್ಕಿ ಗಂಜಿ
ಬಿಸಿ ಮಜ್ಜನ ಚಿಕಿತ್ಸೆ ಸಮಾಧಿಯೋಗಕ್ಕೆ
*****