ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ
ಗುಡಿ, ಗುಂಡಾರ ಕಟ್ಟಿಸಿಕೊಂಡು
ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ
ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ
ಉಗ್ರ, ಶಾಂತ, ಎಂತದೋ ಒಂದು ಭಾವದ
ರೂಪವನ್ನು ಪಡಕೊಂಡು
ಬಂಧಿಯಾಗಿ ಬಿದ್ದಿರೋ
ದೇವೀರಮ್ಮಂದಿರೇ ಕೇಳಿ.
ಊರು, ನಾಡು ತುಂಬಿವೆ
ನಿಮ್ಮಂತಹ ತಾಯಿಗಳೆ
ಹೆತ್ತು ಹೊತ್ತು ಬೆಳೆಸಿರೋ
ಸೀಳು ನಾಯಿ ಬುದ್ಧಿಯ ಗಂಡು ಮಕ್ಕಳು.
ಕಿವಿ ನಿಗಿರಿಸಿ
ಕಟವಾಯಿ ಬಿಚ್ಚಿ
ನಾಲಿಗೆ ಪೂರ ಹೊರ ಚಾಚಿ
ವಿಕಾರವಾಗಿ ಜೊಲ್ಲು ಸುರಿಸುತ್ತ
ಗಸ! ಗಸ! ಶಬ್ದ ಮಾಡುತ್ತ
ಕೆಂಡಗಣ್ಣ ರೆಪ್ಪೆ ಬಡಿಯದೆ
ಎಲ್ಲದಕ್ಕೂ ಸಿದ್ಧರಾಗಿ ಕುಂತ
ಗಂಡು ನಾಯಿಯಂತ
ರಕ್ಕಸ ಮನದ ಮೃತ್ಯುರೂಪರು;
ಹಗಲು, ರಾತ್ರಿ, ಹಿಂಡು, ಹಿಂಡಾಗಿ
ಹಾದಿ ಬೀದಿಲಿ ಠಳಾಯಿಸ್ತಿರ್‍ತಾರೆ.
ಅಬ್ಬೆಪಾರಿ ಹೆಣ್ಣು ಮಕ್ಕಳ
ಘಮಲು ಬಡಿದ್ರೆ ಸಾಕು ಮುಗಿಬಿದ್ದು
ಹೊತ್ತುಕೊಂಡು ಹೋಗಿ, ಹರಿದು ಮುಕ್ಕಿ
ವಿಕೃತ ತೃಪ್ತಿಯ ನರ್ತನ ಮಾಡುತ್ತಾರೆ
ಎದ್ದು ಬನ್ನಿರೇ ದೇವೀರಮ್ಮಂದಿರೇ…
ಗಂಡು, ಹೆಣ್ಣು ಬೇರೆಯಲ್ಲ
ಮೇಲು, ಕೀಳು ಇಲ್ಲವೇ ಇಲ್ಲ!
ಒಂದೇ ಬುಡದ ಕೊಂಬೆ, ರೆಂಬೆ
ಒಂದು ಬಿಟ್ಟು ಇನ್ನೊಂದಿಲ್ಲ
ಅರಿತು ನಡೆಯದಿದ್ದರೆ ಯಾರೂ ಉಳಿಯೋದಿಲ್ಲ
ಶೋಷಣೆಗೆಂದೆಂದೂ ಬದುಕು, ಭವಿಷ್ಯವಿಲ್ಲ
ನಿಮ್ಮ ದೇಹ, ಬುದ್ಧಿ, ಕೈದುಗಳ ಬಳಸಿ
ಬಿಡದೆ ಬುದ್ಧಿ ಕಲಿಸಿ
ಪುರುಷವಾದಿ ಬಣಕೆ.
ಹಾಗೇ.. ನಾರಿ ಕುಲಕೆ ತಲೆ ತಿಕ್ಕಿ ಹೇಳಿ
ಒಪ್ಪಿಕೊಂಡು
ತೊತ್ತುಗಳಾಗಿ ಸತ್ತಿದ್ದು ಸಾಕು
ಎದ್ದು ಗುಟುರು ಹಾಕಿ
ಸೆಣೆಸಿ ಬಾಳು ಪಡೆಯಿರಿ
ಮೈದುಂಬಿಕೊಳ್ಳಲಿ ನಾಗರೀಕ ಬದುಕು.
*****